• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಥೆಗಾರ ಖಾಸನೀಸರಿಗೊಂದು ಪತ್ರ

By Staff
|

ಅದೊಂದು ಕವಿಗೋಷ್ಠಿ . ಅಲ್ಲಿ ಕವಿಗಳಿದ್ದರು. ಕವನಗಳಿದ್ದವು. ಕವಿಗಳ ಎದೆಯಾಳಗೆ ಮೊಗ್ಗಾಗಿ ನಿಂತಿದ್ದ ಒಂದಿಷ್ಟು ಕತೆಗಳೂ ಇದ್ದನೇನೋ. ಅದೇ ನೆಪವಾಗಿ ಒಬ್ಬ ಕವಿ ಕೇಳಿದ : ‘ ಸಾರ್‌, ಕತೆಗಾರರನ್ನು ಮೀರಿ ನಿಂತ ಕತೆ ಮತ್ತು ಆ ಕತೆಯಾಂದಿಗೇ ನೆನಪಾಗಿ- ಸಂತೋಷ, ಸಂಭ್ರಮ, ಸಂಕಟ ಎಲ್ಲವನ್ನೂ ಏಕಕಾಲದಲ್ಲಿ ಉಂಟು ಮಾಡುವ ಕತೆಗಾರ ಯಾರು? ನೀವು ಅರ್ಥಮಾಡಿಕೊಂಡಂತೆ ‘ಅದ್ಭುತ’ ಎಂಬಂಥ ಕಥೆಗಳನ್ನು ಒಂದರ ಹಿಂದೊಂದರಂತೆ ಬರೆದವರು ಯಾರು ? ಹೇಳಿ ಸಾರ್‌, ಅವರು ಹೇಗಿದ್ದಾರೆ?’

ಈ ಮಾರುದ್ದದ ಪ್ರಶ್ನೆಗೆ- ಎಲ್ಲರ ಪ್ರೀತಿಯ ‘ರಾಜು ಮೇಷ್ಟ್ರು’ ತಕ್ಷಣವೇ ಹೇಳಿದರು : ಕನ್ನಡದ ಶ್ರೇಷ್ಠ ಕತೆಗಾರ ಅಂತ ಸರ್ವಕಾಲಕ್ಕೂ ಕರೆಸಿಕೊಳ್ಳಬಲ್ಲಂಥವರು - ರಾಘವೇಂದ್ರ ಖಾಸನೀಸ. ನಾಲ್ಕು ದಶಕಗಳ ಸುದೀರ್ಘ ಬದುಕಿನಲ್ಲಿ ಅವರು ಒಟ್ಟು ಇಪ್ಪತ್ತೆೈದು ಕತೆ ಬರೆದಿರಬಹುದು, ಅಷ್ಟೆ . ಆದರೆ ಆ ಇಪ್ಪತ್ತೆೈದು ಕತೆಗಳೂ ಅಪರೂಪದಲ್ಲಿ ಅಪರೂಪದವು. ‘ಅದ್ಭುತ’ ಎಂದು ಕಣ್ಣುಚ್ಚಿ ಹೇಳಬಲ್ಲಂಥವು. ಕತೆಗಾರನ ಹೆಸರನ್ನು ಶತಮಾನದ ನಂತರವೂ ಚಿರವಾಗಿ ಉಳಿಸುವಂಥವು.....ಇಷ್ಟನ್ನೂ ಸಂಭ್ರಮದಿಂದ ಹೇಳಿದ ‘ರಾಜು ಮೇಷ್ಟ್ರು’ ಇದ್ದಕ್ಕಿದ್ದಂತೆಯೇ ಖಿನ್ನರಾದರು. ಕ್ಷಣ ಮೌನವಾದರು. ಹಿಂದೆಯೇ ಗದ್ಗದರಾದರು. ಮರುಕ್ಷಣವೇ ಚೇತರಿಸಿಕೊಂಡು ಹೇಳಿದರು :

Raghavendra Khasanis, Kannada short story writerಕನ್ನಡಿಗರು ಎಂದೆಂದೂ ಮರೆಯಬಾರದಂಥ ಕತೆಗಳನ್ನು ಬರೆದ ಖಾಸನೀಸರು ಈಗ ತೊಂದರೆಯಲ್ಲಿದ್ದಾರೆ. ಅವರಿಗೆ ಆರೋಗ್ಯ ಚೆನ್ನಾಗಿಲ್ಲ. ನೌಕರಿಯಿಂದ ನಿವೃತ್ತಿ ಹೊಂದಿ ತುಂಬ ದಿನಗಳಾಗಿದೆಯಲ್ಲ - ಆರ್ಥಿಕ ಮುಗ್ಗಟ್ಟು ಅವರನ್ನು ಕಾಡುತ್ತಿದೆ. ಕಂಗಡಿಸಿದೆ. ಪಂಪ ಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿ , ಅಕಾಡೆಮಿ ಪ್ರಶಸ್ತಿ , ಜ್ಞಾನಪೀಠ - ಹೀಗೆ ಯಾವುದೇ ಪ್ರಶಸ್ತಿಯನ್ನು ಖಾಸಗೀಸರಿಗೆ ನೀಡಿದ್ದರೂ ಅವರಿಗೆ ಖುಷಿಯಾಗುತ್ತಿತ್ತು. ಒಂದಿಷ್ಟು ಆರ್ಥಿಕ ನೆರವೂ ಸಿಗುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತಿತ್ತು. ಆದರೆ ಅಂಥ ಮಹಾನ್‌ ಕತೆಗಾರನನ್ನು ನಾಡು ಗೌರವಿಸಲಿಲ್ಲ. ಅವರ ಸಂಕಟಕ್ಕೆ ಸ್ಪಂದಿಸಲಿಲ್ಲ. ಪರಿಣಾಮ, ಖಾಸನೀಸರು ಕಡು ಕಷ್ಟದಲ್ಲೇ ಉಳಿದಿದ್ದಾರೆ. ಪಾಪ....

ಮೊನಲಿಸಾಳ ನಗೆಯನ್ನು ಮೀರಿಸುವಂಥ ಕಥೆಯನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟು, ಒಂದಿಡೀ ಓದುಗ ವರ್ಗವನ್ನೇ ಬೆರಗಾಗಿಸಿದ ರಾಘವೇಂದ್ರ ಖಾಸನೀಸ ಅವರೆ, ಮೊನ್ನೆ ‘ರಾಜು ಮೇಸ್ಟ್ರು’ ನಿಮ್ಮ ನೆನಪನ್ನು ಹೀಗೆ ಹರವಿ ಬಿಟ್ಟ ತಕ್ಷಣ ಪತ್ರ ಬರೆಯುವ ಆಸೆ ಬಿಟ್ಟೂ ಬಿಡದೆ ಕಾಡತೊಡಗಿದ್ದರಿಂದ .....

***

ಸರ್‌, ಇವತ್ತು ಸಾಹಿತ್ಯ ಬಲ್ಲ ಎಲ್ಲರೂ ಒಂದೇ ಉಸುರಿನಲ್ಲಿ ಹೇಳಿಬಿಡುತ್ತಾರೆ. ಅದು ಹೀಗೆ-ರಾಘವೇಂದ್ರ ಖಾಸನೀಸರು ಕನ್ನಡದ ಶ್ರೇಷ್ಠ ಕತೆಗಾರ. ಅವರ ‘ತಬ್ಬಲಿಗಳು’, ‘ಮೊನಾಲಿಸಾ’, ‘ಅಲ್ಲಾವುದ್ದೀನನ ಅದ್ಭುತ ದೀಪ’, ‘ಹೀಗೂ ಇರಬಹುದು’,‘ಅಪಘಾತ’, ‘ಬೇಡಿಕೊಂಡವರು’ ಕತೆಗಳನ್ನು ಓದದವರಿಲ್ಲ. ಓದಿ ಬೆರಗಾಗದವರಿಲ್ಲ... ಹೀಗೆ ಒಂದರ ಹಿಂದೊಂದು ಅದ್ಭುತ ಕತೆಗಳನ್ನು ನೀಡಿದ ಖಾಸನೀಸರು ಸಭೆ- ಸಮಾರಂಭಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲ್ಲ....’

ಅರೆ, ಸರ್ವಕಾಲಕ್ಕೂ ಸಲ್ಲುವಂಥ ಕತೆಗಳನ್ನು ಬರೆದ ಖಾಸನೀಸರು ಯಾಕೆ ಹೀಗೆ ? ಅವರು ಎಲ್ಲಿದಾರೆ ? ಈ ಮೊದಲು ಎಲ್ಲಿದ್ದರು... ಇಂಥವೇ ಪ್ರಶ್ನೆಗಳೊಂದಿಗೆ ಹಿರಿಯ ಸಾಹಿತಿಗಳ ಮುಂದೆ ನಿಂತರೆ ಅವರು ಹೇಳುತ್ತಾರೆ : ರಾಘವೇಂದ್ರ ಖಾಸನೀಸರು ಬೆಂಗಳೂರಲ್ಲಿ, ರಾಜಾಜಿನಗರದಲ್ಲೇ ಇದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಲೈಬ್ರರಿಯನ್‌ ಆಗಿದ್ದವರು. ಮೊದಲಿಂದಲೂ ಹಾಗೆಯೇ- ಅವರು ಒಂಟೊಂಟಿ. ಹೆಚ್ಚಾಗಿ, ಯಾರ ಕಣ್ಣಿಗೂ ಬೀಳುವುದಿಲ್ಲ. ಯಾರೊಂದಿಗೂ ಹೆಚ್ಚಾಗಿ ಮಾತಾಡುವುದಿಲ್ಲ. ಅವರು ಪ್ರಾಮಾಣಿಕರಲ್ಲಿ ಪ್ರಾಮಾಣಿಕರು. ಪರಮ ಸಂಭಾವಿತರು. ಉಹುಂ, ಅವರು ಸಾಹಿತ್ಯಗೋಷ್ಠಿಗಳಲ್ಲಿ ಭಾಷಣ ಮಾಡಿದವರಲ್ಲ. ತನ್ನ ಕತೆಗಳ ಮೂಲಕ ಅಲ್ಲದೆ ಮತ್ತೊಂದು ರೀತಿಯಲ್ಲಿ ಪ್ರಕಟಗೊಳ್ಳಲಾರೆ ಎಂದು ಪಟ್ಟು ಹಿಡಿದು ಕೂತವರು ಅವರು. ಇಂಥ ಖಾಸನೀಸರಿಗೆ ನಮ್ಮ ವಿಶ್ವವಿದ್ಯಾಲಯ ಡಾಕ್ಟರೇಟ್‌ ಕೊಡಬಹುದಿತ್ತು. ಕೊಡಲಿಲ್ಲ . ಅದೇ ವಿಶ್ವವಿದ್ಯಾಲಯ ಅವರಿಗೆ ಬಡ್ತಿ ನೀಡಿ ಕವಿ ಮನಸ್ಸನ್ನು ಖುಷಿ ಪಡಿಸಬಹುದಿತ್ತು. ಆದರೆ ಹಾಗೂ ಮಾಡಲಿಲ್ಲ ! ಪರಿಣಾಮ? ಖಾಸನೀಸರು ಬದುಕಿಡೀ ಪುಸ್ತಕಗಳ ಮಧ್ಯೆಯೇ ಸೃಷ್ಟಿಸಿದರು. ಕತೆಗಳು ಅವರಿಗೆ ಹೆಸರು ತಂದವು ನಿಜ. ಆದರೆ ಕತೆಗಳಿಂದ ಅವರಿಗೆ ಹಣ ಸಿಗಲಿಲ್ಲ. ಹಾಗಾಗಿ ಖಾಸನೀಸರು ಇವತ್ತು ಜರ್ಜರಿತರಾಗಿದ್ದಾರೆ. ಅವರ ಮನೆಯಲ್ಲಿ ಗಾಢ ವಿಷಾದವಿದೆ. ದುಃಖಪೂರಿತ ಕಂಗಳು; ಗುಬ್ಬಿ ದೇಹ, ನಡುಗುವ ಕೈಗಳು, ಎಲ್ಲೋ ಕಳೆದು ಹೋದಂತೆ ಕಾಣುವ ಮುಖಭಾವದ ಖಾಸನೀಸರು ತಕ್ಷಣಕ್ಕೆ ಅಸಹಾಯಕ ಮಗುವಿನಂತೆ ಕಾಣುತ್ತಾರೆ. ತಮ್ಮನ್ನು ತಾವೇ ‘ನತದೃಷ್ಟ’ ಎಂದು ಕರೆದುಕೊಂಡು ತಲೆಬಾಗಿಸುತ್ತಾರೆ. ‘ನಾನು ನತದೃಷ್ಟ’ ಅಂದುಕೊಂಡಾಕ್ಷಣ ಅವರ ಕಣ್ತುಂಬಿ ಬರುತ್ತಾ.... ಇರಬಹುದು !’

ಸರ್‌, ಇದೆಲ್ಲ ಅವರಿವರ ಮಾತು. ಇಂಥ ಮಾತು ಕೇಳಿದಾಗೆಲ್ಲ ಸಾಹಿತ್ಯ ಪ್ರಿಯರ ಮನಸ್ಸು ಕಳವಳಕ್ಕೆ ಈಡಾಗುತ್ತೆ. ಛೆ, ಅಂತ ಚೆಂದದ ಕತೆಗಾರರಿಗೆ ಯಾಕಿಂಥ ಕಷ್ಟ ಎನಿಸಿ ವೇದನೆಯಾಗುತ್ತೆ. ಹಿಂದೆಯೇ ನಿಮ್ಮ ಅದ್ಭುತದ್ಭುತ ಕತೆಗಳ ಲೋಕಕ್ಕೆ ಮನಸ್ಸು ಹಾರಿಹೋಗುತ್ತೆ. ಹಾಗೆ, ನಿಮ್ಮ ಕತೆಗಳು ಸೆರಗು ಹಿಡಿದು ನಿಂತಾಗೆಲ್ಲ - ‘ನಿಮ್ಮ ಕತೆಗಳಲ್ಲಿ ಹೆಚ್ಚಾಗಿ ವಿಕ್ಷಿಪ್ತ ಪಾತ್ರಗಳೇ ಕಾಣಿಸುತ್ತವೆ. ಆ ಮಾತುಗಳಲ್ಲಿ ವೇದನೆಯಿರುತ್ತದೆ. ಮಮಕಾರವಿರುತ್ತದೆ. ವಿಷಾದವಿರುತ್ತದೆ. ಆಸೆ ಇರುತ್ತದೆ. ಹಳಹಳಿಕೆಯಿರುತ್ತದೆ. ಅಸಹಾಯಕತೆ ಮಡುಗಟ್ಟಿ ನಿಂತಿರುತ್ತದೆ!’ ಇದರಿಂದ ಕಸಿವಿಸಿಗೊಂಡು ನಿಮ್ಮ ಕತೆಗಳ ಕೈಬಿಟ್ಟು ನೋಡಿದರೆ- ಎದುರಿಗೆ ನಿಮ್ಮ ಬದುಕೇ ಕಾಣಿಸುತ್ತದಲ್ಲ - ಆ ಕ್ಷಣವೇ - ಅರೆ, ಕತೆಯ ಪಾತ್ರಗಳಂತೆಯೇ ಕತೆಗಾರ ಖಾಸನೀಸರೂ ಯಾತನೆಗೆ ಈಡಾಗುತ್ತಲೇ ಇದ್ದಾರಲ್ಲ ಅನ್ನಿಸಿ- ಸಂಕಟವಾಗುತ್ತದೆ !

***

ಸರ್‌, ಎಲ್ಲರೂ ನಂಬಿರುವ ಹಾಗೆ- ಕತೆಗಾರನನ್ನು ಆರಂಭದಲ್ಲಿ ಅವರ ಸ್ಫೂರ್ತಿ, ನಂತರದ ದಿನಗಳಲ್ಲಿ ಓದುಗರ ಪ್ರೀತಿ, ಅದಾದ ನಂತರ ಸಾಹಿತ್ಯಿಕ ಪ್ರಶಸ್ತಿ, ಕಡೆಯಲ್ಲಿ ಅವನ ಕೃತಿ ಪೊರೆಯಬೇಕು. ನೀವು ಅದ್ಭುತವಾದ ಕತೆಗಳನ್ನು ಕೊಟ್ಟಿರಿ. ನಾವು ‘ಥ್ಯಾಂಕ್ಸ್‌ ’ ಅನ್ನಲಿಲ್ಲ. ‘ಮೊನಲಿಸಾ’ ಕತೆ ಓದಿ ಅವಳ ನಗೆಯಲ್ಲಿ ನಾವೆಲ್ಲ ಮಿಂದೆದ್ದುದು ನಿಜ. ಆದರೆ ನಿಮ್ಮ ನೋವನ್ನು ಯಾರೂ ಗಮನಿಸಲಿಲ್ಲ. ಮಾತ್ರವಲ್ಲ , ಹಾದಿ ಬೀದಿಯಲ್ಲೂ ರಾಜ್ಯೋತ್ಸವ ಮಾಡುವವರ ಕಣ್ಣಿಗೆ ; ಸುಳ್ಳು ಸುಳ್ಳೇ ಸಮ್ಮೇಳನ ನಡೆಸುವ ಕಳ್ಳರಿಗೆ ನಿಮ್ಮ ಸಂಕಟ ಕಾಣಿಸಲೇ ಇಲ್ಲ. ಕಂಡರೂ ಅವರ್ಯಾರೂ ನಿಮ್ಮನ್ನು ಗುರುತಿಸಲೂ ಇಲ್ಲ !

ಖಡಾಖಡಿ ಹೇಳಿ ಬಿಡ್ತೀನಿ. ಸರ್‌, ನೀವು ಧರೆಗೆ ದೊಡ್ಡವರು. ಪರಿಶುದ್ಧತೆಗೆ, ಪ್ರಮಾಣಿಕತೆಗೆ ಪರಿಕತ್ವ ಮನಃ ಸ್ಥಿತಿಗೆ ಶತಮಾನದ ಕಾಲ ಉದಾಹರಣೆಯಾಗಿ ಉಳಿಯಬಲ್ಲ ವರು. ಸಾಹಿತ್ಯ ರಂಗದಲ್ಲಿವೆಯಲ್ಲ - ಆ ಯಾವುದೇ ಪ್ರಶಸ್ತಿಗೆ ಅರ್ಹರಾದಂಥವರು. ಶತಮಾನದುದ್ದಕ್ಕೂ ಕನ್ನಡಿಗರನ್ನು ಕಾಡಲಿಕ್ಕೆ ನಿಮ್ಮ ‘ತಬ್ಬಲಿಗಳು’ ಕತೆಯಿದೆ ; ಜತೆಗೇ ‘ಮೊನಾಲಿಸ’ ಳ ತುಂಟ ನಗೆಯಿದೆ. ಎಲ್ಲರನ್ನೂ ಮಿಂಚಿನ ಬೆಳಕಲ್ಲಿ ಹೊಳೆಯಿಸಲು ‘ಅಲ್ಲಾವುದ್ದೀನನ ಅದ್ಭುತ ದೀಪ’ವಿದೆ. ಸಾಕು- ನಮಗಷ್ಟೇ ಸಾಕು.

ಇನ್ನೊಂದು ಕತೆ ಬರೀರಿ ಸಾರ್‌, ‘ಮೊನಾಲಿಸಾ’ ಬರೆಯುವಾಗ ನಿಮ್ಮ ಮನಃಸ್ಥಿತಿ ಹೇಗಿತ್ತು ಸಾರ್‌? ಇನ್ಮೇಲೆ ಬರೆಯೋದೇ ಇಲ್ವಾ ಸಾರ್‌....? ಇಂಥವೇ ಪ್ರಶ್ನೆಗಳನ್ನು ನಾವ್ಯಾರೂ ಕೇಳಲ್ಲ. ನಿಮಗೆ ಬೇಗ ಗುಣವಾಗಲಿ. ನಿಮಗೆ ಅರ್ಥಿಕ ನೆರವು ತಕ್ಷಣ ಸಿಕ್ಕಲಿ. ನೀವು ಕತೆ ಬರೆದ ಕಾಲದಲ್ಲಿ ನಾವಿದ್ದೀವಲ್ಲ - ಅದು ನಮ್ಮ ಪುಣ್ಯ. ನಿಮ್ಮ ಕತೆಗಳನ್ನ ಬೆರಗಿನಿಂದ ಓದಿದೆವಲ್ಲ - ಆ ನಮ್ಮ ಕಂಗಳು ಧನ್ಯ! ತುಂಬ ಒಳ್ಳೆಯದೆಲ್ಲ ನಿಮ್ಮದಾಗಲಿ. ನಿಮ್ಮ ಸಂಕಟಗಳು ನಮ್ಮ ಪಾಲಿಗೆ ಬರಲಿ ಅನ್ನೋದು ನನ್ನ ಪ್ರಾರ್ಥನೆ. ತಿಳಿದವರಿಗೆ ಹೆಚ್ಚಿಗೆ ಬರೆಯಲು ಶಕ್ತನಲ್ಲ.

-ಎ.ಆರ್‌. ಮಣಿಕಾಂತ್‌

(ಸ್ನೇಹಸೇತು: ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more