‘ಮಾಧ್ಯಮದ ಅಬ್ಬರದಲ್ಲಿ ಸೊರಗಿದೆ ಓದುವ ಹವ್ಯಾಸ’
ಬೆಂಗಳೂರು : ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದಿಂದಾಗಿ ಯುವಜನರಲ್ಲಿ ಪುಸ್ತಕ ಓದುವ ಹವ್ಯಾಸ ಸಂಪೂರ್ಣವಾಗಿ ಸೊರಗಿ ಹೋಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಕನ್ನಡಭವನದಲ್ಲಿ ‘ಹಾಲೆಂಡ್‌ನಿಂದ ಲಂಡನ್‌ವರೆಗೆ’ ಪ್ರವಾಸ ಕಥನ ಮತ್ತು ‘ಪರಿವೇಷ’ ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಇತ್ತೀಚಿನ ದಿನದಲ್ಲಿ ಪುಸ್ತಗಳನ್ನು ಕೊಂಡು ಓದುವ ಅಭಿರುಚಿಯೇ ಇಲ್ಲವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ದಕ್ಷಿಣ ಭಾರತದ ಇತರ ಭಾಷೆಗಳಿಗೆ ಹೋಲಿಸಿದರೆ, ಕನ್ನಡದಲ್ಲಿ ಉತ್ತಮ ಪುಸ್ತಕಗಳಿವೆ. ಪ್ರತಿಯಾಬ್ಬ ಕನ್ನಡಿಗನೂ ಕನ್ನಡ ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮನೆಗೊಂದು ಪುಟ್ಟ ಗ್ರಂಥಾಲಯ ಇರಬೇಕು ಎಂದು ಅವರು ಹೇಳಿದರು.
ಮನೆಯಲ್ಲೊಂದು ವಾಚನಾಲಯ ಇದ್ದರೆ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯುತ್ತದೆ. ಇಲ್ಲವಾದರೆ, ಮಾಧ್ಯಮಗಳ ಅಬ್ಬರದಲ್ಲಿ ಅವರು, ಕನ್ನಡ ಸಂಸ್ಕೃತಿಯನ್ನೇ ಮರೆತುಬಿಡುತ್ತಾರೆ ಎಂದು ಎಚ್ಚರಿಕೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಪುಸ್ತಕ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಲೇಖಕಿ ಇಂದಿರಾ ಶಿವಣ್ಣ, ಪ್ರಕಾಶಕ ನಿತಿನ್ ಷಾ ಮೊದಲಾದವರು ಹಾಜರಿದ್ದರು.












Click it and Unblock the Notifications