• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಹದ ಪರಿಮಳಕೆ ಮಾರುಹೋದ ದೆಹಲಿ ಕನ್ನಡಿಗರು

By Staff
|

ದೆಹಲಿ ಕನ್ನಡ ಸಂಘದ ‘ಲೇಡಿಸ್‌ ಕ್ಲಬ್‌’ ಸದಸ್ಯರಾದ ಪ್ರಭಾಮೂರ್ತಿ, ಸರೋಜಾ ಮಾಧವ, ಜಯಾ ಆಚಾರ್ಯ, ಸರಳಾ ನಾಗೇಶ ಮುಂತಾದವರ ಮಧುರ ಸಂಗೀತದಲ್ಲಿ ಸಮೂಹ ಗೀತೆ. ನಂತರ ಉಷಾ ಭರತಾದ್ರಿಯವರು ಸಂಘದ ಅಧ್ಯಕ್ಷರಾದ ಡಾ.ಬಿಳಿಮಲೆಯವರನ್ನು ವೇದಿಕೆಗೆ ಮುಂದಿನ ಸಭಾಕಾರ್ಯಕ್ರಮವನ್ನು ನಡೆಸಿಕೊಡಲು ವಿನಂತಿಸಿದರು. ಡಾ.ಪುರುಷೋತ್ತಮ ಬಿಳಿಮಲೆಯವರು ಅತಿಥಿಗಳಾದ ಎಚ್‌.ಎಸ್‌.ಶಿವಪ್ರಕಾಶರನ್ನು ಹಾಗೂ ಕರ್ನಾಟಕ ಸರ್ಕಾರದ, ಕರ್ನಾಟಕಭವನದ ಡೆಪ್ಯೂಟಿ ರೆಸಿಡೆಂಟ್‌ ಕಮಿಶನರ್‌ ಕೄಷ್ಣಪ್ರಸಾದರನ್ನು ಸ್ವಾಗತಿಸಿದರು.

ಕನ್ನಡದ ನವೋದಯ ಸಾಹಿತ್ಯ ದಿಗ್ಗಜರಲ್ಲಿ ದ.ರಾ.ಬೇಂದ್ರೆ, ಪುತಿನ, ಕುವೆಂಪು ಇವರ ನಂತರ ನವೋದಯಕಾಲದಲ್ಲಿ ಬರುವ ಎರಡನೇ ಗುಂಪಿನಲ್ಲಿ ಖ್ಯಾತಿ ಪಡೆದವರೆಂದರೆ ಕೆ.ಎಸ್‌.ನರಸಿಂಹಸ್ವಾಮಿಯವರು. ಅವರ ಲಯಬದ್ಧವಾದ ಕವಿತೆಗಳು ಜನಸಾಮನ್ಯರಿಂದ ಸ್ವೀಕರಿಸಲ್ಪಟ್ಟರೂ ಕನ್ನಡ ವಿಮರ್ಶೆ ಮೊದಲು ಅವರನ್ನು ಗೇಲಿ ಮಾಡಿತು. ಈ ಬಗ್ಗೆ ಕನ್ನಡ ವಿಮರ್ಶೆಯಲ್ಲಿ ಅವರಿಗೆ ನ್ಯಾಯದೊರೆತಿಲ್ಲವಾದ್ದರಿಂದ ಪುನರ್‌ ವಿಮರ್ಶೆನಡೆಸಿ ಅವರ ಕಾವ್ಯಕ್ಕೆ ನ್ಯಾಯ ದೊರಕುವಂತಾಗಬೇಕು ಎಂದು ಬಿಳಿಮಲೆ ಅಭಿಪ್ರಾಯಪಟ್ಟರು.

ಕೆ.ಎಸ್‌.ನ. ಕಾವ್ಯದಲ್ಲಿ ಸ್ವಾತಂತ್ರ್ಯಪೂರ್ವದ ಸಾಮಾಜಿಕ ಜೀವನ ರೀತಿಯ ಅವಿಭಕ್ತ ಕುಟುಂಬ ಪದ್ಧತಿಯ, ಸಹಬಾಳ್ವೆಯ ಅಪ್ಯಾಯತೆಯ ಪ್ರೀತಿಯ ಸೊಗಸಿದೆ. ಈಗಿನ ಆಧುನಿಕ ಪರಿಕಲ್ಪನೆಯಲ್ಲಿ ಹಿಂದಿನ ಅವಿಭಕ್ತ ಕುಟುಂಬಗಳೆಲ್ಲ ಒಡೆದು ಛಿದ್ರವಾಗಿರುವ ಸತ್ಯತೆಯಲ್ಲಿ, ದಾಂಪತ್ಯದ, ಕೌಟುಂಬಿಕ ತುಂಬು ಜೀವನಪ್ರೀತಿಯನ್ನು ದರ್ಶಿಸುವ ಸುಂದರ ಗೀತೆಗಳು ಜನಪ್ರಿಯವಾಗಿವೆ. ಇದನ್ನೇ ಸೂಚ್ಯವಾಗಿ, ವಾಚ್ಯವಾಗಿ ಕೌಟುಂಬಿಕ ನೆಮ್ಮದಿ, ಮಾಧುರ್ಯವನ್ನು ನರಸಿಂಹಸ್ವಾಮಿಯವರು ತಮ್ಮ ಕಾವ್ಯದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಡಾ.ಬಿಳಿಮಲೆಯವರು ಅರ್ಥವತ್ತಾಗಿ ತಿಳಿಸಿದರು.

ಖ್ಯಾತ ಕವಿ, ನಾಟಕಕಾರರಾದ ಎಚ್‌.ಎಸ್‌.ಶಿವಪ್ರಕಾಶರ ಮಾತನ್ನು ಕೇಳುವದೇ ಒಂದು ಹಿಗ್ಗು. ಅಷ್ಟು ಸ್ವಾರಸ್ಯವಿರುತ್ತದೆ ಅವರ ಮಾತಿನಲ್ಲಿ. ಶಿವಪ್ರಕಾಶರು ಮಾತನಾಡುತ್ತ - ನಮ್ಮ ಕನ್ನಡಭಾಷೆ 10ನೇ ಶತಮಾನದಷ್ಟು ಪ್ರಾಚೀನ ಇತಿಹಾಸವುಳ್ಳದ್ದು . ನಾವು ಜನಪದ ಸಾಹಿತ್ಯವನ್ನು ಅಭ್ಯಸಿಸಬೇಕೆಂದರೆ, ಕನ್ನಡ ಜಾನಪದ, ವಚನ ಸಾಹಿತ್ಯ, ಬಸವಣ್ಣನವರ, ಸರ್ವಜ್ಞನ ವಚನಗಳು, ದಾಸರಪದಗಳನ್ನು ಓದಬೇಕು. ರಾಮಾಯಣದ ಕಾವ್ಯ ಪರಂಪರೆ ಎಷ್ಟು ಸರಳವೋ ಅಷ್ಟೇ ಸರಳವಾದುದು ಕೆ.ಎಸ್‌.ನರಸಿಂಹಸ್ವಾಮಿಯವರ ಕಾವ್ಯ ಪರಂಪರೆ. ಅವರ ಕಾವ್ಯಭಾಷೆ ಜಾನಪದದಂಥ ಗಟ್ಟಿಯಾದ, ಸತ್ವಯುತವಾದ ಭಾಷೆಯುಳ್ಳದ್ದು ಎಂದರು.

KSN Nenapina Sanje by Delhi Kannadigasಶಿವಪ್ರಕಾಶರ ಮಾತು ಮಲ್ಲಿಗೆಯ ಸುತ್ತಲೇ ಸುಳಿದಾಡಿದ್ದು ವಿಶೇಷ. ಕವಿ ನರಸಿಂಹಸ್ವಾಮಿಯವರ ಸಜ್ಜನಿಕೆ, ಸರಳ ವ್ಯಕ್ತಿತ್ವ, ಆಗಿನ ನವೋದಯ ಕಾವ್ಯದ ಕಾಲದಲ್ಲಿ ಕುವೆಂಪು, ಅಡಿಗರಿಗಿದ್ದ ಶಿಷ್ಯವೃಂದ, ಪ್ರಚಾರ, ಗುಂಪುಗಾರಿಕೆ ಕೆ.ಎಸ್‌. ನರಸಿಂಹಸ್ವಾಮಿಯವರಿಗೆ ಇರಲಿಲ್ಲ. ಅವರು ಒಂಟಿಯಾಗೇ ಉಳಿದವರು, ಬಾಳಿನಲ್ಲಿ ಬಡತನವನ್ನುಂಡವರು, ಬಾಡಿಗೆಮನೆಯಲ್ಲಿದ್ದು, ಗುಮಾಸ್ತರಾಗಿ ಕಾರ್ಯ ನಿರ್ವಹಿಸಿದವರು. ಇನ್ನೊಬ್ಬ ಸಮಕಾಲೀನ ಕವಿಯಾಡನೆ ಸ್ಪರ್ಧಿಸಬೇಕು, ಎದುರಾಳಿಯಾಗಿ ನಿಲ್ಲಬೇಕು ಎಂದು ನರಸಿಂಹಸ್ವಾಮಿ ಎಂದೂ ಕವನ ಬರೆದವರಲ್ಲ. ಯಾವ ಬಿರುದು-ಬಿನ್ನಾಣಗಳಿಗೆ, ಪ್ರಶಸ್ತಿಗಳ ಆಮಿಷಗಳಿಗಾಗಿಯೂ ಹಾತೊರೆದವರಲ್ಲ. ಎಷ್ಟು ಸರಳವ್ಯಕ್ತಿಯೆಂದರೆ ತಮ್ಮ ಮಗಳ ಮದುವೆಗೆಂದು ಕವನಸಂಕಲದ ಹಕ್ಕುಗಳನ್ನು ಬೆಂಗಳೂರಿನಲ್ಲಿ ಒಬ್ಬ ಶೆಟ್ಟಿಗೆ ಮಾರಿದರು. ಆ ಶೆಟ್ಟಿ ಮುಂದೆ ತನಗೆ ಬೇಕಾದ ರೀತಿಯಲ್ಲಿ ನರಸಿಂಹಸ್ವಾಮಿಯವರ ಕಾವ್ಯಕೃತಿಗಳನ್ನು ಮಾರಿಕೊಂಡು ಲಕ್ಷಾಂತರ ಹಣಮಾಡಿಕೊಂಡನು. 1942 ರಲ್ಲಿ ಬಿಡುಗಡೆಯಾದ ‘ಮೈಸೂರು ಮಲ್ಲಿಗೆ’ ಎಷ್ಟು ಜನಪ್ರಿಯವಾಯಿತೆಂದರೆ ಒಂದೂವರೆ ಲಕ್ಷ ಪ್ರತಿಗಳು ಮಾರಾಟವಾಗಿವೆ. ಆದರೆ ನರಸಿಂಹಸ್ವಾಮಿಯವರು ಮಾತ್ರ ಹಾಗೆ ಬಡತನದಲ್ಲೇ ಉಳಿದರು. ಅಡಿಗರು ‘ಪುಷ್ಪಕವಿಯ ಪರಾಕು’ ಕವನದಲ್ಲಿ ಗೇಲಿ ಮಾಡಿದಂತೆ ಕೆ.ಎಸ್‌.ನರಸಿಂಹಸ್ವಾಮಿಯವರು ಬರೀ ಪ್ರೇಮಗೀತೆಗಳನ್ನೆ ಬರೆದಿಲ್ಲ . ‘ಶಿಲಾಲತೆ’ಯಂಥ ಸಂಕಲನದಲ್ಲಿ ಸಾಮಾಜಿಕ ಜೀವನದಲ್ಲಿ ಪ್ರಸ್ತುತವಾಗಿರುವ ಕುಂದು ಕೊರತೆಗಳನ್ನು, ಕಂಗೆಡಿಸುವ ನೋವು ನಲಿವುಗಳನ್ನು ತಮ್ಮ ಅದೇ ನಯವಾದ ಕಾವ್ಯಶೈಲಿಯಲ್ಲಿ ಬರೆದು ಕವಿತೆಗಳ ಮೂಲಕ ಚರ್ಚೆ ನಡೆಸಿದರು ಎಂದು ಶಿವಪ್ರಕಾಶ್‌ ಉದಾಹರಣೆಗಳೊಂದಿಗೆ ವಿವರಿಸಿದರು. ತದನಂತರ ಸಂಘದ ಅಧ್ಯಕ್ಷರು ಕೃಷ್ಣಪ್ರಸಾದವರಿಂದ ಅಡ್ಕೋಳಿಯವರಿಗೆ ಪುಷ್ಪಗುಚ್ಛವನ್ನಿತ್ತು ಗೌರವಿಸಿದರು.

ಸಭಾಕಾರ್ಯಕ್ರಮ ಮುಗಿಯುತ್ತಲೇ ಶುರುವಾದದ್ದು ಗೀತಮಾಧುರ್ಯಲೋಕ . ಜಮುನಾ ಮಠದ, ಸ್ವರ್ಣಲತಾ ರಾಮಕೃಷ್ಣ , ಮಾಲವೀಕಾ ಅಡ್ಕೋಳಿ, ಮಧುಚಂದ್ರ, ಕರುಣಾ ಮುರಗೋಡ, ಗುರುಪ್ರಸಾದ, ಜನಕಪುರಿ ಕೂಟ, ಆಶಾ ಇನಾಮ್ದಾರ, ಭಾಗ್ಯಲಕ್ಷ್ಮಿ, ರೋಹಿಣಿ, ರಕ್ಷಾರಾವ್‌,ಹಾಗೂ ಜಯಲಕ್ಷ್ಮೀ ರಾವ್‌ ಸುಶ್ರಾವ್ಯವಾಗಿ ಹಾಡಿದರು. ಫರೀದಾಬಾದ್‌ ಕನ್ನಡ ಸಂಘದ ಪುಟಾಣಿ ನಿಶಾ ಹಾಗೂ ಶೃತಿ ಭಜಂತ್ರಿ ‘ರಾಯರು ಬಂದರು’ ಗೀತೆಯನ್ನು ಹುರುಪಿನಿಂದ ಲಯವಾಗಿ ಹಾಡಿದರು. ಮಾಲವೀಕಾ ಅಡ್ಕೋಳಿಯವರ ‘ಮೊದಲದಿನ ಮೌನ ಅಳುವೇ ತುಟಿಗೆ ಬಂದಂತೆ’ ಕೇಳುಗರ ಹೃದಯವನ್ನು ತಟ್ಟುವಂತಿತ್ತು . ಕರುಣಾ ಮುರಗೋಡರು ‘ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ’ ಲಯಬದ್ಧವಾಗಿ ಹಾಡಿದರೆ, ಮಧುಚಂದ್ರರ ‘ಗಾಳಿಯಾಡಿದರೆ ಬನವೂ ಆಡಿ ಹೂವಿನುಂಗುರಾ’, ಗುರುಪ್ರಸಾದ ‘ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು’ ಭಾವಪೂರ್ಣವಾಗಿತ್ತು. ಜತೆಗೆ ಭೀಮಸೇನ ಭಜಂತ್ರಿ ಹಾಗೂ ತಂಡದ ಸಂಗೀತ ಸಂಯೋಜನೆ, ರಾಗ-ಸ್ವರ-ಲಯಗಳು ಸುಮಧುರವಾಗಿ ಮೇಳೈಸಿದ ಭಾವಲೋಕ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ವಸುಂಧರಾ ಕನ್ನಡ ಕೂಟದ ‘ಮೈಸೂರು ಮಲ್ಲಿಗೆ’ ಸಂಗೀತ ದೃಶ್ಯರೂಪಕ ಎಷ್ಟು ಮನಮೋಹಕವಾಗಿತ್ತೆಂದರೆ, ಈಗಿನ ಹೈಟೆಕ್‌ ಯುಗದಲ್ಲಿ ಸಂಯುಕ್ತ ಪರಿವಾರದ ಕೌಟುಂಬಿಕ ಚಿತ್ರಣಗಳು, ಬರೀ ಪುಸ್ತಕದಲ್ಲೇ ಅಡಗಿದ ವಿಷಯವಾಗಿದೆ. ಈ ಶತಮಾನದವರಿಗೆ ಗಗನ ಕುಸುಮವೆಂದರೂ ತಪ್ಪಾಗದು. ದೂರದ ಹಳ್ಳಿಯ ಚೆಂದದ ಬಣ್ಣನೆ, ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ ಎಂದು ಪ್ರಶ್ನಿಸಿಕೊಳ್ಳುವ ಎಳೆಯ ಗಂಡ-ಹೆಂಡತಿಯರು, ಬಳೆಗಾರ ತರುವ ಸುದ್ದಿ, ಮಗಳ ಕ್ಷೇಮಸಮಾಚಾರ ತಾಯಿಗೆ, ತವರಿನ ಸುದ್ದಿ ಮತ್ತೊಂದೂರಿನ ಮಗಳಿಗೆ ಅರುಹುವ ಬಳೆಗಾರ ಚೆನ್ನಯ್ಯನನ್ನು ನಾವು ಕಂಡಿದ್ದೇವೆಯೇ? ಮಾವನ ಮನೆಗೆ ಬಂದಾಗ ಮುದ್ದಿನ ಮಡದಿಯನ್ನು ಕಾಣದ ಅಳಿಯನ ಪೇಚಾಟ, ಘಮ್ಮನೆಯ ಗಸಗಸೆ ಪಾಯಸದ ಉಪಚಾರ, ನಾದಿನಿಯ ತುಂಟತನ, ಇವೆಲ್ಲ ಕನಸಿನ ಚಿತ್ರಣಗಳಾಗಿರುವ ಈಗಿನ 21ನೇ ಶತಮಾನದ ಪೀಳಿಗೆಗೆ, ನಮ್ಮಷ್ಟಕ್ಕೆ ನಮ್ಮ ಸುತ್ತ ನಾವು ಅಧುನಿಕರಣದ ಸೋಗಿನ ಕೋಟೆಕಟ್ಟಿಕೊಂಡಿರುವಾಗ, ವೇದಿಕೆಯ ಮೇಲೆ ಇಂಥ ಒಂದು ದೃಶ್ಯವನ್ನು ಕಂಡು ಯಾರೇ ಆದರೂ ಮೋಡಿಗೊಳಗಾಗುತ್ತಾರೆ. ಆಗ ಯಾವ ಪ್ರತಿಕ್ರಿಯೆ ಬರುವದೋ ಅದು ಮಾತ್ರ ಅವರ್ಣನೀಯ !!

‘ರಾಯರು ಬಂದರು’ ಹಾಡಿನಲ್ಲಿ, ‘ಪದುಮಳು ಹೂ ಮುಡಿಯುತ್ತಾ ರಾಯರ ಹತ್ತಿರ ಬರುವ’ ದೃಶ್ಯಕ್ಕೆ ಜನ ಹುಚ್ಚೆದ್ದು ಕರತಾಡನ ಮಾಡಿ ‘ವಸುಂಧರಾ ಕೂಟದ’ ದೃಶ್ಯರೂಪಕಕ್ಕೆ ಮೆಚ್ಚುಗೆಯನ್ನು ಸೂಚಿಸಿ ಹುರಿದುಂಬಿಸಿದರು. ಸುಂದರವಾದ ಚಿತ್ರಣವನ್ನು ನೈಜವಾಗಿ ಆಡಿ ತೋರಿಸಿದ ಗೀತರೂಪಕವನ್ನು ಜನರು ಮನದಣಿಯೇ ಸವಿದು, ಸಂತೋಷಿಸಿದರು. ಪಾತ್ರವಹಿಸಿದ ಎಲ್ಲಾ ಕಲಾಕಾರರು ಅದ್ಭುತವಾದ ಅಭಿನಯವನ್ನು ಪ್ರದರ್ಶಿಸಿದ್ದರು. ನೆರೆದ ಜನಸ್ತೋಮ ಈ ಅಪೂರ್ವ ಕಾರ್ಯಕ್ರಮವನ್ನು ಮನಸಾರೆ ಸವಿಯಿತು.

ಯಥಾರೀತಿ ಸಂಘದಿಂದ ಸರ್ವರಿಗೂ ಉಪಹಾರ, ಕಾಫಿ ಸರಬರಾಜಿನ ವ್ಯವಸ್ಥೆಯೂ ಇತ್ತು. ಹೊರಗೆ ಮಳೆಸುರಿಯುತ್ತಿದ್ದರೂ ಜನ ಹೆಚ್ಚು ಸಂಖ್ಯೆಯಲ್ಲಿ ಬಂದು ಅಂದಿನ ಕಾರ್ಯಕ್ರಮವನ್ನು ಯಶಸ್ವಿಯಾಗುವಂತೆ ಮಾಡಿದ್ದು, ಪ್ರೋತ್ಸಾಹಿಸಿದ್ದು ಸಂತಸದ ವಿಷಯ.

ಅಂದು ದೆಹಲಿ ಭೆಟ್ಟಿಗೆಂದು ಆಗಮಿಸಿದ್ದವರಲ್ಲಿ, ಕರ್ನಾಟಕ ಭವನದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ರೇವಣ್ಣ ಹಾಗೂ ಶಾಸಕ ಮಾದೇಗೌಡರು ಕೂಡ ಈ ಸಮಾರಂಭಕ್ಕೆ ಬಂದುದು ಇನ್ನೊಂದು ವಿಶೇಷ. ಕಾರ್ಯಕ್ರಮದ ಕೊನೆಗೆ ಕುಮಾರಿ ಮಾಲವೀಕಾ ಅಡ್ಕೋಳಿಯವರ, ಅಡಿಗರ ‘ಯಾವ ಮೋಹನ ಮುರುಳಿ ಕರೆಯಿತು’ ಗೀತೆಯ ಮೂಲಕ ನಲ್ಮೆಯ ಕವಿ ಕೆ.ಎಸ್‌.ನರಸಿಂಹಸ್ವಾಮಿಯವರಿಗೆ ಶ್ರದ್ಧಾಂಜಲಿಯರ್ಪಿಸಿದೆವು. ನಂತರ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆಯವರು ಮಾಜಿ ಸಚಿವ ರೇವಣ್ಣ ಹಾಗೂ ಶಾಸಕ ಮಾದೇಗೌಡರನ್ನು ವೇದಿಕೆಗೆ ಆಮಂತ್ರಿಸಿ ಎಲ್ಲ ಕಲಾವಿದರಿಗೆ ಪುಷ್ಪಗುಚ್ಚವನ್ನು ಕೊಡಿಸಿದರು.

ಅಡ್ಕೋಳಿಯವರ ವಂದನಾರ್ಪಣೆಯಾಂದಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾಲದ ಪರಿವೆಯೇ ಇಲ್ಲದೇ ಎಲ್ಲ ಕನ್ನಡಿಗರೂ ಈ ಸಮಾರಂಭಕ್ಕೆ ಆಗಮಿಸಿ, ಮನಸಾರೆ ಹರ್ಷಿಸಿದ್ದು ನೋಡಿದರೆ, ದೆಹಲಿಯಲ್ಲಿ ಕನ್ನಡತನ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳು ಗುಣಾತ್ಮಕವಾಗಿ ನಡೆಯುತ್ತಿದೆಯೆನ್ನಬಹುದು.

ಮಲ್ಲಿಗೆ ಕವಿಯ ಹೆಸರಿನಲ್ಲಿ ಕನ್ನಡಿಗರು ಹಂಚಿಕೊಂಡ ಆ ಪರಿಮಳ ಬಹುದಿನ ಉಳಿಯುವಂತದ್ದು .

ಪೂರಕ ಓದಿಗೆ-

ಮಲ್ಲಿಗೆ ಸುರಿದಾವೊ ಒಳಹೊರಗೆ !

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more