ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಪಪೀಠದ ಪ್ರಭೆಯಲ್ಲಿ ಕಂಬಾರ

By Staff
|
Google Oneindia Kannada News
  • ದಟ್ಸ್‌ಕನ್ನಡ ಬ್ಯೂರೊ
ಚಂದ್ರಶೇಖರ ಕಂಬಾರರಿಗೀಗ ಪುರುಸೊತ್ತಿಲ್ಲ . ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ಅವರ ಮನೆಯಲ್ಲೀಗ ಹಬ್ಬದ ವಾತಾವರಣ. ಪದೇಪದೇ ಕಿಂಕಿಣಿಸುವ ಫೋನು, ಫೋನೆತ್ತಿದರೆ ಶುಭಾಶಯಗಳ ಸುರಿಮಳೆ! ಮನೆಗೂ ಎಡತಾಕುವ ಅಭಿಮಾನಿಗಳು; ಪತ್ರ ಬರೆದು ಅಭಿನಂದಿಸುವ ಗೆಳೆಯರು. ಪಂಪಪೀಠದ ಪ್ರಭೆಯಲ್ಲಿ ಕಂಗೊಳಿಸುತ್ತಿರುವ ಕಂಬಾರರಿಗೀಗ ಹಿಗ್ಗಿನ ಕಾಲ, ಸುಗ್ಗಿಯ ಕಾಲ.

ಸಿರಿ ಬಂದ ಕಾಲಕ್ಕೆ ಸಾಲುಸಾಲಾಗಿ ಬರುತ್ತದಂತೆ. ಕಂಬಾರರ ವಿಷಯದಲ್ಲೂ ಈ ಮಾತು ಎಷ್ಟು ಸತ್ಯ ನೋಡಿ: ಕಳೆದ ಜನವರಿ 5 ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಗೌರವ ಸ್ವೀಕರಿಸಿದ್ದ ಕಂಬಾರರಿಗೆ ಆನಂತರದ್ದೆಲ್ಲ ಹುಗ್ಗಿಹೋಳಿಗೆಯ ಸಮಾಚಾರ.

Chandrashekhara Kambara in the new role as a legislatorಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ಕಂಬಾರರ ನಾಮಕರಣ ಸಾಹಿತ್ಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಶಾಸಕ ಸ್ಥಾನಕ್ಕಾಗಿ ಅನೇಕ ಮಂದಿ ಸಾಹಿತಿಗಳು ಲಾಬಿ ಮಾಡುತ್ತಿರುವಾಗ, ಕಂಬಾರರಂಥ ಜಾನಪದ ಪ್ರತಿಭೆಯನ್ನು ಪರಿಷತ್ತಿಗೆ ಕರೆತರುವ ಮೂಲಕ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತಮ್ಮನ್ನು ತಾವು ಗೌರವಿಸಿಕೊಂಡಿದ್ದಾರೆ. ಕಂಬಾರರಿಗೂ ಮೇಲ್ಮನೆ ಪ್ರವೇಶದ ಸಮಾಚಾರ ಖುಷಿ ತಂದಿದೆ. (ಫೆ.5ರ ಗುರುವಾರ, ಮೇಲ್ಮನೆಯ ಸದಸ್ಯರಾಗಿ ಕಂಬಾರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.) ಇದೆಲ್ಲ ಖುಷಿಗಿಂತ ದೊಡ್ಡದು ಪಂಪ ಪ್ರಶಸ್ತಿಯ ಗೌರವ.

ರಾಜ್ಯದ ಮಟ್ಟಿಗೆ ಜ್ಞಾನಪೀಠ ಪ್ರಶಸ್ತಿಯೆಂದೇ ಪಂಪ ಪ್ರಶಸ್ತಿ ಪ್ರಸಿದ್ಧವಾದುದು. ಡಾ.ಜಿ.ಎಸ್‌.ಶಿವರುದ್ರಪ್ಪ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಂದಿರುವ ಈ ಪ್ರಶಸ್ತಿಯನ್ನು ತಾವೂ ಪಡೆಯುತ್ತಿರುವ ಸಂಗತಿ ತಮಗೆ ಖುಷಿ ತಂದಿದೆ ಎನ್ನುತ್ತಾರೆ ಕಂಬಾರ. ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ ಫೆ.2 ರಂದು ಪಂಪ ಪ್ರಶಸ್ತಿ ಸ್ವೀಕರಿಸಿದ ಕಂಬಾರ- ಇತ್ತೀಚೆಗಷ್ಟೇ ಕಬೀರ ಸಮ್ಮಾನ ಪ್ರಶಸ್ತಿ ಪಡೆದಿದ್ದೇನೆ. ಆದರೆ ಕಬೀರ ಪ್ರಶಸ್ತಿಗಿಂತ ಪಂಪ ಪ್ರಶಸ್ತಿ ಹಿರಿದೆಂದು ಭಾವಿಸುವುದಾಗಿ ಹೇಳಿದರು.

ಪಂಪ ಕನ್ನಡ ಮಣ್ಣಿನ ಹೆಮ್ಮೆಯ ಕವಿ. ಹದಿನಾರಾಣೆ ದೇಸೀ ಕವಿ. ಕಂಬಾರರೂ ಈ ನೆಲದ ಸೊಗಡಿನ ಕವಿಯೇ. ಸದ್ಯಕ್ಕೆ ದೇಸೀ ಕವಿ ಎಂದು ನಿರ್ವಿವಾದವಾಗಿ ಹೆಸರಿಸಬಹುದೆಂದರೆ ಅದು ಕಂಬಾರರು ಮಾತ್ರ. ಹೀಗಾಗಿ, ಶ್ರೇಷ್ಠ ದೇಸೀಕವಿಯ ಹೆಸರಿನ ಪ್ರಶಸ್ತಿ ಮತ್ತೊಬ್ಬ ದೇಸೀ ಕವಿಗೆ ದೊರೆತಿರುವುದು ಅರ್ಥಪೂರ್ಣ.

ಅದು ಸರಿ, ಮೇಲ್ಮನೆಯಲ್ಲಿ ಕಂಬಾರರು ಏನು ಮಾಡುತ್ತಾರೆ ?

ಮಾಡಲಿಕ್ಕೆ ಸಾಕಷ್ಟು ಕೆಲಸಗಳಿವೆ ಎನ್ನುವುದು ಕಂಬಾರರಿಗೂ ಗೊತ್ತು . ಯಥಾ ಪ್ರಕಾರ ಕನ್ನಡ, ಕನ್ನಡಿಗನ ಸಮಸ್ಯೆಗಳಿಗೆ ಕಂಬಾರರು ಸದನದಲ್ಲಿ ಪ್ರತಿನಿಧಿಯಾಗುತ್ತಾರೆ. ಇಷ್ಟೇ ಅಲ್ಲ , ಕಂಬಾರರಿಗೆ ಅವರದೇ ಆದ ದಿಕ್ಕುಗುರಿಗಳಿವೆ. ರಂಗಭೂಮಿಯ ಸಮಸ್ಯೆಗಳನ್ನು ಮೇಲ್ಮನೆಯಲ್ಲಿ ಪ್ರಸ್ತಾಪಿಸುವ ಕುರಿತು ಕಂಬಾರರು ಮನಸ್ಸಿನಲ್ಲೇ ಚಿಂತನೆ ನಡೆಸಿದ್ದಾರೆ.

ಓರ್ವ ನಾಟಕಕಾರನಾಗಿ, ಕಲಾಕಾರನಾಗಿ ನಾಟಕ ಕ್ಷೇತ್ರದ ಸಮಸ್ಯೆಗಳು ಕಂಬಾರರಿಗೆ ಚೆನ್ನಾಗಿ ಗೊತ್ತು . ಪ್ರಸ್ತುತ ಕನ್ನಡದ ನೆಲದಲ್ಲಿ ರಂಗಭೂಮಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳನ್ನು ಸದನದ ಗಮನಕ್ಕೆ ತರಲಿಕ್ಕೆ ಕಂಬಾರರಿಗೊಂದು ಅವಕಾಶ ಸಿಕ್ಕಿದೆ, ಆ ಅವಕಾಶವನ್ನು ಬಳಸಿಕೊಳ್ಳಲು ಅವರು ಸಿದ್ಧವಾಗಿದ್ದಾರೆ.

ಹಾಗೆ ನೋಡಿದರೆ ಕಂಬಾರರಿಗೆ ಅಧಿಕಾರ-ಆಡಳಿತ ಹೊಸತೇನೂ ಅಲ್ಲ . ಮೊನ್ನೆಯಷ್ಟೇ ರಾಷ್ಟ್ರೀಯ ನಾಟಕಶಾಲೆಯ ನಿರ್ದೇಶಕ ಸ್ಥಾನದಿಂದ ನಿವೃತ್ತರಾದವರು ಕಂಬಾರ. ಅದಕ್ಕೂ ಮುನ್ನ ಎರಡು ಅವಧಿಯಲ್ಲಿ ಹಂಪಿಯ ಕನ್ನಡ ವಿವಿ ಕುಲಪತಿಗಳಾಗಿದ್ದವರು. ಕಂಬಾರರ ಕಾಲದಲ್ಲಿ ಸುಮಾರು 20 ಕೋಟಿ ರುಪಾಯಿ ಮೌಲ್ಯದ ಕಟ್ಟಡಗಳು ವಿಶ್ವವಿದ್ಯಾಲಯದಲ್ಲಿ ನಿರ್ಮಾಣವಾದವು. ಹಂಪಿಯ ಪ್ರತಿ ಕಲ್ಲೂ ಒಂದು ಕಥೆ ಹೇಳುತ್ತದೆ ಎನ್ನುವ ಮಾತಿದೆ; 700 ಎಕರೆ ವ್ಯಾಪ್ತಿಯಲ್ಲಿನ ಹಂಪಿ ವಿವಿಯ ಪ್ರತಿ ಕಟ್ಟಡವೂ ಕಂಬಾರರ ಕುರಿತು ಕಥೆ ಹೇಳುತ್ತದೆ !

ಕಂಬಾರರಿಗೆ ಮತ್ತೊಮ್ಮೆ ಅಧಿಕಾರ ಸಿಕ್ಕಿದೆ. ಈ ಅಧಿಕಾರದಿಂದಾಗಿ ನಾಡು ನುಡಿಗೆ ಕಿಂಚಿತ್ತಾದರೂ ಒಳಿತನ್ನು ನಿರೀಕ್ಷಿಸಲು ಸಾಧ್ಯ. ಮಾತು-ಕೃತಿಯಲ್ಲಿ ಕಂಬಾರರು ನಿರೀಕ್ಷೆ ಹುಸಿ ಮಾಡಿರುವುದು ಕಡಿಮೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X