ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಜಾನೆಯ ಕಥಾ ಪ್ರಸಂಗ

By Staff
|
Google Oneindia Kannada News


ಸಾಮಾಜಿಕ ಭದ್ರತೆ ಇಲ್ಲದ ದೇಶದಲ್ಲಿ ವೃದ್ಧಾಪ್ಯ ಒಂದು ಶಾಪ. ಆ ಶಾಪ ತಟ್ಟದಂತೆ , ಅಥವಾ ತಟ್ಟಿದರೂ ತಟ್ಟದಂತೆ ಬದುಕು ನಿರ್ವಹಿಸಿಕೊಳ್ಳುವುದೊಂದು ಜಾಣ್ಮೆ . ಆ ಜಾಣ್ಮೆ ನಿಮ್ಮದೂ ಆಗಲಿ.
ನಮ್ಮ ವಾಕಿಂಗ್‌ ಸಮಯ ದಿನಾ ಬೆಳಗ್ಗೆ ಆರೂಮುಕ್ಕಾಲರಿಂದ ಎಂಟೂ ಕಾಲು ಗಂಟೆಯ ತನಕ. ನಾವು ವಾಕಿಂಗ್‌ಗೆ ‘ ವ್ಯಾಲಿಡ್‌ ರೀಸನ್‌ ’ ಇಲ್ಲದೇ ತಪ್ಪಿಸಿಕೊಳ್ಳುವ ಹಾಗಿಲ್ಲ. ಕೆಲಸದ ಮೇಲೆ ಬೇರೆ ಊರುಗಳಿಗೆ ಹೋಗುವುದಿದ್ದರೆ ಹೊರಡುವುದಕ್ಕೆ ಮೊದಲೇ ತಿಳಿಸಬೇಕು.

ಆಕಸ್ಮಾತ್‌ ಹೇಳದೆ ಗೈರು ಹಾಜರ್‌ ಆದರೆ ನಾವು ಪೆನಾಲ್ಟಿ ಕೊಡಬೆಕಾಗಿತ್ತೆ.

ಪೆನಾಲ್ಟಿ ಎಂದರೆ ತಪ್ಪಿತಸ್ಥನು ಹಿಂತಿರುಗಿದ ಮೇಲೆ ನಮ್ಮ ಕಾಕ್ಸ್‌ ಟೌನ್‌ನ ಕೋಮಲಾ ರೆಸ್ಟೋರಂಟ್‌’ನಲ್ಲಿ ಎಲ್ಲರಿಗೂ ಬೆಳಗಿನ ಉಪಹಾರ ಕೊಡಿಸಬೇಕು.

ಉಪಹಾರ ಅಂಥಹಾ ದೊಡ್ಡ ದುಬಾರಿ ವಿಚಾರವೇನಲ್ಲ. ಒಂದು ಇಡ್ಲಿ, ಒಂದು ವಡಾ, ಒಂದು ಮಸಾಲೆ ದೋಸೆ ಮತ್ತು ಒಂದು ಸಕ್ಕರೆ ಹಾಕದ ಕಾಫಿ - ಅಷ್ಟೆ! ಆದರೆ .... ಅದಕ್ಕೆ ಸಂಬಂಧಿಸಿದ ವಸೂಲಾತಿ ಕಾರ್ಯಕ್ರಮ, ಗೈರುಹಾಜರಾದವರ ಉರುಟಣೆ, ಪೂರ್ವ ನಿಯೋಜನೆ ಇವಗಳಲ್ಲೇ ಎರಡು ದಿನ ಕಳೆದು ಕೊನೆಗೆ ನಮ್ಮ ‘ಪೆನಾಲ್ಟಿ ಕಾರ್ನರ್‌ ’ ದಿನ ನಿಶ್ಚಯವಾಗುತ್ತವೆ.

ನಿರಂತರವಾಗಿ ನಮ್ಮ ಇನ್ನೊಂದು ಕಾರ್ಯಕ್ರಮವಿದೆ, ಅದೇನೆಂದರೆ, ತಿಂಗಳಿಗೆ ಒಬ್ಬ ಮೆಂಬರು ತನ್ನ ಕಾರು ತಂದು ಗ್ರೂಪ್‌ನವರನ್ನು ಸಿಟಿಯ ( ಅಂದರೆ ಕಾಕ್ಸ್‌ ಟೌನ್‌, ಕೂಕ್‌ ಟೌನ್‌, ಫ್ರೇಜರ್‌ ಟೌನ್‌ಗಳಿಂದ ದೂರದ ) ಯಾವುದಾದರೂ ಒಳ್ಳೆಯ ರೆಸ್ಟುರಾಂಟ್‌ನಲ್ಲಿ ಮೇಲೆ ಹೇಳಿದ ರೀತಿಯ ಉಪಹಾರ ಕೊಡಿಸಬೇಕು. ಈ ಕಾರ್ಯಕ್ರಮಗಳಿಗೆ ಶ್ರೀಮತಿ ವಿನ್ನಿ ರಾಮಕೃಷ್ಣನ್‌ ಹಾಜರಾಗುವುದಿಲ್ಲ. ಆಕೆಗೆ ಬೆಳಗಿನ ಹೊತ್ತು ತನ್ನ ಮನೆಯ ಗೃಹ ಕೃತ್ಯದ ಕೆಲಸಗಳು ಇರುವುದರಿಂದ, ಅವರ ಪಾಲಿನ ಉಪಹಾರ ಕಟ್ಟಿಸಿ ತಂದು ಕೊಡುತ್ತೇವೆ. ಇದಕ್ಕೆ ಇನ್ನೊಂದು ಕಾರಣ ಕೂಡಾ ಇದೆ, ಅದೇನೆಂದರೆ, ಒಂದು ಕಾರಿನಲ್ಲಿ ಐದು ಜನರಿಗಿಂತ ಹೆಚ್ಚು ಪ್ರಯಾಣ ಮಾಡುವುದು ಕಷ್ಟವಾಗಿರುತ್ತೆ... ...

ಆಪರೂಪಕ್ಕೊಮ್ಮೆ ಈ ಉಪಹಾರ ಕಾರ್ಯಕ್ರಮದಲ್ಲಿ ‘ ಒಂದು ಪ್ಲೇಟ್‌ ಕೇಸರಿ ಭಾತ್‌ ’ ತರಿಸಿಕೊಂಡು ಎಲ್ಲರೂ ಹಂಚಿ ಕೊಂಡು ತಿನ್ನುವುದೂ ಉಂಟು. ಹೀಗೆ ಹಂಚಿಕೊಳ್ಳುವುದಕ್ಕೆ ಕಾರಣ ವೇನೆಂದರೆ - ನಮ್ಮ ಗ್ರೂಪಿನ ಎಲ್ಲರಿಗೂ ‘ ಸ್ವೀಟ್‌ ಪಥ್ಯ! ’.

ಕೆಲವೂಮ್ಮೆ ಕ್ರಿಕೆಟ್‌ ಮ್ಯಾಚ್‌, ಫುಟ್‌ ಬಾಲ್‌ ಮ್ಯಾಚ್‌ ಇವುಗಳ ಸಂದರ್ಭದಲ್ಲಿ ಯಾರಾದರೂ ಬೆಟ್‌ ಕಟ್ಟಿ ಸೋತರೆ ಅವರು ನಮ್ಮ ಕೋಮಲಾ ರೆಸ್ಟೋರಂಟ್‌ನಲ್ಲಿ ಒಂದು ‘ ಎಕ್ಸ್‌ಟ್ರಾ ರೌಂಡ್‌ ’ ಉಪಹಾರ ಕೊಡಿಸಬೇಕಾಗುತ್ತೆ. ಈ ತೊಂದರೆ, ಬೆಟ್‌ ಕಟ್ಟುವ ಅಭ್ಯಾಸ ಇರುವ ಕ್ಯಾಪ್ಟನ್‌, ಮೇಜರ್‌ ಮತ್ತು ಬಜಾಜ್‌ ಇವರುಗಳಿಗೆ ಮಾತ್ರ! ಉಳಿದ ಮೂವರಾದ ನಮಗೆ ಬೆಟ್‌ ಕಟ್ಟುವ ಹವ್ಯಾಸವೇ ಇಲ್ಲ. ಆದರೆ, ಸೋತವರು ಕೊಡುವ ಉಪಹಾರವನ್ನು ಬೆಟ್ಟು ಚೀಪುತ್ತಾ ಸವಿಯುವುದು ಗೊತ್ತು.

ಇಂದಿನ ಮಾಸಿಕ ಉಪಹಾರದ ಸರದಿ ನನ್ನದು. ಬೆಂಗಳೂರಿನ ಗಾಂಧೀ ಬಜಾರಿನ ಉಪಹಾರ ದರ್ಶಿನಿಗೆ ನಾವು ಇಂದು ಹೋದೆವು. ಇದು ಬೆಂಗಳೂರಿನಲ್ಲೇ ಮೊಟ್ಟ ಮೊದಲು ಶುರುವಾದ ‘ ದರ್ಶಿನಿ ’ ರೆಸ್ಟುರಾಂಟ್‌!

ದರ್ಶಿನಿ ಎಂಬ ಹೊಸಾ ಆಯಾಮದ ರೆಸ್ಟುರಾಗಳಿಗೆ ಇದು ಮೊದಲಿಗ. ಇಂದಿಗೂ ಇದನ್ನು ಬೀಟ್‌ ಮಾಡುವ ದರ್ಶಿನಿ ಬೆಂಗಳೂರಲ್ಲಿ ಇಲ್ಲ. ರುಚಿ, ಶುಚಿ ಮತ್ತು ಪೈಪೋಟಿಯ ಸೋವಿ ರೇಟಿಗೆ ಈ ‘ ದರ್ಶಿನಿ ’ ಇಂದಿಗೂ ಹೆಸರಾಗಿದೆ. ಇವತ್ತಿಗೂ ಒಂದು ಪಿಂಗಾಣಿ ಕಪ್‌ ತುಂಬಾ ಘಮಘಮಿಸುವ ಡಿಕಾಕ್ಷನ್‌ ಕಾಫಿಗೆ ಇಲ್ಲಿ ಬರೇ ಮೂರು ರೂಪಾಯಿ!

ಈ ಉಪಹಾರ ಮಂದಿರದ ತಿಂಡಿಯ ದರಗಳು ಅದೆಷ್ಟು ಆಕರ್ಷಕವಾಗಿವೆ ಎಂದರೆ ಈ ದರದಲ್ಲಿ ಅವರು ಕೊಡುವ ತಿಂಡಿಗಳನ್ನು ಮನೆಯಲ್ಲಿ ಕೂಡಾ ತಯಾರಿಸುವುದು ಸಾಧ್ಯವಿಲ್ಲವಂತೆ!

ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಬಿಸಿಯಿರುವಾಗಲೇ ಬಡಿಸುವುದರಿಂದ ಈ ದರ್ಶಿನಿಗೆ ಗ್ರಾಹಕರು ಮುಗಿದು ಬೀಳುತ್ತಾರೆ. ಅವರ ವ್ಯಾಪಾರದ ‘ ಟರ್ನ್‌ ಓವರ್‌ ’ ದೊಡ್ಡದಾಗಿರುವುದರಿಂದ ಅಷ್ಟು ಕಡಿಮೆ ದರದಲ್ಲಿ ಅವರಿಗೆ ಉಪಹಾರ ಕೊಡಲು ಸಾಧ್ಯವಾಗುತ್ತಿದೆಯಂತೆ.

ಇಲ್ಲಿ ಸ್ವಸಹಾಯ ಪದ್ಧತಿ ಚಾಲ್ತಿಯಲ್ಲಿರುವುದರಿಂದ, ಅವರಿಗೆ ಸರ್ವರ್‌ಗಳ ಸಂಬಳ ಉಳಿತಾಯವಾಗುತ್ತದೆ. ಈ ದರ್ಶಿನಿಯ ವಿಸ್ತಾರ ಕೂಡಾ ಅತೀ ಚಿಕ್ಕದು. ಇರುವ ಎತ್ತರದ ಎರಡು ರೌಂಡ್‌ ಟೇಬಲ್‌ಗಳನ್ನು ಕೆಲವು ಮಂದಿ ಗ್ರಾಹಕರು ನಿಂತು ಉಪಹಾರ ಮಾಡಲು ಬಳಸಿದರೆ, ಹೆಚ್ಚಿನವರು ಎಲ್ಲಾದರೂ ಒಳಗೆ, ಇಲ್ಲವೇ ದರ್ಶಿನಿಯ ಹೊರಗಣ ಬೀದಿ ಬದಿಯ ಜಾಗದಲ್ಲಿ ಉಪಹಾರ ಮುಗಿಸುತ್ತಾರೆ.

ಸಾಯಂಕಾಲದ ಹೊತ್ತು ಆಸುಪಾಸಿನಲ್ಲಿ ವಾಸಿಸುವ ಗೃಹಿಣಿಯರು ತಮ್ಮ ಮಕ್ಕಳನ್ನು ಕರೆದು ಕೊಂಡು ಬಂದು ಇಲ್ಲಿ ಉಪಹಾರ ಮಾಡಿಸುವುದು ಸಾಮಾನ್ಯ ದೃಶ್ಯ. ಅವರನ್ನು ಹೀಗೇಕೆ ಎಂದು ವಿಚಾರಿಸಿದರೆ ‘ ಇಷ್ಟು ವೈವಿಧ್ಯದ ತಿಂಡಿಗಳನ್ನು ಶುಚಿ ರುಚಿ ಮತ್ತು ಆರೋಗ್ಯಕರವಾಗಿ ಮನೆಯಲ್ಲಿ ತಯಾರಿಸಲು ದುಬಾರಿ, ಆದರಿಂದ ಮಕ್ಕಳನ್ನು ಕರೆದು ಕೊಂಡು ಬಂದು ಅವರಿಗಿಷ್ಟವಾದ ತಿಂಡಿಗಳನ್ನು ಇಲ್ಲಿಯೇ ಕೊಡಿಸುತ್ತೇವೆ. ಪ್ರತೀ ತಿಂಡಿಯನ್ನೂ ನಮ್ಮ ಮುಂದೆಯೇ ತಯಾರು ಮಾಡಿ ಇಲ್ಲಿ ಬಡಿಸುತ್ತಾರೆ. ’ ಅನ್ನುತ್ತಾರೆ.

ಬಹಳಷ್ಟು ಜನ ಆಫೀಸ್‌ಗಳಿಗೆ ಹೋಗುವ ಯುವಕ ಯುವತಿಯರು ತಮ್ಮ ಮಧ್ಯಾಹ್ನದ ‘ಲಂಚ್‌ ’ ಈ ದರ್ಶಿನಿಯಿಂದ ಕಟ್ಟಿಸಿಕೊಂಡು ಹೋಗುತ್ತಾರೆ. ಇವರಿಗಾಗಿಯೇ ಬೆಳಗಿನ ಹೊತ್ತು, ಘೀ ರೈಸ್‌, ಪೊಂಗಲ್‌, ಬಿಸಿಬೇಳೆಭಾತ್‌ ಮುಂತಾದ ಯಾವುದಾದರೂ ಒಂದು ‘ರೈಸ್‌ ಐಟಮ್‌’ ಒಂದನ್ನು ಈ ದರ್ಶಿನಿ ಬೆಳಗಿನ ಹೊತ್ತೇ ತಯಾರಿಸಿರುತ್ತದೆ.

ಈ ದರ್ಶಿನಿಯ ಮಸಾಲೆ ದೋಸೆ, ಮಲೆನಾಡಿನ ಕಡುಬು, ಶಾವಿಗೆ ಭಾತ್‌, ಸೆಟ್‌ ದೋಸೆಗೆ ಜನ ಮುಗಿ ಬೀಳುತ್ತಾರೆ.

ಇಲ್ಲಿ ಸದಾ ಕಾಲ ಹೇಳತೀರದ ‘ರಶ್‌’ ಇರುತ್ತೆ. ನಿಂತು ಕೊಂಡು ತಿನ್ನಲು ಕೂಡಾ ಜಾಗ ಸಿಗುವುದು ಕಷ್ಟ!

‘ರಶ್‌ ಎಷ್ಟು ಇರುತ್ತೆ ಎಂದರೆ ರಶ್‌ನಲ್ಲಿ ನಮ್ಮ ಕೈತುತ್ತು ನಮ್ಮ ಬಾಯಿಗೇ ಹೋಗುತ್ತೆ ಎಂಬ ಗ್ಯಾರೆಂಟಿ ಇಲ್ಲ ’ ಎಂದು ಒಬ್ಬ ಮಾಮೂಲಿ ಗ್ರಾಹಕರು ನಮ್ಮೊಂದಿಗೆ ಜೋಕ್‌ ಮಾಡಿದರು.

ನಾವು ಇಂದು ಮುಂಜಾನೆ ಇಡ್ಲಿ-ವಡೆ ಮತ್ತು ಸೆಟ್‌ ದೋಸೆ ತಿಂದು ಕಾಫಿ ಕುಡಿದೆವು. ಐದು ಜನರ ಬಿಲ್ಲು ಕೇವಲ ತೊಂಬತ್ತಾರು ರೂಪಾಯಿ ಮಾತ್ರ! ಕೆಲವು ‘ ದುಬಾರಿ ’ ಉಪಹಾರ ಗೃಹಗಳಲ್ಲಿ ಇಷ್ಟಕ್ಕೇ ರೂಪಾಯಿ ನಾಲ್ಕು ನೂರರರತನಕ ನಾವು ಕೊಟ್ಟಿದ್ದೂ ಇದೆ.

ಇಲ್ಲಿನ ಉಪಹಾರದ ರುಚಿ ಬೇರಾವ ಉಪಹಾರ ಗೃಹದಲ್ಲಿಯೂ ನಾವು ಕಂಡಿಲ್ಲ.

ತಿಂಡಿಯ ರುಚಿಯನ್ನು ಹೊಗಳುತ್ತಾ ಶ್ರೀಮತಿ ವಿನ್ನಿಫ್ರೆಡ್‌ ರಾಮಕೃಷ್ನರಿಗೆ ಉಪಹಾರ ಕಟ್ಟಿಸಿಕೊಂಡು ವಾಪಸಾದೆವು.

ಪ್ರತಿಯಾಬ್ಬರೂ ಈ ದಿನ ಬೆಳಗಿನ ಉಪಹಾರಕ್ಕೆ ಹದಿನಾಲ್ಕು ಕಿಲೋಮೀಟರ್‌ ಕ್ರಮಿಸಿದುದು ‘ ವರ್ಥ್‌ ಇಟ್‌! ’’ ಅನ್ನಿಸಿತು.

ತಾ : 13 / 05 / 2004
ಬೆಂಗಳೂರು

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X