56,432 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಬಿ.ವೈ.ವಿಜಯೇಂದ್ರ ಆಗ್ರಹ: ಕೆಪಿಎಸ್‌ಸಿ ಅವ್ಯವಸ್ಥೆ ವಿರುದ್ಧ ಆಕ್ರೋಶ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ಪ್ರತಿಭಾವಂತ ನಿರುದ್ಯೋಗಿಗಳ ಪಾಲಿಗೆ 'ಕಲ್ಪವೃಕ್ಷ'ವಾಗುವ ಬದಲು 'ಪಾಪಾಸುಕಳ್ಳಿ'ಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಲಕ್ಷಾಂತರ ಯುವಕರ ಭವಿಷ್ಯವನ್ನು ಅತಂತ್ರಗೊಳಿಸಿರುವ ಆಯೋಗದ ವ್ಯವಸ್ಥೆಗೆ ತಕ್ಷಣ ಕಾಯಕಲ್ಪ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಘೋಷಣೆ ಮಾತ್ರ, ಅಧಿಸೂಚನೆ ಎಲ್ಲಿ?

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸರ್ಕಾರದ ವಿಳಂಬ ನೀತಿ ಮತ್ತು ಆಯೋಗದ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದ್ದಾರೆ. ನಿರುದ್ಯೋಗಿ ಯುವಜನರ ಬೃಹತ್ ಪ್ರತಿಭಟನೆಗೆ ಮಣಿದು 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಆದರೆ ಈವರೆಗೆ ಅಧಿಕೃತ ಅಧಿಸೂಚನೆ ಹೊರಡಿಸದೆ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

BY Vijayendra

ಸಂವಿಧಾನಿಕ ಹೊಣೆ ಹೊತ್ತಿರುವ ಲೋಕಸೇವಾ ಆಯೋಗವು ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ ಮತ್ತು ದೋಷಪೂರಿತ ಪ್ರಕ್ರಿಯೆಗಳಿಂದ ಆಯೋಗವು ಕುಖ್ಯಾತಿ ಪಡೆದಿದೆ ಎಂದು ಅವರು ಟೀಕಿಸಿದ್ದಾರೆ. ನ್ಯಾಯಾಲಯದ ಅನೇಕ ತೀರ್ಪುಗಳು ಆಯೋಗದ ಭ್ರಷ್ಟ ವ್ಯವಸ್ಥೆಯನ್ನು ಬಯಲು ಮಾಡಿವೆ. ಹೊಸ ತಂತ್ರಜ್ಞಾನ ಅಳವಡಿಕೆಯ ಭರವಸೆಗಳನ್ನು ಉದ್ಯೋಗಾಕಾಂಕ್ಷಿಗಳು ನಂಬುವ ಸ್ಥಿತಿಯಲ್ಲಿಲ್ಲ. ಇನ್ನಾದರೂ ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿಕೊಂಡು ಸುಭದ್ರ ವ್ಯವಸ್ಥೆ ರೂಪಿಸದಿದ್ದರೆ ಆಯೋಗದ ಅಸ್ತಿತ್ವಕ್ಕೇ ಧಕ್ಕೆ ಬರಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರಧಾನಿ ಸಂಚರಿಸುವ ಹಾದಿಯಲ್ಲೇ ಸ್ಫೋಟಕ ಪತ್ತೆ: ರಾಜ್ಯ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ
ಪ್ರಧಾನಿ ಸಂಚರಿಸುವ ಹಾದಿಯಲ್ಲೇ ಸ್ಫೋಟಕ ಪತ್ತೆ: ರಾಜ್ಯ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

ಸರ್ಕಾರವು ತನ್ನ ಬದ್ಧತೆಯನ್ನು ಪ್ರದರ್ಶಿಸಿ, ತಕ್ಷಣವೇ 56,432 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು. ನ್ಯಾಯೋಚಿತವಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿ. ಇಲ್ಲವಾದರೆ, ಹತಾಶೆಯ ಅಂಚಿನಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳ ಆಕ್ರೋಶ ಸ್ಫೋಟಗೊಳ್ಳಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕರ ಈ ಹೇಳಿಕೆಯು ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವ ಸಾಧ್ಯತೆಯಿದೆ.

ಸಿಎಂ ಸಿದ್ದರಾಮಯ್ಯ ಘೋಷಿಸಿದ್ದೇನು?

ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮತ್ತು ನಿರುದ್ಯೋಗಿ ಯುವಜನತೆಗೆ ಆಸರೆಯಾಗಲು ಈ ವರ್ಷ ಒಟ್ಟು 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅತೀ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದರು. ರಾಜ್ಯ ಸರ್ಕಾರವು ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಿಸುವ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎಂಬ ನೀತಿಯಡಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಸ್‌ಸಿ (SC) ಸಮುದಾಯಕ್ಕೆ ಶೇ.17 ಮತ್ತು ಎಸ್‌ಟಿ (ST) ಸಮುದಾಯಕ್ಕೆ ಶೇ.7ರಂತೆ ಒಟ್ಟು ಶೇ.24ರಷ್ಟು ಮೀಸಲಾತಿಯನ್ನು ಕಲ್ಪಿಸುವ ತೀರ್ಮಾನವನ್ನು ಸರ್ಕಾರ ಎತ್ತಿ ಹಿಡಿದಿದೆ ಎಂದು ಹೇಳಿದ್ದರು.

ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ 59 ಅಲೆಮಾರಿ ಜಾತಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ನೀಡಲು ಸರ್ಕಾರ ಮುಂದಾಗಿದೆ. ಸಚಿವ ಸಂಪುಟದ ನಿರ್ಧಾರದಂತೆ, 'ಸಿ' ಕೆಟಗರಿ ಅಡಿಯಲ್ಲಿ ಬರುವ ನೇಮಕಾತಿ ಹುದ್ದೆಗಳಲ್ಲಿ ಶೇ.20ರಷ್ಟನ್ನು ಈ 59 ಅಲೆಮಾರಿ ಜಾತಿಗಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ಪ್ರಸಕ್ತ ನಿಯಮದಂತೆ ಈ ಕೆಟಗರಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.

ಒಂದು ವೇಳೆ ಶೇ 17ರಷ್ಟು ಮೀಸಲಾತಿ ಕಲ್ಪಿಸುವ ಕುರಿತಾದ ನ್ಯಾಯಾಲಯದ ತೀರ್ಪು ಸರ್ಕಾರದ ಪರವಾಗಿ ಬಂದಲ್ಲಿ, ಈ ಹಿಂದೆ ಸಚಿವ ಸಂಪುಟದಲ್ಲಿ ಚರ್ಚಿಸಿದಂತೆ 6%, 6% ಮತ್ತು 5% ಹಂಚಿಕೆಯ ಸೂತ್ರವನ್ನು ಪಾಲಿಸಲಾಗುವುದು. ಇದರಲ್ಲಿ ಶೇ 6ರಷ್ಟು ಮೀಸಲಾತಿಯನ್ನು 'ಬ್ಯಾಕ್‌ಲಾಗ್' ಹುದ್ದೆಗಳ ಭರ್ತಿಗೆ ಬಳಸಿಕೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದರು. ದಲಿತ ಸಂಘಟನೆಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ಸರ್ಕಾರದ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಲಿವೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸರ್ಕಾರವು ಜನರಿಗೆ ನೀಡಿದ ವಚನವನ್ನು ಪಾಲಿಸುತ್ತಿದೆ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+