ಶಾಲೆಗಳಿಗೆ ಕೇಸರಿ ಶಾಲು ಹಾಕಿಕೊಂಡು ಬಂದ್ರೆ ಕಾನೂನು ಕ್ರಮ: ಮಧು ಬಂಗಾರಪ್ಪ
ರಾಜ್ಯದಲ್ಲಿ ಜೂನ್ 1 ರಿಂದ 2026-27ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದ್ದು, ಈ ಬೆನ್ನಲ್ಲೇ ಮತ್ತೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, "ರಾಜ್ಯ ಸರ್ಕಾರದ ಯಾವುದೇ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಅವಕಾಶವಿಲ್ಲ. ಒಂದು ವೇಳೆ ನಿಯಮ ಮೀರಿ ಯಾರಾದರೂ ಕೇಸರಿ ಶಾಲು ಹಾಕಿಕೊಂಡು ಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಜಾಬ್ ವಿಚಾರದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಇದೆ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೇ ಈ ಬಗ್ಗೆ ತಿಳಿಸಲಾಗಿತ್ತು ಮತ್ತು ಜನತೆಯ ಋಣ ತೀರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಸಾಹಿತಿ ದೇವನೂರು ಮಹಾದೇವ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

"ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ನೀಟ್ ಪರೀಕ್ಷೆಯ ಅಕ್ರಮದಿಂದ ನುಣುಚಿಕೊಳ್ಳಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಬೇಕೆಂದೇ ಹಿಜಾಬ್ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುತ್ತಿದೆ. ಬಿಜೆಪಿಯವರಿಗೆ ಹಿಜಾಬ್ ಕೇವಲ ಒಂದು ವಿವಾದದ ವಸ್ತುವಾಗಿರಬಹುದು, ಆದರೆ ನಮಗೆ ಅದು ಸಮಾನತೆಯ ಸಂಕೇತವಾಗಿದೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಶೇಕಡಾ 95 ರಷ್ಟು ಹಿಂದೂ ವಿದ್ಯಾರ್ಥಿಗಳಿದ್ದಾರೆ. ವಿನಾಕಾರಣ ಟೀಕೆ ಮಾಡುವವರು ಮೊದಲು ಆ ಮಕ್ಕಳ ಬಳಿ ಹೋಗಿ ವಾಸ್ತವ ತಿಳಿದುಕೊಳ್ಳಲಿ, ಆಮೇಲೆ ಅವರಿಗೆ ಬುದ್ಧಿ ಬರುತ್ತದೆ" ಎಂದು ತಿರುಗೇಟು ನೀಡಿದರು.
ಸಮವಸ್ತ್ರ ನಿಯಮಗಳ ಕುರಿತು ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಇರುವಂತಹ ನಿಯಮಗಳೇ ನಮ್ಮ ರಾಜ್ಯದ ಶಾಲೆಗಳಲ್ಲೂ ಇವೆ. ಬಿಜೆಪಿಯವರು ಮೊದಲು ಕೇಂದ್ರೀಯ ವಿದ್ಯಾಲಯಗಳಿಗೆ ಕೇಸರಿ ಶಾಲು ವಿತರಿಸಲಿ, ಆಮೇಲೆ ನಮ್ಮ ಬಳಿ ಬರಲಿ ಎಂದು ಸವಾಲು ಹಾಕಿದರು. ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿಗಳು ಜನಿವಾರ, ಹಿಜಾಬ್, ಶಿವದಾರ, ರುದ್ರಾಕ್ಷಿಯಂತಹ ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಮೊದಲಿನಿಂದಲೂ ಧರಿಸಿಕೊಂಡು ಬರುತ್ತಿದ್ದಾರೆ, ಅದಕ್ಕೆ ಅವಕಾಶವಿದೆ. ಆದರೆ, ಉದ್ದೇಶಪೂರ್ವಕವಾಗಿ ಹೊಸದಾಗಿ ವಿವಾದ ಸೃಷ್ಟಿಸಲು ಕೇಸರಿ ಶಾಲು ಧರಿಸಿಕೊಂಡು ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿದ್ಯಾಭ್ಯಾಸದ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೂ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, "ನಾನು ಪಿಯುಸಿ ಮುಗಿಸಿದ ಬಳಿಕ ಉದ್ಯಮದಲ್ಲಿ ಆಸಕ್ತಿ ಇದ್ದ ಕಾರಣ ಆ ಕಡೆ ಗಮನಹರಿಸಿದೆ. ನನ್ನ ಶಿಕ್ಷಣದ ಬಗ್ಗೆ ಮಾತನಾಡುವವರು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ನಕಲು ಅಂಕಪಟ್ಟಿಯನ್ನಾದರೂ ತಂದು ತೋರಿಸಲಿ" ಎಂದು ಸವಾಲು ಹಾಕಿದರು. ಅಲ್ಲದೇ, "ರಾಜ್ಯದಲ್ಲಿ ನಾನು ಸಚಿವನಾದ ಮೇಲೆ ಮೂರು ಪ್ರಮುಖ ಪರೀಕ್ಷೆಗಳನ್ನು ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಯಶಸ್ವಿಯಾಗಿ ನಡೆಸಿದ್ದೇನೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪರೀಕ್ಷೆ ನಡೆಸುವುದು ಹೇಗೆಂದು ಗೊತ್ತಿಲ್ಲದಿದ್ದರೆ ನನ್ನ ಬಳಿ ಬರಲಿ, ನಾನು ಹೇಳಿಕೊಡುತ್ತೇನೆ" ಎಂದು ವ್ಯಂಗ್ಯವಾಡಿದರು.












Click it and Unblock the Notifications