ಎಲ್
- ಜಾನಕಿ
ಅವನ ಹೆಸರು . ಅವನೇ ರಚಿಸಿದ ಪುಟ್ಟ ವಿಸಿಟಿಂಗ್ ಕಾರ್ಡಿನಲ್ಲಿರುವುದು ಅದೊಂದೇ ಅಕ್ಷರ. ಅದರಲ್ಲಿ ವಿಳಾಸ ಕೂಡ ಇಲ್ಲ. ಒಂದು ಈಮೇಲ್ ವಿಳಾಸ ಮಾತ್ರ ಇದೆ. ಕೇಳಿದರೆ ನನ್ನನ್ನು ಯಾರೂ ಸಂಪರ್ಕಿಸುವುದು ಇಷ್ಟವಿಲ್ಲ ಅನ್ನುತ್ತಾನೆ. ಅವನಾಗಿಯೂ ಯಾರನ್ನೂ ಸಂಪರ್ಕಿಸುವುದೂ ಇಲ್ಲ. ನವ್ಯದ ಆರಂಭದ ದಿನಗಳ ಉಡಾಫೆಯ ಕವಿಯಂತೆ ಕಾಣುವ ನೇಪಾಳಿ ಭಾಷೆಯಲ್ಲೇಕೆ ಬರೆಯುವುದಿಲ್ಲ.
‘ಉಪಯೋಗ ಇಲ್ಲ. ನನ್ನ ಭಾಷೆ ಸತ್ತಿದೆ. ನನ್ನ ಭಾಷೆಗೆ ನಾನು ಹೇಳಬೇಕಾದ್ದನ್ನು ದಾಟಿಸುವ ಶಕ್ತಿಯಿಲ್ಲ. ನಾನು ಹೇಳಬೇಕಾದ್ದನ್ನು ನನ್ನ ಭಾಷೆ ಬಲ್ಲವರಿಗೆ ಹೇಳುವ ಅಗತ್ಯವೂ ನನಗಿಲ್ಲ. ನನ್ನ ಭಾಷೆಯ ಮಂದಿ ನನ್ನ ಭಾಷೆಯನ್ನು ಪ್ರೀತಿಸುವುದನ್ನು ಯಾವತ್ತೋ ಮರೆತಿದ್ದಾರೆ. ಅವರಿಗೆ ಇಂಗ್ಲಿಷ್ ಬೇಕು’.
ಯಾರಿಗೂ ಭಾಷೆ ಬೇಕಾಗಿರುವುದಿಲ್ಲ, ಬೇಕಾಗಿರುವುದು ಕಂಟೆಂಟ್. ಹೇಳಬೇಕಾದ ವಿಷಯ ಚೆನ್ನಾಗಿದ್ದಾಗ ಯಾವ ಭಾಷೆಯಲ್ಲಿ ಹೇಳಿದರೂ ಓದುತ್ತಾರೆ ಎಂದರೆ ಸಿಟ್ಟಾಗುತ್ತಾನೆ.
‘ನಿಮಗೆಲ್ಲೋ ತಲೆಕೆಟ್ಟಿದೆ. ಕಂಟೆಂಟ್ ಯಾರಿಗೆ ಬೇಕಾಗಿದೆ. ಎಲ್ಲರಿಗೂ ಬೇಕಾಗಿರುವುದು ಸಂವಹನಕ್ಕೊಂದು ಭಾಷೆ ಅಂದುಕೊಂಡರೆ ಅದೂ ತಪ್ಪು. ಎಲ್ಲರೂ ಈಗ ಮಾರುಹೋಗಿರುವುದು ಅಬ್ಬರಕ್ಕೆ, ಶಬ್ದಕ್ಕೆ. ಈಗಿನ ಹುಡುಗ ಹುಡುಗಿಯರು ಎಷ್ಟು ದೊಡ್ಡ ದನಿಯಲ್ಲಿ ಮಾತಾಡುತ್ತಾರೆ ಕೇಳಿದ್ದೀರಾ? ಯಾರಿಗಾದರೂ ಪಿಸುಮಾತಿನ ಶಕ್ತಿ ಏನು ಅಂತ ಗೊತ್ತಿದೆಯಾ? ಪ್ರೇಯಸಿಯ ಜೊತೆಗೆ ಕೂಡ ದೊಡ್ಡ ದನಿಯಲ್ಲಿ ಹರಟುತ್ತಿರುತ್ತಾರೆ. ಶಬ್ದದ ಸಾಮ್ರಾಜ್ಯದಲ್ಲಿ ನಾದಕ್ಕೆ ನಿನಾದಕ್ಕೆ ಜಾಗವೇ ಇಲ್ಲ. ಅಂಥವರಿಗೋಸ್ಕರ ಯಾಕೆ ಬರೆಯಲಿ?’
ಬೆಚ್ಚಿಬೀಳಿಸುತ್ತಾನೆ. ಕವಿ ಯಾಕೆ ಬರೆಯಲಿ ಅಂತ ಸುಮ್ಮನಾಗುವುದು ಅಪಾಯಕಾರಿ. ಅದರಲ್ಲೂ ಒಳ್ಳೆಯ ಕವಿ ಯಾರಿಗೋಸ್ಕರ ಬರೆಯಲಿ ಅನ್ನುವ ನಿಲುವು ತಾಳಿದಾಗ ಒಂದು ತಲೆಮಾರು ತುಂಬ ಮೌಲಿಕವಾದದ್ದನ್ನು ಕಳೆದುಕೊಳ್ಳುತ್ತದೆ. ತುಂಬ ಸೂಕ್ಷ್ಮವಾದದ್ದನ್ನು ಕಳೆದುಕೊಳ್ಳುತ್ತದೆ.
ಅಷ್ಟಕ್ಕೂ ಗೆ ತನ್ನ ಭಾಷೆಯ ಮೇಲೇಕೆ ಸಿಟ್ಟು ? ಆ ಭಾಷೆ ಜಡ್ಡುಗಟ್ಟಿದೆಯಾ ? ಅದರ ಮೂಲಕ ಏನನ್ನೂ ಹೇಳೋದಕ್ಕೆ ಸಾಧ್ಯವಿಲ್ಲ ಅನ್ನಿಸಿದೆಯಾ?
‘ಎರಡೂ ಆಗಿಲ್ಲ. ಒಂದು ಭಾಷೆ ಹೀಗೆ ಆಗಾಗ ತನ್ನ ಘನತೆಯನ್ನೂ ನಂಬಿಕೆಯನ್ನೂ ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗೆ ಘನತೆ ಕಳಕೊಂಡ ಭಾಷೆಯಲ್ಲಿ ಎಷ್ಟೇ ಮೌಲಿಕವಾದ ನಿತ್ಯಸತ್ಯಗಳನ್ನು ಹೇಳಹೊರಟರೂ ಅದು ಅಷ್ಟು ಘನವಾಗಿ ಉಳಿಯುವುದಿಲ್ಲ. ಅದು ತುಂಬ ನೀರಸವೂ ಸರಳವೂ ಆಗಿ ಕಾಣಿಸುತ್ತದೆ. ಹೀಗೆ ಸರಳವಾಗುವ, ಸಸಾರವಾಗುವ ಮಾತು ಬಹಳ ಬೇಗ ಬಿದ್ದು ಹೋಗುತ್ತದೆ. ನಮ್ಮ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗಿ ಮತ್ತೊಂದು ಭಾಷೆಯ ಮೇಲಿನ ಮೋಹ ಅತಿಯಾದಾಗ ಹೀಗಾಗುತ್ತದೆ. ಆಗ ಆ ಭಾಷೆಯನ್ನೇ ಗೊಡ್ಡು ಅಂತ ತೀರ್ಮಾನಿಸಿ ಬಿಟ್ಟುಬಿಡುವುದು ಒಳ್ಳೆಯದು’.
ಅವನ ಅಳಲುಗಳು ಒಂದೆರಡಲ್ಲ. ಅವನ ಪ್ರಕಾರ ಅವನು ಬರೆಯುವುದು ತನ್ನ ಕಾಲದ ಯುವಕರಿಗೋಸ್ಕರ. ಆದರೆ ಯುವಕರು ಅದನ್ನೆಲ್ಲ ಓದುವುದಿಲ್ಲ. ತರುಣ ತರುಣಿಯರಿಗೆ ಅರ್ಥವಾಗಲಿ ಎಂದು ಬರೆದದ್ದು ಅವರನ್ನು ತಲುಪುವುದೇ ಇಲ್ಲ. ತುಂಬ ವಯಸ್ಸಾಗಿರುವ ಮುದಿ ವಿಮರ್ಶಕರು ಅವನ್ನೆಲ್ಲ ಓದಿ ತಮ್ಮ ನಿರ್ಣಯ ಮಂಡಿಸುತ್ತಾರೆ. ಕವಿತೆ ಬರೆಯುವುದು ಓದಿಗಾಗಿಯೇ ಹೊರತು ವಿಮರ್ಶೆಗಾಗಿ ಅಲ್ಲ. ವಿಮರ್ಶಕರಿಂದಾಗಿ ಕವಿತೆ ಅಮರವಾಗುತ್ತದೆ ಎಂದು ಭಾವಿಸುವವರಿದ್ದಾರೆ. ಆದರೆ ಕವಿತೆಗೆ ಗೋರಿ ಕಟ್ಟುವವರೇ ವಿಮರ್ಶಕರು’.
ಇಂಥ ಪ್ರಖರ ಯೋಚನೆಯ ಕವಿತೆ ಬಿಟ್ಟು ಬೇರೆ ಏನನ್ನೂ ಬರೆಯುವುದಿಲ್ಲ. ಸಾಹಿತ್ಯ ಅಂದರೆ ಕವಿತೆ ಅನ್ನುವುದು ಅವನ ನಂಬಿಕೆ. ಹೇಳಬೇಕಾದದ್ದನ್ನು ಉದ್ದುದ್ದಕ್ಕೆ ಗದ್ಯದಲ್ಲಿ ಹೇಳುವುದಕ್ಕೆ ಕವಿತ್ವ ಯಾಕೆ ಬೇಕು? ಮೂರು ಪದಗಳಲ್ಲಿ ನಿನಗನ್ನಿಸಿದ್ದನ್ನೆಲ್ಲ ಹೇಳಿಬಿಡು. ಅದು ಮುನ್ನೂರು ಪದಗಳಲ್ಲಿ ಕೇಳುವವನನ್ನು ತಲುಪಲಿ. ಅರ್ಥವಾಗುವಾಗ ವಿವರಗಳು ತುಂಬಿಕೊಳ್ಳಲಿ. ಅದು ಬಿಟ್ಟು ಹೇಳುವಾಗಲೇ ವಿವರಗಳನ್ನು ಕೊಟ್ಟರೆ ಕೇಳುವವನ ಪ್ರತಿಭೆಯನ್ನು ನೀನು ನಿರ್ಲಕ್ಷ ್ಯ ಮಾಡಿದಂತಾಗುತ್ತದೆ ತಿಳಕೋ’ ಎಂದು ಸಿಟ್ಟಾಗುತ್ತಾನೆ .
ಅಷ್ಟು ಸಂಗ್ರಹವಾಗಿ ಬರೆಯಬಲ್ಲ ಕೂಡ.‘ಸಾವು ನಾಮಪದ, ಬದುಕು ಕ್ರಿಯಾಪದ. ಬಿಡುವಿದ್ದರೆ ಸಾವು, ಬಿಡುವಿಲ್ಲದ ಬದುಕು. ಸಾವು ಬಿಡು-ಗಡೆ’ ಎನ್ನುವುದು ಅವನ ಮತ್ತೊಂದು ಕವಿತೆ. ಅದು ನ ಮಾತುಗಳ ಹಾಗೆ ವಿಕ್ಷಿಪ್ತವಾಗುತ್ತಾ ಸಾಗುತ್ತದೆ.
ನೇಪಾಳಿಯಲ್ಲಿ ಬರೆದರೆ ಅವನ ಕವಿತೆಗಳು ಅಚ್ಚಾಗುತ್ತಿದ್ದವಾ?
‘ಗೊತ್ತಿಲ್ಲ. ಅಚ್ಚಾಗುವುದಕ್ಕಿಂತ ಓದುವುದು ಮುಖ್ಯ. ಓದಿಸಿಕೊಳ್ಳುವವರು ಇಲ್ಲದ ಮೇಲೆ ಅಚ್ಚಾದರೆಷ್ಟು? ಆಗದಿದ್ದರೆಷ್ಟು? ಯಾರೂ ಓದುವುದು ಬೇಡ ಎಂದು ಬರೆಯುವವನು ಕವಿಯಲ್ಲ , ವ್ಯಾಮೋಹಿ. ಎಲ್ಲರೂ ಓದಲಿ ಎಂದು ಬರೆಯುವವನೂ ಕವಿಯಲ್ಲ , ವ್ಯಾಮೋಹಿ. ಈ ಎರಡೂ ವ್ಯಾಮೋಹವನ್ನು ಮೀರಿದಾಗಲೇ ನಾನು ಹುಟ್ಟುತ್ತೇನೆ, ಬದುಕುತ್ತೇನೆ ಮತ್ತು .....
ಸಾ ಯು ವು ದಿ ಲ್ಲ !
. ಎಲ್ಲೆಲ್ಲಿಯೂ . ಎಲ್ಲೆಲ್ಲೆಲ್ಲೆಲ್ಲೆಲ್!
(ಸ್ನೇಹಸೇತು : ಹಾಯ್ ಬೆಂಗಳೂರ್!)












Click it and Unblock the Notifications