ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಮ್ಮದಿಯ ಕಾರವಾರಕ್ಕೆ ಹಣಕೋಣ ವಿದ್ಯುತ್ ಕಿಚ್ಚು

By Staff
|
Google Oneindia Kannada News

People protest against Hanakona power project
ಕರ್ನಾಟಕದ ಕಾಶ್ಮೀರ ಎಂದು ರವೀಂದ್ರನಾಥ್ ಟ್ಯಾಗೋರರಿಂದ ಬಣ್ಣಿಸಿಕೊಂಡಿದ್ದ ನೈಸರ್ಗಿಕ ಸಂಪತ್ತಿನಿಂದ ಸಂಪದ್ಭರಿತವಾದ ಕಾರವಾರ ಜಿಲ್ಲೆ ಇಂದು ಅನೇಕ ವಿವಾದಗಳಿಂದಾಗಿ ಬರಡು ಭೂಮಿಯಂತಾಗಿದೆ. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಜನರಲ್ಲಿ ಹಣಕೋಣ ಉಷ್ಣ ವಿದ್ಯುತ್ ಯೋಜನೆ ಕಿಚ್ಚು ಹಚ್ಚುವಂತೆ ಮಾಡಿದ್ದಾರೆ. ಈ ಯೋಜನೆ ಇಲ್ಲಿ ಬಂದದ್ದೇಕೆ? ಸ್ಥಾಪಿತವಾಗಲು ನಡೆಸಿದ ಹುನ್ನಾರದ ಹಿಂದೆ ಯಾರ್ಯಾರಿದ್ದಾರೆ? ಜನರ ನೆಮ್ಮದಿ ಕದಡಲು ಕಾರಣಗಳೇನು? ವಿವರಗಳು ಇಲ್ಲಿವೆ ಓದಿ.

* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾ

ಕೊನೆಗೂ ಕಾರವಾರದ ಹಣಕೋಣ ಜನತೆಯ ಸಹನೆಯ ಕಟ್ಟೆ ಒಡೆದಿದೆ. ತಮ್ಮೂರನ್ನು ಉಷ್ಣವಿದ್ಯುತ್ ಸ್ಥಾವರ ಎಂಬ ಬಸ್ಮಾಸುರನಿಂದ ಉಳಿಸಿಕೊಳ್ಳಲು ಹಿಂಸಾ ಮಾರ್ಗಕ್ಕೆ ಇಳಿದಿದ್ದಾರೆ. ಮಹಿಳೆ ಪುರುಷರೆನ್ನದೆ ಎಲ್ಲರೂ ಸೇರಿ ತಮ್ಮನು ತಡೆಯಲು ಬಂದ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕುರುಡು ಕಾಂಚಾಣಕ್ಕೆ ಒಳಗಾಗಿ ನಿರ್ಲಿಪ್ತರಾಗಿದ್ದ ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಜನತೆ ಕಿಡಿ ಕಾರುತ್ತಿದ್ದಾರೆ. ಇದರ ಪರಿಣಾಮ ಹೋರಾಟಗಾರರ ಆಕ್ರೋಶಕ್ಕೆ ಎರಡು ಸರಕಾರಿ ಬಸ್ಸು ಸೇರಿದಂತೆ ಮೂರು ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಪೊಲಿಷರು ಅಶ್ರುವಾಯು ಸಿಡಿಸಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿವೆ. ಇಬ್ಬರು ಪೋಲಿಷರಿಗೆ ಗಾಯಗೊಂಡಿದ್ದಾರೆ. ಇವತ್ತಕ್ಕೂ ಹೆಚ್ಚು ಮಂದಿ ಬಂಧಿಸಲ್ಪಟ್ಟಿದ್ದಾರೆ. ಇದು ಹಿಂಸಾ ಪ್ರತಿಭಟನೆಯ ಹೋರಾಟದ ಪ್ರಾರಂಭವೇ ಹೊರತು ಅಂತ್ಯವಲ್ಲ. ಹೋರಾಟಕ್ಕೆ ಸರಿಯಾದ ಸ್ಪಂದನೆ ದೊರೆಯದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಲ್ ನಂದಿಗಡ್ ಮಾದರಿಯ ಹೋರಾಟ ನಡೆಯುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿದೆ.

ಪ್ರಖ್ಯಾತ ಕವಿಗಳಾದ ರವೀಂದ್ರನಾಥ ಠಾಗೂರ್ ಅವರಿಂದ 'ಕರ್ನಾಟಕ ಕಾಶ್ಮೀರ್' ಎಂದು ಹೊಗಳಿಸಿಕೊಂಡ ಉತ್ತರಕನ್ನಡ ಜಿಲ್ಲೆ ಇಂದು ಬರಡು ಭೂಮಿಯಾಗತೊಡಗಿದೆ. ಸುರಸುಂದರಿಗೆ ತನ್ನ ಸೌಂದರ್ಯವೇ ಮುಳುವಾದಂತೆ ನನ್ನ ಜಿಲ್ಲೆಗೆ ಅದರ ಪ್ರಾಕ್ರತಿಕ ಸೌಂದರ್ಯವೇ ಮುಳುವಾಗಿ ಪರಿಣಮಿಸಿದೆ.

ಅಂದ ಹಾಗೇ ನಮ್ಮ ಜಿಲ್ಲೆಗೆ ಬರುವ ಯೋಜನೆಗಳ ಬಗ್ಗೆ ಒಂದು ಮಾತು ಚಾಲ್ತಿಯಲ್ಲಿದೆ. ಜಗತ್ತಿನೆಲ್ಲಡೆ ತಿರಸ್ಕರಿಸಲ್ಪಟ್ಟ ಯೋಜನೆಗಳು ಭಾರತಕ್ಕೆ ಬರುತ್ತವೆ. ಭಾರತದಲ್ಲಿ ಎಲ್ಲ ರಾಜ್ಯಗಳು ತಿರಸ್ಕರಿಸಿದ ಯೋಜನೆಗಳು ಕರ್ನಾಟಕಕ್ಕೆ ಬರುತ್ತವೆ. ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ತಿರಸ್ಕರಿಸಿದ ಯೋಜನೆಗಳು ಉತ್ತರಕನ್ನಡಕ್ಕೆ ಬರುತ್ತವೆ! ಸದ್ಯಕ್ಕೆ ಕಾಡುತ್ತಿರುವ ಎರಡು ಬಸ್ಮಾಸುರ ಯೋಜನೆಗಳಲ್ಲಿ ಒಂದು ತದಡಿ ಉಷ್ಣ ವಿದ್ಯುತ್ತ ಸ್ಥಾವರ. ಎರಡನೆಯದು ಕಾರವಾರದ ಹಣಕೋಣ ಬಳಿ ಸ್ಥಾಪನೆಯಾಗಲಿರುವ ಉಷ್ಣ ವಿದ್ಯುತ್ ಸ್ಥಾವರ. ಜಗತ್ತಿನೆಲ್ಲಡೆ ನಿಷೇಧಿತವಾಗುತ್ತಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಭಾರತದಲ್ಲಿ ಮಾತ್ರ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಸಿಗುತ್ತಿರುವ ಮರ್ಯಾದೆ ನೋಡಿದರೆ ಇದರಲ್ಲಿ ಕುರುಡು ಕಾಂಚಾಣದ ಮಹಿಮೆ ಅಪಾರವಾಗಿದೆ ಎನ್ನಿಸದೇ ಇರದು.

ಹಣಕೋಣ ಊರು ಕಾರವಾರದಿಂದ ಕೇವಲ 18 ಕಿ.ಮೀ ದೂರವಿದ್ದು ಸಮುದ್ರದ ಹಿನ್ನಿರಿನಿಂದ ಉಂಟಾದ ಗಜನಿ ಭೂಮಿಯನ್ನು ಒಳಗೊಂಡಿದೆ. ಇಲ್ಲಿ ಜನರ ಮುಖ್ಯ ಕಸುಬು ಮೀನುಗಾರಿಕೆಯಾಗಿದೆ. ಹಲವಾರು ಬಗೆಯ ಕಾಂಡ್ಲಾ ಸಸ್ಯಗಳು ಇಲ್ಲಿರುವುದು ವಿಶೇಷ ಜೀವ ವೈವಿದ್ಯತೆಗಳ ತಾಣವಾಗಿದೆ. ಒಟ್ಟಿನಲ್ಲಿ ನೈಸರ್ಗಿಕವಾಗಿ ಸಂಪದ್ಬರಿತ ಬೀಡಾಗಿದೆ. ಜನರು ಗೋವಾದ ಅಗ್ಗದ ಬೆಲೆಯ ಸರಾಯಿ ಕುಡಿದುಕೊಂಡು ಮೀನುಗಾರಿಕೆ, ಕೃಷಿ ಮಾಡಿಕೊಂಡು ಇದ್ದುದ್ದರಲ್ಲಿಯೇ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

People protest against Hanakona power project
ಹೋರಾಟಕ್ಕೆ ನಾಂದಿ : ಯಾವಾಗ ಇಂದ್ ಭಾರತ ಪವರ್ ಕಂಪನಿಯ ವಕ್ರದ್ರಷ್ಟಿ ಬಿತ್ತೋ ಅಲ್ಲಿಯ ಜನರ ನೆಮ್ಮದಿಗೆ ಹಾಳುಬಿದ್ದಿದೆ. ಸ್ಥಳೀಯರಿಗೆ, ಭೂಮಿ ಕಳೆದುಕೊಂಡವರಿಗೆ ಉದ್ಯೋಗ, ಭೂಮಿಗೆ ಒಳ್ಳೆಯ ಬೆಲೆ, ಊರಿನ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಎಂದು ಬಂದ ಕಂಪನಿ ಮೊದಲು ಪಾಳು ಬಿದ್ದ, ವಾರಾಸುದಾರರಿಲ್ಲದ ಭೂಮಿಗಳನ್ನು ನಕಲಿ ದಾಖಲೆಗಳ ಮೂಲಕ ತನ್ನದಾಗಿಸಿಕೊಂಡಿದೆ ಎಂದು ಹೋರಾಟಗಾರರು ಆರೋಪಿಸುತ್ತಾರೆ. ಯಾವಾಗ ಉಷ್ಣ ವಿದ್ಯತ್ ಸ್ಥಾವರಗಳ ದುಷ್ಪರಿಣಾಮ ಜನರಿಗೆ ಮಾಧ್ಯಮಗಳ, ಪರಿಸರ ಸಂಘಟನೆಗಳ ಮೂಲಕ ಗೊತ್ತಾಗತೊಡಗಿತೋ ಜನರು ಒಟ್ಟಾಗಿ ಉಷ್ಣ ಸ್ಥಾವರದ ವಿರುದ್ದ ಹೋರಾಡತೊಡಗಿದರು. ಇಷ್ಟೆಲ್ಲಾ ಇದ್ದಾಗ್ಯೂ ಕಂಪನಿ ತಾನು ಖರೀದಿಸಿದ ಜಾಗದಲ್ಲಿ ತಾತ್ಕಾಲಿಕ ಸೆಡ್ಡುಗಳನ್ನು ನಿರ್ಮಿಸಿ ಸ್ಥಾವರಕ್ಕೆ ಬೇಕಾಗುವ ಸಾಮಾನುಗಳನ್ನು ಸಂಗ್ರಹಿಸತೊಡಗಿತು. ಕಾಂಡ್ಲಾ ಗಿಡಗಳನ್ನು ನಾಶಪಡಿಸತೊಡಗಿತ್ತು. ಸ್ಥಾವರ ಸ್ಥಾಪನೆಗೆ ಬೇಕಾಗುವ ಇಲಾಖೆಗಳ ಅನುಮತಿ ಸಿಗುವ ಮೊದಲೇ ಕಂಪನಿ ರಾಜಾರೋಷವಾಗಿ ತನ್ನ ಕಾರ್ಯಗಳನ್ನು ಪ್ರಾರಂಭಿಸಿದೆ. ಇದನ್ನು ತಡೆಗಟ್ಟಬೇಕಾದ ಇಲಾಖಾ ಅಧಿಕಾರಿಗಳದು ಕುರುಡು ಕಾಂಚಾಣದ ಮಹಿಮೆಯಿಂದ ದಿವ್ಯ ನಿರ್ಲಕ್ಷ್ಯ. ಜನರು ಸಾಕಷ್ಟು ಬಾರಿ ಶಾಂತಿಯುತ ಹೋರಾಟ ಮಾಡಿದ್ದಾರೆ. ಬೃಹತ್ ರ್‍ಯಾಲಿಗಳನ್ನು ಮಾಡುವರ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಜಡ್ಡುಗಟ್ಟಿದ ಸರಕಾರ ಮಾತ್ರ ಮಿಸುಕಾಡಲಿಲ್ಲ. ಇದೆಲ್ಲಾ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ.

ಗೋಸುಂಬೆ ರಾಜಕಾರಣಿಗಳು : ಈ ವಿಷಯದಲ್ಲಿ ಮಾತ್ರ ರಾಜಕಾರಣಿಗಳು ಪಕ್ಕಾ ಗೋಸುಂಬೆ ಪಾತ್ರ ವಹಿಸಿದ್ದಾರೆ. ಚುನಾವಣೆ ಬಂದಾಗ ಹೋರಾಟಗಾರರ ಪರವಾಗಿ ಮಾತನಾಡಿ ಗೆದ್ದು ಬಂದ ನಂತರ ಕಂಪನಿ ಪರವಾಗಿ ಮಾತನಾಡಲಾಂಭಿಸಿದ್ದಾರೆ. ಇನ್ನು ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಇವರೆಲ್ಲರ ಹತ್ತಿರ ಕುರುಡು ಕಾಂಚಾಣ ಒಂದು ಸುತ್ತು ಹೊಗಿ ಬಂದಿದೆ ಎಂದು ಗುಸು ಗುಸು ಪ್ರಾರಂಭವಾಗಿದೆ. ಕಂಪನಿಯು ಸಹ ಹಲವಾರು ಆಮಿಷಗಳನ್ನು ಒಡ್ಡುವದರ ಮೂಲಕ ಸ್ಥಾವರ ವಿರೋಧಿ ಹೋರಾಟಗಾರರನ್ನು ಒಡೆಯಲು ಪ್ರಯತ್ನಿಸುತ್ತಿದೆ. ಸೋತವರು ಹೋರಾಟಗಾರರ ಪರ ಸೇರಿಕೊಂಡಿದ್ದಾರೆ.

ಲೋಕಸಭಾ ಚುನಾಣೆಯಲ್ಲಿ ಸೋತ ನಂತರ ಮಾರ್ಗರೆಟ್ ಆಳ್ವಾ ದಿಢೀರ್ ಆಗಿ ಸ್ಥಾವರ ವಿರೋಧಿ ಹೋರಾಟಗಾರರ ಬಣದಲ್ಲಿ ಕಾಣಿಸಿಕೊಂಡು ಯಾವುದೇ ಕಾರಣಕ್ಕೂ ಸ್ಥಾವರ ನಿರ್ಮಣಕ್ಕೆ ಅವಕಾಶ ಕೊಡುವುದಿಲ್ಲಾ, ಕೇಂದ್ರದ ಅನುಮತಿ ಸಿಗದಂತೆ ನೋಡಿಕೊಳ್ಳುತ್ತೇನೆ ಎಂದು ಉಗ್ರ ಭಾಷಣ ಮಾಡಿದಾಗ ಕಾರವಾರ ಜನತೆಗೆ ಮ್ಯಾಗಿ ಬಂಗಾಲದ ದೀದಿ ಮಮತಾಳಂತೆ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಇದಾದ ಕೆಲವೇ ದಿನಗಳಲ್ಲಿ ಮ್ಯಾಗಿಯನ್ನು ಬಾಯಿ ಮುಚ್ಚಿಸಿ ರಾಜ್ಯಪಾಲರನ್ನಾಗಿ ಕಳುಹಿಸಿದ್ದರು. ಗೆದ್ದ ಸಂಸದ ಉಗ್ರ ಪ್ರತಾಪಿ ಅನಂತ ಕುಮಾರ ಹೆಗೆಡೆಯವರದು ಮೌನ ವ್ರತ. ಮತ್ತೆ ಚುನಾವಣೆ ಬರಬೇಕು, ಮೌನ ವೃತ ಮುರಿಯಲು! ಇನ್ನುಳಿದಂತೆ ಇಬ್ಬರು ಸಚಿವರ ಬಗ್ಗೆ ಮಾತನಾಡದಿರುವುದು ಒಳ್ಳೆಯದು.

ಇವೆಲ್ಲವನ್ನು ಸಹನೆಯಿಂದ ಕಳೆದರಡು ವರ್ಷಗಳಿಂದ ನೋಡಿಕೊಂಡು ಬರುತ್ತಿದ್ದ ಹಣಕೋಣದ ಜನತೆಯಲ್ಲಿ ಅಸಹನೆ ಮಡುವುಗಟ್ಟಿದೆ. ಇದಕ್ಕೆ ಪೂರಕಾಗಿ ಕಳೆದ ವಾರ ನಡೆದ ಹೋರಾಟಗಾರ ಬೃಹತ್ ರ್‍ಯಾಲಿ ಬಗ್ಗೆ ಸಚಿವರೊಬ್ಬರು ಆಡಿದ ಮಾತು ಅವರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಇತ್ತೀಚೆಗೆ ಮಾಧ್ಯಮಗಳಿಂದ ಸ್ಥಾವರ ನಿರ್ಮಣಕ್ಕೆ ಕೇಂದ್ರದಿಂದ ಅನುಮತಿ ದೊರೆತ ಬಗ್ಗೆ ಸುದ್ದಿ ತಿಳಿದು ಕುಪಿತರಾಗಿದ್ದಾರೆ. ಜುಲೈ ತಿಂಗಳ 30ರಂದು ಗ್ರಾಮ ಪಂಚಾಯತಿ ಕಂಪನಿ ನಿರ್ಮಿಸಿದ ತಾತ್ಕಾಲಿಕ ಸೆಡ್ಡುಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ ಆ ದಿನ ಹಾಜರಿರಬೇಕಾದ ಅಧಿಕಾರಿಗಳು ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾದರು. ಸಿಟ್ಟಿಗೆದ್ದ ಜನತೆ ತಾವೇ ತೆರವುಗೊಳಿಸಲು ಮುಂದಾದರು. ಪೊಲೀಸರು ಅಡ್ಡಿಯಾದರು. ಪರಿಣಾಮ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ನೆಮ್ಮದಿಯಿಂದಿದ್ದ ಕಾರವಾರ ಅಸಹನೆಯತ್ತ ಕುದಿಯುತ್ತಿದೆ.

ಚಿತ್ರಗಳು : ನಾಗೇಂದ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X