• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಸುಕ್ರಿಸ್ತ : ಸ್ಪೆನ್ಡಿಂಗ್ ಎಕಾನಮಿಯ ಮಾರಾಟ ಸರಕು!

By Staff
|
Google Oneindia Kannada News

ಡರ್ಬಾನ್‌ನಲ್ಲಿ ಶಾಲಾ ಶಿಕ್ಷಕಿಯೊಬ್ಬಳು 'ಹಿಂದೂಗಳು ನರಕಕ್ಕೆ ಹೋಗುತ್ತಾರೆ, ಕ್ರಿಶ್ಚಿಯನ್ನರು ಸ್ವರ್ಗಕ್ಕೆ' ಎಂದು ಮಕ್ಕಳಿಗೆ ಹೇಳಿದಕ್ಕೆ,ಹೀಗೊಂದು ಮಾರ್ದನಿ.

  • ಸಂತೋಷ್ ಜಿ ಆರ್, ಬೆಂಗಳೂರು

ಏಸುಕ್ರಿಸ್ತ : ಸ್ಪೆನ್ಡಿಂಗ್ ಎಕಾನಮಿಯ ಮಾರಾಟ ಸರಕು!ಮನುಷ್ಯ ಜನ್ಮ ಅಮೂಲ್ಯ. ವಿವೇಚನೆಯುಳ್ಳವರೆಲ್ಲಾ ಒಪ್ಪುವ ಮಾತಿದು. ಸಂಘಜೀವಿಯಾದ ಮಾನವನನ್ನು ಅವನೆಲ್ಲಾ ದುಃಖಗಳಿಂದ ದೂರಗೊಳಿಸಿ, ಆತನ ಮೃಗೀಯ ಪ್ರವೃತ್ತಿಗಳನ್ನು ಹದ್ದುಬಸ್ತಿನಲ್ಲಿಡಲು ಹಾಗೂ ಒಂದು ನಾಗರಿಕ ಸುಸಂಸ್ಕೃತ ಸಮಾಜವನ್ನು ನಿರ್ಮಿಸಲಿಕ್ಕಾಗಿ ಧರ್ಮಗಳು ಅಸ್ತಿತ್ವಕ್ಕೆ ಬಂದವು. ಜಗತ್ತಿನೆಲ್ಲೆಡೆ ಇಂತಹ ವ್ಯವಸ್ಥೆಯನ್ನು ರೂಪಿಸುವ ಹಲವಾರು ಪ್ರಯತ್ನಗಳೂ ವಿಭಿನ್ನ ಕಾಲಖಂಡಗಳಲ್ಲಿ ಆಗಿಹೋಗಿವೆ.
ನಾಗರಿಕ ಸಮಾಜದಲ್ಲಿ ಮನುಷ್ಯನ ಮೌಲಿಕ ಅಸ್ಥಿತ್ವಕ್ಕೆ ಧರ್ಮ ಬುನಾದಿಯಾಗಿ ಪಾತ್ರ ವಹಿಸುತ್ತದೆ. ಜಗತ್ತಿನಾದ್ಯಂತ ಮನುಷ್ಯ ಮನುಷ್ಯರ ನಡುವೆ ಆಷ್ಟೇ ಅಲ್ಲ. ಭೂಮಿಯ ಮೇಲಿನ ಪ್ರಾಣಿ ಸಂಕುಲ, ಸಸ್ಯ ಸಂಪತ್ತು, ಪರಿಸರದ ನೀರು, ಗಾಳಿಗಳೊಡನೆ ಜೊತೆಗೂಡಿ ಬದುಕುವ ಸಹಜೀವನ ತತ್ವವನ್ನು ಹಾಗೂ ಸಹ ಜೀವನವನ್ನು ನಡೆಸುವ ಬಗೆಯನ್ನು ಸಂತರು ಹಾಗೂ ಜನನಾಯಕರು ಚಿಂತನೆ ನಡೆಸಿದುದು, ಚರ್ಚಿಸಿದುದು, ಮೊದಲಾದವು ಹೀಗೆ ಅಸ್ತಿತ್ವಕ್ಕೆ ಬಂದ ಮತ ಧರ್ಮಗಳ ಬೋಧನೆಗಳಲ್ಲಿ ಪ್ರತಿಫಲಿಸಿದೆ
ಧಾರ್ಮಿಕತೆಯೋ ರಾಜಕೀಯ ಅಧಿಕಾರವೋ ? :

ಆದರೆ ದೌರ್ಭಾಗ್ಯವಶಾತ್, ಭಾರತದ ಹೊರಗಿನ ಮಾನವ ಕುಲದ ಚರಿತ್ರೆಯಲ್ಲಿ ಮತಾಧಾರಿತ ಮಾನವ ಹತ್ಯೆಗಳು ಎಣಿಕೆ ಇಲ್ಲದಷ್ಟು ಆಗಿ ಹೋಗಿವೆ. ಶಾಂತತೆಯನ್ನು ಹರಡುತ್ತೇವೆಂದು ಹೊರಟ ಮಧ್ಯಯುಗೀನ ಸೆಮೆಟಿಕ್ ಮತಗಳು ಜಗತ್ತಿನ ಸಾವಿರಾರು ಜನಾಂಗ, ಸಂಸ್ಕೃತಿ, ಕುಲ ಪಂಗಡಗಳಿಗೆ ಚಿರಶಾಂತಿಯನ್ನು ನೀಡಿವೆ. ಹೇಳಿಕೊಳ್ಳಲೂ ಸಹ ಒಬ್ಬ ವ್ಯಕ್ತಿಯೂ ಉಳಿದಿರದಂತಹ ಅನೇಕ ಸಂಸ್ಕೃತಿಗಳ ದಾಖಲೆಗಳೂ ಇವೆ. ಕ್ರೈಸ್ತ, ಮುಸಲ್ಮಾನ ಇತ್ಯಾದಿ ಏಕದೇವತೋಪಾಸನೆಯ ಮತಗಳ ಪ್ರಸಾರದ ಪ್ರಕ್ರಿಯೆಗಳು, ಇಂತಹ ಮಹಾನ್ ದೌರ್ಜನ್ಯಕ್ಕೆಡೆ ಮಾಡಿವೆಯೆಂದರೆ ಅಚ್ಚರಿಯಾದೀತು. ಈ ಮತಗಳ ಪ್ರಸಾರಕ್ಕಾಗಿ ಹೊರಟವರು ಕತ್ತಿ ಹಿಡಿದ ದೊರೆಗಳು, ಧಾರ್ಮಿಕತೆಯ ವಿಸ್ತರಣೆಯ ಹೆಸರಿನಲ್ಲಿ ಹೊರ ಬಂದದ್ದು ರಾಜಕೀಯ ಸಿಂಹಾಸನಗಳು. ಪ್ರಜೆಗಳ ನೀತಿ ನಡಾವಳಿಯ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸಿದ್ದು ಆಧ್ಯಾತ್ಮಿಕ ಜಗತ್ತಿನ ಪ್ರಮುಖರೆಂಬ ಮುಖವಾಡ ಧರಿಸಿದ ಸಾಮ್ರಾಜ್ಯಶಾಹಿ ದೊರೆಗಳು.

ಇಂತಹ ಪ್ರಯತ್ನಗಳ ಕುರಿತಾಗಿನ ಜಗತ್ತಿನ ಎಲ್ಲ ದೇಶಗಳ ಇತಿಹಾಸವನ್ನು ಕೆದಕಿದರೆ ಭಾರತದ ಪರಂಪರೆಯೇ ವಿಭಿನ್ನವಾಗಿ ನಿಲ್ಲುತ್ತದೆ. ಮತ ಪ್ರಸಾರಕ್ಕಾಗಿ ಕತ್ತಿ ಹಿಡಿದು ಹೊರಟ ಒಬ್ಬನೇ ಒಬ್ಬ ವ್ಯಕ್ತಿಯೂ ನಿಮಗಿಲ್ಲಿ ದೊರಕಲಾರ. ಧಾರ್ಮಿಕ ವಿಚಾರ ಸ್ವಾತಂತ್ರ್ಯವನ್ನು ಎಲ್ಲರಿಗೂ ಸಮಾನವಾಗಿ ನೀಡಿದ ವ್ಯವಸ್ಥೆ ಇಲ್ಲಿತ್ತು. ಇದು ಸನ್ಯಾಸಿಗಳ ತವರು. ಓರ್ವ ಅರೆನಗ್ನ ಫಕೀರನನ್ನು ಮಹಾತ್ಮನೆಂದು ಗೌರವಿಸುವ ನಾಡಿದು. ರಾಜಮಹಾರಾಜರಿಗಿಂತ ಸತ್ಯ ಶೋಧನೆಗಾಗಿ ಸರ್ವಸಂಗವನ್ನು ಪರಿತ್ಯಾಗ ಮಾಡಿದವರಿಗೇ ಇಲ್ಲಿ ಗೌರವ.

ಯಾವುದೇ ಧಾರ್ಮಿಕ ನೇತಾರ ಇಲ್ಲಿ ರಾಜ್ಯ ಚಲಾಯಿಸಲು ಇಚ್ಚಿಸಲಿಲ್ಲ. ಬದಲಾಗಿ ರಾಜ್ಯ ತ್ಯಜಿಸಿದವರೇ ಇಲ್ಲಿ ಧಾರ್ಮಿಕ ನೇತಾರರಾದರು. ಆಧ್ಯಾತ್ಮದ ಹಾದಿ ಹಿಡಿದ ಮಹಾವೀರ, ಬುದ್ಧರು ಇಲ್ಲಿ ಪೂಜ್ಯ. ಬಸವಣ್ಣ, ಮಾಧವಾಚಾರ್ಯ, ವಿದ್ಯಾರಣ್ಯ, ಸಮರ್ಥರಾಮದಾಸರಂತಹವರು ಸಾಮ್ರಾಜ್ಯ ನಿರ್ಮಾತೃಗಳೋ ಅಥವಾ ಪ್ರಧಾನಿಗಳೋ ಆಗಿ ಸ್ಥಿರವಾಗಿರಬಹುದಿತ್ತು. ಆದರೆ ಅವರು ಮುಕ್ತರಾಗಿ ಜೀವನ ನಡೆಸಿದವರು. ಹೀಗಾಗಿ ಇಲ್ಲಿ ಪ್ರಚಾರಗೊಂಡ ಧಾರ್ಮಿಕ, ಆಧ್ಯಾತ್ಮಿಕ ತತ್ವಗಳೂ ವ್ಯಷ್ಟಿ, ಸೃಷ್ಥಿ ಮತ್ತು ಸಮಷ್ಠಿಗಳ ಸಮನ್ವಯತೆಯನ್ನು ಸಾಧಿಸುವ ಪ್ರಯತ್ನಗಳಾಗಿದ್ದವು.

ಏಕತೆ ತಾರದ ಸೆಮೆಟಿಕ್ ಮತಗಳು :

ಹಿಂದೆ ಅಸ್ತಿತ್ವದಲ್ಲಿದ್ದು ಸಕಲ ಜಗತ್ತಿನ ಒಳಿತನ್ನು ಸಾರಿ ಈಗ ಕಾಣೆಯಾಗಿರುವ ಧರ್ಮ ಸಂಸ್ಕೃತಿಗಳೂ ಅನೇಕವಿರಬಹುದು. ಭಾರತದೊಳಗೆ ಜನಿಸಿದ ಬೌದ್ಧ, ಜೈನ, ಸಿಖ್, ಶಾಕ್ತ ಇತ್ಯಾದಿ ಮತಗಳೂ ಇದೇ ತತ್ವಾಧಾರಿತ. ಈಗ ಭಾರತದಲ್ಲಿ ಕಂಡುಬರುವ ಆದರೆ ಭರತಖಂಡದ ಹೊರಗೆ ಆರಂಭಗೊಂಡ ಹಲವಾರು ಮತಗಳಿವೆ. ಅವುಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವುವು ಪ್ರಮುಖವಾಗಿ ಕ್ರೈಸ್ತ ಮತ್ತು ಇಸ್ಲಾಂ ಮತಗಳು. ಈ ಮುಂಚೆ ತಿಳಿಸಿದಂತಹ ಧರ್ಮದ ವಿಶಾಲ ವ್ಯಾಪ್ತಿಯಲ್ಲಿ ಇವು ಬರುತ್ತವೆಯೇ? ಎಂಬ ಪ್ರಶ್ನೆಗೆ ನಕಾರವೇ ಉತ್ತರ. ಏಕೆಂದರೆ ಜಗತ್ತಿನ ಸಮಸ್ತರನ್ನು ಸಮಾನರೆಂದು ಈ ಮತಗಳೂ ಒಪ್ಪುವುದಿಲ್ಲ.

ಆಚರಣೆಯ ಮಾತು ಪಕ್ಕಕ್ಕಿರಲಿ ಕನಿಷ್ಠ ಪಕ್ಷ ಸಿದ್ದಾಂತದ ಹಂತದಲ್ಲಾದರೂ ಈ ವಿಶಾಲತೆ ದರ್ಶನ ನಮಗಾಗುವುದಿಲ್ಲ. ಈ ಮತಗಳ ಆಧಾರ ಸ್ವರೂಪವಾಗಿರುವ ಕುರಾನ್ ಅಥವಾ ಬೈಬಲ್‌ಗಳು ಜಗತ್ತಿನ ಜನಗಳನ್ನು ತನ್ನವರು ಮತ್ತು ಇತರರೆಂದು ವಿಭಾಗಿಸಿವೆ. ಕ್ರೈಸ್ತ ಮತ್ತು ಹೀದನ್ ಎಂಬ ಕ್ರೈಸ್ತರ ವಿಭಜನೆಯಾಗಲೀ, ಮುಸ್ಲಿಂ ಮತ್ತು ಕಾಫೀರ್ ಎಂಬ ಕುರಾನಿನ ವಿಭಜನೆಯಾಗಲೀ ಏಕತೆಯನ್ನೆಂದೂ ತರಲಾರದು.

ಇಂಥ ವಿಭಜನೆ ವ್ಯಾವಹಾರಿಕ ಜಗತ್ತಿನಲ್ಲಿ ಅನಿವಾರ್ಯವೆಂದು ಒಪ್ಪಬಹುದಾದರೂ ನಿಜಕ್ಕೂ ಗಾಬರಿಯಾಗುವುದು ಇದೇ ವಿಂಗಡೆಯ ಆಧಾರದ ಮೇಲೆ ಸಿಗಬಹುದಾದ ಫಲ ಪ್ರಾಪ್ತಿಯ ವಿಷಯ. ಏಕೆಂದರೆ ವ್ಯಕ್ತಿಯೋರ್ವ ಎಷ್ಟೇ ಒಳ್ಳೆಯವನಿರಲಿ, ಜೀವನವಿಡೀ ಪರೋಪಕಾರವನ್ನೇ ಮಾಡಿರಲಿ, ಆದರೆ ಆತ ಕ್ರೈಸ್ತನಲ್ಲದಿದ್ದರೆ ಆತನಿಗೆ ಮುಕ್ತಿ ಸಿಗದು. ಅಂತಿಮ ತೀರ್ಪಿನ ದಿನ ಕ್ರೈಸ್ತರಿಗೆ ಮಾತ್ರ ದೇವನ ಬೆಂಬಲ. ಅದಕ್ಕಾಗಿ ಕ್ರಿಸ್ತನೇ ಮಾಧ್ಯಮ. ಮಾಧ್ಯಮವನ್ನು ನಿರಾಕರಿಸಿದವನಿಗೆ ರೌರವ ನರಕವೇ ಗತಿ. ಮುಸಲ್ಮಾನರಲ್ಲೂ ಇದೇ ಸ್ಥಿತಿ. ಜನ್ನತ್ ಬೇಕೆಂದರೆ ಸುನ್ನತ್ ಆಗಲೇ ಬೇಕು.

ಸರ್ವೇ ಭವಂತು ಸುಖಿನಃ :

ಆದರೆ ಭಾರತದಲ್ಲೆಂದೂ ಈ ಸ್ಥಿತಿಯಿರಲಿಲ್ಲ. ಇದೊಂದೇ ಮಾರ್ಗ, ಒಬ್ಬನೇ ಸಂರಕ್ಷಕ ಎಂಬ ಅಂತಿಮತೆಯಿರಲಿಲ್ಲ. ಇರುವುದೊಬ್ಬನೇ ದೇವರೆಂಬ ಕಲ್ಪನೆಯಿದ್ದರೂ ಅವನಿಗೆ ಸಾವಿರಾರು ಹೆಸರುಗಳು ಮತ್ತು ಅನೇಕ ರೂಪಗಳೆಂಬ ವಿಶಾಲತ್ವ. ರಾಮಕೃಷ್ಣರಂತಹ ಸಾಧಕರು ತಮ್ಮ ಜೀವನದಲ್ಲೇ ಇದರ ಪ್ರತಿಪಾದನೆ ಮಾಡಿದವರು. ಒಬ್ಬನೇ ದೇವ, ಒಂದೇ ಪುಸ್ತಕ, ಒಂದೇ ಮಾರ್ಗ ಎಂದು ಚಿಂತನೆಗೆ ಮುಕ್ತಾಯ ಹಾಕುವ ಪರಂಪರೆ ಇಲ್ಲಿ ಬೆಳೆಯಲಿಲ್ಲ. ಅಂತಿಮ ಪ್ರವಾದಿ ಎಂಬ ಕಲ್ಪನೆಯೇ ಭಾರತದಲ್ಲಿ ಹಾಸ್ಯಾಸ್ಪದ.

ಒಂದು ಮತಕ್ಕೆ ಸಂಬಂಧಪಟ್ಟಂತೆ ಆತ ಅಂತಿಮ ಪ್ರವಾದಿಯಾಗಿರಬಹುದು. ಆದರೆ ಇಡೀ ಮನುಕುಲಕ್ಕೆ ಒಬ್ಬನೇ ಅಂತಿಮ ಎಂಬುದು ಇಲ್ಲಿ ಅಪ್ರಸ್ತುತವೆನಿಸುತ್ತಿದೆ. ಇದು ತರಗತಿಯಲ್ಲಿ ಒಬ್ಬನೇ ಶ್ರೇಯಾಂಕದ ವಿದ್ಯಾರ್ಥಿ, ಅವನ ನಂತರವೂ ಆ ತರಗತಿಯಲ್ಲಿ ಯಾರೂ ಶ್ರೇಯಾಂಕ ಪಡೆಯಬಾರದೆಂಬ ನಿಯಮ ಹಾಕಿದಂತೆ. ಈ ನಿಯಮ ಇಲ್ಲದಿದ್ದುದರಿಂದಲೇ ನಮ್ಮಲ್ಲಿ ಸಾಲು ಸಾಲಾಗಿ ಪ್ರವಾದಿಗಳೂ, ತೀರ್ಥಂಕರರು, ದಾರ್ಶನಿಕರು, ಮತ ನಿರ್ಮಾಪಕರು, ಸಂತ ಮಹಂತರ ಪರಂಪರೆಯೇ ಉದ್ಭವವಾಯಿತು ಮತ್ತು ಈಗಲೂ ಮಾನವ ದೇವನಾಗಬಲ್ಲ ದೇಶವಿದು.

ಇಲ್ಲೊಂದು ವಿಚಿತ್ರ ತತ್ವ ದರ್ಶನವಿದೆ, ಚಾರ್ವಕ ಎಂಬ ನಾಸ್ತಿಕನೇ ಇದರ ಪ್ರವರ್ತಕ. ದೇವರಿಲ್ಲ ದಿಂಡಿರಿಲ್ಲ, ಪಾಪವಿಲ್ಲ, ಪುಣ್ಯವಿಲ್ಲ ಮುಂದಿನಜನ್ಮವನ್ನು ಕಂಡವರಾರು ಎಲ್ಲವೂ ಬೋಗಸ್, ಈಗ ಕಣ್ಣ ಮುಂದಿರುವುದೇ ಸತ್ಯ, ವೇದಗಳೆಲ್ಲ ಸುಳ್ಳಿನ ಕಂತೆ. ಭೋಗವೇ ಜೀವನ, ತುಪ್ಪ ತಿನ್ನು ಮಜಾ ಮಾಡು, ಹಣವಿಲ್ಲದಿದ್ದರೆ ಸಾಲ ಮಾಡು, ತೀರಿಸಲಾಗದಿದ್ದರೆ ಚಿಂತೆ ಇಲ್ಲ ನೀವು ಮಾಡಿದ ಯಾವುದೇ ಪಾಪ ಪುನರ್ಜನ್ಮದಲ್ಲಿ ನಿಮ್ಮನ್ನು ಕಾಡುವುದಿಲ್ಲ ಎಂದೆಲ್ಲಾ ಹೇಳಿದ ಆತನನ್ನು ಭಾರತೀಯರು ಕಲ್ಲೊಡೆದು ಸಾಯಿಸಲಿಲ್ಲ, ಬೆಂಕಿಗೆ ಹಾಕಿ ಸುಡಲಿಲ್ಲ ಬದಲಾಗಿ ಇದು ಒಂದು ವಿಚಾರವೆಂದು ಅನುಮೋದಿಸಿದರು, ಆತನನ್ನೂ ಒಬ್ಬ ಮಹರ್ಷಿಯೆಂದು ಗೌರವಿಸಿ ಅವನ ಚಿಂತನೆಗಳನ್ನು ಚಾರ್ವಾಕ ದರ್ಶನವೆಂದೇ ಶಾಶ್ವತಗೊಳಿಸಿದರು.

ಆಷ್ಟೆಕೆ ? ಸ್ವಯಂ ಏಸುವೇ ಏನಾದರೂ ಭಾರತದಲ್ಲಿಯೇ ಹುಟ್ಟಿ ತನ್ನ ವಿಚಾರ ಪ್ರತಿಪಾದಿಸಿದ್ದರೆ ಅವನೊಬ್ಬ ಮಹಾನ್ ಸಂತನಾಗುತ್ತಿದ್ದನೇ ಹೊರತು, ದುರ್ಮರಣಕ್ಕೀಡಾಗುತ್ತಿರಲಿಲ್ಲ. ಇಂತಹ ವಿಚಾರ ಸ್ವಾತಂತ್ರ್ಯ ಇಲ್ಲದುದರಿಂದಲೇ ಐರೋಪ್ಯ ದೇಶಗಳಲ್ಲಿ ಬ್ರೂನೋನಂತಹ ವಿಜ್ಞಾನಿಯನ್ನು, ಸ್ಟುವರ್ಟ್‌ನಂತಹ ವೈದ್ಯನನ್ನು ಜೀವಂತ ಸುಡಲಾಯಿತು, ಗೆಲಿಲಿಯೋನನ್ನು ಜೈಲಿಗಟ್ಟಲಾಯಿತು, ಸಾಕ್ರಟೀಸನಿಗೆ ವಿಷವಿಕ್ಕಲಾಯಿತು.

ಜಗತ್ತು ಭಾರತದಿಂದ ಕಲಿಯಬೇಕಾಗಿರುವುದು ಇನ್ನೂ ಸಾಕಷ್ಟಿದೆ ಅಂತೀನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X