• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅರವತ್ತು ಮಳೆಗಾಲ’ ಕಂಡ ಕವಿ ಎಚ್ಚೆಸ್ವಿಗೊಂದು ಒಲವಿನ ಓಲೆ

By Staff
|

ಸುಚಿತ್ರ ಫಿಲಂ ಸೊಸೈಟಿ ಅಂಗಳದಲ್ಲಿ ಶುಭಾಷಯ ಹೇಳಲು ಬಂದವರ ಹಿಂಡೇ ಇತ್ತು. ಅವರನ್ನೆಲ್ಲ ಸಂಭ್ರಮದಿಂದ ತುಂಬ ಪ್ರೀತಿಯಿಂದ ನೋಡಿದ ನಿರೂಪಕರು ಹೇಳಿದರು:

ಎಚ್‌.ಎಸ್‌.ವಿ. ಅಂದರೆ ಎಚ್ಚೆಸ್ವಿ. ಅವರು ಒಲವಿನ ಕವಿ, ಗೆಲುವಿನ ಕವಿ ಮತ್ತು ಚೆಲುವಿನ ಕವಿ. ಅವರದು ಶಿವಮೊಗ್ಗ ಜಿಲ್ಲೆಯ ಹೋದಿಗ್ಗೆರೆ. ಶಿಷ್ಯರನ್ನು ಸ್ನೇಹಿತರಂತೆ, ಸ್ನೇಹಿತರನ್ನು ಬಂಧುಗಳಂತೆ, ಬಂಧುಗಳನ್ನು ತನ್ನ ಮನೆಯವರಂತೆ ಕಾಣುವುದು ಎಚ್ಚೆಸ್ವಿ ಅವರ ಹೆಚ್ಚುಗಾರಿಕೆ. ಅವರಿಗೆ ಎಂಜಿನಿಯರಿಂಗ್‌ ಆಗಬೇಕೂಂತ ಇಷ್ಟವಿಲ್ವೇನೋ. ಡಿಪ್ಲೊಮಾ ಓದಿದ್ರು. ಓದ್ತಾ ಇದ್ದಾಗಲೇ ಡಿಪ್ಲೊಮಾ ಬೋರ್‌ ಹೊಡೆಸಿತೇನೋ, ಕನ್ನಡ ಸಾಹಿತ್ಯದ ಕಡೆ ತಿರುಗಿದರು. ಮುಂದೆ ಕನ್ನಡದ ಮೇಸ್ಟ್ರಾದರು. ಅವರು ಡಿಪ್ಲೊಮಾ ಬಿಟ್ಟರಲ್ಲ- ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ನಷ್ಟ್ಟವಾಗಲಿಕ್ಕಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಲಾಭವಾಯಿತು! ಇಂಥ ಎಚ್ಚೆಸ್ವಿ ಅವರಿಗೆ ಈಗ ಅರವತ್ತು ವರ್ಷ. 60ನೇ ಹುಟ್ಟುಹಬ್ಬದ ಸಡಗರ ಅವರದು. ಅವರನ್ನು ಸನ್ಮಾನಿಸುವ, ಅವರ ಮಾತು ಕೇಳುವ ಸೌಭಾಗ್ಯವಿದೆಯಲ್ಲ- ಅದು ನಮ್ಮದು...

ನಿರೂಪಕರ ಮಾತಿಗೆ ನೆರೆದಿದ್ದವರು ಚಪ್ಪಾಳೆ ಹೊಡೆದರು. ಅದೆಲ್ಲೆಲ್ಲಿಂದಲೋ ಬಂದಿದ್ದ ಹುಡುಗ-ಹುಡುಗಿಯರು ಕೋರಸ್‌ ದನಿಯಲ್ಲಿ : ಸರ್‌, ಹ್ಯಾಪಿ ಬರ್ತ್‌ ಡೇ ಟೂ ಯೂ! ಎಂದು ಹಾಡಿಯೇ ಬಿಟ್ಟರು. ಯಾರಾದ್ರೂ ಒಂದು ಪದ್ಯ ಹಾಡಬಾರದಾ? ಕೇಳಿದವರ ಮಾತು ಮುಗಿದಿರಲೇ ಇಲ್ಲ. ತುಂಟನೊಬ್ಬ ಶುರುಮಾಡಿಯೇ ಬಿಟ್ಟ:

ಪುಟ್ಟ ಕಂದ ಹೈ

ಪಾಪ! ಬರೀ ಮೈ

ಚೆಡ್ಡಿ ಕೂಡ ನೈ

ಥೈ ಥೈ ಥೈ!

ತಾತ ಬಂದರು

ಕೊಟ್ಟು ಒಂದು ರೂ.

ಚೆಡ್ಡಿ ತಂದರು

ಹಾ, ಹಾ, ಹಾ!

ತೊಡಿಸಿ ನಕ್ಕರು

ತಾತ ನಕ್ಕರು

ಜಿಪ್ಪೆ ಚಕ್ಕರು

ಹೋ, ಹೋ, ಹೋ!

ಪ್ರೀತಿಯ ಎಚ್ಚೆಸ್ವಿ ಸರ್‌, ಸುಚಿತ್ರ ದ ಅಂಗಳದಲ್ಲೇ ನಿಮ್ಮ ಕೈ ಕುಲುಕಬೇಕು ಅಂತ ಆಸೆಯಿತ್ತು ನಿಜ. ಆದರೆ ಆ ರಶ್ಶು, ಅಲ್ಲಿದ್ದ ಗಜಿಬಿಜಿಯ ಮಧ್ಯೆ ಸುಮ್ಮನೇ ಕೈ ಕುಲುಕಿ ಎದ್ದು ಬರುವುದರ ಬದಲು ಬಂದು ಪತ್ರ ಬರೆದರೇ ಚೆಂದ ಅಂತ ಅನಿಸಿದ್ದರಿಂದ...

***

ನೀವು ನಂಬ್ತೀರೋ ಇಲ್ಲವೋ ಗೊತ್ತಿಲ್ಲ. ಕೆಲವರು ಪೀಠಿಕೆಯೇ ಇಲ್ಲದೆ ಹೇಳಿಬಿಡುತ್ತಾರೆ: ಕವಿತೆ ಅಂದರೆ ಕಾವ್ಯ. ಕಾವ್ಯ ಅಂದರೆ ಕವಿತೆ. ಕವಿತೆ ಅರ್ಥಕ್ಕೆ ಸಿಗದೆ ಅವಿತುಕೊಳ್ಳುತ್ತೆ. ಕಾವ್ಯ ಅರ್ಥವಾಗದೇ ಕಷ್ಟವಾಗುತ್ತೆ. ಕವಿತೆ ಅಂದರೆ ಪ್ರಾಸವಲ್ಲ. ಅದು ವರದಿಯಲ್ಲ. ಐದೇ ನಿಮಿಷದಲ್ಲಿ ಓದಿ ಮುಗಿಸಬಹುದಾದ ಪತ್ರವಲ್ಲ. ಅರ್ಧಗಂಟೆಯಲ್ಲಿ ಬರೆಯಬಹುದಾದ ಪ್ರಬಂಧವಲ್ಲ. ನಿನ್ನೆಯಲ್ಲಿ ನಾಳೆಯದನ್ನು, ನಾಳೆಯಲ್ಲಿ ಇಂದಿನದನ್ನು ಹೇಳುತ್ತದಲ್ಲ- ಅದು ಕವಿತೆ! ಅಂಥ ಕವಿತೆಯನ್ನು ಒಲಿಸಿಕೊಂಡವರ ಪೈಕಿ ಎಚ್ಚೆಸ್ವಿ ಒಬ್ಬರು. ಎಚ್ಚೆಸ್ವಿ ಪೆನ್‌ ಹಿಡಿದು ಕೂತರಲ್ಲ- ಆಗ, ಕವಿತೆ ಅವರಿಗೆ ಗೆಳೆಯನಾಯಿತು. ತಂದೆಯಂತೆ ಮುಂದೆ ನಡೆಯಿತು. ಅಣ್ಣನಾಗಿ ದಾರಿ ತೋರಿಸಿತು. ತಮ್ಮನಾಗಿ ಕೈ ಹಿಡಿಯಿತು. ಗೆಳತಿಯಾಗಿ ಜತೆಗೇ ಉಳಿಯಿತು. ಅಮ್ಮನಾಗಿ ಮೈದಡವಿತು. ಕಂದನಾಗಿ ಕೊರಳು ತಬ್ಬಿತು. ಪರಿಣಾಮ ಏನಾಗಿದೆ ಅಂದರೆ- ಅವರು ಮಕ್ಕಳ ಹಾಡು ಬರೆದಿದ್ದಾರೆ. ಪ್ರೇಮಗೀತೆ ರಚಿಸಿದ್ದಾರೆ. ಚಲನಚಿತ್ರಗಳಿಗೆ, ಟಿ.ವಿ. ಧಾರಾವಾಹಿಗಳಿಗೆ ಚೆಂದ್‌ ಚೆಂದದ ಸಾಹಿತ್ಯ ನೀಡಿದ್ದಾರೆ. ಕಥನ ಕಾವ್ಯದಲ್ಲೂ ಗೆದ್ದಿದ್ದಾರೆ. ನಾಟಕ ಬರೆದೂ ಮೆರೆದಿದ್ದಾರೆ...

ಹೇಳಿ ಸಾರ್‌, ಇದೆಲ್ಲ ನಿಜ ತಾನೆ ? ಇದೇ ನಿಜ. ಸರಿ ತಾನೆ?

ಸರ್‌, ಹೇಳಿ ಕೇಳಿ ನೀವು ಮಲೆನಾಡಿನವರು. ಸಹ್ಯಾದ್ರಿಯ ವನರಾಜಿಯನ್ನ, ಚಿನ್ಮೂಲಾದ್ರಿ ಪರ್ವತಶ್ರೇಣಿಯನ್ನು ನೋಡುತ್ತಲೇ ಬೆಳೆದವರು. ಇಷ್ಟಾದರೂ ನಿಮ್ಮನ್ನ ವಿಪರೀತ ಅನ್ನೋ ಹಾಗೆ ಕಾಡು ಕಾಡಲಿಲ್ಲ. ಅದು ಹಾಡಾಗಿ ಅರಳಲಿಲ್ಲ. ನಾಟಕವಾಗಿ ಹೊಳೆಯಲಿಲ್ಲ. ಬದಲಿಗೆ ನಿಮ್ಮ ಪ್ರತಿ ಪದ್ಯದಲ್ಲೂ ಕೃಷ್ಣ ಬಂದ. ಅವನು ನಾಟಕವಾದ. ಕಾವ್ಯದಲ್ಲಿ ರೂಪಕವಾದ. ಕಥನ ಕಾವ್ಯದಲ್ಲಿ ಕತೆಯೇ ಆಗಿಹೋದ. ವೆಂಕಟೇಶ ಮೂರ್ತಿ ಅಂತ ಹೆಸರಿಟ್ಟುಕೊಂಡ್ರೂ ನೀವು ಆ ವೆಂಕಟೇಶನ ಮೇಲೆ ಸಂಕಟದ ಸಂದರ್ಭದಲ್ಲೂ ಬರೆದಂತಿಲ್ಲ. ಆದರೆ ಕೃಷ್ಣನ ಬಗ್ಗೆ ತಿಂಗಳಿಗೆ ಒಂದರಂತೆ ಪದ್ಯ ಬರೆದಿದ್ದೀರಿ! ಸರ್‌, ಕೃಷ್ಣ ಅಂದ್ರೆ ನಿಮ್ಗೆ ಯಾಕೆ ಅಷ್ಟೊಂದಿಷ್ಟ? ಚಿಕ್ಕಂದಿನಲ್ಲಿ ನೀವೂ ಕೃಷ್ಣನ ಥರಾನೇ ಇದ್ರಂತಲ್ಲ, ಅದಕ್ಕಾ?

ಅನುಭವವೇ ಕವಿತೆಯಾದಾಗ ಅದರ ಅರ್ಥ ಹೆಚ್ಚುತ್ತೆ. ಅದಕ್ಕೆ ತೂಕ ಇರುತ್ತೆ. ಅನುಭವದಿಂದ ಹುಟ್ಟುವ ಪದ್ಯದಲ್ಲಿ ಜೀವಂತಿಕೆ ಇರುತ್ತೆ. ಅದು ನನ್ನಂಥವರ ನಂಬಿಕೆ. ಇಂತ ನಂಬಿಕೆಯ ಮಧ್ಯೆಯೇ,

ನನ್ನ ಓಲೆ ಓಲೆಯಲ್ಲ/ ಮಿಡಿದ ಒಂದು ಹೃದಯ/

ಒಡೆಯಬೇಡ ಒಲವಿಲ್ಲದೆ/ ನೊಯುತಿರುವ ಎದೆಯ

ಪದ್ಯವನ್ನ; ನೀ ಬಳಿ ಬಂದಾಗ/ ಹಾಡಿಗಿಳಿದು

ರಾಗ/ ಕಣ್ಣತುಂಬ ಚಂದ್ರಬಿಂಬ. ಹುಣ್ಣಿಮೆ ಬೆಳಕಿಗೆ

ಎಂಬ ಇನ್ನೊಂದು ಪದ್ಯದ ಮುಂದೆ ಕೂತಾಗ ನಮ್ಮ ನಂಬಿಕೆಯೇ ಪಲ್ಟಿ ಹೊಡೆಯುತ್ತೆ. 23 ವರ್ಷಕ್ಕೇ ಮದುವೆಯಾಗಿ, ಸಂಸಾರದ ಹೊರೆ ಹೊತ್ತ ನೀವು ನಲವತ್ತನೇ ವರ್ಷದಲ್ಲಿ ಪ್ರೇಮಗೀತೆ ಬರೆದಿರಿ ಅಂದರೆ- ಅದು ಅನುಭವವೋ? ಇಲ್ಲ, ಅನುಭವ ಕಲಿಸಿದ ಪಾಠವೋ? ಅದು ನನ್ನಂಥವರ ಪ್ರಶ್ನೆ.

***

ಸರ್‌,

ಹುಚ್ಚು ಖೋಡಿ ಮನಸು/ ಅದು ಹದಿನಾರರ

ವಯಸು/ ಮಾತು ಮಾತಿಗೇಕೋ ನಗು/ ಮರುಗಳಿಗೆಯೇ

ಮೌನ/ ಕನ್ನಡಿ ಮುಂದಷ್ಟು ಹೊತ್ತು/ ಬರೆಯದಿರುವ ಕವನ...

ಹಾಗಂತ ಬರೆದಿರಿ ನೀವು. ನಿಮ್ಮ ಮೆಲುಮಾತಿನಂತೆ, ಸ್ನಿಗ್ಧ ನಗೆಯಂತೆ ನಿಮ್ಮ ಕಾವ್ಯ ಕೂಡ ನಮ್ಮನ್ನ ಕಾಡುತ್ತೆ. ಒಮ್ಮೆ ಅದು ಕನಸಿಗೆ ಬರುತ್ತೆ. ಇನ್ನೊಮ್ಮೆ ಮನದಲ್ಲೇ ಇರುತ್ತೆ. ಅದೇ ನೆಪದಲ್ಲಿ ಕಾವ್ಯದ ಬಗೆಗೇ ಇನ್ನೊಂದಿಷ್ಟು ಪ್ರಶ್ನೆಗಳನ್ನು ಕೇಳಿ ಬಿಡ್ತೀನಿ; ಸಾಧ್ಯವಾದ್ರೆ ಉತ್ತರ ಹೇಳಿ:

ನಿಮ್ಮ ಪ್ರಕಾರ ಕಾವ್ಯ ಅಂದರೆ ಏನು? ಸದಾ ಕೃಷ್ಣನ ಧ್ಯಾನದಲ್ಲೇ ಇರ್ತೀರಲ್ಲ... ಆಗೆಲ್ಲ ನಿಮಗೆ ಕಾವ್ಯ ಹೊಳೆಯುತ್ತಾ? ಒಂದು, ಇನ್ನೊಂದು, ಮತ್ತೊಂದು ಅಂತ ಬರೀತಾ ಹೋಗ್ತೀರಲ್ಲ- ಆಗೆಲ್ಲ ಬರಿದಾಗಿ ಹೋದೆ ಅನ್ನೋ ತಳಮಳ ನಿಮ್ಮನ್ನ ಕಾಡುತ್ತಾ? ಇಷ್ಟೆಲ್ಲ ಬರೆದ್ರೂ ಸಿಗಬೇಕಾದ ಪ್ರಶಸ್ತಿ, ಗೌರವಗಳು ಸಿಗಲಿಲ್ಲ ಅಂತ ವ್ಯಥೆಯಾಗುತ್ತಾ? ಆಮೇಲೆ ಸಾರ್‌... ನೀವು ಯಾಕೆ ಪದ್ಯ ಬರೀತೀರಿ? ನಿಮ್ಮಿಂದ ನೀವೇ ತಪ್ಪಿಸಿಕೊಳ್ಳಲಿಕ್ಕಾ ಅಥವಾ ನಿಮ್ಮನ್ನ ನೀವೇ ಹುಡುಕಿಕೊಳ್ಳಲಿಕ್ಕಾ?

ಸರ್‌, ನಿನ್ನೆ ನಿಮ್ಮ ಬರ್ತ್‌ಡೇ ಆಯ್ತಲ್ಲ, ಅದರ ಮೇಲೊಂದು ಪದ್ಯ ಬರೀಬೇಕು ಅಂತ ಆಸೆಯಾಗಿಲ್ವಾ? ಸುಚಿತ್ರದ ಅಂಗಳದಲ್ಲಿದ್ದ ವಿದ್ಯಾರ್ಥಿಗಳ ಹಿಂಡು ಕಂಡಾಗಲೇ ಒಂದು ಪದ್ಯ ಹುಟ್ಟಲಿಲ್ವಾ? ಸಾವಿರಾರು ಮಂದಿಯ ಅಭಿಮಾನದ ಮಾತು ಕೇಳಿ ನಾನು ಧನ್ಯ ಅನ್ನಿಸಿ ಕಣ್ತುಂಬಿ ಬರಲಿಲ್ವಾ? ಬೇಡ, ಈ ಯಾವ ಪ್ರಶ್ನೆಗೂ ಉತ್ತರ ಹೇಳ್ಬೇಡಿ ಸಾರ್‌. ಒಂದೊಂದು ಪದ್ಯ ಬರೆದುಬಿಡಿ. ನಿಮ್ಮ ನಗೆಯ ಥರಾನೇ ನಿಮ್ಮ ಪದ್ಯ ಚೆನ್ನಾಗಿರುತ್ತೆ. ಅದು ಮುದ್ದಾಗಿರುತ್ತೆ. ಅದ್ಭುತವಾಗೂ ಇರುತ್ತೆ!

ಒಂದು ದಿನ ತಡವಾಗಿದೆ. ಆದ್ರೂ ಸಡಗರದಿಂದಲೇ ಹೇಳ್ತಿದೀನಿ. ಜನ್ಮದಿನದ ಶುಭಾಶಯ ನಿಮಗೆ.

ಒಪ್ಪಿಸಿಕೊಳ್ಳಿ.

ಪ್ರೀತಿ ಮತ್ತು ಪ್ರೀತಿಯಿಂದ...

- ಎ. ಆರ್‌. ಮಣಿಕಾಂತ್‌

armanikanth@yahoo.co.in

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more