ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗತಿಹಳ್ಳಿಚಂದ್ರುಗೊಂದು ಮುಕ್ತಪತ್ರ

By Staff
|
Google Oneindia Kannada News

ಉಭಯ ಕುಶಲೋಪರಿ ಸಾಂಪ್ರತ....

  • ನಿನ್ನೊಂದಿಗೆ ಮಳೆಯಲ್ಲಿ ನೆನೆದು, ನೀರಾಗಿ ಹರಿದುಬಿಡಬೇಕು. ಹೊಳೆಯ ದಡದ ಮೇಲೆ ಕೂತು ನಿನ್ನ ಮಡಿಲಲ್ಲಿ ಮಗುವಾಗಿಬಿಡಬೇಕು. ಆಮೇಲೆ, ಸೂರ್ಯ , ಚಂದ್ರ, ನಕ್ಷತ್ರಗಳಿವೆ ನೋಡು- ಅವನ್ನೆಲ್ಲ ಕಿತ್ತುತಂದು ಹೊಳೆಯ ನೀರಲ್ಲಿ ಬೆರೆಸಿ ಹೀರಿಬಿಡಬೇಕು ಅನಿಸುತ್ತದೆ. ನಿನ್ನೊಂದಿಗೆ ಕಳೆದ ಕ್ಷಣಗಳನ್ನು ಕತ್ತರಿಸಿಡಲಾಗದ್ದಕ್ಕೆ, ಆ ಕ್ಷಣದ ಬಗ್ಗೆ ಸಿಟ್ಟು ಬರುತ್ತದೆ.....
  • ಭೂಮಿಯ ಮೇಲೆ ಹುಟ್ಟಿ ಸಾವಿರಾರು ವರ್ಷಗಳಿರುವವರಂತೆ ನಾನಾ ಆಟ ಆಡುತ್ತ ಮೂರೇ ಗಳಿಗೆಯಲ್ಲಿ ಇಲ್ಲವಾಗುವ ನರಜಂತುಗಳ ಬಗ್ಗೆ ಎಷ್ಟೆಂದು ಬರೆಯುವುದು?ಮನುಷ್ಯನ ಹುಟ್ಟು, ಸಾವು, ಪ್ರೇಮ, ನೀಚತನಗಳ ಬಗ್ಗೆ ನಾ ಬರೆದ ಕತೆಗಳನ್ನೆಲ್ಲ ಈಗ ನಿನಗೇ ಅರ್ಪಿಸಿದ್ದೇನೆ. ಓದಿ ಬೆಲೆ ಕಟ್ಟು.....
  • An open letter to Nagathihalli Chandrashekharಇಂಥ ಮಧುರಾತಿ ಮಧುರ ಸಾಲುಗಳಿಂದಲೇ ‘ಪ್ರೇಮಿಗಳ ಪ್ರಿಯಮಿತ್ರ’ ನಾಗತಿಹಳ್ಳಿ ಚಂದ್ರಶೇಖರ್‌ ಅವರಿಗೆ ಪ್ರೀತಿಯ ನಮಸ್ಕಾರ. ಸರ್‌, ವಾರದ ಹಿಂದೆ, ನಿಮ್ಮೂರು ನಾಗತಿಹಳ್ಳಿಯಲ್ಲಿ ‘ವಠಾರ’ದ ಫಂಕ್ಷನ್‌ ಮಾಡಿಸಿದಿರಿ ಸರಿ. ಸರೀನೇ ಸರಿ. ಅಲ್ಲಿ ಭಾಷಣ ಹೊಡೆದಿರಿ,ಅದೂ ಸರಿ. ಅದೇ ಫಂಕ್ಷನ್‌ನಲ್ಲಿ ಉಳಿದೆಲ್ಲರಿಗಿಂತ ನೀವೇ ಜಾಸ್ತಿ ಮಿಂಚಿದ್ದು-ಸರೀನೇ ಸರಿ. ಆದ್ರೆ ಆಮೇಲೆ ಅದೆಲ್ಲಿ ಹೋಗಿಬಿಟ್ರಿ ಸಾರ್‌? ‘ವಠಾರ’ ಸಾವಿರ ಕಂತು ಪೂರೈಸಿದ್ದಕ್ಕೆ ಬೆಚ್ಚನೆಯ ಮುಂದಿಡಬೇಕು ಅಂದ್ಕೊಂಡು ನಿಮ್ಮ ಮೊಬೈಲ್‌ 9845499988 ನಂಬರಿಗೆ ಫೋನ್‌ ಮಾಡಿದರೆ-

    ‘ನೀವು ಕರೆ ಮಾಡುತ್ತಿರುವ ದೂರವಾಣಿ ಸದ್ಯಕ್ಕೆ ಕಾರ್ಯನಿರತವಾಗಿದೆ. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ’ ಅನ್ನೋ ಉತ್ತರ ಬಂತು. ನಿಮ್ಮ ಮನೆಯ ನಂಬರು ತಿರುಗಿಸಿದರೆ -ಎಂಗೇಜೇ ಬರ್ತಾಯಿತ್ತು. ನೀವು ಫೋನ್‌ಗೆ ಸಿಕ್ಕಿದ್ರೆ ಎರಡೇ ನಿಮಿಷದಲ್ಲಿ ಮುಗೀತಿತ್ತು. ಸಿಗಲಿಲ್ಲವಲ್ಲ. ಅದಕ್ಕೇ ಮಾರುದ್ದದ ಪತ್ರ ಓದೋ ಕರ್ಮ ನಿಮ್ಮದಾಗಿದೆ. ಅನುಭವಿಸಿ....

    ಸರ್‌, ನಿಮ್ಗೂ ಗೊತ್ತಿದೆಯಲ್ಲ....? ಗಾಂಧಿನಗರ ಈಗಲೂ ಅಸಹನೆಯಿಂದ ಹೇಳ್ತಾರೆ: ನಾಗ್ತಿಹಳ್ಳಿಗೆ ಜಂಬ ಜಾಸ್ತಿ. ತಿರುಗಾಟದ ಹುಚ್ಚು ಜಾಸ್ತಿ. ಅವ ನಿಜಕ್ಕೂ ತಿರುಗಾಲು ತಿಪ್ಪ ! ಬೆಂಗ್ಳೂರ ಜನ ಮೆಜೆಸ್ಟಿಕ್ಕಿಗೆ ಹೋಗಿ ಬಂದಷ್ಟೇ ಸುಲಭವಾಗಿ ನಾಗ್ತಿಹಳ್ಳಿ ಅಮೆರಿಕಕ್ಕೆ ಹೋಗಿ ಬರ್ತಾರೆ. ಅವರನ್ನ ನಾಗ್ತಿಹಳ್ಳಿ ಚಂದ್ರಶೇಖರ್‌ ಅನ್ನೋದಕ್ಕಿಂತ ಅಮೆರಿಕ ಚಂದ್ರಶೇಖರ್‌ ಅಂತ ಕರೆದರೇ ವಾಸಿ.....’ ಇಂಥ ಚುಚ್ಚು ಮಾತು ಕೇಳಿ ಬೇಸರದಿಂದಲೇ ಕತೆಗಾರ ಮಧ್ಯೆ ಬಂದು ನಿಂತರೆ ಬೆರಗಿನಿಂದಲೇ ಅವರು ಹೇಳ್ತಾರೆ : ‘ನಾಗತಿಹಳ್ಳಿ ಅಂದ್ರೆ ತಮಾಷೆ ಅಲ್ಲಾರೀ. ಅವ್ರು 8ನೇ ಕ್ಲಾಸಲ್ಲಿದ್ದಾಗ್ಲೇ ಕತೆ ಬರೆದಿದ್ದು! ಅದು ಪತ್ರಿಕೆಯಲ್ಲಿ ಪ್ರಿಂಟೂ ಆಗಿತ್ತು ! ಆ ಮೇಲೆ ಮೈಸೂರಲ್ಲಿ ದಿನಗೂಲಿ ಮಾಡ್ಕೊಂಡೇ ಎಂ.ಎ. ಓದಿದ ನಾಗತಿಹಳ್ಳಿ ಒಂದಲ್ಲ, ಎರಡಲ್ಲ ಅನಾಮತ್ತು ಒಂಬತ್ತು ಚಿನ್ನದ ಪದಕ ಪಡೆದರು. ಆಮೇಲೆ ಒಂದರ ಹಿಂದೊಂದು ಕತೆ ಬರೆದರು, ಕಾದಂಬರಿ ಬರೆದರು. ಸಿನಿಮಾಕ್ಕೆ ಅಂದ್ರೆ-ಅವರೇ ಒಂದು ಕತೆಯಾಗಿದ್ದಾರೆ!’. ಸರ್‌, ಬದುಕಿನ ಪ್ರತಿಯಾಂದು .... ಹಂತದಲ್ಲೂ ಹೋರಾಡಿದ : ‘ಗಾಡ್‌ ಮತ್ತು ಫಾದರ್‌’ ಇಬ್ಬರ ಬೆಂಬಲವೂ ಇಲ್ಲದೆ ಗೆದ್ದು ಬಂದ ನಿಮ್ಮ ಬದುಕಿನ ಕಥೆ ಕೇಳಿದಾಗ ಯಾರಿಗೆ ಖುಷಿಯಾಗಲ್ಲ ಹೇಳಿ?

    ನೀವೇ ನಂಬುವ ಹಾಗೆ ನೀವೀಗ ವರ್ಲ್ಡ್‌ ಫೇಮಸ್ಸು. ನಾಗತಿಹಳ್ಳಿ ಅಂದ್ರೆ ಸಿನಿಮಾ, ನಾಗತಿಹಳ್ಳಿಅಂದ್ರೆ ಟೀವಿ ಸೀರಿಯಲ್ಲು, ನಾಗತಿಹಳ್ಳಿ=ಬೆಳ್ಳಿಚುಕ್ಕಿ. ನಾಗತಿಹಳ್ಳಿ ಇರೋ ಜಾಗ -ವಠಾರ... ಈ ವಿಷಯ ಎಲ್ಲರಿಗೂ ಗೊತ್ತು ತಾನೆ? ಬಿಟ್ಹಾಕಿ ಅದನ್ನ. ನಿಮ್ಗೆ ಒಂದು ಐಡೆಂಟಿಟಿ ಸಿಕ್ಕಿದ್ದು ಕತೆಗಾರರಾಗಿ ತಾನೆ? ಅದೇ ಕತೆಯ ಸೆರಗು ಹಿಡಿದು ಕೇಳ್ತಿದ್ದೀನಿ.

    ಹೇಳಿ ಸಾರ್‌, ಕತೆಗಾರ ಆಗೋಕಿಂತ ಮುಂಚೆ ನೀವು ಹರಿಕಥೆ ಮಾಡ್ತಿದ್ರಂತೆ? ಸುಳ್ಳು ಸುಳ್ಳೇ ನಾಮ ಹಾಕ್ಕೊಂಡು, ಬಾಡಿಗೆಯ ಜನಿವಾರವನ್ನೂ ಧರಿಸಿಕೊಂಡು ‘ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ’ ಅಂತ ಹಾಡ್ತಾ ಇದ್ರಂತೆ.ಆಗೆಲ್ಲ ದೇವ್ರು ಕನಸಿಗೆ ಬರ್ತಿದ್ನಾ? ನಿಮ್ಜೊತೆ ಮಾತಾಡ್ತಿದ್ನಾ ? ಕತೆ ಹೇಳ್ತಾ ಇದ್ನಾ? ಅದರ ಹಿಂದೆಯೇ ಮೈಲಿಗಲ್ಲುಗಳಿಗೆಲ್ಲ ಬಣ್ಣ ಬಳಿದು ‘ಹೊಟ್ಟೆಪಾಡು’ ನೋಡಿಕೋತಿದ್ರಲ್ಲ- ಆವಾಗೆಲ್ಲ-ಕಲ್ಲುಗಳೇ ಕತೆ ಹೇಳ್ತಾ ಇದ್ವಾ? ಮುಂದೆ ಮೈಸೂರಲ್ಲಿ ಹಾಲು ಡೇರೀಲಿ ಕೆಲ್ಸ ಮಾಡುವಾಗ- ಹಾಲಿನ ಟ್ಯಾಂಕಲ್ಲಿ ನಾಯಿ ಈಜು ಹೊಡೆದದ್ದು : ಅದೇ ಹಾಲನ್ನ ಮೈಸೂರಿನ ಜನ ನಾಯಿ ಚಪ್ಪರಿಸಿಕೊಂಡು ಕುಡಿದದ್ದು ನೋಡಿದರಲ್ಲ- ಆಗೆಲ್ಲ ಫೈಲ್‌ ಫೈಲ್‌ ಅನ್ನುವಂಥ ಕತೆಗಳು ಸೃಷ್ಟಿಯಾದವಾ? ಈಗ ಹಾಲು ಕುಡಿಯೋವಾಗ ಅದೆಲ್ಲ ನೆನಪಾಗಿ ‘ವ್ಯಾಕ್‌’ ಅನ್ನಂಗೆ ಆಗಲ್ವ?

    ಉಳಿದವರ ಮಾತು ಏನೇ ಇರಲಿ, ನೀವು ಚೆಂದದ ಕತೆಗಾರರು. ಕತೆಯನ್ನ ಪ್ರೀತಿಯ ಹೊಳೆಯನ್ನ ಪ್ರೀತಿಯ ಹೊಳೆಯಲ್ಲೇ ಅದ್ದಿ ತೆಗೆಯುವುದರಲ್ಲಿ ; ಕತೆ ಓದುವವರು -ಓದುತ್ತ ಓದುತ್ತಲೇ ಅಳುವಂತೆ ಮಾಡೋದರಲ್ಲಿ ನೀವು ನಿಸ್ಸೀಮರು. ಒಂದಿಷ್ಟು ಅನುಭವದ ಜತೆಗೆ ಇನ್ನಷ್ಟು ಕಲ್ಪನೆಯ ಮಸಾಲೆ ಬೆರೆತಾಗ ಮಾತ್ರ ಅದೊಂದು ಚೆಂದದ ಕತೆಯಾಗುತ್ತೆ ಅನ್ನೋ ಮಾತಿದೆ. ನಿಮ್ಮ ಎಲ್ಲ ಪ್ರೇಮ ಕತೆಗಳೂ ಒಂದಕ್ಕಿಂತ ಒಂದು ಚೆನ್ನಾಗಿದೆ. ಅಂದರೆ ಅವೆಲ್ಲ ಬಂಡಲ್‌ ಸ್ಟೋರೀಸಾ? ಹಿಡಿ ಕಲ್ಪನೆ, ಅರೆಪಾವು ಸುಳ್ಳು, ಚಿಟಿಕೆ ಸತ್ಯವನ್ನು ಸೇರಿಸಿ ನೀವು ಕತೆ ಬರೆದುಬಿಟ್ರಾ? ಇಲ್ಲ ಅನ್ನೋದಾದ್ರೆ, ನಿಮ್ಮ ಬಹುಪಾಲು ಕತೆಗಳಲ್ಲಿ ಡಿಸಪಾಯಿಂಟ್‌ಮೆಂಟ್‌ ಇರ್ತದಲ್ಲ- ಅಷ್ಟೆಲ್ಲ ಕಥೆ ನಿಮ್ಗೆ ಹೇಗೆ ಸಿಕ್ತು? ಅದೆಲ್ಲ ಕಥೇನೋ ಅಥವಾ ಸ್ವಂತ ಅನುಭವಾನೋ?

    ಅಲ್ಲ ಸಾರ್‌, ನಾವೂ ನೋಡ್ತಾನೇ ಇದ್ದೀವಿ. ದಶಕದ ಹಿಂದೆ ನೀವು ‘ನನ್ನ ಪ್ರೀತಿಯ ಹುಡುಗಿ’ಗೆ ಅಂತ ಕತೆ ಬರೆದ್ರಿ. ಕೆಲವೇ ದಿನಗಳಲ್ಲಿ ಥೇಟು ಹುಡುಗಿಯ ಥರವೇ ‘ನನ್ನ ಪ್ರೀತಿಯ ಹುಡುಗನಿಗೆ’ ಅಂತ ಇನ್ನೊಂದು ಕತೆ ಹೊಸೆದ್ರಿ. ಹುಡುಗಿಯಾಗಿ ಬರೀವಾಗ ಕಷ್ಟ ಆಗಲಿಲ್ವ? ಆ ಮೇಲೆ ‘ನನ್ನ ಪ್ರೀತಿಯ ಹುಡುಗಿ’ ಸಿನಿಮಾ ತೆಗೆದು, ಅದರ ಹಿಂದೇನೇ ಅದೇ ಪ್ರೀತಿಯ ಹುಡುಗಿಗೆ ಪತ್ರ ಬರೀತಾನೇ ಇದೀರಿ. ಹೇಳಿ ಸಾರ್‌. ನಿಮ್ಮ ಹುಡುಗಿ ನಿಜಕ್ಕೂ ಇದ್ದಾಳಾ? ಇದ್ರೆ ಹೇಗಿದ್ದಾಳೆ? ಈ ಭೂಮಿ ಮೇಲೇ ಇದ್ದಾಳಾ? ನೀವು ನಾಲ್ಕು ವರ್ಷದಿಂದ ಬರೆದ್ರೂ ಅವ್ರು ಉತ್ತರ ಬರೆದಿಲ್ಲ ಅಂದ್ರೆ- ಅವಳಿಗೆ ಓದಕ್ಕೇ ಬರಲ್ವ ? ನಿಮ್ಮ ಎಲ್ಲ ಪುಸ್ತಕದಲ್ಲೂ ಹುಡುಗಿಯ ಒಂದು ಕಣ್ಣು ತೋರ್ತೀರಲ್ಲ. ಆವಳಿಗೆ ಒಕ್ಕಣ್ಣಾ? ಅಥವಾ ನೀವು ಕಲ್ಪಿಸಿಕೊಂಡಿರೋ ಆ ಪುಣ್ಯಾತ್ಗಿತ್ತಿ ಇನ್ನೂ ಹುಟ್ಟೇ ಇಲ್ಲ?

    ಸರ್‌, ನಾವೆಲ್ಲ ಏನ್ಮಾಡ್ತೀವಿ ಗೊತ್ತ? ಸಣ್ಣ ಖುಷಿ ಆದ್ರೆ- ದೇವರಿಗೆ ಕೈ ಮುಗೀತೀವಿ. ದೊಡ್ಡ ಗೆಲುವು ಸಿಕ್ಕಿದ್ರೆ- ಅದೇ ದೇವರ ಮುಂದೆ ನಿಂತು ಎಲ್ಲ ನಿನ್ನ ದಯೆ ಅಂತೀವಿ. ಆಕಸ್ಮಾತ್‌ ಚಿಕ್ಕ ತೊಂದರೆ ಎದುರಾದ್ರೂ‘ದೇವ್ರೇ ಕಾಪಾಡು ತಂದೆ’ ಅಂತ ಗೋಗರೀತೀವಿ. ನೀವು, ಶುದ್ಧ ನಾಸ್ತಿಕರು ತಾನೆ? ನಿಮ್ಗೆ ಖುಷಿಯಾದಾಗ , ಸಂಕಟ ಕಾಲು ಎಳೆದಾಗ, ಅಪಮಾನವೇ ಆಗಿಬಿಟ್ಟಾಗ ದೇವರು ನೆನಪಾಗಲ್ವ ? ಹರೆಯದ ಹುಮ್ಮಸ್ಸಲ್ಲಿ ಅಮಾವಸ್ಯೆಯ ದಿನ, ಅದೂ ಏನು? ರಾಹು ಕಾಲದಲ್ಲಿ ಮದುವೆ ಆದಿರಲ್ಲ-ಅದನ್ನ ನೆನೆದು ನಗುಬರಲ್ವ? ಈ ಸಿನಿಮಾ/ಸೀರಿಯಲ್‌ಗಳ ಚಕ್ರಸುಳಿಗೆ ಸಿಕ್ಕಿ ನನ್ನೊಳಗಿನ ಕತೆಗಾರ ಕಳೆದುಹೋದ ಅನಿಸಲ್ವ? ಹೊಸ ನಾಯಕಿಯರ ಸ್ಕಿೃೕನ್‌ ಟೆಸ್ಟ್‌ ಮಾಡೋವಾಗ -ಕಳೆದು ಹೋದ ಹುಡುಗಿ ನೆನಪಾಗಲ್ವ? ನಿಮ್ಮ-‘ಯಜಮಾನ’ರಾದ ಸಾಫ್ಟ್‌ವೇರ್‌ ಶೋಭಕ್ಕಂಗೆ ದುಪ್ಪಟ್ಟು ಸಂಬಳ ಬರ್ತದಲ್ಲ- ಆಗೆಲ್ಲ ಸಣ್ಣ ಅಸೂಯೆ ಆಗಲ್ವ? ಕತೆ-ಚಿತ್ರಕಥೆಗೆ 10-12ಬಾರಿ ಪ್ರಶಸ್ತಿ ತಗೊಂಡಿರೋ ನೀವೇ -‘ನನ್ನ ಪ್ರೀತಿಯ ಹುಡುಗಿ’ ಯಲ್ಲಿ ನಮ್ತಂದೆ ಟೆಲಿಫೋನ್‌, ಇ-ಮೇಲ್‌ ಎಲ್ಲ ಕಿತ್ಕೊಂಡಿದ್ದಾರೆ ಅಂತ ನಾಯಕಿಯಿಂದ ಹೇಳಿಸಿದ್ರಲ್ಲ- ಇಮೇಲ್‌ ಐಡಿನ ಕಿತ್ಕೊಳ್ಳಕ್ಕಾಗುತ್ತಾ... ಹೇಳಿ ಸಾರ್‌?

    ಅಲ್ಲ, ಯಾವಾಗ್ಲೂ ಇಷ್ಟಗಲ ನಗುವ ನೀವು ಸಣ್ಣ ಟೀಕೆಗೂ ಸಿಟ್ಟು ಮಾಡಿಕೊಳ್ತೀರಂತೆ? ಉದಯ ಜಾದೂಗಾರ್‌ ಅದೊಮ್ಮೆ ‘ಪ್ಯಾರಿಸ್‌ ಪ್ರಣಯ’ ಚೆನ್ನಾಗಿಲ್ಲ ಅಂದದ್ದಕ್ಕೆ-‘ಅಟ್ಟೆ ಮೊಟ್ಟೆ ನಾಗರಮೊಟ್ಟೆ ಟೀಕಿಸೋದಾದ್ರೆ ಮಾತಾಡ್‌ ಬೇಡ ಠೂ....’ ಅಂದೇ ಬಿಟ್ರಂತೆ! ಮನೇಲಿ ಮಾತ್ರ ಶೋಭಕ್ಕನ ಹಿಂದೆ ಹಿಂದೇನೇ ಓಡಾತ್ತ- ಲತೆಗಳು ಬಳುಕುತಿವೆ ನಿನ್ನಂತೆ ಹಾಡಿ, ಸುಮಗಳು ನಲಿಯುತಿವೆ ನಿನ್ನನ್ನು ನೋಡಿ....’ ಎಂದೆಲ್ಲ ಹೇಳಿ ಪೂಸಿ ಹೊಡೆದು ಒಂದೆರಡ್ಮೂರ್ನಾಲ್ಕ್‌ಐದಾರೇಳೆಂಟೊಬತ್‌.. ಮುತ್ತು ಕೊಟ್ಟು ಖುಷಿಯಾಗ್ತೀರಂತೆ..... ಅರೆ, ಒಳಗೊಳಗೇ ನಗ್ತಾ ಇದೀರಲ್ಲ , ಇದೆಲ್ಲ ನಿಜವಾ ಸಾರ್‌? ಖುಲ್ಲಾಂ ಖುಲ್ಲ ಹೇಳಿಬಿಡ್ತೀನಿ. ‘ಪ್ಯಾರಿಸ್‌ ಪ್ರಣಯ’, ಸೂಪರ್‌ ಸ್ಟಾರ್‌, ವಠಾರ .....ಚೂರೂ ಚೆನ್ನಾಗಿರಲಿಲ್ಲ. ಇಷ್ಟ ಆಗ್ಲೇ ಇಲ್ಲ. ಅವನ್ನ ನೋಡಿದಾಗಿಂದ ಅರೆ, ನಮ್ಮ ನಾಗತಿಹಳ್ಳಿ ಕಳೆದುಹೋದ್ರಾ ಅನ್ನೋ ಆತಂಕ ಶುರುವಾಗಾದೆ. ಉಹುಂ, ನೀವು ಸೋಲುವುದು ಬೇಡ. ಕಳೆದು ಹೋಗೋದೂ ಬೇಡ. ಮುಂದೆ ನಿಮಗೆ ಒಳ್ಳೆಯದಾಗಲಿ. ನಿಮ್ಮ ಹುಡುಗಿ ನಿಮಗೇ ಸಿಗಲಿ. ಅವಳ ಜತೆಗೇ ಒಂದು ಕಥೆ ಸಿಗಲಿ. ನಿಮ್ಮ ಬೆಳ್ಳಿತೆರೆಯಲ್ಲಿ ಹಿಮಾಲಯದೆತ್ತರ ತಲುಪಿದ ಮೇಲೂ ನಿಮ್ಮ ಅಕ್ಷರಪ್ರೀತಿ ಸದಾ ಜಾರಿಯಲ್ಲಿರಲಿ.

    ನೆನಪಿಟ್ಟುಕೊಳ್ಳಿ: ಚೆಂದದ ಸಿನಿಮಾ ಮಾಡದಿದ್ರೆ ನಿಮ್ಜೊತೆ ಠೂ,ಠೂ,ಠೂ.

    ಪ್ರೀತಿ, ನಮಸ್ತೆ , ಶುಭಾಶಯ ಮತ್ತು ಧನ್ಯವಾದ.

    - ಎ.ಆರ್‌.ಮಣಿಕಾಂತ್‌

    (ಸ್ನೇಹಸೇತು : ವಿಜಯ ಕರ್ನಾಟಕ)


    ಪೂರಕ ಓದಿಗೆ-
    ಸಂಸ್ಕೃತಿ ಹಬ್ಬ-2004 : ನಾಗತಿಹಳ್ಳಿ ‘ಋಣಪ್ರಜ್ಞೆ’ಯ ಅಭಿವ್ಯಕ್ತಿ


    ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X