ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನ ಅಕ್ಕಪಕ್ಕ: ಪುಸ್ತಕ ಪ್ರೀತಿ, ನಾಲಗೆ ರುಚಿ,ಭೂತದ ಕೋಲ

By ಭರತ್‌ಕುಮಾರ್‌, ಮೂಡಬಿದಿರೆಯಿಂದ
|
Google Oneindia Kannada News

ಗೃಹ ಸಚಿವ ಖರ್ಗೆ ಆನಂದ ತುಂದಿಲರಾಗಿದ್ದರು. ಸಾಹಿತ್ಯದ ಹಬ್ಬ ಉದ್ಘಾಟಿಸುವ ಮೊದಲ ಅವಕಾಶ ಅವರಿಗೆ ಸಿಕ್ಕಿತು. ಕಮಲಾ ಹಂಪನಾ ಹೊಗಳಿಕೆಯ ಜೊತೆಗೆ ನಾಡು- ನುಡಿಯ ಬಗೆಗೆ ಸರ್ಕಾರದ ಕಳಕಳಿಯನ್ನೂ ಅವರು ಬಿಚ್ಚಿಟ್ಟಿದ್ದು ಹೀಗೆ...

ಕೃಷ್ಣಾಜೀ ಬರಲಿಲ್ಲ. ಅದಕ್ಕೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವ ಮೊದಲ ಅವಕಾಶ ನನ್ನದಾಯಿತು. ಭಾಷೆ- ಸಂಸ್ಕೃತಿ ಉಳಿಯಲು ಇಂಥಾ ಸಮ್ಮೇಳನ ಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕೆಂಬುದು ಸರ್ಕಾರದ ಮಹದಾಸೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕೆಲಸಕ್ಕೆ ವೇಗ ದಕ್ಕಿಸಿ ಕೊಡುತ್ತಿದೆ. ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೃತ್ತಿಪರ ಶಿಕ್ಷಣದಲ್ಲಿ, ಸರಕಾರಿ ನೇಮಕಾತಿಯಲ್ಲಿ ಪ್ರತಿಶತ 5ರಷ್ಟು ಮೀಸಲಾತಿ ಕೊಡುತ್ತಿದ್ದೇವೆ. ನ್ಯಾಯಾಂಗ ಕ್ಷೇತ್ರದಲ್ಲೂ ತೀರ್ಪುಗಳು ಕನ್ನಡದಲ್ಲೇ ಬರಲಾರಂಭಿಸಿವೆ. ಕನ್ನಡ ನುಡಿ ತಂತ್ರಾಂಶದ ನಾಲ್ಕು ಆವೃತ್ತಿಗಳು ಈಗಾಗಲೇ ಆಡಳಿತದಲ್ಲಿ ಬಳಕೆಯಲ್ಲಿವೆ.

ರೈತರ ಆತ್ಮಹತ್ಯೆ ಸೇರಿದಂತೆ ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳು ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗಲಿರುವುದು ಸಂತೋಷದ ವಿಷಯ. ಸಮಸ್ಯೆಗಳಿಗೆ ಈ ಚರ್ಚೆಗಳಿಂದ ಪರಿಹಾರವೂ ಸಿಗಲಿ ಎಂದು ಆಶಿಸುತ್ತೇನೆ. ಕಮಲಾ ಹಂಪನಾ ಅವರದ್ದು ಬಹುಮುಖ ವಿದ್ವತ್ತು. ಅವರ ಅಧ್ಯಕ್ಷತೆಯ ಈ ಸಮ್ಮೇಳನದ ಮೂಲಕ ಕನ್ನಡದ ಕೆಲಸ ಮತ್ತಷ್ಟು ಚುರುಕಾಗಲಿ.

ಪುಸ್ತಕ ಪ್ರೀತಿ
ಸಮ್ಮೇಳನದಂಗಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಜೋರಾಗಿದೆ. 450ಕ್ಕೂ ಹೆಚ್ಚು ಪುಸ್ತಕ ವ್ಯಾಪಾರಿಗಳು, ಪ್ರಕಾಶಕರು ಪುಸ್ತಕ ಪ್ರಿಯರ ಇಂಬಿಗೆ ಸ್ಪಂದಿಸಲು ಅಂಗಡಿಗಳನ್ನು ಹಾಕಿದ್ದಾರೆ.

ಶಾಲಾ ಮಕ್ಕಳಿಗೆ ರಿಯಾಯಿತಿ ಬೆಲೆಯಲ್ಲಿ ಪುಸ್ತಕ ಸಿಗುತ್ತಿರುವುದು ಬೋನಸ್ಸು. ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಪುಸ್ತಕ ಖರೀದಿಸಲು ಇದೊಂದು ಅಪರೂಪದ ಅವಕಾಶ. ಇದರ ಲಾಭ ಪಡೆದುಕೊಂಡು, ಚೆಂದದ ಪುಸ್ತಕಗಳನ್ನು ತಮ್ಮದಾಗಿಸಿಕೊಳ್ಳಿ ಎಂಬುದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ। ಮೋಹನ್‌ ಆಳ್ವ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್‌. ಪ್ರದೀಪ್‌ ಕಲ್ಕೂರರ ಕರೆ.

ವಿಶ್ವನಾಥ್‌ ಮುಂದೆ 'ಭೂತದ ಕೋಲ’!
ಮೆರವಣಿಗೆ ನಂತರ ಶಿವರಾಮ ಕಾರಂತ ಸಭಾಂಗಣದ ಬಳಿ ಮೀನುಗಾರಿಕೆ ಸಚಿವ ವಸಂತ್‌ ಸಾಲ್ಯಾನ್‌ ಜೊತೆ ಎಪ್ಪತ್ತೊಂದು ಭೂತ ವೇಷಧಾರಿಗಳು ನಿಂತಿದ್ದವು. ಸಹಕಾರ ಸಚಿವ ವಿಶ್ವನಾಥ್‌ ಅಲ್ಲಿಗೆ ಬಂದವರೇ ನುಡಿಗಟ್ಟು ಹೇಳಿ ಎಂದು ಭೂತಗಳನ್ನು ಕೇಳಿದರು. ಆದರೆ ಭೂತಗಳು ಮಾಡಿದ್ದು ನಿವೇದನೆ. 'ನೇಮ ಇರುವಾಗ ಮಾತ್ರ ನಮಗೆ ಕೆಲಸ. ಉಳಿದ ಸಮಯ ಕೆಲಸವೇ ಇರೋದಿಲ್ಲ. ಭೂತ ಕೋಲ ಕಟ್ಟುವ ಪಂಬದರು, ಪರವರು, ನಲಿಕೆಯವರಿಗೆ ನೀವು ಸರ್ಕಾರದವರು ಸಹಾಯ ಮಾಡಿ’ ಎಂಬುದು ಭೂತಗಳ ಒಕ್ಕೊರಲಿನ ಮನವಿ. ಈ ಸಮಸ್ಯೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಕಿವಿಗೆ ಹಾಕುವುದಾಗಿ ಹೇಳಿ ವಿಶ್ವನಾಥ್‌ ಕಾಲಿಗೆ ಬುದ್ಧಿ ಹೇಳಿದರು.

ಪುನರ್‌ಪುಳಿ ಸಾರು, ಚೀನಿಕಾಯಿ ಸಾಂಬಾರು, ಜೈನರ ಕೇಕಿನ ಕೊಸರು, ಉಂಟು ಮಜ್ಜಿಗೆ ಗೋಧಿ ಖೀರು
ಮಾಜಿ ಸಚಿವ ಕೆ. ಅಮರನಾಥ ರೈ ಓಡಾಟ ಪಾಕ ಬಿಡಾರದ ಬಳಿ ಜೋರಾಗಿದೆ. ಊಟೋಪಚಾರ ಸಮಿತಿಯ ಅಧ್ಯಕ್ಷರು ಇವರೇ. ಮೊದಮೊದಲು ರುಚಿ ನೋಡಿ, ಪಾಕದ ಹದಕ್ಕೆ ಸರ್ಟಿಫಿಕೇಟು ಕೊಟ್ಟು ಬರುತ್ತಿದ್ದ ರೈ ಹಾಗೂ ಸ್ನೇಹಿತರು ದಕ್ಷಿಣ ಕನ್ನಡದ 'ನಳ’ನ್ನೆಲ್ಲಾ ತಂದು, ನೇಟಿವಿಟಿಯೂಟ ಹಾಕಿಸಲು ಟೊಂಕ ಕಟ್ಟಿದ್ದಾರೆ.

ಇಡೀ ಸಾಹಿತ್ಯ ಸಮ್ಮೇ ಳನದ ಸಂದರ್ಭದ ಸುಮಾರು 42,500 ಮಂದಿಗೆ ಬೆಳಗಿನ ಉಪಾ ಹಾರ. 1 ಲಕ್ಷ 5 ಸಾವಿರ ಮಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ. ಬಡಿಸಲೆಂದು 1 ಲಕ್ಷದ 75 ಸಾವಿರ ಊಟದ ಹಾಳೆ ಪ್ಲೇಟುಗಳನ್ನು ತರಿಸಲಾಗಿದೆ. 12 ಸಾವಿರ ಬಾಳೆಯ ಎಲೆಗಳನ್ನು ಕತ್ತರಿಸಿ ತರಲಾಗಿದೆ !

ಸಮ್ಮೇಳನದ ಮೊದಲ ದಿನ ಮೆರವಣಿಗೆ ಸಂದರ್ಭದಲ್ಲಿ 6,000 ಮಂದಿಗೆ ಊಟ ಏರ್ಪಾಟಾಗಿತ್ತು. ಅನನಾಸು ಪುಡ್ಡಿಂಗ್‌, ಇಡ್ಲಿ ಸಾಂಬಾರ್‌ ಚಟ್ನಿ, ಅವಲಕ್ಕಿ ಉಪ್ಪಿಟ್ಟು ಕಾಫಿ-ಟೀ. ರಾತ್ರಿ ಅನ್ನ ಸಾರು. ನಾಲಗೆಯಲ್ಲಿ ನೀರೋನೀರು.

ಉಳಿದಂತೆ ಮೆನು ಇಂತಿರಲಿದೆ...
ಡಿ. 19ರಂದು ಉಪಾಹಾರ: ಇಡ್ಲಿ ಸಾಂಬಾರು, ಚಟ್ನಿ, ಕಡ್ಲೆ ಅವಲಕ್ಕಿ, ಕಾಶಿಹಲ್ವ, ಕಾಫಿ ಟೀ.
ಭೋಜನ : ಮಾವಿನಕಾಯಿ ಉಪ್ಪಿನಕಾಯಿ, ತಿಮರೆ ಚಟ್ನಿ, ಅಲಸಂಡೆ ಪಲ್ಯ, ನುಗ್ಗೆ ಗುಳ್ಳ, ಬದನೆ ಮೆಣಸಿನಕಾಯಿ, ಟೊಮೆಟೋ ಸಾರು, ಚೀನಿಕುಂಬಳ, ಮಟ್ಟಿಗುಳ್ಳ ಬೋಳು ಸಾಂಬಾರು, ಹೆಸರುಬೇಳೆ ಪಾಯಸ, ಲಾಡು, ಮಜ್ಜಿಗೆ, ಸಂಜೆ ಉಪಾಹಾರ, ರಾತ್ರಿ ಸುಮಾರಾದ ಭೋಜನ.
ಡಿ. 20ರಂದು ಉಪಾಹಾರ : ಇಡ್ಲಿ ಸಾಂಬಾರು ಚಟ್ನಿ, ಅವಲಕ್ಕಿ ಉಪ್ಪಿಟ್ಟು, ಕೇಸರಿಬಾತ್‌, ಕಾಫಿ, ಟೀ.
ಭೋಜನ: ಸೌತೆ ಉಪ್ಪಿನಕಾಯಿ, ಮಾವಿನಕಾಯಿ ಚಟ್ನಿ, ಸುವರ್ಣಗಡ್ಡೆ ಕಡಲೆ ಪಲ್ಯ, ಜೀಗುಜ್ಜೆ ಮೆಣಸಿನಕಾಯಿ, ಪುನರ್‌ಪುಳಿ ಸಾರು, ಸೌತೆಕಾಯಿ, ಚೀನಿಕಾಯಿ ಸಾಂಬಾರು, ಕಡಲೆಬೇಳೆ ಪಾಯಸ, ಕಾಯಿ ಹೋಳಿಗೆ, ಮಜ್ಜಿಗೆ. ಸಂಜೆ ಉಪಾಹಾರ, ರಾತ್ರಿ ಮಾಮೂಲಿ ಭೋಜನ.
ಡಿ. 21ರಂದು ಉಪಾಹಾರ: ಇಡ್ಲಿ ಸಾಂಬಾರ್‌ ಚಟ್ನಿ, ಟೊಮೆಟೋಬಾತ್‌, ಜೈನರ ಕೇಕ್‌, ಕಾಫಿ ಟೀ.
ಭೋಜನ: ಹುಣಸೆ ಹುಳಿ ಉಪ್ಪಿನಕಾಯಿ, ತೆಂಗಿನಕಾಯಿ ಚಟ್ನಿ, ತೊಂಡೆಕಾಯಿ ಗೇರುಬೀಜ ಪಲ್ಯ, ಸೌತೆ, ಪಪ್ಪಾಯಿ ಮೆಣಸಿನಕಾಯಿ, ಹುರುಳಿ ಸಾರು, ಕುಂಬಳಕಾಯಿ ಬೋಳು ಸಾಂಬಾರು, ಜಿಲೇಬಿ, ಗೋಧಿ ಪಾಯಸ, ಮಜ್ಜಿಗೆ. ಸಂಜೆ ಉಪಾಹಾರ ಹಾಗೂ ರಾತ್ರಿ ಭೋಜನ.ಮೂಡಬಿದಿರೆಯ ವೈಶಿಷ್ಟ್ಯಗಳ ಸಹಿತ ಕರಾವಳಿಯ ಸಾಂಪ್ರದಾಯಿಕ ಉಪಾ ಹಾರ, ಭೋಜನದ ವ್ಯವಸ್ಥೆಯನ್ನು ಮಾಡ ಲಾಗಿದೆ. ಬ್ರಾಹ್ಮಣ, ಜೈನ ಹಾಗೂ ಕೊಂಕಣಿ ಖಾದ್ಯಗಳು ಊಟದ ವಿಶೇಷ .

ಮುಖ್ಯ ಬಾಣಸಿಗ ಭೋಜರಾಜ್‌ಗೆ ಧನ್ಯವಾದಗಳು. ಒಟ್ಟು 200 ಅಡುಗೆ ಭಟ್ಟರು ನಾಲಗೆ ರುಚಿ ತಣಿಸಲು ಸೌಟು ಹಿಡಿದರು. ಎಲ್ಲರೂ ಸದಾ ಬ್ಯುಸಿ. ನಡುನಡುವೆ ನಮಗದು ನಮಗಿದು ಎಂಬ ಬೇಡಿಕೆಗಳ ಗಲಿಬಿಲಿ.

English summary
71st All India Kannada Literary Conference 2003, Moodabidre
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X