• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೇಂದ್ರೆಯವರ ಮಾತಿನ ಚಟಾಕಿ

By Staff
|

ಧಾರವಾಡದಲ್ಲಿ ಮಿತ್ರ ಸಾಹಿತಿಯಾಬ್ಬರ ಮಗಳ ಮದುವೆಗೆ ಬಂದಿದ್ದರು. ಬೇಂದ್ರೆಯವರು ತಮ್ಮ ನೆಚ್ಚಿನ ಟಾಂಗಾ ಸವಾರಿ ಮಾಡಿ ಬಂದರು. ಮದುವೆ ಹಾಲಗೇರಿಯ ಹನುಮಂತ ದೇವರ ಗುಡಿಯಲ್ಲಿತ್ತು. ನಾವೆಲ್ಲ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದೆವು. ಅಕ್ಷತೆ ಹಾಕಿ, ಸಾಹಿತಿ ಮಿತ್ರರು ಒಂದು ತಾಸು ಕುಳಿತು ಊಟ ಮಾಡಿಕೊಂಡು ಹೋಗಲು ಬಿನ್ನಹಿಸಿದರು. (ಆ ದಿನಗಳಲ್ಲಿ ಇಂದಿನಂತೆ ಅಕ್ಷತೆ ಆದೊಡನೆ ಬಫೇ ಇರಲಿಲ್ಲ. ಹೋಮ ಹವನದ ನಂತರ 1-2 ತಾಸಿನ ಮೇಲೆ ಭೋಜನ ಇರುತ್ತಿತ್ತು). ‘ಒಂದು ಬಿಟ್ಟು ಎರಡು ತಾಸು ಕೂಡಲಿಕ್ಕೆ ಸಿದ್ಧ. ಅದ್ರೆ ನನ್ನನ್ನು ಯಾರಾದ್ರೂ engage ಮಾಡಬೇಕು. ನಾನು ಓದದೇ ಇದ್ದ ಪುಸ್ತಕ ತಂದು ಕೊಡ್ರಿ, ಇಲ್ಲ ಯಾರನ್ನಾದರೂ ಸಂವಾದಕ್ಕೆ ಎದುರು ಕೂಡಿಸಿರಿ’ ಎಂದರು. ಇದು ಬೇಂದ್ರೆಯವರ ಸ್ಟೈಲ್‌.

ಬೇಂದ್ರೆಯವರ ಕೈಯಲ್ಲಿ ಕೊಡೆ ಇರುವುದು ಇನ್ನೊಂದು ವೈಶಿಷ್ಟ್ಯ. ಮಳೆ ಇರಲಿ, ಬಿಸಿಲಿರಲಿ ಅದರ ಉಪಯೋಗವಿದೆ ಅನ್ನುತ್ತಿದ್ದರು. ಒಮ್ಮೆ ಮಳೆಯೂ ಇರಲಿಲ್ಲ, ಬಿಸಿಲೂ ಇರಲಿಲ್ಲ, ಈಗ ನಿಮ್ಮ ಕೊಡೆಯ ಉಪಯೋಗವೇನು? ಎಂದು ವ್ಯಂಗ್ಯವಾಗಿ ಒಬ್ಬ ಕುಹಕಿ ಕೇಳಿದಾಗ, ಬೇಂದ್ರೆ ತತ್‌ಕ್ಷಣ ಉತ್ತರಿಸಿದರು. ‘ಬೊಗಳುವ ನಾಯಿಗೆ ಧಾರವಾಡದಲ್ಲಿ ಕೊರತೆಯಿಲ್ಲ. ನನ್‌ ಕೊಡೆ ನೋಡಿದರೆ ಅವು ದಾರಿ ಬಿಡುತ್ತವೆ’ ಎಂದರು. ನಾವೆಲ್ಲ ನಕ್ಕೆವು. ‘ಛತ್ರಪತಿ, ಛತ್ರೀಪತಿಯಲ್ಲಿ ಬಹಳ ವ್ಯತ್ಯಾಸವೇನಿಲ್ಲ, ಇಬ್ಬರೂ ತಮ್ಮ ತಲೆ ಕಾಯ್ದುಕೊಳ್ಳುತ್ತಾರೆ’ ಎಂದು ನಕ್ಕರು.

ಮಕ್ಕಳ ಮುಂದೆ ಮಕ್ಕಳಂತೆ ಮುಗ್ಧರಾಗಿ ಅವರನ್ನು ಮೆಚ್ಚಿಸುವುದು ಬೇಂದ್ರೆಯವರ ಸಜ್ಜನಿಕೆಯಾಗಿತ್ತು. ಎಲ್ಲಿ, ಮಲ್ಲಿ, ನಾಗಿ, ಕತೆಯನ್ನು ಹೇಳಿ ಶಾಲಾ ಮಕ್ಕಳನ್ನು ರಂಜಿಸಿದ್ದನ್ನು ನಾನು ನೋಡಿರುವೆ. ಒಂದು ಹಳ್ಳಿಯ ಗೌಡನ ಮೂರು ಉಪಪತ್ನಿಯರು ಮೊದಲು ಎಲ್ಲಿ, ಮಲ್ಲಿ, ನಾಗಿ ಎಂದೇ ಪ್ರಸಿದ್ಧರಾಗಿರೂ, ಗೌಡ ಇಟ್ಟುಕೊಂಡವರಾದ್ದರಿಂದ ಎಲ್ಲರೂ ಅವರನ್ನು ಗೌರವದಿಂದ ಸಂಬೋಧಿಸಬೇಕೆಂದು ಆಗ್ರಹ ತೋರುತ್ತಿದ್ದರು. ಎಲ್ಲಮ್ಮ, ಮಲ್ಲಮ್ಮ, ನಾಗಮ್ಮ ಅನ್ನಬೇಕು. ಕೆಲ ಪುಂಡ ಹುಡುಗರು ಪಣ ತೊಟ್ಟು ಎಲ್ಲಿ, ಮಲ್ಲಿ, ನಾಗಿ ಎಂದು ಕರೆದು ಗೌಡರ ಶಿಕ್ಷೆಯಿಂದ ಪಾರಾದ ಕತೆ ಅದು. ‘ಗೌಡ ಎಲ್ಲಿ’ ಎಂದು ಕರೆದು ನಂತರ ನಾನು ಹಾಗೆ ಅನ್ನಲಿಲ್ಲ. ಗೌಡರು ಎಲ್ಲಿ ಎಂದು ಪ್ರಶ್ನೆ ಕೇಳಿದೆ ಎಂದು ಪಾರಾಗುವ ಗತ್ತು- ಬೇಂದ್ರೆಯವರ ಬಾಯಿಯಿಂದ ಕತೆ ಕೇಳಿದ ಮಕ್ಕಳು ಸಂತಸ ಪಡುತ್ತಿದ್ದರು.

ಧಾರವಾಡದ ನಾಟಕಕಾರರೊಬ್ಬರು ಬರೆದ ನಾಟಕದಲ್ಲಿ ಭೀಮಸೇನ ಜೋಷಿಯವರಂತಹ ಕಲಾವಿದರು ಪಾತ್ರ ವಹಿಸಿ ಹಳೆಯ ಮುಂಬೈ ರಾಜ್ಯದ ನಾಟಕ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದರು. ನಾಟಕದ ಹಾಡು ಶ್ರೇಷ್ಠವಾಗಿದ್ದವು. ಅಭಿನಯ ಉತ್ತಮವಾಗಿತ್ತು. ಎಲ್ಲ ಚೆನ್ನಾಗಿದ್ದರೂ ನಾಟಕದಲ್ಲಿ ಸಾಹಿತ್ಯಿಕ ಗುಣ ಇರಲಿಲ್ಲ. ಆ ಕೊರತೆ ಮುಖ್ಯವಾಗಿತ್ತು. ಇದರ ಬಗ್ಗೆ ಹೇಳುವಾಗ ಬೇಂದ್ರೆಯವರು ‘ಮಚ್ಚೇ ಖೀರ್‌’ ಎಂಬ ಸನ್ನಿವೇಶದ ವರ್ಣನೆ ಮಾಡುತ್ತಿದ್ದರು.

ಒಬ್ಬರ ಮನೆಯಲ್ಲಿ ಔತಣವಿತ್ತು. ಅತಿಥಿಗಳಿಗೆ ‘ಖೀರು’ ಬೇಕಾಗಿತ್ತು. ಆದರೆ ಮನೆಯಲ್ಲಿ ಶಾವಿಗೆ ಇರಲಿಲ್ಲ. ಶಾವಿಗೆ ಇಲ್ಲದೆ ಖೀರು ಮಾಡುವಂತಿಲ್ಲ. ಮನೆಯ ಹಿತ್ತಲಲ್ಲಿ ಒಂದು ಹಾಳು ಬಕೆಟ್‌ ಇತ್ತು. ಅದರಲ್ಲಿ ಮಳೆಯ ನೀರು ನಿಂತಿತ್ತು. ಅದರಲ್ಲಿ ಅಜ್ಜನ ಮಚ್ಚೆ (ಹಳೆಯ ಕಾಲದ ಬೂಟು) ನೆನೆದಿತ್ತು. ಅದನ್ನೇ ತಂದು ಹೆರೆಯುವ ಮಣೆಯಲ್ಲಿ ಹೆರೆದು ಶಾವಿಗೆಯಂತಹ ಎಳೆಗಳನ್ನು ತೆಗೆಯಲಾಯ್ತು. ಶಾವಿಗೆ ಪಾಯಸಕ್ಕೆ ಎಲ್ಲ ಶ್ರೇಷ್ಠ ಪದಾರ್ಥಗಳನ್ನು ಬಳಸಲಾಯ್ತು. ಊಟ ಮಾಡಿದವರಿಗೆ, ಹೇಗಿತ್ತು ಖೀರು ಅಂದಾಗ ಉತ್ತರಿಸಿದರಂತೆ : ‘ಪಾಯಸ ಚೆನ್ನಾಗಿತ್ತು. ಆದರೆ ಬಾಯಲ್ಲಿ ಏನೋ ನಾರಿನಂತೆ ಬರ್ತಾ ಇತ್ತು’ ಎಂದು. ಹಾಗೆ ‘ನಾಟಕ ಚೆನ್ನಾಗಿತ್ತು ಆದರೆ... ’ ಎಂದು. ಅದರಲ್ಲಿ ಸಾಹಿತ್ಯಿಕ ಗುಣರಾಹಿತ್ಯವನ್ನು ಜನ ಟೀಕಿಸುತ್ತಿದ್ದರು. ಆ ನಾಟಕ ನೆನೆದಾಗೊಮ್ಮೆ ‘ಮಚ್ಚೀ ಖೀರ್‌’ ನೆನಪಾಗುತ್ತದೆ ಎಂದು ಹಾಸ್ಯದ ಹೊನಲಿನಲ್ಲಿ, ಕೇಳುವವರನ್ನು ಬೇಂದ್ರೆ ತೇಲಿಸುತ್ತಿದ್ದರು.

‘ನಿತ್ಯಾನಂದ ದರ್ಶನ’ ವೆಂಬ ಮಾಸ ಪತ್ರಿಕೆ ಹೊರಡಿಸುವ ಸಮಯದಲ್ಲಿ ಶಂಬಾ ಜೋಶಿಯವರಿಗೆ ಆಗಾಗ ಭೇಟಿಯಾಗುತ್ತಿದ್ದೆ. ನಾನು ಬೇಂದ್ರೆಯವರ ನಿಕಟವರ್ತಿ ಎಂಬುದು ಅವರಿಗೆ ಗೊತ್ತಿತ್ತು. ನಾನು ಮೊದಲು ಶಂಬಾ ಅವರ ಮನೆಗೆ ಹೋಗಿ ನಂತರ ಬೇಂದ್ರೆ ಅವರ ಮನೆಗೆ ಹೋಗುತ್ತಿದ್ದೆ. ಒಮ್ಮೆ ಮೊದಲು ಬೇಂದ್ರೆಯವರ ಮನೆಗೆ ಹೋಗಿದ್ದೆ, ನಂತರ ಶಂಬಾ ಅವರ ಮನೆಗೆ ಹೋದೆ. ಶಂಬಾ ಅವರು ಕೇಳಿದರು.‘ ಬೇಂದ್ರೆಯವರ ಮನೆಯಿಂದ ಬಂದೆಯಾ?’ ಎಂದು.‘ತಮಗೆ ಹೇಗೆ ಗೊತ್ತಾಯ್ತು?’ಎಂದೆ. ಆಗ ಅವರೆಂದರು,‘ಬೇಂದ್ರೆಯವರ ಮನೆಗೆ ಹೋಗಿ ಬಂದರೆ ನಿಮ್ಮ ಮೈಯಿಂದ ಬೇಂದ್ರೆ ಕಾವ್ಯದ ವಾಸನೆ ಬರ್ತದೆ’ ಎಂದು ನಕ್ಕರು. ಅದು ಟೀಕೆಯಾಗಿರಲಿಲ್ಲ. ಒಂದು ಹಾಸ್ಯದ ವಿನೋದ. ಆಗ, ‘ಕೇದಿಗೆಯ ಬನದಿಂದ ಬಂದಾಗ ಮೈಗೆ ಅದರ ವಾಸನೆ ತಗಲುವುದು ಸ್ವಾಭಾವಿಕ’ ಅಂದರು ಶಂಬಾ.

ಸಾಲಿ ರಾಮಚಂದ್ರರಾಯರು ಸಹಜ ಕವಿಗಳಾಗಿದ್ದರು. ಅವರು ವಿಮರ್ಶಕರ ಟೀಕೆ ತಡೆಯದೆಯೇ ತಾವು ಕುಸುಮ ಷಟ್ಟದಿಯಲ್ಲಿ ರಾಮಾಯಣ ಬರೆಯಲು ಪ್ರಾರಂಭಿಸಿದ್ದನ್ನು ನಿಲ್ಲಿಸಿ ಬಿಟ್ಟರು. ನಂತರ ಅವರು ಅಧಿಕವಾಗಿ ಸಂಸ್ಕೃತದಲ್ಲಿ ಬರೆದರು. ಒಂದು ಸಭೆಯಲ್ಲಿ ಕವಿಯ ಮನಸ್ಸು ಪಾರಿಜಾತ ಹೂವಿನಂತೆ; ವಿಮರ್ಶೆಯ ಬಿಸಿಲಿನಲ್ಲಿ ಅದು ಬಾಡುತ್ತದೆ ಅಂದಿದ್ದರು! ಅದೇ ಸಭೆಯಲ್ಲಿದ್ದ ಬೇಂದ್ರೆಯವರು ಬೇರೆ ರೀತಿಯ ವಿವರಣೆ ನೀಡಿದ್ದರು. ‘ಕವಿಯ ಮನಸ್ಸು ಗುಲಾಬಿ ಹೂವು ಇದ್ದಂತೆ, ಪ್ರೀತಿಸುವವರಿಗೆ ಪರಿಮಳ ಬೀರಿದರೆ ದ್ವೇಷಿಸುವವರನ್ನು ತನ್ನ ಮುಳ್ಳುಗೈಯಿಂದ ಪರಚಲು ಸಮರ್ಥ’ ಎಂದಿದ್ದರಂತೆ. ಈ ಸಂಗತಿಯನ್ನು ಬೇಂದ್ರೆಯವರ ಬಾಯಿಯಿಂದ ಕೇಳಿದ ನೆನಪು ನನಗೆ.

ಹಾಗೆ ನೂರಾರು ಕತೆ-ಉಪಕತೆ ಹೇಳಬಹುದು. ನನಗೆ ಮರೆಯದಂತೆ ಪ್ರಭಾವಿಸಿದ ಒಂದು ಸಂದರ್ಭದ ಬಗ್ಗೆ ಬರೆಯುವೆ. ಧಾರವಾಡದ ಮುನಿಸಿಪಲ್‌ ಹಾಲ್‌(ಆಗ ಹುಬ್ಬಳ್ಳಿ ಧಾರವಾಡ ಕಾರ್ಪೋರೇಶನ್‌ ಆಗಿರಲಿಲ್ಲ)ನಲ್ಲಿ ಒಂದು ಸಭೆ ಸೇರಿತ್ತು. ಬೇಂದ್ರೆಯವರು ಅಧ್ಯಕ್ಷತೆವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಬಳ್ಳಾರಿಯ ಬೀಚಿಯವರು ಆಗಮಿಸಿದ್ದರು. ಬೀಚಿಯವರು ಹಾಸ್ಯಮಯವಾಗಿ ತಮ್ಮದೇ ಆದ ಶೈಲಿಯಲ್ಲಿ ಮಾತಾಡಿದರು.

‘ಬೇಂದ್ರೆಯವರ ಕ್ಷಮೆ ಕೋರಿ ಒಂದು ಮಾತು ಹೇಳುವೆ. ಲಂಡನ್‌ ಟವರ್‌ ಮೇಲೆ ನಿಂತು ಕಲ್ಲುಗಳನ್ನು ಎಲ್ಲೆಡೆ ತೂರಿದರೆ ಕೆಳಗೆ ಓಡಾಡುವ ಜನರಲ್ಲಿ ಕನಿಷ್ಠ ಒಬ್ಬ ಕವಿಗಾದರೂ ತಾಗುತ್ತದೆ ಎಂದು ಹೇಳಲಾಗುತ್ತದೆ. ಧಾರವಾಡದಲ್ಲಿ ಕವಿಗಳು ಇನ್ನೂ ಹೆಚ್ಚಿದ್ದಾರೆ. ಧಾರವಾಡದ ಗಾಂಧಿ ಚೌಕದಲ್ಲಿರುವ ಟವರ್‌ ಮೇಲಿಂದ ಕಲ್ಲುಗಳನ್ನು ಎಸೆದರೆ ಕನಿಷ್ಠ ಮೂರು ಕವಿಗಳ ತಲೆ ಒಡೆಯುತ್ತವೆ.’

ಇಡೀ ಸಭೆ ನಗೆಯ ಕಡಲಲ್ಲಿ ತೇಲಿ ಹೋಯಿತು. ಬೇಂದ್ರೆಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಮಾತಿಗೆ ಉತ್ತರ ಕೊಡದೇ ಇರಲಿಲ್ಲ. ‘ಧಾರವಾಡದ ಟವರ್‌ ಮೇಲಿನಿಂದ ಕಲ್ಲು ಎಸೆದರೆ ಕನಿಷ್ಠ ಮೂರು ಕವಿಗಳ ತಲೆ ಒಡೆಯುತ್ತದೆ. ಅಂತ ಬೀಚಿ ಹೇಳಿದ್ರು. ಒಪ್ಪಿದೆ. ಆದ್ರೆ ಕವಿಗಳದೇ ತಲೆ ಯಾಕೆ ಒಡೆಯುತ್ತವೆ ಎಂಬ ಮಾತು ಅವರು ಹೇಳಲಿಲ್ಲ. ಕಲ್ಲು ತೂರಿದರೆ ಮೂರು ಯಾಕೆ ನೂರು ಜನರ ತಲೆ ಒಡೆಯುವ ಶಕ್ಯತೆ ಇದೆ. ಕವಿಗಳಿಗೆ ತಲೆ ಇರೋದರಿಂದ ಒಡೆದದ್ದು ಗೊತ್ತಾಗ್ತದೆ. ಇತರರಿಗೆ ಗೊತ್ತು ಆಗೋದಿಲ್ಲ’ ಎಂದರು. ಮತ್ತೆ ಸಭೆ ನಗೆಯ ಕಡಲಿನಲ್ಲಿ ತೇಲಿತ್ತು.

ಇನ್ನೊಂದು ಘಟನೆ ನೆನಪಾಗುತ್ತದೆ. ನಾನಾಗ ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದೆ. ಮನೋಹರ ಗ್ರಂಥ ಮಾಲೆಯ ಗ್ರಂಥ ಬಿಡುಗಡೆಯ ಕಾರ್ಯಕ್ರಮವಿತ್ತು. ‘ಮನ್ವಂತರ’ವೆಂಬ ಅನಿಯತಕಾಲಿಕ ಪುಸ್ತಕಮಾಲೆಯಲ್ಲಿ ಬೇಂದ್ರೆಯವರ ‘ಕಾವ್ಯೋದ್ಯೋಗ’ಪ್ರಕಟಗೊಂಡಿತ್ತು. ಕಾರ್ಯಕ್ರಮ ವಿದ್ಯಾವರ್ಧಕ ಸಂಘದ ಅಟ್ಟದ ಮೇಲೆಯಿತ್ತು. ಬೇಂದ್ರೆಯವರ ಭಾಷಣ ಹಾಸ್ಯ-ವ್ಯಂಗ್ಯ- ವಿಡಂಬನೆಗಳಿಂದ ಪ್ರೇಕ್ಷಕರನ್ನು ರಂಜಿಸಿತ್ತು. ಪುಸ್ತಕದ ಹಿಂದಿನ ರಕ್ಷಾ ಕವಚದ ಮೇಲೆ ಬರೆದ ಪುಸ್ತಕದ ಪರಿಚಯ ಇಂಗ್ಲಿಷಿನಲ್ಲಿತ್ತು. ಬೇಂದ್ರೆಯವರ ‘ಕಾವ್ಯೋದ್ಯೋಗ’ ವನ್ನು Bendres business of poetry ಅನುವಾದಿಸಲಾಗಿತ್ತು.

ಬೇಂದ್ರೆಯವರೆಂದರು, ಇಂಗ್ಲಿಷ್‌ ಕಲಿತ ಬುದ್ಧಿವಂತರು ನನ್ನ ‘ಕಾವ್ಯೋದ್ಯೋಗ’ಕ್ಕೆ business of poetry ಎಂಬ ಅರ್ಥ ಹಚ್ಚಿದ್ದಾರೆ. ಬೇಂದ್ರೆಗ ಕಾವ್ಯ ಎಂದೂ ವ್ಯಾಪಾರವಾಗಿಲ್ಲ. ಬೇಂದ್ರೆಗ ಕಾವ್ಯ ಒಂದು ಯೋಗ ಆಗೇದ, ಅದು ಎಂತಹ ಯೋಗ ಅಂದರೆ-‘ಉತ್‌+ಯೋಗ’= ಉದ್ಯೋಗ. ನಾ ಬರದದ್ದು ಸರಿಯಾಗಿ ತಿಳಕೊಳ್ಳದೆ ಹಿಂಗ ಬರೆದ ನಮ್ಮ ಬುದ್ಧಿವಂತರಿಗೆ ಏನನಬೇಕು?’

(ಸೌಜನ್ಯ : ‘ನಾ ಕಂಡ ಬೇಂದ್ರೆ : ಜೀವನ ಮತ್ತು ಸಾಹಿತ್ಯ’)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more