ಎಕ್ಸ್‌ಪ್ರೆಷನ್ಸ್ : ಕೈಗಳು ಮಾತನಾಡುತ್ತಿವೆ....
- ರಾಜು ಮಹತಿ
ಅ.28ರ ಗುರುವಾರದಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲೊಂದು ಅಪರೂಪದ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ ; ಹೋಗಿಬನ್ನಿ . ಚಿತ್ರಕಾರ ಕೆ.ಪ್ರಭಾಕರ್.
ಡಿಸೆಂಬರ್ 12, 1968ರಂದು ಶಿವಮೊಗ್ಗ ಜಿಲ್ಲೆಯ ಕೋಡೂರಿನಲ್ಲಿ ಜನಿಸಿದ ಕೆ.ಪ್ರಭಾಕರ್ ಇದೀಗ ಭಾರತೀಯ ವಾಯುಪಡೆಯಲ್ಲಿ ಏರ್‌ಮನ್; ಠಿಕಾಣಿ ಲಕ್ನೋದಲ್ಲಿ . ಪ್ರಭಾಕರ್ ಚಿತ್ರಕಲೆಯನ್ನು ಸಾಂಪ್ರದಾಯಿಕವಾಗಿ ಕಲಿತವರಲ್ಲ . ಒಂದುರೀತಿಯಲ್ಲವರದು ಏಕಲವ್ಯ ಸಾಧನೆ. ಕಲಿಯಬೇಕೆಂಬ ಹುಮ್ಮಸ್ಸಿತ್ತು ; ಪ್ರತಿಭೆಯೂ ಕೈಹಿಡಿಯಿತು.
ಪ್ರಭಾಕರ್ ಅವರ ಚಿತ್ರಗಳಿಗೆ ಸ್ಫೂರ್ತಿಯಾದರೂ ಏನು? ದಿನನಿತ್ಯದ ಚಟುವಟಿಕೆಗಳಲ್ಲೇ ನನ್ನ ಚಿತ್ರಗಳ ವಸ್ತುಗಳು ದೊರಕುತ್ತವೆ ಎನ್ನುತ್ತಾರೆ ಪ್ರಭಾಕರ್. ಸೃಜನಶೀಲ ಮನಸ್ಸನ್ನು ಘಾಸಿಗೊಳಿಸುವ ಭೂಕಂಪ-ಚಂಡಮಾರುತ, ಕೋಮುಗಲಭೆ-ನರಮೇಧಗಳಂಥ ಪ್ರಾಕೃತಿಕ-ಮಾನವಿಕ ದುರಂತಗಳ ಚಿತ್ರಗಳಿಗೆ ಕೊನೆಯೇ ಇಲ್ಲ . ಈ ಘಾಸಿಗೊಳಿಸುವ ಹಾಗೂ ಮನಸ್ಸನ್ನು ಆವಾಹಿಸಿಕೊಳ್ಳುವ ಚಿತ್ರಗಳೇ ಕುಂಚದ ಮೂಲಕ ಕಲಾಕೃತಿಗಳಾಗಿ ಬೆಂಗಳೂರಿನ ಚಿತ್ರಕಲಾ ಪರಿಷತ್ ಗ್ಯಾಲರಿಯ ಗೋಡೆಗಳಲ್ಲಿ ಸಹೃದಯರಿಗೆ ಮುಖಾಮುಖಿಯಾಗಿವೆ.
ಈಗಾಗಲೇ ಬರೋಡಾದಲ್ಲೊಮ್ಮೆ (ಸೆ. 2000) ಹಾಗೂ ಬೆಂಗಳೂರಿನಲ್ಲೊಮ್ಮೆ (ಮೇ 2002) ತಮ್ಮ ಕಲಾಕೃತಿಗಳ ಪ್ರದರ್ಶನಗಳನ್ನು ಪ್ರಭಾಕರ್ ಏರ್ಪಡಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ (ಅ.28ರಿಂದ 31) ಪ್ರದರ್ಶನ ಮೂರನೆಯದು. ಪ್ರತಿಬಾರಿಯೂ ವಿಷಯಗಳು ಬೇರೇನೆ ; ಚಿತ್ರಗಳು ನವನವೀನ. ಈ ಬಾರಿಯ ಪ್ರದರ್ಶನದ ಹೆಸರು- expressions. ಉಪಶೀರ್ಷಿಕೆ- the talking hands.
ನಿಜ, ಪ್ರಭಾಕರ್ ಅವರ ಕಲಾಕೃತಿಗಳಲ್ಲಿ ಮಾತನಾಡುವುದು ಮುಖಗಳಲ್ಲ ; ಕೈಗಳು. ಎಷ್ಟೊಂದು ಬಗೆಯ ಕೈಗಳು. ಹೊಡೆಯುವ ಕೈ ಒಂದು. ಸಂತೈಸುವ ಕೈ ಇನ್ನೊಂದು. ಸಕಲ ಜೀವರಾಶಿಗೂ ಮಾತೆ ಮಮತೆ ತೋರಿಸುವ ಕೈಗಳೂ ಉಂಟು. ಮಾಲೆ ಕಟ್ಟುವ, ಭಾರ ಹೊರುವ, ಬೇಡುವ ಕೈಗಳೂ ಇವೆ. ಪ್ರಭಾಕರ್ ಪಾಲಿಗೆ ಕೈಗಳೇ ಮನಸ್ಸಿನ ಅಭಿವ್ಯಕ್ತಿ ! ಕೈಗಳು ಶಕ್ತಿ ಹಾಗೂ ದೈನ್ಯತೆಯ ಪ್ರತೀಕವೂ ಹೌದು.
ಪ್ರಭಾಕರ್ ಅವರ ‘expressions’ ಪ್ರದರ್ಶನ ನಡೆಯುವ ಸ್ಥಳ ಹಾಗೂ ವಿಳಾಸ :
ಕರ್ನಾಟಕ ಚಿತ್ರಕಲಾ ಪರಿಷತ್, ಆರ್ಟ್ ಗ್ಯಾಲರಿ ನಂ.1, ಆರ್ಟ್ ಕಾಂಪ್ಲೆಕ್ಸ್ , ಕುಮಾರಕೃಪ ರಸ್ತೆ , ಬೆಂಗಳೂರು- 560 001.
ಬೆಳಗ್ಗೆ 11ರಿಂದ ಸಂಜೆ 7ರವರೆಗೂ ಗ್ಯಾಲರಿಯ ಬಾಗಿಲು ತೆರೆದಿರುತ್ತದೆ. ನೀವೂ ಒಮ್ಮೆ ಪ್ರದರ್ಶನಕ್ಕೆ ಹೋಗಿಬನ್ನಿ . ಪ್ರಭಾಕರ್ ಅವರನ್ನು ಮಾತನಾಡಿಸಿ ಬನ್ನಿ , ಅಭಿಪ್ರಾಯಗಳನ್ನು ಹೇಳಿ. ಕುಂಚ ಕುಶಲಿಗೆ ಮೆಚ್ಚುಗೆಗಿಂತಲೂ ಬೇಕೆ ಬೇರೆ ಬಹುಮಾನ?
ಪ್ರದರ್ಶನಕ್ಕೆ ಹೋಗಲು ಸಾಧ್ಯವಾಗದವರು, ಇಲ್ಲಿರುವ ಚಿತ್ರಗಳನ್ನೇ ನೋಡಿ, ಪ್ರಭಾಕರ್‌ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಅವರ ಇ-ವಿಳಾಸ : [email protected] ದೂರವಾಣಿ : 080-31863752.












Click it and Unblock the Notifications