ಪ್ರೊ. ಅ. ರಾ. ಮಿತ್ರರಿಗೊಂದು ಪತ್ರ
*‘....ಜೋಕು ಅಂದಾಕ್ಷಣ ಮನುಷ್ಯನಗ್ತಾನಲ್ಲ , ಅದು ವಿಚಿತ್ರ ಅನ್ನಿಸ್ತು. ಜೋಕುಗಳ ಮೂಲ ಕುರಿತುಯೋಚನೆ ಮಾಡುತ್ತ ಅದೇ ಗುಂಗಿನಲ್ಲಿ ಮನೆಗೆ ಹೋದೆ. ಆಸ್ಪತ್ರೆಯಿಂದ ಫೋನು ಬಂತು. ‘ಹಲೋ ಸಾರ್, ಕಂಗ್ರಾಟ್ಸ್, ನಿಮ್ಮಾಕೆ ಹಡೆದಿದ್ದಾಳೆ.....’ ಆ ತುದಿಯಿಂದ ನರ್ಸ್ ಉಲಿದಳು . ಆಗ- ಗಂಡೋ, ಹೆಣ್ಣೋ ಅಂತ ಕೇಳೋದನ್ನೇ ಮರೆತು ‘ನಾನು ತಂದೇನೋ, ತಾಯಿನೋ’ ಅಂತ ಕೇಳಿಬಿಟ್ಟೆ....’
* ನಾನು ಹುಟ್ಟಿದ್ದು ಬಿರುಗಾಳಿಯ ದಿನ, ಕೆಟ್ಟ ನಕ್ಷತ್ರದಲ್ಲಿ . ನಾನು ಹುಟ್ಟಿದ ಮನೆ ಅಕ್ಕಿಹೆಬ್ಬಾಳಿನಲ್ಲಿ ಇನ್ನೂ ಇದೆಯಂತೆ. ಆದರೆ, ಅದರ ಮುಂದೆ ಯಾವ ಬೋರ್ಡಾಗಲಿ, ತೋರಿಸಬಹುದಾದ ವಿವರವಾಗಲಿ ಇಲ್ಲ! ನನ್ನ ಬಾಲ್ಯದ ಬಗೆಗೆ ತಿಳಿದಿರುವುದು ಇಷ್ಟೆ - 10ತಿಂಗಳಿಗೆ ನನಗೆ ಹಲ್ಲು ಬಂತಂತೆ. ನಾಲ್ಕನೇ ವರ್ಷದ ಹೊತ್ತಿಗೆ ಮಾತು ಬಂತಂತೆ! (18 ನೇ ವಯಸ್ಸಿನ ಹೊತ್ತಿಗೆ ನನಗೆ ಮೀಸೆ ಬಂತಂತೆ ಅಲ್ಲ, ಬಂತು!)
* ನಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದರೆ- ಅವರನ್ನು ಬೀಳ್ಕೊಡಲು ನಾನು ತುಂಬ ದೂರ ಅವರೊಂದಿಗೇ ಹೋಗುತ್ತೇನೆ- ಅವರ ಮೇಲಿನ ಪ್ರೀತಿ/ಗೌರವದಿಂದ ಅಲ್ಲ! ಆ ಪುಣ್ಯಾತ್ಮರು ಮತ್ತೆ ಮನೆಗೆ ವಾಪಸ್ ಬರಲ್ಲ ಅಂತ ಗ್ಯಾರಂಟಿ ಮಾಡ್ಕೊಳ್ಳೋಕೆ.....!
ಸಮಯ, ಸಂದರ್ಭ, ಹೊತ್ತು ಗೊತ್ತು ಎಲ್ಲ ತಿಳಿದರೂ ಹೀಗೆಲ್ಲ ಮಾತಾಡಿ ಕಂಡಕಂಡವರನ್ನೆಲ್ಲ ನಗೆಯ ನದಿಗೆ ತಳ್ಳುವ ಅಕ್ಕಿಹೆಬ್ಬಾಳ ರಾಮಣ್ಣ ಮಿತ್ರ ಅರ್ಥಾತ್ ಅ.ರಾ. ಮಿತ್ರ ಅವರಿಗೆ- ಅಡ್ಡ್‌ಬಿದ್ದು ನಮಸ್ಕಾರ!
ಸರ್, ಮೊನ್ನೆ ಯಾವುದೋ ಹಳೇ ಪುಸ್ತಕದಲ್ಲಿ , ನಿಮ್ಮ ಹಳೇ ಹಳೇ ಜೋಕು ಓದಿ ನಗು ಬಾರದೇ ಹೋದಾಗ- ಅ.ರಾ. ಮಿತ್ರಾ.... ಆರಾಮ್ ಇತ್ರಾ? ಅಂತ ಕೇಳಬೇಕು. ಹಿಂದೆಯೇ ಈ ಕಡೆ ಬನ್ನಿ ಸಾರ್ ಅಂತ ನಿಮ್ಮನ್ನ ಕರೆಯಬೇಕು ಅಂತ ಅನ್ನಿಸ್ತು. ಆದ್ರೆ ಚಳಿಗೆ ಮರಗಟ್ಟಿದ ಕೈ ಎತ್ತೋಕೇ ಆಗ್ತಾ ಇಲ್ಲ . ಹಾಗಾಗಿ ನಿಮ್ಮನ್ನು ಹೊಗಳುವ, ತೆಗಳುವ, ಕೈ ಹಿಡಿಯುವ, ಕಾಲೆಳೆಯುವ, ಕೆಲಸಗಳನ್ನು ಬರೆ(ಕೊರೆ )ಯುವ ಮೂಲಕವೇ ಮಾಡ್ತಿದೀನಿ. ನೀವು ನಕ್ಕರೆ ಸಂತೋಷ. ನಗದಿದ್ದರೆ ಇನ್ನೂ ಸಂತೋಷ !
***
ಹೌದು ಸರ್, ಹತ್ತಾರು ಮಂದಿ - ‘ಅ.ರಾ.ಮಿತ್ರ’ ಅಂದರೆ ಸಾಕು- ಅವರು ತಕ್ಷಣವೇ ಹೇಳುತ್ತಾರೆ : ಇವತ್ತು ಬೆಂಗಳೂರಿನಲ್ಲಿ ತಿಂಗಳಿಗೆ ನಾಲ್ಕರ ಲೆಕ್ಕದಲ್ಲಿ ನಡೀತಿವೆಯಲ್ಲ ಹಾಸ್ಯೋತ್ಸವ? ಅಂಥ ಹಾಸ್ಯೋತ್ಸವಗಳಿಗೆ ಮೊದಲು ಜೀವ ತುಂಬಿದವರೇ ಅ.ರಾ.ಮಿತ್ರ! ‘ಮಿತ್ರ’ ಯಾರಿಗೂ ಶತ್ರುವಲ್ಲ. ಅವರು ಎಲ್ಲರಿಗೂ ಮಿತ್ರ. ಅವರು ಮಾತಾಡಲು ಎದ್ದು ನಿಂತರೆ ಸಾಕು- ಜನ ನಗುತ್ತಾರೆ! ಮೊದಲ ಮಾತಿಗೇ ಚಪ್ಪಾಳೆ ಹೊಡೀತಾರೆ! ಹಾಗೆ ಚಪ್ಪಾಳೆ ಹೊಡೆದ ಮಂದಿಗೆ - ‘ಮಹನೀಯರೆ, ನಿಮ್ಮ ಮೇಲೆ ನನಗೆ ಕರುಣೆ ಬಂದಿಲ್ಲ. ಹಾಗಾಗಿ ನಾನು ಮಾತು ಮುಂದುವರಿಸ್ತೀನಿ’ ಅಂತಾರೆ ಮಿತ್ರ. ಆಗ ಜನ ಮತ್ತೆ ‘ಹೋೕೕ’ ಎಂದು ನಗ್ತಾರೆ. ಒಂದೇ ಮಾತಲ್ಲಿ ಹೇಳಿಬಿಡುವುದಾದರೆ ಅ.ರಾ.ಮಿತ್ರ- ಹಾಸ್ಯದ ಮೋಡಿಗಾರ. ಇನ್ನೂ ಸಿಂಪಲ್ಲಾಗಿ ಹೇಳಬೇಕು ಅಂದ್ರೆ- ಮಿತ್ರ= ಹಾಸ್ಯೋತ್ಸವ !’
ಸರ್, ಒಂದೊಂದು ಮಾತಿಗೂ ಎಲ್ಲರನ್ನೂ ನಗಿಸುವ ನೀವು ಯಾವಾಗಲೂ ಸೆಟಗೊಂಡ ಅಳಿಯನ ಥರಾ ಇರ್ತೀರಲ್ಲ ಯಾಕೆ ?
ಹೌದಲ್ವ? ಅಕ್ಕಿ ಹೆಬ್ಬಾಳಿನ ಭೂಪ ನೀವು. ನಿಮ್ಮ ಸೀನಿಯರ್ ಫ್ರೆಂಡು - ಎ.ಎನ್. ಮೂರ್ತಿರಾಯರು. ಅವರೋ- ದೇವರ ಜತೆಯೇ ಬೆಟ್ ಕಟ್ಟಿದವರಂತೆ ‘ದೇವರಿಲ್ಲ , ದೇವರಿಲ್ಲ , ದೇವರಿಲ್ಲ ’ ಅಂತ ಘಂಟಾಘೋಷವಾಗಿ ಸಾರಿದರು. ಅದೇ ನೀವು- ನಗುವೇ ದೇವರು ಅಂತ ಈವತ್ತಿಗೂ ನಂಬಿರುವವರು. ನಗಬೇಕು. ನಗಿಸಬೇಕು ಅದೇ ನನ್ನ ಧರ್ಮ ಎಂಬಂತೆ ಬದುಕ್ತಾ ಇರೋರು. ಅಂದ್ಹಾಗೆ ಸ್ವಾಮೀ, ನೀವು ಪ್ರತಿ ಹಾಸ್ಯೋತ್ಸವದಲ್ಲೂ ನೂರಾರು ಮಂದೀನ ನಗಿಸ್ತೀರಲ್ಲ- ಆಗೆಲ್ಲ ನಿಮಗೆ ಮೂವತ್ತೆರಡು(ಹಲ್ಲುಗಳ) ರೂಪದಲ್ಲಿ ದೇವರು ಕಾಣಿಸ್ತಾನಾ? ತಮಾಷೆಯ ಉತ್ತರವನ್ನೇ ಹೇಳಿ, ಪರವಾಗಿಲ್ಲ.
ಸರ್, ಜಗತ್ತಿಗೇ ಗೊತ್ತಿರೋ ಹಾಗೆ- ನೀವು ಹಾಸ್ಯಸಾಹಿತಿ. ನೀವು ನಗೆ ಸಾಮ್ರಾಟನ ಅವತಾರ ಎತ್ತೋಕೆ ಮುಂಚೆ ಕುಮಾರ ವ್ಯಾಸ ಭಾರತದ ‘ವಾಚನ’ ಮಾಡ್ತಿದ್ರಂತೆ. ಹಾಗೆ ನೀವು ಮಹಾಭಾರತ ಕಥೇನ ಹೇಳ್ತಾ ಇದ್ದಾಗಲೇ ಕೇಳುತ್ತ ಕೂತವರು, ನಿದ್ರೆಗೆ ಜಾರುತ್ತಿದ್ದರಂತೆ. ಅದನ್ನು ಕಂಡು, ನನ್ನ ಭಾಷಣ ಕೇಳಿ ಸುಖ ನಿದ್ರೆ ಮಾಡ್ತಾರಲ್ಲ- ಇವರನ್ನ ಸ್ವಲ್ಪ ವಿಚಾರಿಸ್ಕೋಬೇಕು ಅಂತ ನಿರ್ಧರಿಸಿಯೇ ನೀವು- ಹಾಸ್ಯ ಸಾಹಿತಿ ಆಗಿಬಿಟ್ರಂತೆ. ಹೌದಾ? ಒಬ್ಬರನ್ನು ನಗಿಸೋದೇ ಕಷ್ಟ. ಹಾಗಿರೋವಾಗ ನೀವು ಸಾವಿರಾರು ಮಂದೀನ ‘ನೆಗೆದು ಬಿದ್ದು ಹೋಗುವ ಹಾಗೆ’ (ಶಾಂತಂ ಪಾಪಂ!) ನಗಿಸ್ತೀರಲ್ಲ , ಹ್ಯಾಗೆ ಸಾರ್?
ನೀವು, ಹೇಳಿ ಕೇಳಿ ಮೇಷ್ಟ್ರು. ಅದೂ ಏನು ? ಮಹಾರಾಣೀಸ್ ಕಾಲೇಜಿನಲ್ಲಿ , ಬರಾಬರ್ ಹನ್ನೆರಡು ವರ್ಷ ಪ್ರಿನ್ಸಿಪಾಲ್ ಆಗಿದ್ದವರು. ನೀವು ಪಾಠ ಮಾಡೋಕೆ ಹೋಗಿದ್ರಲ್ಲ- ಆಗ ಕಾಲೇಜಿನ ಕಲರ್ ಕಲರ್ ಲೇಡಿಗಳು ನಿಮಗೆ ಚಾಕ್‌ಪೀಸ್‌ನಿಂದ ಹೊಡೀಲಿಲ್ವೆ? ನೀವು ಬೋರ್ಡಿನ ಮೇಲೆ ಬರೀತಿದ್ದಾಗ ಯಾವುದೋ ಮೂಲೆಯಿಂದ ರೊಯ್ಯನೆ ಬಂದ ರಾಕೆಟ್ ನಿಮ್ಮನ್ನು ‘ಲಘು’ವಾಗಿ ಚುಂಬಿಸಲಿಲ್ವೆ ? ನೀವು 18ರ ಹುಡುಗಿ ಥರಾ ತಲೆಬಗ್ಗಿಸಿ ‘ಅಟೆಂಡೆನ್ಸ್ ’ ಹಾಕ್ತಾ ಇದ್ದಾಗ - ಕ್ಲಾಸಿಗೆ ಕ್ಲಾಸೇ ಎದ್ದು ಹೋಗಿ ನಿಮ್ಮನ್ನ ಫೂಲ್ ಮಾಡಲಿಲ್ವೆ? ನೀವು ದುಷ್ಯಂತ -ಶಕುಂತಲೆಯರ ಬಗ್ಗೆ ಪಾಠ ಹೇಳ್ತಿದ್ದಾಗ- ಎದುರು ಕೂತಿದ್ದ ಡುಮ್ಮಿ ಹುಡುಗಿ ಕಣ್ಣು ಹೊಡೆದು ನಿಮ್ಮನ್ನ ಹೆದರಿಸಲಿಲ್ವೆ? ಅಲ್ಲ ಸಾರ್, ನೀವು ಉಳಿದೆಲ್ಲ ವಿಷಯದ ಬಗೆಗೂ ‘ರಾಮರಾಮಾ’ ಅನ್ಬೇಕು, ಅಷ್ಟೊಂದ್ ಬರೆದಿದೀರಿ. ಆದ್ರೆ ‘ಮಹಾರಾಣೀಸ್’ ಬಗ್ಗೆ ಬರೆದೇ ಇಲ್ವಲ್ಲ, ಯಾಕೆ ? ‘ಮಹಾರಾಣಿ’ಯರು ಅಂದಾಕ್ಷಣ ಢಗ್ಗ ಢಗ್ಗ ಹೆದರಿಕೆ ಆಗುತ್ತಾ ? ಮಾತಾಡಿ ಸಾರ್....
***
ಮಿತ್ರ ಎಲ್ರಿಗೂ ಮಿತ್ರ. ಅವರು ಯಾರಿಗೂ ಶತ್ರುವಲ್ಲ ಅನ್ನೋದನ್ನ ನೆನಪು ಮಾಡಿಕೊಂಡ ತಕ್ಷಣ ಹೀಗೆಲ್ಲ ನಿಮ್ಮನ್ನು ಕಾಡಬೇಕು, ಕೆಣಕಬೇಕು ಅನಿಸುತ್ತೆ. ಆದ್ರೆ- ಹಾಸ್ಯೋತ್ಸವಕ್ಕೆ ಬಂದು ನಿಂತರೆ - ನಿಮ್ಮ ನಗೆಚಟಾಕಿಯ ಸ್ಟಾಕ್ ಕಂಡು ಬೆರಗಾಗುತ್ತೆ . ನಿಮ್ಮ ವಾರಿಗೆಯ ಹಲವರು ‘ ಅಪಹಾಸ್ಯ’ ಸಾಹಿತಿಗಳು ಅನ್ನಿಸಿಕೊಂಡಿದ್ದರೂ ನೀವು ಮಾತ್ರ ಪ್ರತಿಯಾಂದು ಜೋಕಿನಲ್ಲೂ ಬೌಂಡರಿಯಲ್ಲ , ಸಿಕ್ಸರ್ರೇ ಹೋಡೀತಾ ಇದೀರಿ. ನಿಮ್ಮನ್ನ ನೇರವಾಗಿ ಕೇಳ್ತಿದೀನಿ. ಇಷ್ಟು ವರ್ಷಗಳ ಬದುಕಲ್ಲಿ ನಿಮ್ಮ ಜೋಕಿಗೆ ನಗದವರನ್ನು ಕಂಡಿದ್ದೀರಾ? ನಿಮ್ಮ ಸಾರಥ್ಯದ ಯಾವುದಾದ್ರೂ ಹಾಸ್ಯೋತ್ಸವ ಸೂಪರ್ ಪ್ಲಾಫ್ ಆಗಿ- ನಗಿಸಲು ಬಂದ ನೀವು ಬಿಕ್ಕಿದ್ದೀರಾ ?
‘ಅತ್ತಿದ್ದೀರಾ’ ಅಂದಾಕ್ಷಣ ನೆನಪಾಯ್ತು ನೋಡಿ. ನಗೆಯ ಹಿಂದೆ ಅಳುವಿನ ಕಡಲೇ ಇರ್ತದಂತೆ! ಹೇಳಿ ಸಾರ್, ಎಲ್ಲರೂ, ಎಲ್ಲ ಕಾಲಕ್ಕೂ ನಗುವಂಥ ಜೋಕು ಹೇಳ್ತೀರಲ್ಲ, ನಿಮ್ಮ ನಗೆಯ ಹಿಂದೆ ದುಃ ಖದ ಕಡಲುಂಟಾ? ಹಾಸ್ಯೋತ್ಸವದಲ್ಲಿ ಎಲ್ಲರನ್ನೂ ಘೂಳ್ಳನೆ ನಗಿಸುವ ನೀವು ಕೆಲಕ್ಷಣದ ನಂತರ ಹಳೆಯದೇನೆನ್ನೋ ನೆನೆದು ಕಣ್ಣೀರು ಸುರಿಸುವುದುಂಟಾ ?
ನಾನಿಲ್ಲಿ ಸುಖಾ ಸುಮ್ಮನೆ ಹೊಗಳಿದೀನಿ. ಸುಮ್‌ಸುಮ್ನೇ ತೆಗಳಿದ್ದೀನಿ. ನೀವು ದೇವರಂಥವರು ಅಂತ ಸಂಭ್ರಮದಲ್ಲೇ ಬರೆದಿದೀನಿ. ನನ್ನ ಕೊರೆತಕ್ಕೆ ನೀವು ತತ್ತರಿಸಿ ತಣ್ಣೀರಾಗಿ ಬಿಡ್ತೀರಿ ಅಂತ ಗೊತ್ತು.
ನಮಸ್ಕಾರ.
- ಎ.ಆರ್. ಮಣಿಕಾಂತ್
(ಸ್ನೇಹಸೇತು : ವಿಜಯ ಕರ್ನಾಟಕ)












Click it and Unblock the Notifications