ಕೊನೆಗೂ ರಂಗ‘ಶಂಕರ’ ಮೂಡಿದನೊ...
- ದಟ್ಸ್‌ಕನ್ನಡ ಬ್ಯೂರೊ
ಬೆಂಗಳೂರು: ನಟ ಶಂಕರ್‌ನಾಗ್ ಅಂದು ಕಂಡಿದ್ದ ಕನಸು, ಈಗ ನನಸಾಗುತ್ತಿದೆ. ಆದರೆ ಅದರ ಸಂಭ್ರಮವನ್ನು ಸವಿಯಲು ಶಂಕರ್ ಮಾತ್ರ ಈಗಿಲ್ಲ. ಅವರ ‘ರಂಗ ಶಂಕರ’ ಯೋಜನೆ ಕಡೆಗೂ ಕೈಗೂಡಿದೆ.
ದಿವಂಗತ ನಟ ಶಂಕರ್‌ನಾಗ್ ನೆನಪಿನಲ್ಲಿ ಕಟ್ಟಲಾದ 3.5ಕೋಟಿ ರೂ. ವೆಚ್ಚದ ‘ರಂಗ ಶಂಕರ ’ಮಂದಿರ ಕಲಾಭಿಮಾನಿಗಳಿಗಾಗಿ ಸಿದ್ಧಗೊಂಡಿದೆ. ಈ ನಾಟಕ ಮಂದಿರ ಅ.28ಕ್ಕೆ ಉದ್ಘಾಟನೆಗೊಳ್ಳಲಿದೆ. ರಂಗ ಶಂಕರ ಮಂದಿರದಲ್ಲಿ 300 ಮಂದಿ ಪ್ರೇಕ್ಷಕರು ಕುಳಿತುಕೊಳ್ಳಬಹುದಾಗಿದೆ. ರಂಗಮಂದಿರದಲ್ಲಿ ಆರ್ಟ್ಸ್ ಗ್ಯಾಲರಿ, ಪುಸ್ತಕ ಗ್ಯಾಲರಿ, ಪುಸ್ತಕ ಮಳಿಗೆ ಮತ್ತು ಉಪಾಹಾರ ಗೃಹವನ್ನು ತೆರೆಯಲಾಗಿದೆ ಎಂದು ರಂಗ ಶಂಕರ್ ಮಂದಿರದ ವ್ಯವಸ್ಥಾಪಕ ಟ್ರಸ್ಟಿ ಆರುಂಧತಿ ನಾಗ್ ತಿಳಿಸಿದ್ದಾರೆ.
ಹಚ್ ಮೊಬೈಲ್ ಸಂಸ್ಥೆ ಸಹಯೋಗದಲ್ಲಿ ರಂಗಶಂಕರ ನಾಟಕೋತ್ಸವ ನಡೆಯುತ್ತಿದ್ದು , ಈ ನಾಟಕೋತ್ಸವದಲ್ಲಿ ರಾಜ್ಯ,ದೇಶ ಮತ್ತು ವಿದೇಶಗಳ ಕೆಲವು ಉತ್ತಮ ನಾಟಕಗಳನ್ನು ಪ್ರದರ್ಶಿಸಲಾಗುವುದು. ಈ ನಾಟಕೋತ್ಸವವನ್ನು ಮುಖ್ಯಮಂತ್ರಿ ಧರ್ಮಸಿಂಗ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಸಂಭ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅರುಂಧತಿ ತಿಳಿಸಿದರು.
*
ಕನ್ನಡ ಚಿತ್ರರಂಗದಲ್ಲಿ ಮಿಂಚಿನ ವೇಗದಿಂದಲೇ ಗುರ್ತಿಸಿಗೊಂಡಿದ್ದ ಶಂಕರ್‌ನಾಗ್ ಕನ್ನಡದ ಶ್ರೇಷ್ಟ ನಟ, ನಿರ್ದೇಶಕ, ಎನ್ನುವುದರಲ್ಲಿ ಎರಡು ಮಾತಿಲ್ಲ. ಶಂಕರ್ ದೂರವಾಗಿ ಸುಮಾರು ಹದಿನಾಲ್ಕು ವರ್ಷಗಳಾದವು. ಆದರೆ ಇಂದಿಗೂ ಕನ್ನಡಿಗರು ಶಂಕರ್‌ನಾಗ್‌ನ ಕ್ರಿಯಾಶೀಲತೆ, ಸರಳತೆ, ಹೊಸತನ್ನು ಕೊಡುವ ಹಂಬಲ ಇವೆಲ್ಲವನ್ನು ನೆನೆಯುತ್ತಾರೆ.
ಕನಸುಗಾರನಾಗಿದ್ದ ಶಂಕರ್ ಸಿನಿಮಾಗಳಿಗಿಂತಲೂ ರಂಗಭೂಮಿಯಲ್ಲಿ ಪಡೆದ ಹೆಸರೇ ದೊಡ್ಡದು. ರಂಗಕಲಾವಿದರನ್ನು, ತಂತ್ರಜ್ಞರನ್ನು, ಪ್ರೇಕ್ಷಕರನನ್ನು ಒಂದೇ ವೇದಿಕೆಯಡಿ ತರುವ ಶಂಕರ್ ಕನಸು- ರಂಗ ಶಂಕರ. ತಮ್ಮ ಕನಸು ಪೂರ್ಣಗೊಳ್ಳುವ ಮೊದಲೇ ಶಂಕರ್ ಸಾವನ್ನಪ್ಪಿದರು. ರಂಗಶಂಕರ ಎನ್ನುವ ಶಂಕರನಾಗ್‌ನ ಕನಸಿನ ಕಂದಮ್ಮನನ್ನು ಬೆಳೆಸಿದ್ದು, ಅವರ ಪತ್ನಿ ಅರುಂಧತಿನಾಗ್.
ದಾವಣಗೆರೆ ಬಳಿ ನಡೆದ ಅಪಘಾತದಲ್ಲಿ ಶಂಕರ್ ತಮ್ಮ ಪತ್ನಿಯನ್ನು ರಂಗ ಶಂಕರಕ್ಕೆ ಜೀವತುಂಬುವುದಕ್ಕಾಗಿಯೇ ಉಳಿಸಿದ್ದರು ಎಂಬಂತೆ, ತೀವ್ರ ಆರ್ಥಿಕ ಸಂಕಷ್ಟಗಳ ನಡುವೆಯೇ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಒಂದು ತಿಂಗಳ ಕಾಲ ಇಲ್ಲಿ ರಂಗಭೂಮಿ ಬಗೆಗೆ ಕಾರ್ಯಗಾರ ಏರ್ಪಡಿಸಿ, ದೇಶದ ನಾನಾ ಕಡೆಗಳಿಂದ ರಂಗಭೂಮಿ ತಜ್ಞರು ಆಹ್ವಾನಿಸುವ ಯೋಜನೆಯನ್ನು ಅರುಂಧತಿ ರೂಪಿಸಿದ್ದಾರೆ.
ಶಂಕರ್‌ನಾಗ್‌ರಂತೆಯೇ ಅವರ ಪತ್ನಿ ಅರುಂಧತಿ ನಾಗ್ ಸಹಾ ದೊಡ್ಡ ದೊಡ್ಡ ಆಸೆಗಳನ್ನು ಹೊಂದಿದ್ದಾರೆ. ಮೊದಲು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದ, ಅವರು ನಟಿಸಿದ ಕಡೆಯ ಚಿತ್ರ ದಿಲ್‌ಸೆ. ಅಶ್ವಿನಿ ಆಡಿಯೋದ ರಾಮ್‌ಪ್ರಸಾದ್‌ರ ‘ಜೋಗಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ತಾಯಿಯ ಪಾತ್ರದಲ್ಲಿ ಬೆಳ್ಳಿತೆರೆಯಲ್ಲಿ ಬಹಳ ವರ್ಷಗಳ ನಂತರ ಮುಖ ತೋರಿ ಸುತ್ತಿದ್ದಾರೆ. ರಂಗಶಂಕರ ಬಗೆಗಿನ ಶಂಕರ್-ಅರುಂಧತಿ ಕನಸುಗಳು ಧನ್ಯತೆ ಅನುಭವಿಸಲಿ.
ಪೂರಕ ಓದಿಗೆ-
ಅರುಂಧತಿನಾಗ್ ಸಂದರ್ಶನ












Click it and Unblock the Notifications