ನಾಗರಿಕರ ಮನದಲ್ಲಿ ಚಿರಸ್ಥಾಯಿ, ಚಿಟ್ಟಾಣಿ 70
- ಶ್ರೀಕಾಂತ ಹೆಗಡೆ,
ಸಂಸ್ಕೃತ ಅಧ್ಯಾಪಕರು, ಬೆಂಗಳೂರು
ಬೆಂಗಳೂರು ಮಹಾನಗರದಲ್ಲಿ ಸಾಮಾನ್ಯವಾಗಿ ಸಾರ್ವಜನಿಕ ಗಣೇಶೋತ್ಸವ ಇತ್ಯಾದಿ ಸಂದರ್ಭದಲ್ಲಿ ನಡೆಸುವ ಸಂಗೀತ ಗೋಷ್ಠಿಗಳಲ್ಲಿ , ಸಿನಿಮಾ ನಟರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ನೂಕು ನುಗ್ಗಲಿನ ಜನಸಂದಣಿ ಉಂಟಾಗುತ್ತದೆ. ಇತರ ಕಾರ್ಯಕ್ರಮಗಳಿಗೆ ಸಂಯೋಜಕರೊಂದಿಗೆ ಇತರ ಕೆಲವು ಜನರು ಸೇರುತ್ತಿದ್ದರು. ಆದರೆ ಈಗ ಜನರ ಅಭಿರುಚಿ ಬದಲಾಗಿದೆ ಎಂಬುದಕ್ಕೆ ಈ 18 ಪೌರಾಣಿಕ ಯಕ್ಷಗಾನ ಪ್ರದರ್ಶನಗಳಲ್ಲಿ ಆರಂಭಕ್ಕೆ ಅರ್ಧಗಂಟೆ ಮುಂಚೆಯೇ ಸಭಾಂಗಣ ತುಂಬಿರುವುದು, ಆಮೇಲೆ ಸುತ್ತಲು ಬೆಳಕು ಹೊರ ಹಾಯದಂತೆ ಜನಬೇಲಿಯೇ ಆವರಿಸಿ ಜನರು ಬೀದಿಯ ಮರಗಳನ್ನೇರಿ, ಬಗ್ಗಿ, ತೂರಿ, ಇಣುಕಿ, ರಾತ್ರಿ 11 ಗಂಟೆಯ ತನಕ ಕುತೂಹಲದಿಂದ ವೀಕ್ಷಿಸಿದ್ದು, ಇವೆಲ್ಲ ಮಹಾನಗರದಲ್ಲಿಯ ಜನತೆ ಯಕ್ಷಗಾನವೆಂಬ ಈ ಶಿಷ್ಟ ಶಾಸ್ತ್ರೀಯ ಮನರಂಜನೆಯೆಡೆಗೆ ಆಕರ್ಷಿತರಾಗಿದ್ದರೆಂಬುದರ ನಿದರ್ಶನ. ಇದು ಕಲಾಕ್ಷೇತ್ರದ ಆರೋಗ್ಯಕರ ಸಾಂಸ್ಕೃತಿಕ ಬೆಳವಣಿಗೆ. ಪ್ರಸ್ತುತಗೊಳ್ಳುತ್ತಿರುವ ಅಲ್ಪಾವಧಿಯ ಪೌರಾಣಿಕ ಯಕ್ಷಗಾನ ಪ್ರದರ್ಶನಗಳು ಬಹಳ ವಿಜೃಂಭಣೆಯಿಂದ ನಡೆದಿದ್ದು, ವಿರಾಮೇತರ ದಿನಗಳಲ್ಲೂ ಕಿಕ್ಕಿರಿದ ಕಲಾಭಿಮಾನಿಗಳ ನಡುವೆ ಚಪ್ಪಳೆ ಕೇಕೆಗಳಿಂದ ಪ್ರದರ್ಶಿತವಾಗಿದ್ದು, ಸಂತೋಷಕರ ಸಂಗತಿಯಾದರೂ ಆಶ್ಚರ್ಯಕರ ಅಪೇಕ್ಷಿತ ಪ್ರಗತಿ. ಉತ್ಸವದ ಹದಿನೆಂಟು ಆಟಗಳಲ್ಲಿ ಯಾವುದು ಶ್ರೇಷ್ಠ ಯಾವುದು ಕನಿಷ್ಟವೆಂದು ಹೇಳಲಾಗದು. ಒಂದಕ್ಕಿಂತ ಇನ್ನೊಂದು ಸುಂದರ ಮಧುರ ಮನೋಹರ. ಚಿಟ್ಟಾಣಿ ಹೆಗಡೆಯವರ ನಾಯಕ ಪ್ರತಿನಾಯಕನ ಪಾತ್ರಪೋಷಣೆ, ಬಡಗಿನ ಬೆಡಗಿಯ ಅಭಿನಯ, ನರ್ತನ, ಸಂಭಾಷಣೆಗಳನ್ನು ವೀಕ್ಷಿಸುತ್ತಿದ್ದರೆ ಇವರಿಗೆ 70 ಆಗಿರಬಹುದೇ ಎಂಬ ಶಂಕೆ ಮೂಡುವಂತಿತ್ತು. ಇತರ ಕಲಾವಿದರೂ ಪಾತ್ರಪೋಷಣೆಯಲ್ಲಿ ಸಾಮರ್ಥ್ಯ ತೋರಿದರು. ಕಾರ್ಯಕ್ರಮವೇರ್ಪಟ್ಟ ಎಲ್ಲ ಕಡೆ ಸಂಯೋಜಕರಿಂದ ರಾಮಚಂದ್ರ ಹೆಗಡೆಯವರಿಗೆ ಸಮ್ಮಾನಗಳು ನಡೆದಿವೆ.
ಈ ಸಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಗೋಷ್ಟಿಗಳು ನಡೆದದ್ದು ಅಭಿಯಾನದ ಪ್ರೇರೇಪಣೆ ಹಾಗೂ ಸಂಯೋಜಕರ ಕಾಳಜಿಯಿಂದಾಗಿ, ಈ ಯಕ್ಷಗಾನ ಮಹೋತ್ಸವದಲ್ಲಿ ನಗರದ ಅಯ್ಯಪ್ಪ ಟೆಂಟುಗಳಲ್ಲಿ ಪ್ರದರ್ಶನಗಳು ನಡೆದದ್ದು. ಸಾರಸ್ವತ ಬಂಟ, ಬ್ರಾಹ್ಮಣ ಇತ್ಯಾದಿ ಹಲವಾರು ಸಮಾಜ ಬಂಧುಗಳ ಸಂಘಟನೆಗಳು ಹೋಟೆಲುಗಳ ಸಂಘಗಳು ಈ ಕಲಾಸತ್ರದಲ್ಲಿ ಭಾಗವಹಿಸಿ ಸಹಕರಿಸಿದ್ದು, ನಿವೃತ್ತಿಯ ಹಂತದಲ್ಲಿರುವ ಚಿಟ್ಟಾಣಿಯವರಿಗೆ ನಿಧಿ ಸಮರ್ಪಣೆಗಾಗಿ ಧನ ಸಂಗ್ರಹವಾಗುತ್ತಿರುವುದು, ಇವೆಲ್ಲ ಅಭಿಯಾನದ ಸಾಧನೆಯ ಸಮಾವಳಿಗಳು. ಚಿಟ್ಟಾಣಿಯವರ ಅಭಿಮಾನಿಗಳಾದ ಪುರೋಹಿತ ವರ್ಗದವರು ಸ್ವಖರ್ಚಿನಲ್ಲಿ 70 ವರ್ಷದ ಹೊಸ್ತಿಲಲ್ಲಿರುವಾಗ ನಡೆಸುವ ‘ಭೀಮರಥ ಶಾಂತಿ’ ಯೆಂಬ ಧಾರ್ಮಿಕ ವಿಧಿಯನ್ನು ನಡೆಸಿಕೊಟ್ಟಿರುತ್ತಾರೆ. ಈ ಕ್ಷೇತ್ರದ ಕಲಾವಿದನಿಗೆ ಈ ತರಹದ ಕಾರ್ಯಕ್ರಮ ನಡೆದದ್ದು ಇತಿಹಾಸದ ಹೊಸಪುಟ. ಸಮಾರೋಪದಲ್ಲಿ ಅಭಿಯಾನದ ಕಡೆಯಿಂದ ಚಿಟ್ಟಾಣಿಯವರಿಗೆ ಶ್ರೀಗಳ ಮೂಲಕವಾಗಿ ಒಂದು ಲಕ್ಷ ರೂಪಾಯಿಗಳ ನಿಧಿಯನ್ನು ಸಮರ್ಪಿಸಲಾಯ್ತು, ಇದರಲ್ಲಿ ಗಿರಿನಗರದ ಬಿ. ಕೃಷ್ಣಭಟ್ಟರು ನೀಡಿದ 50 ಸಾವಿರ ರೂಪಾಯಿಗಳು, ಕಾಶೀಮಠದ ದಯಾನಂದ ಪೈಗಳ 25 ಸಾವಿರ ರೂಪಾಯಿಗಳು, ಎಂ. ಎನ್. ಭಟ್ಟರ 5 ಸಾವಿರ ರೂಪಾಯಿ ಸೇರಿವೆ. ತಂಡದ ಕಲಾವಿದರ ಎಲ್ಲಾ ದಿನಗಳ ವಾಸ ಭೋಜನಾದಿ ವ್ಯವಸ್ಥೆಗಳನ್ನು ಅಭಿಯಾನವೇ ನಿರ್ವಹಿಸಿತ್ತು.
ಯಾವುದೇ ಸರ್ಕಾರೀ ನಿಯಮಾವಳಿಗಳಡಿ ನೋಂದಾಯಿತವಲ್ಲದ ಇಲಾಖೆಗಳ ಅನುದಾನವನ್ನು ಪಡೆಯದ ಮೂರುವರ್ಷಗಳ ಈ ಎಳೆಯ ಸಂಘಟನೆ ಕಾರ್ಯ ಸ್ತುತ್ಯವಾದುದು. ಯಕ್ಷಗಾನ ಯೋಗಕ್ಷೇಮ ಅಭಿಯಾನ ಆಯೋಜಿಸಿದ ಈ ಮಹೋತ್ಸವದಲ್ಲಿ ಚಿಟ್ಟಾಣಿ ಹೆಗಡೆಯವರ ಕಲಾತಂಡದ, ಹಡಿನಬಾಳ ಶ್ರೀಪಾದ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಕೊಳಗಿ ಕೇಶವ ಹೆಗಡೆ, ಧರ್ಮಶಾಲೆ ಗಜಾನನ ಹೆಗಡೆ, ಗಣಪತಿ ಭಾಗ್ವತ ಕವಾಳೆ, ವಿಘ್ನೕಶ್ವರ ಕೆಸರಕೊಪ್ಪ, ಬೇಗಾರ ಶಿವಕುಮಾರ, ಶ್ರೀಧರ ಭಟ್ಟ ಕಾಸರಕೋಡು, ಪ್ರಭಾಕರ ಚಿಟ್ಟಾಣಿ, ರಾಮ ಹೆಗಡೆ ಚಿಟ್ಟಾಣಿ, ನಾಗರಾಜ ಪಂಚಲಿಂಗ, ಮಹಾವೀರ ಜೈನ್, ಮಂಜು ಗೌಡ, ರಾಜೆಶ ಕುಮಾರ ಮತ್ತು ಅತಿಥಿ ಕಲಾವಿದರಾಗಿ ಕೃಷ್ಣ ಯಾಜಿ ಬಳ್ಕೂರ್, ಮಂಟಪ ಪ್ರಭಾಕರ ಉಪಾಧ್ಯ, ವಿದ್ವಾನ್ ದತ್ತ ಮೂರ್ತಿ ಭಟ್ಟ, ಶಂಕರ ಭಾಗ್ವತ ಯಲ್ಲಾಪುರ, ಸಿ.ಜಿ.ಹೆಗಡೆ, ಹವ್ಯಾಸೀ ಕಲಾವಿದರಾಗಿ ಸುಧೀಂದ್ರ ಹೊಳ್ಳ, ಸದನಂದ ಹೆಗಡೆ, ರಾಧಾಕೃಷ್ಣ ಬಿಳಿಯೂರು, ಮುಂತಾದ ಯಕ್ಷಗಾನ ಕಲಾ ಕೋವಿದರು ಭಾಗವಹಿಸಿ ಪುರಾಣ ಕಥಾನಕಗಳನ್ನು ಕಲಿಯುಗದ ರಂಗಕ್ಕಿಳಿಸಿದ್ದಾರೆ.
ಶುದ್ಧ ಶಾಸ್ತ್ರೀಯ ಕಲೆಯಾದ ಯಕ್ಷಗಾನಕ್ಕೆ ಜಾನಪದವೆಂಬ ಹಣೆಪಟ್ಟಿ ಶೋಭಿಸದು. ಎಲ್ಲ ಶಿಷ್ಟ ಸಾಹಿತ್ಯ ಪ್ರಕಾರಗಳಂತೆ ಇದರಲ್ಲಿಯೂ ಅಪ್ಪಟ ಪೌರಾಣಿಕ ವಸ್ತುವಿದೆ. ಗೀತ ಸಂಗೀತ ನೃತ್ಯ ಅಭಿನಯ, ವಾಚಿಕ ಎಂಬ ನಾಟ್ಯಶಾಸ್ತ್ರದಲ್ಲಿ ಸೂಚಿತವಾದ ಈ ಎಲ್ಲ ಅಂಶಗಳನ್ನು ಒಳಗೊಂಡಿರುವ ಈ ಕಲಾ ಪ್ರಭೇದಕ್ಕೆ ರಾಷ್ಟ್ರ ಮಟ್ಟದ ಗುರುತು ಸಿಗಬೇಕಾದ ಅವಶ್ಯಕತೆಯಿದೆ. ಇದರಿಂದಲೇ ಚಿಗುರಿದ ಕಥಕ್ಕಳಿ, ಮೋಹಿನಿ ಅಟ್ಟಂಗಳು ರಾಷ್ಟ್ರ ಮನ್ನಣೆ ಪಡೆದಿವೆ. ರಾಜ್ಯ ಮನ್ನಣೆಯೇ ದೊರೆಯದಿದ್ದರೆ ರಾಷ್ಟ್ರ ಪುರಸ್ಕೃತಿ ಲಭಿಸದು. ಆದ್ದರಿಂದ ನಮ್ಮ ಕರ್ನಾಟಕ ಸರ್ಕಾರ ಜಾನಪದ ವಿಭಾಗದಿಂದ ಇದನ್ನು ತೆಗೆದು ಪ್ರತ್ಯೇಕ ಅಕಾಡೆಮಿ ರಚಿಸಿ, ಯಕ್ಷಗಂಧವನ್ನು ದೇಶವ್ಯಾಪೀ ಪಸರಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಡಿನಲ್ಲಿಯ ಎಲ್ಲ ಯಕ್ಷಗಾನ ಸಂಘಟನೆಗಳು, ಕೇವಲ ಸರ್ಕಾರೀ ಕಾರ್ಯಕ್ರಮಗಳ ಪ್ರಚಾರವೇ ಪರಮ ಧ್ಯೇಯವೆಂದು ಭಾವಿಸದೆ, ಒಗ್ಗೂಡಿ, ವಾಸ್ತವವನ್ನು ನಮ್ಮ ನಾಯಕರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಈ ಯಕ್ಷಗಾನ ಮಹೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ‘ಯಕ್ಷಗಾನ ಯೋಗಕ್ಷೇಮ ಅಭಿಯಾನವು’ ಎಲ್ಲ ಯಕ್ಷಗಾನ ಸಂಘಟನೆಗಳಿಗೆ ಒಗ್ಗೂಡಲು ಈ ಮೂಲಕ ಕರೆ ಕೊಡುತ್ತಿದೆ.
ಈ ಕಲೆಯ ಯೋಗಕ್ಷೇಮಾಕಾಂಕ್ಷೀ ಅಭಿಯಾನವು ಮುಂದೆಯೂ ಎಲ್ಲ ಯಕ್ಷಗಾನ ರಸಿಕರ, ಕಲಾಪೋಷಕರ, ಸಂಘಗಳ, ಹವ್ಯಾಸೀ ಕಲಾವಿದರ, ವೃತ್ತಿ ಕಲಾವಿದರ, ಸಹಕಾರವನ್ನು ಬಯಸುತ್ತದೆ, ಹಾಗೂ ಕಲೆಯ ಸುಸ್ಥಿರತೆಗೆ, ಪ್ರಚಾರಕ್ಕೆ, ಮಾನ ಸಮ್ಮಾನಗಳಿಗಾಗಿ ಕೆಲಸ ಮಾಡುವಲ್ಲಿ ಸಹಕರಿಸಲು, ಸಹಯೋಗ ನೀಡಲು ಬಯಸುವ ಅಭಿಮಾನಿಗಳು ನಿರಂತರ ಸಂಪರ್ಕದಲ್ಲಿರಲು ವಿನಂತಿಸುತ್ತದೆ.
ಸಂಪರ್ಕಕ್ಕಾಗಿ.....ವಿ.ಆರ್. ಹೆಗಡೆ, ಹೆಗಡೆಮನೆ, ದೂರವಾಣಿ ಸಂಖ್ಯೆ: 6616345/ 6524409.












Click it and Unblock the Notifications