• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವಾಡುವ ನುಡಿಸೂತ್ರ ಹಿಡಿದ ದೇವರು!

By * ಎಸ್ಕೆ. ಶಾಮಸುಂದರ, ಚ.ಹ. ರಘುನಾಥ
|

ಇವರು ಬರೆದಿರುವುದು ಕಥೆಯಲ್ಲ . ಕಾದಂಬರಿಯೂ ಅಲ್ಲ . ಆದ್ದರಿಂದಲೇ ಇವರು ನಿಮಗೆ ಪರಿಚಯವಿರುವ ಸಾಧ್ಯತೆ ಕಡಿಮೆ. ಅಂದಹಾಗೆ ಇವರು ಲಿಂಗದೇವರು ಹಳೆಮನೆ. ವೃತ್ತಿಯಲ್ಲಿ ಮೇಷ್ಟ್ರು ಹಾಗೂ ಸಂಶೋಧಕರು.

ಲಿಂಗದೇವರು ಅವರ ವ್ಯಕ್ತಿತ್ವಕ್ಕೆ ಇದಮಿತ್ಥಂ ಎಂದು ಚೌಕಟ್ಟು ಕೂರಿಸುವುದು ಕಷ್ಟ . ಸಾಹಿತ್ಯ ವಿಮರ್ಶೆ, ವಯಸ್ಕರ ಶಿಕ್ಷಣ ಹಾಗೂ ಅಂಕಣ ಸಾಹಿತ್ಯ ಕ್ಷೇತ್ರಗಳಲ್ಲಿ ಅವರದ್ದು ಎದ್ದು ಕಾಣುವ ಸೇವೆ. ಬ್ರೆಕ್ಟ್‌ನ ಮಹತ್ವದ ನಾಟಕಗಳನ್ನು ಕನ್ನಡೀಕರಿಸುವ ಮೂಲಕ ಅನುವಾದದಲ್ಲೂ ಎತ್ತಿದಗೈ ಅನ್ನಿಸಿದ್ದಾರೆ. ಮಾತ್ರವಲ್ಲದೆ, ಸ್ವತಂತ್ರ ನಾಟಕಗಳನ್ನೂ ರಚಿಸುವ ಮೂಲಕ ಕನ್ನಡ ಆಧುನಿಕ ಕನ್ನಡ ರಂಗಭೂಮಿಯ ಒಂದಂಗವೇ ಆಗಿದ್ದಾರೆ. ಇದೆಲ್ಲಾ ಮೀರಿ, ಲಿಂಗದೇವರು ನಮಗೆ ಅತ್ಯಂತ ಮುಖ್ಯವಾಗುವುದು ಭಾಷಾಶಾಸ್ತ್ರದ ದೃಷ್ಟಿಯಿಂದ.

ಜಾಗತೀಕರಣದ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳು ಅನೇಕ ಸವಾಲುಗಳಿಗೆ ಎದುರಾಗಿವೆ. ಬುಡಕಟ್ಟು ಭಾಷೆಗಳ ಪಾಡಂತೂ ಮತ್ತೂ ಶೋಚನೀಯ. ಈ ಹಿನ್ನೆಲೆಯಲ್ಲಿ ಭಾಷೆಯ ಸ್ಥಿತ್ಯಂತರಗಳನ್ನು ಗುರ್ತಿಸುವುದು, ಭಾಷೆಗೆ ವ್ಯಾಕರಣವನ್ನು ರೂಪಿಸುವುದು, ಆ ಮೂಲಕ ಭಾಷೆಯನ್ನು ಜೀವಂತವಾಗಿರಿಸಲು ಪ್ರಯತ್ನಿಸುವ ಚಟುವಟಿಕೆಗಳು ಅತಿ ಮುಖ್ಯ. ಇಂಥಾ ಸವಾಲಿನ ಪ್ರಕ್ರಿಯೆಯಲ್ಲಿ ತೊಡಗಿರುವ ಕೆಲವರಲ್ಲಿ ಲಿಂಗದೇವರದು ಎದ್ದು ಕಾಣುವ ಹೆಸರು. ಅದಕ್ಕೆ, ಕಳೆದ 27 ವರ್ಷಗಳಿಂದ (1973 ರಿಂದ 2002ರಂತೆ) ಅವರು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ದುಡಿಯುತ್ತಿರುವುದೂ ಕಾರಣವಿರಬಹುದು. ಲಿಂಗದೇವರಿಂದ ಕನ್ನಡ ಕಲಿತ ಅನೇಕ ಕನ್ನಡೇತರರು, ತಾವು ಕಲಿತದ್ದನ್ನು ಇತರರಿಗೆ ಕಲಿಸುವ ಕಾಯಕದಲ್ಲಿ ವಿಶ್ವಾದ್ಯಂತ ನಿರತರಾಗಿದ್ದಾರೆ.

ಭಾಷೆಯಿಂದ ಭಾವೈಕ್ಯತೆ : ಮಾತೃಭಾಷೆಯನ್ನು ಹೊರತುಪಡಿಸಿ ಇತರ ಭಾಷೆಗಳನ್ನು ಕಲಿಯುವ ಪ್ರಕ್ರಿಯೆ ಭಾವೈಕ್ಯತೆಗೂ ಸಹಕಾರಿ ಎನ್ನುತ್ತಾರೆ ಲಿಂಗದೇವರು. ಈ ನಿಟ್ಟಿನಲ್ಲಿ ಅವರು ರಚಿಸಿರುವ, 'ಎ ಸೆಲ್ಫ್‌ ಇನ್‌ಸ್ಟ್ರಕ್ಷನಲ್‌ ಕೋರ್ಸ್‌ ಇನ್‌ ಕನ್ನಡ" ಹಾಗೂ 'ಆ್ಯನ್‌ ಇಂಟೆನ್ಸಿವ್‌ ಕೋರ್ಸ್‌ ಇನ್‌ ಕನ್ನಡ" ಪುಸ್ತಕಗಳು ಕನ್ನಡೇತರರು ಕನ್ನಡ ಕಲಿಯಲು ಅತ್ಯುತ್ತಮ ಸಾಧನಗಳಾಗಿವೆ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗಂತೂ, ಇಂಗ್ಲೀಷಿನ ಮೂಲಕವೇ ಕನ್ನಡ ಕಲಿಯಲು ಈ ಜನಪ್ರಿಯ ಪುಸ್ತಕಗಳು ಉಪಯುಕ್ತವಾಗಿವೆ.

ಮಾಧ್ಯಮಗಳಿಂದಾಗಿ ಬದಲಾಗುತ್ತಿರುವ ಭಾಷಾ ಸ್ವರೂಪ : ಮಾಧ್ಯಮಗಳು ಹೆಚ್ಚಿದಂತೆಲ್ಲಾ ಭಾಷೆಯ ಮೂಲಭೂತ ಸ್ವರೂಪ ಬದಲಾಗುತ್ತಿದೆ. ಜನರನ್ನು ನೇರವಾಗಿ ಮುಟ್ಟುವಲ್ಲಿ ಮಾಧ್ಯಮಗಳು ನಡೆಸುವ ಪ್ರಯೋಗಗಳಿಂದಾಗಿ ಭಾಷೆಯಲ್ಲಿನ ಮಡಿವಂತಿಕೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಲಿಂಗದೇವರು. ಉದಾಹರಣೆಗೆ- ಜಾಹಿರಾತುಗಳಲ್ಲಿ ಕ್ರಿಯಾಪದಗಳ ಬಳಕೆ ಕಡಿಮೆಯಾಗುತ್ತಿರುವುದನ್ನು ಹೆಕ್ಕಿ ತೋರಿಸುವ ಅವರು, ಮಾಧ್ಯಮಗಳಿಂದಾಗಿ ಭಾಷೆಯ ಮೇಲಿನ ಪರಿಣಾಮದ ಬಗ್ಗೆ ಪ್ರಸ್ತುತ ಅಧ್ಯಯನ ನಡೆಸುತ್ತಿದ್ದಾರೆ.

ಮೈಸೂರು ಪ್ರಾಂತ್ಯದ ಜನಪ್ರಿಯ ದೈನಿಕ 'ಆಂದೋಲನ"ದಲ್ಲಿ ಮೂರು ವರ್ಷಗಳಿಂದ ಅಂಕಣ ಬರೆಯುವ ಮೂಲಕ ಲಿಂಗದೇವರು ಭಾಷಾಶಾಸ್ತ್ರದ ಹೊರತಾಗಿ ಪ್ರಚಲಿತಕ್ಕೂ ಹತ್ತಿರವಾಗಿದ್ದಾರೆ. ಅವರ ರಂಗಸಾಧನೆಯನ್ನು ಗುರ್ತಿಸಿ, ತೆರವಾಗುತ್ತಿರುವ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಅವರನ್ನು ಆರಿಸಿದ್ದರೂ, ವೃತ್ತಿಯಲ್ಲಿನ ತೊಡಕುಗಳಿಂದಾಗಿ ಅವರು ರಂಗಾಯಣಕ್ಕೆ ತೆರಳಲು ಸಾಧ್ಯವಾಗಿಲ್ಲ . ಇದರಿಂದಾಗಿ ಸಿಐಐಎಲ್‌ಗೆ ಒಳಿತೇ ಆಯಿತು ಅನ್ನುವುದು ಭಾಷಾಪ್ರಿಯರ ಸಮಾಧಾನ.

ಬಹುರೂಪಿ ಪ್ರತಿಭೆ ಲಿಂಗದೇವರು ಹಳೆಮನೆ ಅವರನ್ನು ಅಂಕಿಅಂಶಗಳಲ್ಲಿ ಈ ರೀತಿ ಗುರ್ತಿಸಬಹುದು:

ಜನನ : 06.03.1948

ಶಿಕ್ಷಣ : ಭಾಷಾಶಾಸ್ತ್ರದಲ್ಲಿ ಅಣ್ಣಾಮಲೈ ವಿವಿಯಿಂದ ಸ್ನಾತಕೋತ್ತರ ಪದವಿ. ಮೈಸೂರು ವಿವಿ- ಎಂಎ (ಕನ್ನಡ) ಪರೀಕ್ಷೆಯಲ್ಲಿ ಮೊದಲ ರ್ಯಾಂಕ್‌, ನಾಲ್ಕು ಚಿನ್ನದ ಪದಕ, ಎರಡು ನಗದು ಬಹುಮಾನ. ಮಲೇಷಿಯಾ, ಸಿಂಗಪೂರ್‌, ಜರ್ಮನಿ, ಶ್ರೀಲಂಕಾ ಸುತ್ತಿದ್ದಾರೆ.

ಸಂದ ಗೌರವ, ಸೇವೆ ಸಲ್ಲಿಸಿದ ಹುದ್ದೆ:

  • ರಂಗಭೂಮಿ ಮತ್ತು ನಾಟಕ ಕ್ಷೇತ್ರಗಳ ಸಾಧನೆಯನ್ನು ಗುರ್ತಿಸಿ 1997 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
  • ನಿರ್ದೇಶಕರು, ಸ್ಟೇಟ್‌ ರಿಸೋರ್ಸ್‌ ಸೆಂಟರ್‌, ಮೈಸೂರು (1987-1991)
  • 1991 ರಿಂದ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಆಂದೋಲನದ ಕನ್ಸಲ್ಟಂಟ್‌
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವ (1995 -1998)
  • ರಂಗಸಮಾಜ- 2000, ಸದಸ್ಯರು
  • ಮೈಸೂರಿನ ರಂಗಚಟುವಟಿಕೆಗಳ ಒಕ್ಕೂಟ ' ಸಮುದಾಯ" ದ ಸ್ಥಾಪಕ ಅಧ್ಯಕ್ಷರು

ಪ್ರಕಟಿತ ನಾಟಕಗಳು : ಚಿಕ್ಕದೇವ ಭೂಪ (1982), ಹೈದರ್‌ (1987), ಅಂತೆಂಬರ ಗಂಡ (1995), ತಷ್ಕರ (1996) ಹಾಗೂ ಶಾಪ (2000)

ಇತರ ಕೃತಿಗಳು : ಮಾತುಕತೆ, ಭಾಷೆ, ಪ್ರಸ್ತುತ (ಅಂಕಣ ಬರಹಗಳು), ಸಂದರ್ಭ (ಅಂಕಣ ಬರಹಗಳು), ಶ್ರೀ. ಎಂ. ವಿಶ್ವೇಶ್ವರಯ್ಯ (ಎನ್‌.ಬಿ.ಟಿ), ಸಾಮಾಜಿಕ- ಆರ್ಥಿಕ- ಸಾಂಸ್ಕೃತಿಕ- ಶೈಕ್ಷಣಿಕ ಉದ್ದೇಶದ 12 ಬೀದಿ ನಾಟಕಗಳ ಪ್ರಕಟಣೆ. ಸಾಹಿತ್ಯ, ಭಾಷಾಶಾಸ್ತ್ರ , ರಂಗಭೂಮಿ, ನಾಟಕ ವಿಷಯಗಳ ಬಗ್ಗೆ ಅನೇಕ ಸಂಶೋಧನಾ ಬರಹಗಳು.

ಭಾಷಾಶಾಸ್ತ್ರ : ಎ ಸೆಲ್ಫ್‌ ಇನ್‌ಸ್ಟ್ರಕ್ಷನಲ್‌ ಕೋರ್ಸ್‌ ಇನ್‌ ಕನ್ನಡ, ಆ್ಯನ್‌ ಇಂಟೆನ್ಸಿವ್‌ ಕೋರ್ಸ್‌ ಇನ್‌ ಕನ್ನಡ ಹಾಗೂ ಆಟೊ ಇನ್‌ಸ್ಟ್ರಕ್ಷನಲ್‌ ಕೋರ್ಸ್‌ ಇನ್‌ ಕನ್ನಡ

ಅನುವಾದಿತ ನಾಟಕಗಳು : ಧರ್ಮಪುರಿಯ ದೇವದಾಸಿ, ಮದರ್‌ ಕರೇಜ್‌, ಮನುಷ್ಯ ಅಂದರೆ ಮನುಷ್ಯರೇ , ಮಟಾಷ್‌ ರಾಜ, ಚುಪ್ಪುತಾಳೆ, ಗುಂಡುತಾಳೆ (ಬ್ರೆಕ್ಟ್‌ ನಾಟಕಗಳ ಕನ್ನಡಾನುವಾದ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more