ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಲಾವಿದನಿಗೆ ಸೃಜನಾತ್ಮಕ ಅತೃಪ್ತಿ ಇರಬೇಕು’

By Staff
|
Google Oneindia Kannada News


ಕಂಚುಕಂಠದ ‘ಕಂಠೀ ಜೋಯಿಸ’ ಲೋಹಿತಾಶ್ವ ಗಂಭೀರಮುಖಿ, ಸಮಾಜಮುಖಿ. ಅವರ ಮಿದುಳಲ್ಲಿ ವಚನ ಸಾಹಿತ್ಯದ ಇಂಬಿದೆ, ಎದೆಯಲ್ಲಿ ಸಾಹಿತಿಯ ಸೊಗಡಿದೆ. ಮಾತಿನಲ್ಲಿ ತತ್ತ್ವಗಳ ಸೆಳಕಿದೆ.

*ಚೇತನ್‌ ನಾಡಿಗೇರ್‌, ಮುಕುಂದ ತೇಜಸ್ವಿ

ಕಂಠೀ ಜೋಯಿಸ. ಸದ್ಯಕ್ಕೆ ಈ ಹೆಸರು ಕಿವಿಗೆ ಬಿದ್ದೊಡನೆ ಖಾಕಿ ಚೆಡ್ಡಿ ಹಾಕಿ ತಲೆಗೊಂದು ಟೊಪ್ಪಿ ಏರಿಸಿ ಕುದುರೆ ಮೇಲೆ ಕುಂತ ಲೋಹಿತಾಶ್ವ ಅವರ ಚಿತ್ರಣ ಸುಳಿಯುತ್ತೆ ಅಥವಾ ಉದ್ದದ ಬಿಳಿ ಗಡ್ಡ ಬಿಟ್ಟು ಕಾಶಿ ಪಂಡಿತನ ಗೆಟಪ್ಪಿನ ಅದೇ ಲೋಹಿತಾಶ್ವ ಕಣ್ಣಮುಂದೆ ಬರ್ತಾರೆ. ಗಿರೀಶ್‌ ಕಾಸರವಳ್ಳಿ ನಿರ್ದೇಶನದಲ್ಲಿ ಎಸ್‌.ಎಲ್‌.ಭೈರಪ್ಪನವರ ಜನಪ್ರಿಯ ಕಾದಂಬರಿ ‘ಗೃಹಭಂಗ’ ಮಸುಕಾಗಿದ್ದ ಲೋಹಿತಾಶ್ವ ಬಣ್ಣದ ಜೀವನಕ್ಕೆ ಮತ್ತೆ ಕಳೆ ತಂದಿದೆ.

ಖಳನಾಗಿ ಹೊಡೆತ ತಿನ್ನುವಾಗಲೂ ಎದೆ ಸೆಟೆದೇ ನಿಲ್ಲುವ, ಸೀಳುವಂಥಾ ನೋಟದ, ತಲೆಮೇಲೆ ಹೊಡೆದಂತೆ ಸ್ಪಷ್ಟವಾದ ಕಂಚಿನ ಕಂಠದ ಮಾತಿನ ಮಲ್ಲ ಲೋಹಿತಾಶ್ವ ಸುಮಾರು 500 ಚಿತ್ರಗಳಲ್ಲಿ ನಟಿಸಿರುವ ಅಪ್ಪಟ ಕಲಾವಿದ.

Lohitashvaಮಾಮೂಲಿ ಮಾತಿನಲ್ಲೂ ಅವರು ಫಿಲಾಸಫಿಯನ್ನು ನಿರರ್ಗಳವಾಗಿ ಹೇಳುತ್ತಾರೆ. ಭಾವತೀವ್ರರಾಗುತ್ತ ಸಮಾಜಮುಖಿಯಾಗುವ ಹಪಾಹಪಿಯನ್ನು ಅರುಹುತ್ತಾರೆ. ಎಷ್ಟೇ ಆದರೂ ಅವರು ಮೇಷ್ಟ್ರಾಗಿದ್ದವರಲ್ಲವೆ ? ಅದೂ ಕಾಲೇಜಲ್ಲಿ. ಪ್ರಾಧ್ಯಾಪಕ, ಪ್ರಾಚಾರ್ಯ, ನಟ, ನಾಟಕಕಾರ, ಸಾಹಿತಿ ಹೀಗೆ ಬಹುಮುಖ ಕ್ಷೇತ್ರಗಳನ್ನು ಮುಟ್ಟಿರುವ ಹಿರಿಯ ಪ್ರತಿಭೆ ಲೋಹಿತಾಶ್ವ.

ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರೂ, ಚಿತ್ರರಂಗದ ಸಮಾರಂಭಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ನಟ ಲೋಹಿತಾಶ್ವ. ಚಿತ್ರರಂಗದಲ್ಲಿ ಅವಿದ್ಯಾವಂತರೇ ಅಧಿಕವಿರುವ ಕಾರಣ, ತಾನು ಚಿತ್ರರಂಗದ ಇತರೆ ಚಟುವಟಿಕೆಗಳಿಂದ ದೂರವುಳಿದು ಅಭಿನಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡ ಬಗ್ಗೆ ಮುಚ್ಚುಮರೆ ಇಲ್ಲದೆ, ಕಡ್ಡಿ ಮುರಿದ ಹಾಗೆ ಹೇಳುತ್ತಾರೆ. ಅವರು ಏನೋ ಕಳೆದುಕೊಂಡಂತೆ ಕಾಣುತ್ತಾರೆ. ಹೊಸ ಸಾಹಸಕ್ಕೆ ಇನ್ನೂ ಕೈ ಚಾಚುವ ಜಾಯಮಾನದವರಂಬ ಕಾರಣಕ್ಕೆ ಇಷ್ಟವಾಗುತ್ತಾರೆ.

ಕೆಲವೊಮ್ಮೆ ನಟನಾಗಿ, ರಂಗಕರ್ಮಿಯಾಗಿ, ಮೇಷ್ಟ್ರಾಗಿ ಮತ್ತು ಕೆಲವೊಮ್ಮೆ ಸಮಾಜ ಸೇವಕನ ತರಹ ಮಾತನಾಡುವ ಲೋಹಿತಾಶ್ವ- ಕುಸಿಯುತ್ತಿರುವ ಜೀವನದ ಮೌಲ್ಯ, ಜೀವನ ಶೈಲಿ, ಕನ್ನಡ ರಂಗಭೂಮಿ, ಚಿತ್ರರಂಗದ ಬಗ್ಗೆ ತಮ್ಮ ಫಿಲಾಸಫಿಯನ್ನು ಹಂಚಿಕೊಂಡರು.

ನೀವು ಚಿತ್ರರಂಗಕ್ಕೆ ಕಾಲಿಟ್ಟ ಬಗೆ ಹೇಗೆ?
ನಾನು ಮೂಲತಃ ಹಳ್ಳಿಯವನು. ರೈತ ಕುಟುಂಬದಿಂದ ಬಂದವನು. ಶಾಲೆ, ಕಾಲೇಜಿನಲ್ಲಿದ್ದಾಗಲೆ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. 1960ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನಟನೆಗೆ ಬಂಗಾರದ ಪದಕ ಬಂತು. 6-7 ವರ್ಷ ಓದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೆ. ಆ ಸಮಯದಲ್ಲಿ ಬೇಸಾಯ ಮಾಡುತ್ತಿದ್ದೆ. ಜತೆಗೆ ಹಲವು ವಿಷಯಗಳ ಬಗ್ಗೆ ಓದುತ್ತಿದ್ದೆ. ನಂತರ ಇಂಗ್ಲೀಷ್‌ನಲ್ಲಿ ಎಂ.ಎ ಮಾಡಿ , 1969ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್‌ ಪ್ರಾಧ್ಯಾಪಕನಾದೆ.

ನಾನು ಮೇಷ್ಟ್ರಾಗಿದ್ದಾಗ ಪಾಠ ಹೇಳುವುದರ ಜತೆಗೆ, ವೈಜ್ಞಾನಿಕವಾಗಿ ಆಲೋಚನೆ ಮಾಡುತ್ತಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಸಮುದಾಯ ತಂಡದ ಜತೆ ನಿಕಟ ಸಂಪರ್ಕ ಹೊಂದಿದ್ದ ನಾನು, ತುಮಕೂರಿನಲ್ಲಿ ಸಮುದಾಯ ಪ್ರಾರಂಭ ಮಾಡಿದೆ. ಅದರ ಮೂಲೋದ್ದೇಶ ಪ್ರದರ್ಶನ ಕಲೆಗಳ ಮುಖಾಂತರ ವೈಜ್ಞಾನಿಕ ವಿಚಾರಧಾರೆಯನ್ನು ಜನತೆಗೆ ತಲುಪಿಸುವುದು. ಚಿಕ್ಕಂದಿನಿಂದಲೂ ನನಗೆ ವೈಚಾರಿಕತೆ ಒಂದು obsession. ಯಾಕೆ, ಏನು, ಹೇಗೆ ಎಂಬ ಪ್ರಶ್ನೆಗಳು ಸದಾ ನನ್ನ ಕಾಡಿವೆ. good question is better than a brilliant answer ಅನ್ನುವ ಮಾತನ್ನು ಬಲವಾಗಿ ನಂಬಿದವನು ನಾನು. 1981ರಲ್ಲಿ ನನ್ನ ನಾಟಕ ನೋಡಿದ ಶಂಕರ್‌ನಾಗ್‌ ತಮ್ಮ ಗೀತಾ ಸಿನಿಮಾಗೆ ಆಯ್ಕೆ ಮಾಡಿದರು. ವೃತ್ತಿ ಜತೆಗೆ ಅಭಿನಯ ಪ್ರವೃತ್ತಿಯಾಗಿ ಅಂಟಿಕೊಂಡಿತು.

ಇತ್ತೀಚಿಗೆ ಚಿತ್ರರಂಗದಿಂದ ಸ್ವಲ್ಪ ದೂರವಿರುವ ನೀವು, ಸದ್ಯಕ್ಕೆ ಏನು ಮಾಡುತ್ತಿದ್ದೀರಿ?
ಕೆಲಸ ಮಾಡುತ್ತಾ ಮಾಡುತ್ತಾ ನನಗೆ ಸಮಾಜ ಬಹಳ ಕೊಟ್ಟಿದೆ. ಒಳ್ಳೆಯ ನಟನಾಗಿ, ಮೇಷ್ಟ್ರಾಗಿ, ಗಂಡನಾಗಿ, ತಂದೆಯಾಗಿ ನನ್ನನ್ನು ರೂಪಿಸಿದೆ. ಇಂತಹ ಸಮಾಜಕ್ಕೆ ಈಗ ನಾನೇನಾದರೂ ಕೊಡಬೇಕೆನ್ನುವುದು ನನ್ನ ಗುರಿ. ನಾನು ಬೆಳೆದರಷ್ಟೇ ಸಾಲದು. ನನ್ನ ಸುತ್ತಮುತ್ತ, ನನ್ನೊಂದಿಗೆ ಇರುವವರು ಬೆಳೆಯಬೇಕು. ಇದು ನನ್ನ ಉಳಿದ ಸಮಯದ ಉದ್ದೇಶ.

ಹಾಗಾದರೆ ನಿಮ್ಮ ಮುಂದಿನ ಗುರಿ ಸಮಾಜ ಸೇವೆಯೇ?
ನಮ್ಮದು ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ. ಆದರೂ ಎಲ್ಲದರಲ್ಲೂ ನಮ್ಮ ಸ್ಥಾನ ಕೊನೆಗೆ ಬರುತ್ತದೆ. ಇದಕ್ಕೇನು ಕಾರಣ ? ಇದು ನನ್ನ ಸದ್ಯದ ಪ್ರಶ್ನೆ. ವಿದ್ಯಾಭ್ಯಾಸದ ಕೊರತೆ, ಮೂಢನಂಬಿಕೆ, ಅರ್ಥಹೀನ ಪರಂಪರೆ, ಸಂಪ್ರದಾಯ, ಧರ್ಮ, ಶಾಸ್ತ್ರ ಪುರಾಣಗಳ ಆಕ್ರಮಣ. ಇವುಗಳಲ್ಲಿ ಕಾರಣ ಅಡಗಿದೆ. ಅದಕ್ಕಾಗಿ ಕೋಮುವಾದದ ವಿರುದ್ಧ, ಜಾತಿ ರಾಜಕಾರಣದ ವಿರುದ್ಧ ಹೋರಾಟ ಮಾಡ್ತಾ, ಈ ದೇಶಕ್ಕೆ ನನ್ನದೇ ಆದ ಕೊಡುಗೆ ಸಲ್ಲಿಸಬೇಕೆನ್ನುವುದೇ ನನ್ನ ಇತ್ತೀಚಿನ ದಿನಗಳ ಚಟುವಟಿಕೆಯ ಮೂಲೋದ್ದೇಶ. ಕಲಾವಿದ ಅನ್ನುವುದರ ಜತೆಗೆ ಒಬ್ಬ ಸಮಾಜ ಸೇವಕ ಆಗಿ ಗುರುತಿಸಿಕೊಳ್ಳುವುದಕ್ಕೆ ನನಗೆ ಇಷ್ಟ .

ಈ ದಿಸೆಯಲ್ಲಿ ಜನರಿಗೆ ಜಾಗೃತಿ ಮೂಡಿಸುವುದು ಹೇಗೆ?
ಸಭೆ, ಸಮಾರಂಭ ಉದ್ದೇಶಿಸಿ ಕರ್ನಾಟಕದಾದ್ಯಂತ ಉಪನ್ಯಾಸ ಕೊಡುತ್ತಿದ್ದೇನೆ. ಸೇರೋ ಸಾವಿರಾರು ಸಂಖ್ಯೆಯಲ್ಲಿ ಎಲ್ಲೋ ಸ್ವಲ್ಪ ಜನ ನನ್ನ ವಿಚಾರ ಗ್ರಹಿಸಿದಾಗ ಅವರೂ ಸಹ Catalytic agent ಆಗಿ ಇದು ಬೆಳೆಯುತ್ತಾ ಹೋಗುತ್ತದೆ. ಕಸ ಅವತ್ತೂ ಇತ್ತು, ಇವತ್ತೂ ಇದೆ. ಎಷ್ಟು ಗುಡಿಸಿದರೂ ಕಸ ಇದ್ದೇ ಇರುತ್ತದೆ ಅನ್ನುವುದಾದರೆ ಯಾಕೆ ಗುಡಿಸಬೇಕು ಅಂತ ಗುಡಿಸದೇ ಸುಮ್ಮನಿರುವುದಕ್ಕಾವುದಿಲ್ಲ. ಅದು ಬೀಳ್ತಾನೆ ಇರುತ್ತೆ, ನಾವು ಗುಡಿಸುತ್ತಿರಬೇಕು. ಕಸ ಹಾಕೋದು ದುಷ್ಟರ ಕೆಲಸ. ಗುಡಿಸಿ ಗೊಬ್ಬರ ಹಾಕೋದು ಶಿಷ್ಟಾಚಾರ. ಹೊಸ ಹುಟ್ಟು ಸಾಧ್ಯ. ನಿರಾಸೆಗೆ ಕಾರಣ ಇಲ್ಲ.

ನೀವು ಮೂಲತಃ ಅಧ್ಯಾಪಕ. ಹಾಗಿದ್ದೂ ನಟನೆ ಮತ್ತು ಕೆಲಸ ಹೇಗೆ ಸಾಧ್ಯವಾಯಿತು?
1969ರಲ್ಲಿ ಇಂಗ್ಲೀಷ್‌ನಲ್ಲಿ ಎಂ.ಎ ಮುಗಿಸಿ, ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್‌ ಪ್ರಾಧ್ಯಾಪಕನಾಗಿ ವೃತ್ತಿ ಆರಂಭಿಸಿ ತುಮಕೂರು, ಗುಲ್ಬರ್ಗಾ, ಚಿತ್ರದುರ್ಗ, ಬೆಂಗಳೂರು, ದೇವನಹಳ್ಳಿ ಮುಂತಾದೆಡೆ 33 ವರ್ಷ ಸೇವೆ ಸಲ್ಲಿಸಿ 2000ರಲ್ಲಿ ನಿವೃತ್ತಿಯಾದೆ.

ಒಬ್ಬ ಮನುಷ್ಯ ಏಕಕಾಲದಲ್ಲಿ ಗಂಡನೂ, ತಂದೆಯೂ ಆಗುವುದಕ್ಕೆ ಸಾಧ್ಯವಾದರೆ ಪ್ರಾಧ್ಯಾಪಕನಾದವನು, ಕಲಾವಿದನಾಗುವುದು ಏಕಾಗುವುದಿಲ್ಲ ? ಕ್ರಿಯಾತ್ಮಕವಾಗಿ, ಸೃಜನಾತ್ಮಕವಾಗಿ ದಿನದ 24 ಘಂಟೆ ಕಳೆಯುವ ಅಭ್ಯಾಸ ಭಾರತೀಯರಿಗೆ ಇಲ್ಲ.

ಹಿಂದೆ ನಾಟಕಗಳನ್ನು ರಚಿಸುತ್ತಾ, ನಟಿಸುತ್ತಾ ಸಕ್ರಿಯರಾಗಿದ್ದ ತಾವು, ಈಗ ರಂಗಭೂಮಿಯಿಂದ ದೂರವಿರುವುದು ಏಕೆ?
ಇತ್ತೀಚಿಗೆ ನಾಟಕಗಳಲ್ಲಿ ಅಭಿನಯಿಸುತ್ತಿಲ್ಲ. ತಂಡ ಚಟುವಟಿಕೆಗಳಲ್ಲಿ ಜನಕ್ಕೆ ನಂಬಿಕೆ ಹೋಗಿದೆ. ವ್ಯಕ್ತಿ ಕೇಂದ್ರಿತ ಬದುಕು, ಬದುಕಿನ ಬಯಕೆ ಸಮಾಜ ಕೇಂದ್ರಿತ ಬದುಕನ್ನು ನಿರ್ಲಕ್ಷಿಸುವ ಹಾಗೆ ಮಾಡಿದೆ. ಇವತ್ತಿನ ನನ್ನ ನಿಲುವಿಗೆ 12ನೇ ಶತಮಾನದ ವಚನಕಾರರು, ಆ ದಿನಗಳ ಜಾತಿ ವಿನಾಶ ಚಳುವಳಿ, ಕಲ್ಯಾಣ ರಾಜ್ಯದ ಕಲ್ಪನೆ ಕಾರಣ. ಈ ದಿಕ್ಕಿನಲ್ಲಿ ನಾನು ಅಧ್ಯಯನ, ಅನುಷ್ಠಾನದಲ್ಲಿ ತೊಡಗಿದ್ದೇನೆ. ಜನಪರ - ಬಹುಜನಪರವಲ್ಲದುದನ್ನ ಚಿಂತಿಸುವುದಕ್ಕೂ ನನಗೆ ಪುರುಸೊತ್ತಿಲ್ಲ.

ಜನ ಮತ್ತೆ ರಂಗಭೂಮಿಗಾಗಿ ಸ್ಪಂದಿಸುವುದಕ್ಕೆ ಏನಾಗಬೇಕು?
ಹಿಂದೆಲ್ಲಾ ಮನರಂಜನೆ ಕಡಿಮೆ ಇತ್ತು. ಸಿನಿಮಾ ಅಥವಾ ನಾಟಕ ಈಗ ಹರಿದು ಹಂಚಿಹೋಗಿದೆ. ಸಂಗೀತ, ನಾಟ್ಯ, ಜಾನಪದ ಹೀಗೆ. ಮನರಂಜನೆಯ ಮೂಲ ಶಕ್ತಿ ಇದ್ದದ್ದು ಸಂಸ್ಕೃತಿಯಲ್ಲಿ. ಈಗ ದುಡ್ಡು ಮನರಂಜನೆ ಕೊಡುತ್ತದೆ. Culture has become a second handed item.

ಸಾಮಾಜಿಕ ಚಳುವಳಿಗಳು ಹಿಗ್ಗುವ, ಕುಗ್ಗುವ ಸ್ಥಿತಿಯನ್ನು ತಲಪುವುದು ಆಯಾ ಕಾಲ ಘಟ್ಟ ನಿರ್ಧರಿಸುತ್ತದೆ. 70ರ ನಾಟಕಗಳು ಇವತ್ತಿಲ್ಲ. ಪ್ರೇಕ್ಷಕ ತನ್ನ ಕುಟುಂಬದ ಜತೆ ಸಂಜೆಯಾದ ಮೇಲೆ ತಿರುಗಾಡುವುದೇ ಕಷ್ಟವಾಗಿದೆ. ಇವತ್ತು ಬೊಜ್ಜು ಕರಗಿಸುವುದಕ್ಕೆ ವಾಕಿಂಗ್‌ ಹೊರಟ ಹೆಣ್ಣಿನ ಮಾಂಗಲ್ಯ ಸರ ಕಿತ್ತು ಓಡಿ ಹೋಗುತ್ತಾರೆ. ಈ ದಿನಗಳಲ್ಲಿ ನಾಟಕ ನೋಡೋಕೆ ಜನ ಹೇಗೆ ಬರುತ್ತಾರೆ ? 2 ರೂಪಾಯಿಗೆ ಕೊಲೆ, ಕ್ಷುಲ್ಲಕ ಕಾರಣದ ಸೇಡಿಗಾಗಿ ರಕ್ತಪಾತ, ಧರ್ಮದ ಹೆಸರಲ್ಲಿ ಹಿಂಸಾಚಾರದ ಪ್ರಚೋದನೆ, ಎಂದೂ ಕಾಣದ ಇಲ್ಲದ ದೇವರುಗಳ ಹೆಸರಿನಲ್ಲಿ ಮುಗ್ಧರನ್ನು ದಾರಿ ತಪ್ಪಿಸುವ ಈ ದಿವಸಗಳಲ್ಲಿ ದೇಶ ಮುಂದುವರೆಯುವುದಾದರೂ ಹೇಗೆ? ನಾಟಕದ ಮುಖಾಂತರ ಮನರಂಜನೆ ಜತೆಗೆ ಒಂದಷ್ಟು ವೈಜ್ಞಾನಿಕ ಚಿಂತನೆ ಕೊಟ್ಟರೆ ಸ್ವೀಕರಿಸಲಾರದಂತಹ ಸ್ಥಿತಿಗೆ ಜನ ತಲುಪಿದ್ದಾರೆ. ಪ್ರಾಮಾಣಿಕತೆ, ಸಜ್ಜನಿಕೆ, ಸರ್ವಜನ ಹಿತ ಅಪಾಯಕಾರಿ ವಿಷಯಗಳಾಗಿ ಬಿಟ್ಟಿವೆ. ಸಭ್ಯರು ಬೇಕೆಂದರೆ, ವಿಚಾರವಾದಿಗಳು ಬೇಕೆಂದರೆ, ಜಾತ್ಯತೀತರು ಬೇಕೆಂದರೆ ಈ ದೇಶದ ಜೈಲುಗಳನ್ನು ಹುಡುಕಬೇಕಾಗಿದೆ. ಇದು ಯಾಕೆ ಹೀಗೆ? ಉತ್ತರ ಗೊತ್ತಿದೆ. ಹೇಳುವುದಕ್ಕೆ ಸೂಕ್ತ ಪರಿಸರ ಇಲ್ಲ.

ಇಂದಿನ ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯ?
ನನ್ನ ಮಗ ಅಭಿನಯಿಸಿದ್ದಾನೆ ಅನ್ನೋ ಕಾರಣಕ್ಕೆ ಅವನ ಅಭಿನಯದ ಬಗೆಗೆ ವಿಮರ್ಶೆ ಮಾಡಬೇಕು ಅನ್ನೋ ಕಾರಣಕ್ಕೆ ಅನೇಕ ವರ್ಷಗಳ ನಂತರ ನಾನು ‘ಪ್ಯಾರಿಸ್‌ ಪ್ರಣಯ’ ಮತ್ತು ‘ಸಿಂಗಾರವ್ವ’ ಚಿತ್ರಗಳನ್ನು ನೋಡಿದೆ. ಒಂದು ಕಲಾಕೃತಿ ನನ್ನ ಮೇಲೆ ಯಾವುದೇ ಪರಿಣಾಮವನ್ನು ಮಾಡದೆ, ಕೇವಲ ದುಷ್ಪರಿಣಾಮವನ್ನು ಮಾಡುವುದಾದರೆ ಅಂತಹ ಸಿನಿಮಾ, ನಾಟಕ ಯಾಕೆ ನೋಡಬೇಕು. ಅದು ಕಪ್ಪು ಹಣವೋ, ಕರ್ಪೂರದ ಹಣವೋ. ದುಡಿಯುವವನ ಶ್ರಮದ ಫಲ ಅದು. ಅದನ್ನ ಸದ್ಬಳಕೆ ಮಾಡಿಕೊಳ್ಳುವ ಮನಸ್ಸಿಲ್ಲದಿದ್ದಾಗ ಮನರಂಜನೆಯ ಹೆಸರಿನಲ್ಲಿ ಸಹಸ್ರಾರು ಕೋಟಿಗಳನ್ನು ನಿರರ್ಥಕಗೊಳಿಸುವುದು ಎಷ್ಟರ ಮಟ್ಟಿಗೆ ಸರಿ? All this is because- the wrong man does the right job.

ಇದುವರೆವಿಗೂ ಎಷ್ಟು ಸಿನಿಮಾ ಮತ್ತು ನಾಟಕಗಳಲ್ಲಿ ನಟಿಸಿದ್ದೀರಿ? ನಿಮಗೆ ತೃಪ್ತಿ ಕೊಟ್ಟಂತಹ ಪಾತ್ರ ಯಾವುದು?
ಇದುವರೆಗೂ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೀನಿ. ಅದರಲ್ಲಿ ಸುಮಾರು 20-30 ಚಿತ್ರಗಳು ತೃಪ್ತಿ ಕೊಟ್ಟಿರಬಹುದು. ಪಂಚಮ, ಕತ್ತಲೆ ದಾರಿ ದೂರ, ಹುಲಿಯ ನೆರಳು, ಕುಬಿ ಮತ್ತು ಇಯಾಲ, ಮೋಟೆ ರಾಮ್‌ ಮತ್ತು ದಂಗೆಯ ಮುಂಚಿನ ದಿನಗಳು ಮುಂತಾದ ನಾಟಕಗಳಲ್ಲಿ ನಟಿಸಿದ್ದೇನೆ. ಸೃಜನಾತ್ಮಕ ಅತೃಪ್ತಿ ಕಲಾವಿದನ ಅಥವಾ ಪ್ರತಿಭಾವಂತನ ಜೀವಂತಿಕೆಯ ಚಿಹ್ನೆ.

ಚಲನಚಿತ್ರಗಳಿಗಿಂತ ಕಿರುತೆರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದೀರಲ್ಲಾ?
ಚಲನಚಿತ್ರಗಳಲ್ಲಿ ಅವಕಾಶಗಳೇನೋ ಬರುತ್ತದೆ. ಆದರೆ ಸಿನಿಮಾದ ಹೆಸರು, ಅವುಗಳ ಕಥೆ, ನಿರ್ದೇಶಕರು ನೋಡಿದರೆ ಕೆಲಸ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ. ನಾಯಕ, ನಾಯಕಿ ಬಿಟ್ಟರೆ ಮಿಕ್ಕವರಿಗೆ ಬೆಲೆ ಇಲ್ಲ. ಬೆಲೆ ಇಲ್ಲದ ಕಡೆ ನಾನಿರುವುದಕ್ಕೆ ಇಷ್ಟ ಪಡುವುದಿಲ್ಲ. ಹಾಗಾಗಿ ಇತ್ತೀಚಿಗೆ ಸಿನಿಮಾ ಇಲ್ಲ ಅಂದ್ರೆ ತಪ್ಪಿಲ್ಲ.

ಚಿತ್ರರಂಗದಲ್ಲಿ ದುಡ್ಡಿನ ಅಹಂಕಾರವಿದೆ. ಹಣದ ಆಮಿಷ ಕಲೆ ಮತ್ತು ಕಲಾವಿದನನ್ನು ಕೊಲೆ ಮಾಡುತ್ತದೆ. ಸಿನಿಮಾದಲ್ಲಿ ಬೇಕಿದ್ದೋ ಅಥವಾ ಬೇಡದೆಯೋ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಹರಣ ನಡೆಯುತ್ತಲೇ ಇರುತ್ತದೆ. ಆದರೆ ದೂರದರ್ಶನದಲ್ಲಿ ಹಾಗಿಲ್ಲ. ದೂರದರ್ಶನದಲ್ಲಿ ಯಾರ ಸ್ವಾಭಿಮಾನಕ್ಕೂ ಧಕ್ಕೆ ಬರುವುದಿಲ್ಲ. ನಿರ್ಮಾಪಕನಿಂದ ಹಿಡಿದು ಕೆಳ ಹಂತದವರೆಗೂ ಪ್ರತಿಯಾಬ್ಬರೂ ಹೊಟ್ಟೆಪಾಡಿಗೆ ದುಡಿಯುವವರೇ. ಕಲಾವಿದನ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾಭಿಮಾನ ಹೆಚ್ಚಿಸುವುದು ದೂರದರ್ಶನ.

ನಿಮಗೆ ಇದುವರೆವಿಗೂ ಸಂದಿರುವ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು?
ನನಗೆ ತುಂಬಾ ಕಷ್ಟಪಟ್ಟು ನಾಟಕ ಅಕಾಡೆಮಿ ಪ್ರಶಸ್ತಿ ಕೊಟ್ಟಿದ್ದಾರೆ.

ನೀವು ಪ್ರಾಧ್ಯಾಪಕ, ನಟನೆ ಜತೆಗೆ ಸಾಹಿತಿಯಾಗಿ ಕೂಡಿ ಗುರುತಿಸಿಕೊಂಡಿದ್ದೀರಿ. ನೀವು ರಚಿಸಿರುವ ಸಾಹಿತ್ಯದ ಬಗ್ಗೆ ಹೇಳಿ?
ಸಾಹಿತ್ಯ ಅಕಾಡೆಮಿಯ ವತಿಯಿಂದ ಲಕ್ಷ್ಮೀಪತಿ ಕೋಲಾರ ಸಂಪಾದಿಸಿದ ಕವನ ಸಂಕಲನದಲ್ಲಿ ‘ಅಮ್ಮ ಸಾಯುವುದಿಲ್ಲ’ ಎಂಬ ನನ್ನ ಕವನ ಪ್ರಕಟವಾಗಿದೆ. ಇದಲ್ಲದೆ, ಚಾಪ್ಲಿನ್‌ ಕಿರು ಪರಿಚಯ, ಸಲ್ಲಾಪ- ಕಿರು ಹರಟೆಗಳ ಸಂಪಾದನೆ, ಮುಖ್ಯಮಂತ್ರಿ, ಸಂತೆಯಲ್ಲಿ ನಿಂತ ಕಬೀರ , ಡಾ. ತಿಪ್ಪೇಶಿ, ಹಾನುಷ್‌, ಬಣ್ಣದ ತಗಡಿನ ತುತ್ತೂರಿ ಎಂಬ ನಾಟಕಗಳು ಮತ್ತು ಅನೇಕ ಭಾಷಾಂತರ, ರೂಪಾಂತರಗಳು ಪ್ರಕಟವಾಗಿವೆ.

ಮುಂದಿನ ನಿಮ್ಮ ಯೋಜನೆ? ನಿರ್ದೇಶನದ ಕಡೆ ಹೊರಳುವ ಆಸೆಯೇನಾದರೂ ಇದೆಯೇ?
ವಚನಕಾರರ ಬಗೆಗೆ ಆಳವಾಗಿ 12ನೇ ಶತಮಾನವನ್ನ ಅಭ್ಯಾಸ ಮಾಡುತ್ತಿದ್ದೇನೆ. ಬಹುಶಃ ಅವರನ್ನು ಜನರಿಗೆ ತಲುಪಿಸುವಂತಹ ಒಂದು ನಾಟಕವೋ, ವೈಚಾರಿಕ ಲೇಖನಗಳೋ ಸೃಷ್ಟಿ ಮಾಡುವುದಕ್ಕೆ ಪ್ರಯತ್ನ ನಡೆಸಿದ್ದೇನೆ. ನಿರ್ದೇಶನ ಮಾಡುವ ಆಸೆ ಏನೋ ಇದೆ. ಅರ್ಥಹೀನ ಕಥೆ ಹೇಳೋಕೆ ಇಷ್ಟ ಇಲ್ಲ. ಅರ್ಥಪೂರ್ಣ ಕಥೆಯನ್ನು ಜನ ಸ್ವೀಕರಿಸುವುದಿಲ್ಲ. ಬೇರೆಯವರ ದುಡ್ಡಿನಲ್ಲಿ ಚೆಲ್ಲಾಟ ಆಡಲು ಇಷ್ಟವಿಲ್ಲ.

ಓದುಗರಿಗೆ ನಿಮ್ಮ ಸಂದೇಶ ?
ಮಾಡುವ ಕೆಲಸದ ಬಗ್ಗೆ ಗೌರವ, ನಿಷ್ಠೆ ಬೆಳೆಸಿಕೊಳ್ಳಿ. ನಿಯತ್ತಿನ ದುಡಿಮೆ ಮೈಗೂಡಿಸಿಕೊಂಡರೆ ಸಿಗುವ ನೆಮ್ಮದಿ ಬಹು ದೊಡ್ಡದು. ಅದಕ್ಕೆ ಯಾವುದೂ ಸಮವಲ್ಲ. ಇದು ಸಂದೇಶವೋ, ಆಶಯವೋ ನಿರ್ಧಾರ ನಿಮಗೆ ಬಿಟ್ಟಿದ್ದು.

ಲೋಹಿತಾಶ್ವ ಇ- ಮೇಲ್‌ ಐಡಿ- [email protected]

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X