• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವೇಕೆ ಪ್ರೀತಿಗಾಗಿ ಸಾಯುತ್ತೇವೆ?

By Staff
|
  • ಸತ್ಯವ್ರತ ಹೊಸಬೆಟ್ಟು

ನಾವು ಸಿನಿಮಾ ನೋಡುವುದು ಯಾಕೆ?

ಮನರಂಜನೆಗೆ, ಹೊತ್ತು ಕಳೆಯುವುದಕ್ಕೆ, ಕಲಾಪ್ರೀತಿಗೆ, ಸಿನಿಮಾ ಒಂದು ಅದ್ಭುತ ಮಾಧ್ಯಮ ಎನ್ನುವ ಕಾರಣಕ್ಕೆ...

ಎಲ್ಲವೂ ಸುಳ್ಳು. ಅದ್ಯಾವುದೂ ಕಾರಣಗಳೇ ಅಲ್ಲ. ಹದಿಹರೆಯದ ಹುಡುಗರಿಂದ ಹಿಡಿದು ವಯಸ್ಸು ಮಾಗಿಸಿದ ಪ್ರಬುದ್ಧರ ತನಕ ಎಲ್ಲರೂ ಚಿತ್ರಮಂದಿರಕ್ಕೆ ಹೋಗುವುದು;

ಪ್ರೀತಿಸುವುದನ್ನು ಕಲಿಯುವುದಕ್ಕೆ.

ಇದು ನಮ್ಮ ಊಹೆಯಲ್ಲ, ನಮ್ಮ ತೀರ್ಮಾನವೂ ಅಲ್ಲ. ಯುರೋಪು ರಾಷ್ಟ್ರಗಳಲ್ಲಿ ನಡೆದ ಒಂದು ಸಮೀಕ್ಷೆಯಿಂದ ಹೊರಬಿದ್ದ ಸತ್ಯ. ನೀವು ಸಮೀಕ್ಷೆಗಳನ್ನು ನಂಬುತ್ತೀರಾದರೆ ಇದನ್ನೂ ನಂಬಬೇಕು.

ಅಂತಿಮವಾಗಿ ಸಿನಿಮಾ ಕಲಿಸುವುದು ಹೇಗೆ ಪ್ರೀತಿಸಬೇಕು ಅನ್ನುವುದನ್ನು. ನಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದನ್ನು. ನಾನು ಪ್ರೀತಿಸಿದ ಹುಡುಗಿಯನ್ನು ನಾನು ಹೇಗೆ ಕೇರ್‌ ಮಾಡಬೇಕು, ಅವಳನ್ನು ಹೇಗೆ ಮುಚ್ಚಟೆಯಾಗಿ ನೋಡಿಕೊಳ್ಳಬೇಕು ಅನ್ನುವುದನ್ನು ಕಲಿಸುವ ವಿಶ್ವವಿದ್ಯಾಲಯ ಈ ಜಗತ್ತಿನಲ್ಲೇ ಇಲ್ಲ. ಅದನ್ನೆಲ್ಲ ಯಾರೂ ಹೇಳಿಕೊಡುವುದೂ ಇಲ್ಲ. ಎಲ್ಲರೂ ಗುಟ್ಟಾಗಿ ಪ್ರೀತಿಸುತ್ತಾರೆ, ಬಹಿರಂಗವಾಗಿ ಮದುವೆಯಾಗುತ್ತಾರೆ. ಮದುವೆಯಾದ ನಂತರ ಗಂಡ-ಹೆಂಡಿರ ಸಂಬಂಧ ಹೇಗಿರುತ್ತೆ ಅನ್ನುವುದು ಜಗತ್ತಿಗೇ ಗೊತ್ತು. ಆದರೆ ಪ್ರೇಮಿಸುವುದು ಹೇಗೆ? ಅದನ್ನು ಯಾರು ಹೇಳುತ್ತಾರೆ.

ಸಿನಿಮಾಗಳು ಹೇಳುತ್ತವೆ, ಕಾದಂಬರಿಗಳು ಹೇಳುತ್ತವೆ ಎಂಬ ಕಾರಣಕ್ಕೇ ಅವು ಜನಪ್ರಿಯವಾಗಿವೆ. ಟೈಟಾನಿಕ್‌ ಚಿತ್ರವನ್ನು ನಾವು ನೋಡಿದ್ದು ಅವರಿಬ್ಬರ ಪ್ರೇಮದ ತೀವ್ರತೆಗೋಸ್ಕರವೇ ಹೊರತು, ಹಡಗು ಮುಳುಗಿದ ದುರಂತಕ್ಕೋಸ್ಕರ ಅಲ್ಲ. ಹಡಗು ಮುಳುಗಿದ್ದನ್ನು ಪತ್ರಿಕೆಯಲ್ಲಿ ಓದಿ ತಿಳಿಯಬಹುದು. ಆದರೆ ಮುಳುಗುತ್ತಿರುವ ಹಡಗಿನಲ್ಲಿ ಅವರಿಬ್ಬರೂ ಹೇಗೆ ಪ್ರೀತಿ ಮಾಡಿದರು ಅನ್ನುವುದನ್ನು ಯಾರೂ ಹೇಳುವುದಿಲ್ಲ. ಈ ಜಗತ್ತೇ ಒಂದು ಸಾಗರ, ಈ ಬದುಕೇ ಒಂದು ಟೈಟಾನಿಕ್‌. ಇದು ಮುಳುಗಿಹೋಗುವ ಮುನ್ನ ಹೇಗಯ್ಯಾ ಪ್ರೀತಿ ಮಾಡಲಿ.. ಹೇಳಿ ಕೊಡು ಬಾ..

ಹೇಳಿಕೊಟ್ಟಿದೆ ಸಿನಿಮಾ.

ಹಾಗಿದ್ದರೆ ಪ್ರೀತಿ ಏನು? ಅದೊಂದು ಕಲೆಯಾ? ಕಲೆಯಾದರೆ ಅದನ್ನು ತಿಳುವಳಿಕೆ ಮತ್ತು ಸ್ವಪ್ರಯತ್ನದಿಂದ ಮೈಗೂಡಿಸಿಕೊಳ್ಳಬೇಕಾ? ಅಥವಾ ಅದೊಂದು ಆಪ್ತ ಸಂವೇದನೆ ಮಾತ್ರವಾ? ಹಾಗೊಂದು ವೇಳೆ ಅದೊಂದು ಆಪ್ತ ಸಂವೇದನೆಯಷ್ಟೇ ಆಗಿದ್ದರೆ ಅದು ಸಂಭವಿಸುವುದು ಕೇವಲ ಮ್ಯಾಟರ್‌ ಆಫ್‌ ಚಾನ್ಸ್‌ ಹೌದಾ? ಅದೃಷ್ಟವಂತರು ಮಾತ್ರ ಪ್ರೀತಿಯಲ್ಲಿ ಬೀಳುತ್ತಾರಾ? ಹಾಗಿದ್ದರೆ ಬಹುತೇಕ ಮಂದಿ ದುರದೃಷ್ಟವಂತರಾ?

ಪ್ರೀತಿಸುವ ಹಂತದಲ್ಲಿ ಎಲ್ಲರೂ ಅದೊಂದು ಕಲೆ ಎಂದೇ ನಂಬುತ್ತಾರೆ. ಪ್ರೀತಿ ಮಾಡೋದನ್ನು ಕಲೀಬೇಕು ಅಂತ ಒದ್ದಾಡುತ್ತಾರೆ. ಬೇರೆಯವರ ಸಲಹೆ ತೆಗೆದುಕೊಳ್ಳುತ್ತಾರೆ. ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ, ಆಕೆಯನ್ನು ಹೇಗೆ ಅಪ್ರೋಚ್‌ ಮಾಡಬೇಕು ಎಂದು ಸಲಹೆ ಕೇಳುತ್ತಾರೆ. ಸಲಹೆ ಸಿಗುವುದಿಲ್ಲ. ಗಂಟೆಗಟ್ಟಲೆ ಪಾರ್ಕಿನಲ್ಲಿ ಅವನೂ ಅವಳೂ ಕೂತು ಏನು ಮಾತಾಡುತ್ತಾರೆ ಅನ್ನುವುದು ಹೊರಗಿನಿಂದ ನೋಡುತ್ತಾ ನಿಂತ ಮುಗ್ಧ ಮಾನವನಿಗೆ ಗೊತ್ತಾಗುವುದೇ ಇಲ್ಲ. ಹಾಗಂತ ಹಾಗೆ ಮಾತಾಡಿದ ಹುಡುಗನನ್ನು ಕೇಳಿನೋಡಿ. ಅವನು ಏನೂ ಹೇಳುವುದಿಲ್ಲ.

ಆಗ ಪ್ರೀತಿಸುವುದನ್ನು ಹೇಗಾದರೂ ಕಲಿಯಬೇಕು ಅನ್ನಿಸುತ್ತದೆ. ಪ್ರೇಮಗೀತೆ ಕೇಳುತ್ತೇವೆ, ಸಿನಿಮಾ ನೋಡುತ್ತೇವೆ, ಪ್ರೇಮಕತೆ ಓದುತ್ತೇವೆ. ಪ್ರೀತಿಸುವುದನ್ನು ಕಲಿಯುವುದಕ್ಕೆ ಏನೇನು ಸಾಧ್ಯವೋ ಅದನ್ನೆಲ್ಲ ಮಾಡುತ್ತೇವೆ.

ಪ್ರೀತಿಯ ಸಮಸ್ಯೆಗಳು ಅನೇಕ. ತಾನು ಪ್ರೀತಿಸುತ್ತಿಲ್ಲವೋ ಅಥವಾ ಪ್ರೀತಿಸಲ್ಪಡುತ್ತಿಲ್ಲವೋ ಅನ್ನುವುದು ಅನೇಕರಿಗೆ ಗೊತ್ತಾಗುವುದಕ್ಕೇ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ತನಗೆ ಪ್ರೀತಿಸುವ ಶಕ್ತಿಯೇ ಇಲ್ಲವೇನೋ ಅಂತಲೂ ಅನೇಕರಿಗೆ ಆಗಾಗ್ಗೆ ಅನಿಸುವುದುಂಟು. ಪ್ರೀತಿಪಾತ್ರನಾಗುವುದು ಹೇಗೆ ಎನ್ನುವುದು ಎಲ್ಲ ಗಂಡಸಿನ ಸಮಸ್ಯೆ.

ಈ ಸಮಸ್ಯೆಗೆ ಗಂಡಸು ಕಂಡುಕೊಂಡಿರುವ ಪರಿಹಾರವೆಂದರೆ ಯಶಸ್ಸಿನ ಮೆಟ್ಟಿಲೇರುವುದು, ಎತ್ತರೆತ್ತರಕ್ಕೆ ಏರುವುದು, ಶ್ರೀಮಂತನಾಗುವುದು. ಹೆಣ್ಣು ಕಂಡುಕೊಂಡಿರುವ ಮಾರ್ಗವೆಂದರೆ ಸುಂದರಿಯೂ ಆಕರ್ಷಕಳೂ ಆಗುವುದು. ಇತ್ತಿತ್ತಲಾಗಿ ಅಂತಸ್ತುಗಳ ಕಲ್ಪನೆ ಬದಲಾಗುತ್ತಿದ್ದಂತೆ ಸಾಮಾಜಿಕವಾಗಿ ತುಂಬ ರಿಫೈನ್ಡ್‌ ಆಗಿ ವರ್ತಿಸುವ ಮೂಲಕ ಆಕರ್ಷಿಸುವ ಪ್ರಯತ್ನಗಳು ಶುರುವಾಗಿವೆ. ತುಂಬ ಸೊಗಸಾಗಿ ಮಾತಾಡುವ ಮೂಲಕ, ನೆರವಾಗುವ ಮೂಲಕ, ವಿನಯದಿಂದ, ಘನತೆಯಿಂದ ಪರಸ್ಪರರು ಆಕರ್ಷಿಸಲು ಆರಂಭಿಸಿದ್ದಾರೆ.

ಅಂದರೆ ವ್ಯಕ್ತಿತ್ವದ ಒಳ್ಳೆಯ ಗುಣಗಳನ್ನು ಬಿಟ್ಟು ಪ್ರೀತಿ ಬಾಳಲಾರದು. ಅದು ನಂಬಿರುವುದು ಕೇವಲ ಸಂಪತ್ತು, ಘನತೆ, ಸದ್ಗುಣ ಮತ್ತು ಸಚ್ಚಾರಿತ್ರಗಳನ್ನು ಅಂದಹಾಗಾಯಿತು. ಜೊತೆಗೊಂದಷ್ಟು ಸೌಂದರ್ಯ ಮತ್ತು ಸವಿಮಾತುಗಳು ಸೇರಿದರೆ ಯಾರು ಯಾರನ್ನು ಬೇಕಾದರೂ ಪ್ರೀತಿಸಬಹುದಾ?

ಇಲ್ಲಿಯೇ ಪ್ರೀತಿಸುವುದು, ಪ್ರೀತಿಸಲ್ಪಡುವುದು ಅಷ್ಟು ಮುಖ್ಯವಾ ಎಂಬ ಪ್ರಶ್ನೆಯೂ ಮೂಡುತ್ತದೆ. ಮದುವೆಯಾದ ನಂತರವೂ ಪ್ರೀತಿಸದೇ ಇರುವವರನ್ನು, ಪ್ರೀತಿಸಿಯೂ ಮದುವೆಯಾಗದವರನ್ನು ನಾವು ಕಾಣುತ್ತೇವೆ. ಎಷ್ಟೋ ಪ್ರಕರಣಗಳಲ್ಲಿ ಪ್ರೀತಿ ಎಂಬುದು ಏಕಾಂತದಿಂದ ಪಾರಾಗುವ ವಿಫಲ ಯತ್ನವಷ್ಟೇ ಆಗಿರುತ್ತದೆ. ಮತ್ತೆಷ್ಟೋ ಪ್ರಯತ್ನಗಳಲ್ಲಿ ಪ್ರೀತಿ ಏಕಾಂಗಿತನವನ್ನು ಸಫಲವಾಗಿ ಹುಟ್ಟುಹಾಕುತ್ತದೆ.

ನಾವು ಪ್ರೀತಿಸುವುದನ್ನು ಕಲಿತದ್ದು ಇಂಗ್ಲಿಷರಿಂದ ಅಂದುಕೊಂಡಿದ್ದೇವೆ. ನಮ್ಮ ಇಂಗ್ಲಿಷ್‌ ವಿದ್ಯಾಭ್ಯಾಸ, ನಡವಳಿಕೆ ಎಲ್ಲವೂ ಅಮೆರಿಕಾ ಮತ್ತು ಇಂಗ್ಲೆಂಡಿನಿಂದ ಆಮದಾದದ್ದು. ಇವತ್ತು ನಾವು ಅಮೆರಿಕನ್‌ ಸಂಸ್ಕೃತಿಯನ್ನೇ ಹೆಚ್ಚು ಉದಾರವಾಗಿ ಸ್ವೀಕರಿಸಿದ್ದರೂ ಪ್ರೀತಿಯ ಮೊದಲ ಪಾಠಗಳನ್ನು ನಮಗೆ ಕಲಿಸಿದವರು ಬ್ರಿಟೀಷರು. ಆದರೆ ಬ್ರಿಟೀಷರು ತಮ್ಮ ದೇಶದಲ್ಲಿ ನಮಗಿಂತ ಹೆಚ್ಚು ಸಂಪ್ರದಾಯಸ್ಥರೂ ಕಟ್ಟುನಿಟ್ಟಿನವರೂ ಆಗಿದ್ದವರು. ಭಾರತೀಯ ಕಾವ್ಯಗಳಲ್ಲಿ ದುಷ್ಯಂತ, ಶಕುಂತಲೆಯರಿದ್ದಾರೆ, ಅಮೃತಮತಿ ಮತ್ತು ಅಷ್ಟಾವಕ್ರರಿದ್ದಾರೆ, ಯಶೋಧರ ಚರಿತೆಯಿದೆ. ಇಂಗ್ಲಿಷ್‌ ಪ್ರೇಮಕಾವ್ಯ ಆ ಮಟ್ಟಿಗೆ ತುಂಬ ಬಡತನದ್ದು. ಅಲ್ಲಿರುವ ಏಕೈಕ ಜನಪ್ರಿಯ ಪ್ರೇಮಜೋಡಿ ರೊಮಿಯೋ-ಜೂಲಿಯಟ್‌. ಅದೂ ದುರಂತ ಪ್ರೇಮ.

ಬೇರೆ ದೇಶಗಳ ಪ್ರೇಮ ಚರಿತ್ರೆಗಳನ್ನೇ ನೋಡಿ, ಗ್ರೀಕ್‌, ರೋಮ್‌ ಮುಂತಾದ ತುಂಬ ಪ್ರಾಚೀನವಾದ ಪುರಾಣ ಕಥಾನಕಗಳಿರುವಲ್ಲಿ ಕೂಡ ಭಾರತದಲ್ಲಿರುವಷ್ಟು ಗಾಢವಾದ ಪ್ರೇಮ, ವಿರಹಗಳ ಕತೆಯಿಲ್ಲ. ಅಲ್ಲಿರುವುದು ಕೇವಲ ಕಾಂಪ್ಲೆಕ್ಸುಗಳು. ಪ್ರೇಮವೂ ಒಂದು ಕಾಂಪ್ಲೆಕ್ಸು. ಅದು ಕಾಮವಾಗಿ ಬದಲಾಗುತ್ತದೆ. ಆದರೆ ನಮ್ಮ ಪುರಾಣಗಳಲ್ಲಿ ಕಾಮಕ್ಕೂ ಪ್ರೇಮಕ್ಕು ಅಂಥ ದೊಡ್ಡ ವ್ಯತ್ಯಾಸವೇನಿಲ್ಲ. ಎರಡೂ ಕೂಡ ಆರೋಗ್ಯಕರವಾದ ಪ್ರಕ್ರಿಯೆ.

ಇವತ್ತು ಕೂಡ ಪ್ರೇಮಚಿತ್ರಗಳು ಜನಪ್ರಿಯವಾಗಿದ್ದರೆ ಒಪ್ಪಬಹುದಾಗಿತ್ತು. ಆದರೆ ಆಗೊಂದು ಈಗೊಂದು ಬಂದು ಹೋಗುವ ಸುಂದರ ಪ್ರೇಮಕತೆಗಳನ್ನು ಬಿಟ್ಟರೆ ಈಗಿನ ಆಸಕ್ತಿಗಳೇ ಬೇರೆ. ಗಂಡಸು ಮತ್ತು ಹೆಂಗಸು ಕೊಳ್ಳುಬಾಕತನದತ್ತ ಮಾರುಹೋಗಿದ್ದಾರೆ. ಹೀಗೆ ತಮ್ಮ ಏಕಾಂತ ಮತ್ತು ವ್ಯಸನಗಳನ್ನು ಬೇರೆ ಬೇರೆ ಆಸಕ್ತಿಗಳ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ. ಕಂತಿನಲ್ಲಿ ಏನೇನೋ ಸಾಮಾನು ಕೊಂಡು ಮನೆತುಂಬಿಸಿಕೊಳ್ಳುವ ಗಂಡುಹೆಣ್ಣುಗಳೂ ತಮಗೆದುರಾಗುವ ವ್ಯಕ್ತಿಗಳನ್ನೂ ಹಾಗೇ ನೋಡಲು ಆರಂಭಿಸಿದ್ದಾರೆ. ಆಕರ್ಷಕ ಎನ್ನುವುದು ನಾಲ್ಕಂಕಿ ಸಂಬಳ, ಸ್ವಂತದ್ದೊಂದು ಮನೆ, ಓಡಾಡಲು ಕಾರು, ಕ್ರೆಡಿಟ್‌ ಕಾರ್ಡು, ಕ್ಲಬ್ಬು ಮೆಂಬರ್‌ಶಿಪ್ಪುಗಳಾಗಿ ಅರ್ಥ ಪಡೆದುಕೊಂಡಿದೆ. ಓಣಿಯ ತಿರುವಿನ ಬೋರ್‌ವೆಲ್‌ ಪಕ್ಕ ನಿಂತು ಪಿಸುಗುಟ್ಟುವ ಗಂಡುಹೆಣ್ಣುಗಳ ಪ್ರೀತಿ ಹಳೆಯದಾಗಿದೆ.

ಚೌಕಾಸಿಯಾಗಿದ್ದ ಪ್ರೀತಿ ಇವತ್ತು ಲೆಕ್ಕಾಚಾರಗಳನ್ನು ದಾಟಿ ನಿಂತಿದೆ. ನನಗೆ ಪ್ರೀತಿಸೋದಕ್ಕೆ ಪುರುಸೊತ್ತಿಲ್ಲ. ನಿನಗೇನು ಬೇಕು ಕೇಳು ತಂದುಹಾಕುತ್ತೀನಿ ಎಂಬಲ್ಲಿಗೆ ಬಂದು ನಿಂತಿದೆ. ಪ್ರೀತಿಸದಿದ್ದರೆ ಹಾಳಾಗಿಹೋಗು, ನನಗೆ ಇಂಥದ್ದು ಬೇಕು ಎಂದು ಕೇಳುವಲ್ಲಿಗೆ ತಲುಪಿದೆ.

ಹೀಗಾಗಿ ಪ್ರೇಮಿಗಳೀಗ ಸಿನಿಮಾ ನೋಡುವುದಿಲ್ಲ, ಪಿಸುಗುಟ್ಟುವುದಿಲ್ಲ, ಕಟ್ಟೆಯ ಬಳಿಯೋ ಬೆಟ್ಟದ ಬಳಿಯೋ ನಿಂತು ಮಾತಾಡುವುದಿಲ್ಲ. ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಎಂದು ಈತ ಹಾಡುವುದಿಲ್ಲ.

ಬದಲಾಗಿ ಎಸ್ಸೆಮ್ಮೆಸ್ಸುಗಳೂ ಈ ಮೇಲುಗಳೂ ಚಾಟ್‌ಗಳೂ ಎಕ್ಸ್‌ಚೇಂಜಾಗುತ್ತಿರುತ್ತವೆ. ತನುಮನಧನಗಳನ್ನು ಒತ್ತೆಯಿಟ್ಟು ದಕ್ಕಿಸಿಕೊಳ್ಳಬೇಕಾಗಿದ್ದ ಪ್ರೀತಿಗೆ ಈಗ ಧನವೊಂದಿದ್ದರೆ ಸಾಕು.

ಧನವಿದ್ದರೆ ಬಾ, ಈ ತನುವೂ ನಿನ್ನದು ಮನವೂ ನಿನ್ನದು ಎನ್ನುವವರು ಸಾಲುಗಟ್ಟಿ ನಿಲ್ಲುತ್ತಾರೆ.

ಈಗ ಹೇಳಿ.

ಪ್ರೀತಿ ಕಲೆಯಾ, ವಿಜ್ಞಾನವಾ ಅಥವಾ....

ಕೇವಲ ಅಜ್ಞಾನವಾ? ಪ್ರೀತಿ ಯಾವುದು ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more