ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಗೂರಿನ ಕಳ್ಳ ಕುಳ್ಳನ ಪಾಪ ನಿವೇದನೆ

By Staff
|
Google Oneindia Kannada News

Vikas Negiloni and Chetan Nadigerಕಳ್ಳ ಕುಳ್ಳ ಹೆಸರಲ್ಲಿ ಕಳ್ಳನೂ ಕುಳ್ಳನೂ ಆಗಿ ವಿಕಾಸ್‌ ನೇಗಿಲೋಣಿ ಮಾಡುತ್ತಿರುವ ಪಾಪ ನಿವೇದನೆಯ ಫಲವೇ ಕಳ್ಳಕುಳ್ಳ ಬ್ಲಾಗ್. ತೋಚಿದ್ದನ್ನು ಬರೆಯುತ್ತಾ, ಬರೆಯುತ್ತಲೇ ಬೆಳೆಯುತ್ತಾ (ದೈಹಿಕವಾಗಿ ಸಾಧ್ಯವಿಲ್ಲವಾದರೂ) ಹೋಗಲು ಅವರಿಗೆ ಈ ಕಳ್ಳ ಕುಳ್ಳ' ಬ್ಲಾಗ್‌ ಒಂದು ವೇದಿಕೆ. ಈ ಬ್ಲಾಗ್ ನಿಂದ ಆಯ್ದ ಒಂದು ಕವನವನ್ನು ನಿಮ್ಮ ಮಡಿಲಿಗೆ ಹಾಕುತ್ತಿರುವ ದಟ್ಸ್ ಕನ್ನಡ ವೆಬ್ ಸೈಟಿನ ನಿವೇದನೆಯೆಂದರೆ ಟೈಮಿದ್ದರೆ ಅಲ್ಲ ಟೈಂ ಮಾಡಿಕೊಂಡು ಆಗಾಗ ಬ್ಲಾಗಿಗೆ ಹೋಗಿ ಬರುತ್ತಿರಿ, ಕಾಂಪ್ಲಿಮೆಂಟರಿ ಕಾಫಿ ಕುಡಿದುಕೊಂಡು ಬನ್ನಿ.

ಅಮ್ಮನ ಕೈ ಬಳೆ ಸದ್ದಿಲ್ಲ

ದೇವರಪಟದ ಹೂ
ಬಾಡಿ ಬೀಳುವಾಗ
ಹೊಲಕೆ ಹೋಗಿ ಬಂದ
ಅಮ್ಮ ಜ್ವರವೆಂದು
ಮಲಗಿದವಳು ಏಳಲೇ ಇಲ್ಲ!
ಅವಳ ಮೈ ತಣ್ಣಗಾದ ಹೊತ್ತಿನಿಂದ
ಒಳ ಮನೆ ಕತ್ತಲಲ್ಲಿ
ಹಚ್ಚಿಟ್ಟ ಹಣತೆ ಆರಲಿಲ್ಲ,
ಬೊಂಬು ಬಂತು
ಗಡಿಗೆ ಬಂತು
ಯಾರೋ ದಾನ ಕೊಡಲು
ಕುಂಬಳಕಾಯಿ ತಂದರು
ಪೇಟೆಯಲ್ಲಿದ್ದ ಮಗ ಬಂದ
ತೊಲ ಬಂಗಾರದ ಮಗಳು ಬಂದಳು
ನೆಂಟ-ಬೀಗ-ಸೋದರಳಿಯ
ಏನೂ ತಿಳಿಯದ ಮೊಮ್ಮಕ್ಕಳು
ಬಂದರು... ಹೋದರು....
ಒಂದು ತಿಂಗಳ ಹಿಂದಷ್ಟೇ
ಅಮ್ಮನೊಡನೆ ಜಗಳವಾಡಿದ್ದ
ಜಲಜತ್ತೆ
ಇವತ್ತು ಬಂದಿದ್ದು ಮುದ್ದಾಂ ಹೊಗಳಿಕ್ಕೆ,
ಮಾವನ ಮುಖದ ಮೇಲೆ
ವಿಷಾದ ಕಟ್ಟಿಕೊಟ್ಟ ಮೌನಗಂಟು,
ಕೆಲಸದ ಕಸುಮಿ,
ಮುಸುರೆ ಸುಬ್ಬಿ,
..... ಯಾರೊಬ್ಬರ
ಕಣ್ಣಲ್ಲೂ ಕೊನೆಯಿರದ ಕಿನಾರೆ...

ಏಕೋ ವಡೆ ಊಟದ
ರುಚಿಯಲ್ಲಿ
ಅಮ್ಮನ ಕೈ ಬಳೆ ಸದ್ದಿರಲಿಲ್ಲ,
ಮಿಂದುಟ್ಟ ಮಡಿ,
ನಡೆವಾಗ ನಲಿವ
ತುರುಬು ತುದಿ ಮಲ್ಲಿಗೆ,
ಸದಾ ಬಿರುಕು ಬಿಟ್ಟೇ ಇದ್ದ
ಹಿಮ್ಮಡಿ,
ಪ್ರೀತಿ ತಡವಿದ ನುಡಿ
ಊಹೂಂ, ಸದ್ದಾಗಲಿಲ್ಲ

ಯಾರೆಲ್ಲಾ ಬಂದರು,
ಏನೇನೋ ತಂದು
ಸಾಂತ್ವನದ ಮಾತೆಂದರು,
ಹಸಿಗಂಚಿಗೆ
ಉಪ್ಪು ಕಡಿಮೆ ಎಂದರು,
ಕೋಸಂಬರಿ ತಿಂದು
ಏನೋ ಮೊದಲಿನ ರುಚಿಯೇ ಇಲ್ಲಪ್ಪ
ಎಂದರು...

ಊಟ ಮುಗಿಸಿ ಬಾಳೆ ಎಲೆ
ಮಡಚಿದ್ದಷ್ಟೇ,
ಅಜ್ಜನ ತಿಥಿಯೂಟ ಮುಗಿದಾಗ
ಯಾವಾಗಲೂ ತಾಂಬೂಲ
ತಂದಿಡುತ್ತಿದ್ದ
ಅಮ್ಮನ ಜಾಗ ಈಗ
ಬರಿದೇ ಖಾಲಿಯಾಗಿತ್ತು.
ಯಾರೇನೇ ಅಂದರೂ
ಹತ್ತು ದಿನಗಳಿಂದೀಚೆ
ಮೊಮ್ಮಗನ ಎಣಿಕೆ ಒಂದೇ;
ಯಾರೆಲ್ಲ ಬಂದರು
ಆದರೂ ಅಜ್ಜಿಯೇಕೆ ಇನ್ನೂ ಬರಲೇ ಇಲ್ಲ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X