Chetan Ahimsa: ದರ್ಶನ್ ತನ್ನ ತಪ್ಪು ತಿದ್ದಿಕೊಂಡು ಉತ್ತಮ ಮನುಷ್ಯನಾಗಿ ಬಂದ್ರೆ ತುಂಬಾ ಒಳ್ಳೆಯದು: ಚೇತನ್ ಅಹಿಂಸಾ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಗಂಭೀರ ಆರೋಪ ಎದುರಿಸುತ್ತಾ ಸದ್ಯ ಜೈಲು ವಾಸ ಅನುಭವಿಸುತ್ತಿರುವ ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಬಗ್ಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chetan Ahimsa) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಹಾಗೂ ಚಿತ್ರರಂಗಕ್ಕೆ ಅವರ ಮರಳುವಿಕೆಯ ಕುರಿತು ಅಚ್ಚರಿಯ ಮಾತುಗಳನ್ನಾಡಿದ್ದಾರೆ.
ದರ್ಶನ್ ಬಿಡುಗಡೆಗೆ ಒಂದು ಟೈಮ್‌ಲೈನ್
ಜೈಲು ಜೀವನದ ಭೀಕರತೆಯನ್ನು ಉಲ್ಲೇಖಿಸುತ್ತಾ ಮಾತು ಆರಂಭಿಸಿದ ಚೇತನ್, "ಜೈಲು ವಾಸ ಎನ್ನುವುದು ಅಷ್ಟು ಸುಲಭದ ಮಾತಲ್ಲ. ಜೈಲಿನ ಕಂಬಿಗಳ ಹಿಂದೆ ಬದುಕುವುದು ತುಂಬಾ ಕಷ್ಟಕರವಾಗಿರುತ್ತದೆ. ಅಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೇರೆ ಬೇರೆ ರೀತಿಯ ಸವಾಲುಗಳು ಮತ್ತು ಕಷ್ಟಗಳು ಎದುರಾಗುತ್ತವೆ" ಎಂದಿದ್ದಾರೆ.

ಇದೇ ವೇಳೆ ದರ್ಶನ್ ಅವರ ಕಾನೂನು ಹೋರಾಟದ ಕುರಿತು ಮಾತನಾಡಿದ ಅವರು, "ಇತ್ತೀಚೆಗೆ ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೆ. ಆ ವೇಳೆ ನನಗೆ ದರ್ಶನ್ ಅವರ ಪ್ರಕರಣದ ಕುರಿತು ಒಂದು ಟೈಮ್‌ಲೈನ್ ಸಿಕ್ಕಿದೆ ಎಂಬ ವಿಚಾರ ತಿಳಿಯಿತು" ಎಂದಿದ್ದಾರೆ. ಅಂದರೆ, ಕಾನೂನಾತ್ಮಕ ಪ್ರಕ್ರಿಯೆಗಳನ್ನು ಗಮನಿಸಿದರೆ ಇನ್ನೊಂದು ವರ್ಷದ ಅವಧಿಯೊಳಗೆ ದರ್ಶನ್ ಅವರು ಜೈಲಿನಿಂದ ಹೊರಬರಬಹುದು ಎಂದು ವಕೀಲರು ಅಭಿಪ್ರಾಯಪಡುತ್ತಿದ್ದಾರೆ ಎಂದು ಚೇತನ್ ಹೇಳಿದ್ದಾರೆ.
"ಉತ್ತಮ ವ್ಯಕ್ತಿಯಾಗಿ ಬಂದರೆ ಚಿತ್ರರಂಗಕ್ಕೆ ಒಳ್ಳೆಯದು"
ಒಂದು ವೇಳೆ ದರ್ಶನ್ ಅವರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆಯೂ ಚೇತನ್ ಸಲಹೆ ನೀಡಿದ್ದಾರೆ. "ಒಂದು ವೇಳೆ ದರ್ಶನ್ ಅವರದ್ದು ಈ ಪ್ರಕರಣದಲ್ಲಿ ತಪ್ಪಿರುವುದು ಸಾಬೀತಾದರೆ, ಅವರು ಆ ತಪ್ಪನ್ನು ತಿದ್ದಿಕೊಳ್ಳಬೇಕು. ಜೈಲಿನಿಂದ ಒಬ್ಬ ಉತ್ತಮ ಮನುಷ್ಯನಾಗಿ ಹೊರಬಂದರೆ, ಅವರು ಮತ್ತೆ ಚಿತ್ರರಂಗಕ್ಕೆ ಗೌರವಯುತವಾಗಿ ವಾಪಸ್ ಬಂದು ತಮ್ಮ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ಇದು ನಡೆದರೆ ನಿಜಕ್ಕೂ ನಮಗೆಲ್ಲರಿಗೂ ಒಳ್ಳೆಯದೇ" ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಅಣ್ಣಾವ್ರ ಸಮಾಧಿ ವಿವಾದಕ್ಕೆ ಚೇತನ್ ಸ್ಪಷ್ಟನೆ
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಸಮಾಧಿ ಕುರಿತಾದ ತಮ್ಮ ಹೇಳಿಕೆಗೆ ಚೇತನ್ ಅಹಿಂಸಾ ಸ್ಪಷ್ಟನೆ ನೀಡಿದ್ದಾರೆ. "ನಾನು ಇತ್ತೀಚೆಗೆ ಡಾ. ರಾಜ್‌ಕುಮಾರ್ ಅವರ ಸಮಾಧಿ ವಿಚಾರದಲ್ಲಿ ಕೇವಲ ಸರ್ಕಾರದ ನೀತಿಗಳ (Government Policies) ಬಗ್ಗೆಯಷ್ಟೇ ಪ್ರಸ್ತಾಪ ಮಾಡಿದ್ದೆ. ನಾವೆಲ್ಲರೂ ರಾಜ್‌ಕುಮಾರ್ ಅವರ ಅಭಿಮಾನಿಗಳೇ, ಚಿತ್ರರಂಗಕ್ಕೆ ಹಾಗೂ ಕರ್ನಾಟಕಕ್ಕೆ ಅವರ ಕಲಾಸೇವೆ ಅಪಾರವಾದದ್ದು. ಆದರೆ, ನಾನು ಹಾಕಿದ್ದ ಪೋಸ್ಟರ್‌ನ ಆಶಯವನ್ನು ಕೆಲವು ಮಾಧ್ಯಮ ಶಕ್ತಿಗಳು ದೊಡ್ಡ ಮಟ್ಟದಲ್ಲಿ ತಿರುಚಿ, ಬೇರೆ ರೀತಿಯಲ್ಲೇ ಬಿಂಬಿಸಿದವು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. "ಕರ್ನಾಟಕದ ಪ್ರಜ್ಞಾವಂತ ಜನತೆ ಕೂಡ ನನ್ನ ಮಾತಿನಲ್ಲಿದ್ದ ಸತ್ಯ ಒಪ್ಪಿಕೊಂಡಿದ್ದಾರೆ. ಯಾವುದೇ ವ್ಯಕ್ತಿಯ ವಿರುದ್ಧ ಮಾತನಾಡುವುದು ನನ್ನ ಉದ್ದೇಶವಲ್ಲ. ಎಲ್ಲರಿಗೂ ಸಮಾನ ಹಕ್ಕು ಸಿಗುವಂತಹ ಒಂದು ಸಮ ಸಮಾಜ ಹಾಗೂ ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ" ಎಂದು ಚೇತನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.













Click it and Unblock the Notifications