ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮನೆಯ ಸಣ್ಣ ಪಾಪ!

By Staff
|
Google Oneindia Kannada News
ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಇದು ಪ್ರೈಮರಿ ಶಾಲೆಯಲ್ಲಿ ಕಲಿತ ಪದ್ಯ. ಯಾಕೋ ಏನೋ ಮನಸ್ಸಿನಲ್ಲಿ ಇದು ಅಚ್ಚೊತ್ತಿ ನಿಂತುಬಿಟ್ಟಿದೆ. ಅಂದು ಪರೀಕ್ಷೆಗಾಗಿ ಕಲಿತಿದ್ದು. ಆದರೆ ಈಗಲೂ ನನ್ನ ಮಕ್ಕಳು ರಚ್ಚೆ ಹಿಡಿದಾಗ ತಟ್ಟನೆ ನೆನಪಾಗುವುದು ಇದೇ ಪದ್ಯ. ಇದನ್ನು ಕೇಳಿ ಕ್ಷಣಮಾತ್ರದಲ್ಲಿ ಮತ್ತೆ ಕೇಕೆಹಾಕಿ ನಗುವ ಕಂದನ ಕಂಡರೆ ಇದು ಪದ್ಯದ ಮಾಯೆಯೋ, ಮಗುವಿನ ಮುಗ್ಧತೆಯೋ ? ಅರಿಯೆನು.

ಜಗತ್ತಿನಲ್ಲಿ ಮಗುವಿನ ನಗು, ಆಟಕ್ಕೆ ಮಾರುಹೋಗದ ಮನುಷ್ಯನೇ ಇರಲಿಕ್ಕಿಲ್ಲ. ಮಕ್ಕಳು ಅತ್ತರೂ ಚೆನ್ನ, ನಕ್ಕರೂ ಚೆನ್ನ, ತುಂಟಾಟ ಮಾಡಿದರೂ ಚೆನ್ನ. ಶ್ರೀಕೃಷ್ಣ ಪರಮಾತ್ಮನಿಂದ ಹಿಡಿದು ನನ್ನ ಜ್ಯೋತ್ಸ್ನ, ಪ್ರತ್ಯುಷವರೆಗೂ , ಮುಂದೂ ಸದಾ ನಡೆಯುತ್ತಿರುವಂಥದು.

Makkalu devarige samana...‘ಅತ್ತಿತ್ತ ನೋಡದಿರು
ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು
ಮಲಗು ಮಗುವೆ..’

ಎಂದು ಮಲ್ಲಿಗೆಯ ಕವಿಯನ್ನೂ ಹಾಡಿಸಿದೆ ಈ ಮಗು.

ದೇಹದ ಅಣುಅಣುವನ್ನೂ ಅವುಗಳ ಸ್ವಸ್ಥಾನದಲ್ಲಿರಿಸಿ ಅದಕ್ಕೆ ಜೀವ ತುಂಬುವ ಪ್ರಕೃತಿಯ ಪರಿ ಸೋಜಿಗ ಉಂಟುಮಾಡುವಂಥದು. ಹುಟ್ಟಿದಂದಿನಿಂದ ಪಿಳಿಪಿಳಿ ಕಣ್ಣು ಮಿಟುಕಿಸುವ ಬೊಂಬೆಯಂತಿದ್ದ ಮಗು ಆ..ಊ... ಎಂದು ಸ್ವರ ಹೊರಡಿಸತೊಡಗಿದಾಗ ಮಗುವಿಗೆ ನಿಜವಾಗಿ ಜೀವ ಬಂದ ಅನುಭವ.

ದಿನಗಳೆದಂತೆ ಕೈ ಕಾಲಾಡಿಸುವ ಮಗುವನ್ನು ಕಂಡಾಗ ಕೆಲವು ಮನೆಗಳಲ್ಲಿ ಹಿರಿಯ ಹೆಂಗಸರು, ‘ಸೈಕಲ್‌ ತುಳಿಯಕ್ಕೆ ಶುರು ಮಾಡಿದೆ !’ ಎನ್ನುವುದು, ಕೈ ಆಡಿಸಲು ಪ್ರಾರಂಭಿಸಿದರೆ ‘ತಾರಮ್ಮಯ್ಯ ಮಾಡುತ್ತೆ ’ ಎನ್ನುವುದು ರೂಢಿ. ಮಗುವಿನ ಎಳೆ ಮೈಗೆ ಎಣ್ಣೆಹಚ್ಚಿ, ತಿಕ್ಕಿ , ಅಂಗಾಂಗಗಳನ್ನು ತೀಡಿ, ತಲೆ ಸ್ನಾನ ಮಾಡಿಸುವ ಪದ್ಧತಿ ಬಹಳ ಮನೆಗಳಲ್ಲಿ ರೂಢಿಯಲ್ಲಿದೆ. ಏಕೆಂದರೆ ಇದು ಮಗುವಿನ ಬೆಳವಣಿಗೆಗೆ ಬಹಳ ಸಹಾಯಕ.

ಶೂನ್ಯ ದೃಷ್ಟಿಸುತ್ತಿದ್ದ ಮಗು ಒಂದು ದಿನ ಶಬ್ದಕ್ಕೆ ಪ್ರತಿಕ್ರಿಯಿಸತೊಡಗುತ್ತದೆ. ಅಂಗಾತವಾಗಿಯೇ ಮಲಗಿರುತ್ತಿದ್ದ ಮಗು ಪಕ್ಕಕ್ಕೆ ತಿರುಗುತ್ತದೆ. ಅದು ಪಕ್ಕಕ್ಕೆ ತಿರುಗಲು ಪಡುವ ಕಷ್ಟ , ತಿರುಗುವುದ ನೋಡಲು ಕಾಯುತ್ತಾ ಕೂರುವ ಹಿರಿಯರು... ! ಹೀಗೆ ತಿರುಗುವಾಗ ಕೈಗೊಂದು ಬಟ್ಟೆ ಕೊಟ್ಟರೆ ಮಗುವಿಗೆ ಆಧಾರ ಸಿಕ್ಕಿ ಬೇಗ ಪಕ್ಕಕ್ಕೆ ತಿರುಗುತ್ತದೆ ಎಂಬುದೂ ಒಂದು ನಂಬಿಕೆ. ಪಕ್ಕಕ್ಕೆ ತಿರುಗಿದ ಮೇಲೆ ಮಗು ಸ್ವಲ್ಪ ದಿನ ಆಯ ತಪ್ಪಿ ಅಂಗಾತವಾಗಿ ಬೀಳುತ್ತದೆ, ಅಳುತ್ತದೆ. ನಂತರ ಬೋರಲಾಗಲು ಕಲಿಯುತ್ತದೆ. ಮತ್ತೆ ಅಂಗಾತ ತಿರುಗಲಾಗದೆ ಅಳುತ್ತದೆ. ಹಣೆ ನೆಲಕ್ಕೆ ತಗುಲಿಸಿಕೊಳ್ಳುತ್ತದೆ. ಆಗಲೂ ಅಳುತ್ತದೆ. ತಲೆಯೆತ್ತಿ ಆಚೆ ಈಚೆ ಕಣ್ಣರಳಿಸಿ ನೋಡುತ್ತದೆ. ಹೀಗೆ ಮಗು ಮೊದಲ ಉಸಿರು ತೆಗೆದುಕೊಂಡಾಗಿನಿಂದ ಬೆಳೆದು ಸ್ವತಂತ್ರವಾಗಿ ಬದುಕಲು ಕಲಿಯುವವರೆಗಿನ ಹಂತಗಳು ಪ್ರತಿಯಾಂದೂ ಬಹಳ ದೊಡ್ಡ ಸಾಧನೆಗಳೇ. ನಿಧಾನವಾಗಿ ಮಗು ಮುಂದೆ ಸರಿಯತೊಡಗುತ್ತದೆ. ಆಗಂತೂ ಮನೆಯವರಿಗೆಲ್ಲ ಪುರುಸೊತ್ತಿಲ್ಲದ ಓಡಾಟ. ಬಿಸಿ ಮುಟ್ಟಿದರೆ..! ಕುರ್ಚಿ-ಮೇಜು ಎಳೆದರೆ..! ಮುಂಬಾಗಿಲಿನಿಂದ ಹೊರಗೆ ಹೊರಟರೆ...! ಇತ್ಯಾದಿ ಯೋಚನೆಗಳು. ‘ಇನ್ನು ಮಗುವನ್ನು ಹಿಡಿಯುವುದು ಭಾಳ ಕಷ್ಟ! ’ ಎಂಬ ಉದ್ಗಾರ ಶುರು.

ಬೆಳೆಯುತ್ತಾ ಬೆಳೆಯುತ್ತಾ ಪ್ರತಿ ವಸ್ತುವನ್ನೂ, ಪ್ರತಿ ಮನುಷ್ಯನನ್ನೂ, ಹಿರಿಯರ ಪ್ರತಿಯಾಂದು ಚಲನವಲನವನ್ನೂ ಬೆರಗಾಗಿ ನೋಡುವ, ಅನುಕರಿಸುವ ಮಗುವಿನ ಪರಿ ನನ್ನನ್ನು ಎಷ್ಟೋ ಬಾರಿ ಚಕಿತಗೊಳಿಸುತ್ತದೆ.

ಮುಂದೆ ಸರಿದ ನಂತರ ಕೆಲವು ಮಕ್ಕಳು ಕುಳಿತುಕೊಳ್ಳತೊಡಗುತ್ತವೆ, ಕೆಲವು ಆಧಾರ ಹಿಡಿದು ನಿಲ್ಲತೊಡಗುತ್ತವೆ. ನಿಂತರೆ ಕೂರಲಾಗದೆ ಅಳುತ್ತವೆ. ಎತ್ತಿಕೊಂಡರೆ ಖುಷಿಯಿಂದ ಕೇಕೆ ಹಾಕುತ್ತವೆ. ಈ ಮಕ್ಕಳಾಟದ ಸೊಬಗು ಕಂಡು , ಅನುಭವಿಸಿದವರಿಗೇ ಗೊತ್ತು!

ಅವಳಿ ಮಕ್ಕಳಾದರಂತೂ ‘ಡಬಲ್‌ ಫನ್‌! ಡಬಲ್‌ ಟ್ರಬಲ್‌ !!’

ಕ್ರಮೇಣ ಮಗು ಕೈ ಹಿಡಿದು ಗೋಡೆ ಹಿಡಿದು ನಡೆಯತೊಡಗುತ್ತದೆ. ಅಪ್ಪ, ಅಮ್ಮ ಎಂದು ಪ್ರಾರಂಭವಾಗುವ ತೊದಲು ನುಡಿ, ಬಾಬಾ, ನುನ್ನು (ಹಾಲು) , ಬಿಬ್ಬಿ (ಹೊದಿಕೆ) , ಅಜ್ಜ, ಅಜ್ಜಿ, ಮಾಮ , ಅಕ್ಕ , ಅಣ್ಣ, ಟಾಟಾ, ಮಂಮಂ (ತಿಂಡಿ), ನಿನ್ನಿ (ನಿದ್ರೆ) , ಚಂದಮಾಮ (ಚಂದ್ರ) ಎಂದೆಲ್ಲ ತೊದಲು ಶಬ್ದಕೋಶ ಬೆಳೆಯುತ್ತದೆ. ಕಣ್ಣಿಗೆ ಕಾಣುವ ಪ್ರತಿಯಾಂದು ವಸ್ತುವನ್ನೂ ನೋಡುವ, ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ, ಕಂಡದ್ದನ್ನೆಲ್ಲ ಮುಟ್ಟುವ ತವಕ. ಚಂದಿರನಿಗೆ ಏಣಿ ಹಾಕುವ ಧಾವಂತ. ಮತ್ತೆ ಸ್ವಲ್ಪ ದೊಡ್ಡದಾದಾಗ ಮಾಡಬೇಡ ಎಂದಿದ್ದನ್ನೇ ಮಾಡುವ ತುಂಟತನ. ಮಗು ಹೇಗಿದ್ದರೂ ಚೆನ್ನ , ಏನು ಮಾಡಿದರೂ ಚೆನ್ನ ; ಮಗು ಎಂದರೆ ಚಿನ್ನ !

ಮಗು ದೊಡ್ಡದಾದಂತೆ, ಬೆಳೆದಂತೆ, ಯಾಕೋ ಒಂದು ಹಂತದಿಂದ ಅದರ ಚಟುಟಿಕೆಗಳ ಉತ್ಸಾಹ ಇಳಿಮುಖವಾಗುತ್ತಾ ಬರುತ್ತದೆ ಅನ್ನಿಸುತ್ತೆ. ಮಗು ಬೆಳೆಯುತ್ತಾ ಬೆಳೆಯುತ್ತಾ ತನ್ನ ಮುಗ್ಧತೆ ಕಳೆದುಕೊಳ್ಳುವುದು, ರಾಗ-ದ್ವೇಷಗಳು ಬೆಳೆಯುವುದು ಇದಕ್ಕೆ ಕಾರಣವಿರಬಹುದು. ತನಗೇ ಅರಿವಿಲ್ಲದಂತೆ ಮಗು ಈ ಹಂತಗಳನ್ನು ದಾಟಿ ಸ್ವತಂತ್ರ ಮನುಷ್ಯನಾಗುತ್ತಾನೆ. ನಂತರ ಹಿಂತಿರುಗಿ ಬಾಲ್ಯದೆಡೆ ನೋಡಿ, ‘ಆ ದಿನಗಳೇ ಚೆನ್ನಾಗಿತ್ತು’ ಎಂದು ಹಲುಬುತ್ತಾನೆ.

ಬಹುಶಃ, ಬುದ್ಧಿವಂತಿಕೆ ಬೆಳೆಸಿಕೊಳ್ಳುವುದರೊಂದಿಗೇ, ಬಾಲ್ಯದ ಮುಗ್ಧತೆಯ ಪಸೆಯೂ ಉಳಿದುಕೊಂಡರೆ ಮನುಷ್ಯ ಸದಾ ಸುಖಿಯಾಗಿದ್ದಾನು.

ಮುಖಪುಟ

/ ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X