ಇಂಗ್ಲಿಷ್‌ ಭಾಷಾ ಕಲಿಕೆ ಮತ್ತು ಭಾಷಾ ನೀತಿ


ಒಂದನೇ ತರಗತಿಯಿಂದ ಆಂಗ್ಲ ಭಾಷೆ ಕಲಿಕೆ ವಿವಾದ, ಮಕ್ಕಳ ಸಾಮಾರ್ಥ್ಯ, ಶಿಕ್ಷಣ ತಜ್ಞರ ಅಭಿಮತ, ಭಾಷಾ ನೀತಿ -ಇವುಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಹೊಸ ಚರ್ಚೆ.

Meti Malllikarjunಒಂದು ಸಮುದಾಯದ ಶೈಕ್ಷಣಿಕ-ಸಾಂಸ್ಕೃತಿಕ ನಿಲುವುಗಳನ್ನು ನಿರ್ಧರಿಸುವ ಪ್ರಭುತ್ವ ಯಾರಿಗೆ ಸೇರಿದ್ದು ಎನ್ನುವ ಅಂಶವನ್ನು ಕುರಿತು ಯೋಚಿಸುವ ಕ್ರಮವೇ ದಿಗ್ಬ್ರಮೆಯನ್ನುಂಟುಮಾಡುವಂತಹುದು. ಕಾರಣ, ಕರ್ನಾಟಕದ ದಲಿತ, ಶೂದ್ರ ಮತ್ತು ಇನ್ನೂಳಿದ ಹಿಂದುಳಿದ ಸಮುದಾಯದ ಮಕ್ಕಳಿಗೆ ಇಂಗ್ಲಿಷನ್ನು ಒಂದನೆ ತರಗತಿಯಿಂದ ಕಲಿಸಬೇಕು ಎನ್ನುವ ಬೇಡಿಕೆ ಸಾಮಾಜಿಕ, ಆರ್ಥಿಕವಾಗಿ ಮಹತ್ವವನ್ನು ಪಡೆದುಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಲವು ಬುದ್ಧಿ ಜೀವಿಗಳು (ಇಂಗ್ಲಿಷಿನ ಲಾಭವನ್ನು ಪಡೆದುಕೊಂಡವರು) ಒಂದನೆ ತರಗತಿಯಿಂದ ಇಂಗ್ಲಿಷ್‌ ಕಲಿಕೆ ತಪ್ಪು ಎನ್ನುವ ವಾದವನ್ನು ಮುಂದೊಡ್ಡಿದ್ದಾರೆ.

ಈಗ, ನಾವು ಒಂದು ಪ್ರಮುಖ ಪ್ರಶ್ನೆಯಾಂದಿಗೆ ನಮ್ಮ ಚರ್ಚೆಯನ್ನು ಮುಂದುವರಿಸೋಣ; ಯಾವುದೇ ಸಮುದಾಯದ ಶಿಕ್ಷಣ ಭಾಷೆ ಮತ್ತು ಶಿಕ್ಷಣದಲ್ಲಿ ಕಲಿಸಬೇಕಾದ ಭಾಷೆಗಳು ಯಾ ವುವು? ಮತ್ತು ಈ ಭಾಷಾ ನೀತಿಯ ಆಧಾರದ ಮೇಲೆ ಒಂದು ಸಮುದಾಯದ ಭವಿಷ್ಯ ನಿರ್ಧಾರವಾಗುತ್ತದೆ ಎನ್ನುವ ಅಂಶವನ್ನು ಮನಗಾಣದಿರುವುದು ವಿಪರ್ಯಾಸದ ಸಂಗತಿ. ಯಾಕೆಂದರೆ, ಶಿಕ್ಷಣ ಕ್ರಮವೂ ಕೂಡ ನಮ್ಮ ಸಾಂಸ್ಕೃತಿಕ ಅಂತಃಸತ್ವವನ್ನು ಕಾಪಾಡಬಹುದು ಅಥವಾ ನಾಶಮಾಡಬಹುದು ಎನ್ನುವ ಸಾಮಾನ್ಯ ಎಚ್ಚರವನ್ನು ಕಳೆದುಕೊಂಡು ಯೋಚಿಸುವ ಸ್ಥಿತಿ ಅಪಾಯಕಾರಿ. ಹಾಗಾಗಿ ಪ್ರತಿಯಾಂದು ಸಮುದಾಯದ ಸಾಂಸ್ಕೃತಿಕ, ಶೈಕ್ಷಣಿಕ ನಿಲುವುಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸಾಂಸ್ಕೃತಿಕ ವಿವೇಕ ಮತ್ತು ಎಚ್ಚರದಿಂದ ನಿರ್ಧರಿಸಬೇಕು ಎನ್ನುವ ಅಂಶ ಗಮನಾರ್ಹವಾದುದು. ಈ ಎಲ್ಲ ಚರ್ಚೆಯನ್ನು ಇವತ್ತಿನ ಇಂಗ್ಲಿಷ್‌ ಕಲಿಕೆಯ ತೀರ್ಮಾನಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು.

ಒಂದು ವಸಾಹತುಶಾಹಿ, ಸಾಮ್ರಾಜ್ಯಶಾಹಿ ಭಾಷೆಯನ್ನು ಕಲಿಸಬೇಕೋ ಬೇಡವೋ ಎನ್ನುವದನ್ನು ಕುರಿತು ಸುಮಾರು ಆರು ದಶಕಗಳಿಂದ ಚರ್ಚೆ ನಡೆಯುತ್ತಲೇ ಇದೆ. ಆದರೆ, ಇಂದು ಇಂಗ್ಲಿಷ್‌ ಕೇವಲ ವಸಾಹತುಶಾಹಿ ಅಥವಾ ಸಾಮ್ರಾಜ್ಯಶಾಹಿ ಭಾಷೆಯಾಗಿರದೆ ಆ ಎಲ್ಲ ಧೋರಣೆಗಳಿಗೆ ತಕ್ಕ ಪ್ರತಿರೋಧವನ್ನು ಒಡ್ಡುವ ಆಯುಧವಾಗಿಯೂ ನಮಗೆ ಲಭ್ಯವಾಗಿದೆ ಎನ್ನುವುದು ಮಹತ್ವದ ಅಂಶವಾಗಿದೆ.

ಒಂದು ರಾಷ್ಟ್ರದ ಭಾಷಾನೀತಿ ಮತ್ತು ಯೋಜನೆ ಬಹಳ ಪ್ರಮುಖವಾದ ಸಾಂವಿಧಾನಾತ್ಮಕ ನಿರ್ಧಾರವಾಗುತ್ತದೆ. ಆದರೆ, ಭಾರತದಂತಹ ಬಹುಭಾಷಿಕ ಸನ್ನಿವೇಶದಲ್ಲಿ ಈ ತರಹದ ನಿರ್ಧಾರಗಳು ಇನ್ನು ಎಚ್ಚರಿಕೆ ಮತ್ತು ವಿವೇಕದಿಂದ ತೆಗೆದುಕೊಳ್ಳಬಹುದಾದಂತಹ ನಿಲುವುಗಳಾಗುತ್ತವೆ. ಆದ್ದರಿಂದ, ಇಂಗ್ಲಿಷನ್ನು ಒಂದನೇ ತರಗತಿಯಿಂದ ಕಲಿಸಬೇಕು ಎನ್ನುವ ತೀರ್ಮಾನಕ್ಕೂ ಮತ್ತು ಭಾಷಾ ನೀತಿಗೆ ಯಾವುದೇ ಸಂಬಂಧವಿಲ್ಲವೆನ್ನುವ ವಾದ ಸೂಕ್ತವಾದುದಲ್ಲ, ಹಾಗಂತ ಇಂಗ್ಲಿಷ್‌ನ್ನು ಒಂದನೆ ತರಗತಿಯಿಂದ ಕಲಿಸಕೂಡದು ಎನ್ನುವ ವಾದವೂ ಕೂಡಾ ಅಷ್ಟೆ ಅಸಮಂಜಸವಾದಂತಹದು. ಇಂತಹ ಸಂದರ್ಭದಲ್ಲಿ ಭಾಷಾ ನೀತಿಯನ್ನು ರೂಪಿಸುವಾಗ ಶಿಕ್ಷಣ ಕ್ರಮ ಮತ್ತು ಸಾಂಸ್ಕೃತಿಕ ಎಚ್ಚರದಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವ ಜರೂರತ್ತ ಇದೆ. ಹಾಗಾಗಿ, ಇಂದು ಸರ್ಕಾರಿ ಶಾಲೆಗಳಲ್ಲಿ ಓದುವ ಸಾಮಾನ್ಯ ಪ್ರಜೆಗಳ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವ ಕ್ರಮ ತಪ್ಪು ಎನ್ನುವುದು ಕೇವಲ ಹುಸಿ ಆದರ್ಶವಾದೀತು? ಪಕ್ಕದ ಕಾನ್ವೆಂಟ್‌ ಶಾಲೆಗಳಲ್ಲಿ ಮೇಲುವರ್ಗದ ಮತ್ತು ಶ್ರೀಮಂತ ಮಕ್ಕಳು ಒಂದನೆ ತರಗತಿಗಿಂತಲೂ ಮುಂಚೆ ಇಂಗ್ಲಿಷನ್ನು ಸುಲಲಿತವಾಗಿ, ಸ್ಪುಟವಾಗಿ ಕಲಿಯುವುದಕ್ಕೆ ಸಾಧ್ಯವಾದಾಗ, ಅದೇಕೆ ಸರಕಾರಿ ಶಾಲೆಗಳಲ್ಲಿ ಅಸಾಧ್ಯ ಎಂಬ ಪ್ರಶ್ನೆ ಆಶ್ಚರ್ಯವನ್ನು ಮೂಡಿಸುವಂತಹದು.

ಜನಸಾಮಾನ್ಯರಿಗೆ ಭಾಷಾ ನೀತಿಯಂತಹ ಪರಿಕಲ್ಪನೆಯೇ ಅಪರಿಚಿತವಾದಂತಹದು. ಹಾಗಾಗಿ, ಯಾವುದೇ ಕೆಲವು ಬುದ್ಧಿಜೀವಿಗಳು ತೀರಾಭಾವಾತಿರೇಕದಿಂದ ಮಾತನಾಡುವ ಮೂಲಕ ಇಂತಹ ಜನಗಳ ಸಮ್ಮತಿಯನ್ನು ಪಡೆದುಕೊಳ್ಳತ್ತಾರೆ. ಆ ಮೂಲಕ ತಮ್ಮ ಹುಸಿ ತರ್ಕ ಮತ್ತು ಆದರ್ಶವನ್ನು ಸಮರ್ಥಿಸಿಕೊಳ್ಳುತ್ತಾರೆ. ಅಂದರೆ ಯಾವುದೆ ಸಮುದಾಯವು ಇಂಗ್ಲಿಷನ್ನು ಕಲಿಯುವುದರ ಮೂಲಕ ಸಾಮಾಜಿಕ, ಸಾಸ್ಕೃತಿಕ ಐಕ್ಯತೆಯನ್ನು ಒಡೆದಾಳಲು ನವವಸಾಹತುಶಾಹಿ ರೂಪದಲ್ಲಿ ಪ್ರಯತ್ನಿಸುತ್ತದೆ ಎನ್ನುವುದು ಕೂಡಾ ಅಪ್ಪಟ ಸುಳ್ಳು. ಇದು ಕೇವಲ ಒಂದನೆ ತರಗತಿಯಿಂದ ಇಂಗ್ಲಿಷ್‌ ಕಲಿತರೆ ಆಗುತ್ತದೆ ಎನ್ನುವ ತರ್ಕ ಎಷ್ಟು ಸೂಕ್ತ? ಎನ್ನುವುದು ಕೂಡ ಪರಿಗಣಿಸಬೇಕಾದ ಅಂಶ.

ಶಿಕ್ಷಣದ ಮೂಲ ಸ್ವರೂಪದಲ್ಲೇ ದೋಷಗಳಿವೆ, ಹಾಗಾಗಿ, ಇವತ್ತು ಇಂಗ್ಲಿಷ್‌ನ್ನು ಒಂದು-ಭಾಷೆಯಾಗಿ ಓದುವುದರ ಮೂಲಕ ಇಂತಹ ಸಾಸ್ಕೃತಿಕ ಅಪಾಯಗಳು ಜರುಗುತ್ತವೆ ಎನ್ನುವುದು ಹಸಿ ಸುಳ್ಳು. ಬದಲಾಗಿ, ಇಂಗ್ಲಿಷ್‌ ಜನಸಾಮಾನ್ಯರಿಗೆ ವ್ಯಾವಹಾರಿಕ ಲಾಭ ಮತ್ತು ಆತ್ಮ ಸ್ಥೈರ್ಯವನ್ನು ಕೊಡುತ್ತದೆ ಎನ್ನುವುದುಕೂಡ ಪ್ರಮುಖವಾದ ಅಂಶ. ಇವತ್ತಿನ ಅಗತ್ಯ ಮತ್ತು ಆಧುನಿಕ ಜ್ಞಾನವನ್ನು ಪಡೆದುಕೊಳ್ಳಲು ಇಂಗ್ಲಿಷ್‌ ಸುಲಭವಾಗಿ ನಮಗೆ ಅಂತಹ ಜ್ಞಾನದ ಮೂಲಗಳನ್ನು ಒದಗಿಸಿಕೊಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+