• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಹಾಗೂ ಕೈಲಾಸಂ

By Staff
|

ಕನ್ನಡವನ್ನು ಉಳಿಸುವುದು ಹೇಗೆ? ಬೆಳೆಸುವುದು ಹೇಗೆ? ಅಂಗಳದಿಂದ ಆಫೀಸಿಗೆ ಹಾಗೂ ಅಂಗಡಿಗೆ ಕನ್ನಡವನ್ನು ತರುವುದು ಹೇಗೆ- ಎನ್ನುವ ಚರ್ಚೆಗಳು ರಾಜ್ಯೋತ್ಸವ ತಿಂಗಳಲ್ಲಿ ಬೀದಿ ಬೀದಿಯಲ್ಲೂ ನಡೆಯುತ್ತಿವೆ. ವಾಟಾಳ್‌ ನಾಗರಾಜ್‌ ಅವರಂತೂ ಕನ್ನಡ ಉಳಿಸಲಿಕ್ಕಾಗಿ ಉರುಳು ಸೇವೆ ನಡೆಸುತ್ತಾರೆ. ಉರುಳು ಸೇವೆ ನಡೆಸಿದರೆ ಕನ್ನಡ ಉಳಿಯುತ್ತಾ?

ನಮ್ಮ ನಡುವಿನ ಶ್ರೇಷ್ಠ ವಿಮರ್ಶಕ, ಚಿಂತಕರಲ್ಲೊಬ್ಬರಾದ ಡಾ।ಕೆ.ವಿ.ನಾರಾಯಣ ಅವರು ಕನ್ನಡ ಉಳಿಸುವುದರ ಬಗ್ಗೆ ಮಂಡಿಸುವ ವಿಚಾರಗಳು ಆಸಕ್ತಿ ಹುಟ್ಟಿಸುವಂತಿವೆ. ಅವರು ಹೇಳುವುದೇನೆಂದರೆ : ಕನ್ನಡ ಉಳಿಯುತ್ತದೆ, ಜಾಗತೀಕರಣ ಅಥವಾ ಇಂಗ್ಲೀಷ್‌ ಆಕ್ರಮಣವನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ.

ಅನ್ಯ ಆಕ್ರಮಣ ಹಾಗೂ ಆತಂಕಗಳು ಕನ್ನಡಕ್ಕೆ ಹೊಸತೇನೂ ಅಲ್ಲ . ಈ ಮುನ್ನ ಸಂಸ್ಕೃತ ಕೂಡ ಇವತ್ತಿನ ಇಂಗ್ಲೀಷಿನಂತೆಯೇ ಕನ್ನಡಕ್ಕೆ ಆತಂಕ ಒಡ್ಡಿತ್ತು . ಆದರೆ, ಸಂಸ್ಕೃತದ ಸವಾಲನ್ನು ಕನ್ನಡ ಅರಗಿಸಿಕೊಂಡು ಉಳಿದರೆ, ಸಂಸ್ಕೃತ ಮರೆತ(ಮೃತ) ಭಾಷೆಯೆನಿಸಿಕೊಂಡಿತು. ಸಂಸ್ಕೃತದ ವಿರುದ್ಧದ ಈಜಿನಲ್ಲಿ ಕನ್ನಡ ಗೆದ್ದ ಬಗೆಯನ್ನು ನಾರಾಯಣ ಅವರು ವಿವರಿಸುವುದು ಹೀಗೆ-

ಮೊದಲನೆಯದಾಗಿ ಅನೇಕ ಸಂಸ್ಕೃತ ಪದಗಳನ್ನು ಯಾವುದೇ ಮಡಿವಂತಿಕೆಯಿಲ್ಲದೆ ಕನ್ನಡ ತನ್ನದಾಗಿಸಿಕೊಂಡಿತು. ಇವತ್ತು ಆ ಪದಗಳನ್ನು ಸಂಸ್ಕೃತ ಪದಗಳೆಂದು ಯಾರೂ ಆಕ್ಷೇಪಣೆ ಎತ್ತುವುದಿಲ್ಲ . ಎರಡನೆಯದಾಗಿ, ಸಂಸ್ಕೃತ ಪದಗಳನ್ನು ಕನ್ನಡಕ್ಕೆ ತರುವ ಸಂದರ್ಭದಲ್ಲಿ - ಆ ಪದಗಳನ್ನು ಬರೆಯಲಿಕ್ಕಾಗಿಯೇ ಕೆಲವು ಹೊಸ ಅಕ್ಷರಗಳನ್ನು ಕನ್ನಡ ರೂಪಿಸಿಕೊಂಡಿತು. ಅಂಥ 19 ಅಕ್ಷರಗಳು ಕನ್ನಡ ವರ್ಣ ಮಾಲೆಯಲ್ಲಿದ್ದು , ಆ ಅಕ್ಷರಗಳು ಕೇವಲ ಕನ್ನಡದಲ್ಲಿ ಒಂದಾಗಿರುವ ಸಂಸ್ಕೃತ ಶಬ್ದಗಳನ್ನು ಬರೆಯಲಿಕ್ಕಾಗಿ ಮಾತ್ರ ಬಳಕೆಯಾಗುತ್ತಿವೆ. ಕೊನೆಯದಾಗಿ- ಇವತ್ತು ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದ ನಡೆಯುತ್ತಿದೆಯಲ್ಲ, ಅದರ ವಿಧಾನವೇ ಸರಿಯಿಲ್ಲ. ಪಂಪ, ರನ್ನನ ಬಳಗವನ್ನು ಗಮನಿಸಿ, ನಮ್ಮ ಹಿಂದಿನ ಸಾಹಿತಿಗಳು ಮೂಲ ಕೃತಿಗಳನ್ನು ಪುನಃ ಸೃಷ್ಟಿಸುತ್ತಿದ್ದರು. ಆದರೆ, ನಾವಿಂದು ಮಕ್ಕಿಕಾ ಮಕ್ಕಿ ಎನ್ನುವಂತೆ ಅನುವಾದ ಮಾಡುತ್ತಿದ್ದೇವೆ. ಈ ಸುಲಭದ ಮಾರ್ಗ ಭಾಷೆಯ ಬೆಳವಣಿಗೆಗೆ ಅಷ್ಟೇನೂ ಅನುಕೂಲವಾದುದಲ್ಲ. ಬದಲಿಗೆ ಪುನಃ ಸೃಷ್ಟಿ ಭಾಷೆಯ ಬಳಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಸಂಸ್ಕೃತದ ಬಗೆಗೆ ಕನ್ನಡ ಯಾವ ರೀತಿ ಸೆಣೆಸಿ ಗೆದ್ದಿತೊ, ಇಂಗ್ಲೀಷಿನ ಸಂದರ್ಭದಲ್ಲೂ ಕನ್ನಡ ಅದೇ ರೀತಿಯ ತಂತ್ರಗಳನ್ನು ಅನುಸರಿಸಬೇಕೆನ್ನುವುದು ನಾರಾಯಣ ಅವರ ಸ್ಪಷ್ಟ ನಿಲುವು. ಅವರ ವಿಚಾರ ಸರಣಿ ಭಾವುಕತೆಯದಾಗಲೀ, ಅಭಿಮಾನದ ಉಕ್ಕಿನದಾಗಲಿ ಅಲ್ಲವೆನ್ನುವುದನ್ನು ಗಮನಿಸಬೇಕು. ಅದು

ವಾಸ್ತವದ ನೆಲೆಗಟ್ಟಿನದು, ಅಧ್ಯಯನದ ನಂತರ ಮೂಡಿಬಂದ ಫಲಿತ.

ಇಂಗ್ಲೀಷನ್ನು ಕನ್ನಡದ ಸಂದರ್ಭಕ್ಕೆ ಒಗ್ಗಿಸಿಕೊಳ್ಳುವುದು ಎನ್ನುವ ಕೆ.ವಿ.ಎನ್‌. ಅವರ ಮಾತು ಕೈಲಾಸಂ ಅವರನ್ನು ನೆನಪಿಸುತ್ತದೆ. ಕೈಲಾಸಂ ಮಾಡಿದುದು ಅದನ್ನೇ ತಾನೇ. ಕನ್ನಡದ ನಡನಡುವೆ ಇಂಗ್ಲೀಷ್‌ ಶಬ್ದಗಳನ್ನು ಎಗ್ಗಿಲ್ಲದೆ ಬಳಸುವುದು ಕೈಲಾಸಂ ಸ್ಟೈಲು. ಅಂದರೆ, ನಾವಿಂದು ಕನ್ನಡ ಉಳಿಸಲಿಕ್ಕಾಗಿ ಕೈಲಾಸಂ ಸ್ಟೈಲ್‌ಗೆ ಮರಳಬೇಕು. ಕೈಲಾಸಂ ಕನ್ನಡ ಕುಲಗೆಡಿಸುತ್ತಿದ್ದಾರೆ ಎನ್ನುವ ಟೀಕೆಗಳಿರುವುದರಿಂದ, ನಮ್ಮ ಕನ್ನಡ ಉಳಿಸುವ ಮಾರ್ಗಗಳು ಸಂಪ್ರದಾಯಸ್ಥರಿಗೆ ಕನ್ನಡವನ್ನು ಕುಲಗೆಡಿಸುವ ಪ್ರಯತ್ನಗಳಾಗಿ ಕಂಡರೆ... ?

ನೆಲೆ ಕಳಕೊಳ್ಳುವುದಕ್ಕಿಂಥ ಕುಲ ಕೆಡಿಸಿಕೊಳ್ಳುವುದೇ ಒಳ್ಳೆಯದೆಂದು ಸಮಾಧಾನ ಪಟ್ಟುಕೊಳ್ಳೋಣ, ಅದೇ ಅನಿವಾರ್ಯವೆಂದು ನಂಬೋಣ, ಇರಲಿ.

ನವಂಬರ್‌ ಶುರುವಿನಿಂದಲೂ- ಹೆಚ್ಚೂ ಕಡಿಮೆ ಪ್ರತಿದಿನ ಸಂಜೆಯೂ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿರುವ ಅಫಿಶಿಯಲ್‌ ಮಳೆಯ ನಡುವೆ ಕನ್ನಡ ವಿಚಾರಗಳು ತೇಲಿ ಬರಲಿಕ್ಕೆ ಕಾರಣ ಕೂಡ ಕೈಲಾಸಂ ಅವರೇ. ಟಿಪಿಕಲ್‌ ಟಿ.ಪಿ.ಕೈಲಾಸಂ ನಾಟಕಕ್ಕಾಗಿ ಸಿ.ಆರ್‌.ಸಿಂಹ ಮತ್ತೆ ಬಣ್ಣ ಹಚ್ಚಿಕೊಳ್ಳುತ್ತಿರುವುದೇ ಈ ಲಹರಿಯ ಮೂಲ. ಕೈಲಾಸಂ ಅವರ ಜೀವನದ ಘಟನೆಗಳು ಹಾಗೂ ನಾಟಕಗಳನ್ನು ಆಧರಿಸಿ ರೂಪಿಸಿದ ಈ ನಾಟಕ ಕನ್ನಡ ರಂಗಭೂಮಿಯ ಪ್ರಯೋಗಶೀಲತೆಯ ಫಲವಾಗಿ ಹುಟ್ಟಿಕೊಂಡದ್ದು. ಹೆಸರಾಂತ ನಾಟಕಕಾರ ಟಿ.ಎನ್‌.ನರಸಿಂಹನ್‌ ಇದರ ಕರ್ತೃ. ಟಿಪಿಕಲ್‌ ಕೈಲಾಸಂಗೆ ಜೀವ ತುಂಬಿದವರು- ಸಿ.ಆರ್‌.ಸಿಂಹ. ಕನ್ನಡಕ್ಕೊಬ್ಬರೇ ಕೈಲಾಸಂ; ಸಿಂಹ ಕೂಡ ಕನ್ನಡಕ್ಕೊಬ್ಬರೇ.

ನವಂಬರ್‌ 10 ರ ಶನಿವಾರ ಸಂಜೆ 7 ಗಂಟೆಗೆ ಜಯನಗರದ ನ್ಯಾಷನಲ್‌ ಕಾಲೇಜಿನ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಟಿಪಿಕಲ್‌ ಟ.ಪಿ.ಕೈಲಾಸಂ ನಾಟಕ ಪ್ರದರ್ಶನವಿದೆ. ವೇದಿಕೆಯಲ್ಲಿ ಸಿಂಹ ನಟನಾಗಿರುವುದಿಲ್ಲ , ಕೈಲಾಸಂ ಆಗಿರುತ್ತಾರೆ. ಪರಕಾಯ ಪ್ರವೇಶ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಿಂಹ ಅವರನ್ನು ನೋಡಬೇಕು. ವಾರದ ಕೊನೆಯಲ್ಲಿ ಇದಕ್ಕಿಂಥ ಬೆಚ್ಚನೆಯ ಅನುಭವ ಇನ್ನೊಂದಿರಲಾರದು.

ನವಂಬರ್‌ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ರಾಜಧಾನಿಯಲ್ಲಿ ಜೋರಾಗಿವೆ. ನ. 9 ಮತ್ತು 10 ರಂದು ಸಂಕೇತ್‌ ಬಳಗ ಶಂಕರ್‌ನಾಗ್‌ ನೆನಪಿನಲ್ಲಿ ‘ಇತಿ ನಿನ್ನ ಅಮೃತಾ’ ನಾಟಕ ಪ್ರದರ್ಶಿಸುತ್ತಿದೆ. ಪ್ರತಿ ದಿನ ಸಂಜೆ 7 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ. ಶಂಕರ್‌ ಪತ್ನಿ ಅರುಂಧತಿ ರಾವ್‌, ಶ್ರೀನಿವಾಸ್‌ ಪ್ರಭು ನಟಿಸುತ್ತಿದ್ದಾರೆ. ಜಾವೇದ್‌ ಸಿದ್ದಿಕಿ ಅವರ ಹಿಂದಿ ನಾಟಕವನ್ನು ಜಯಂತ ಕಾಯ್ಕಿಣಿ ಕನ್ನಡಕ್ಕೆ ತಂದಿದ್ದಾರೆ. ನಿರ್ದೇಶನ ಎಂ.ಎಸ್‌. ಸತ್ಯು ಅವರದೆಂದ ಮೇಲೆ ಹೊಸತನ ಇರಲೇಬೇಕು.

ಮನಸ್ಸು ಮಾಡಿ ಮನೆ ಬಿಟ್ಟಿರಾದರೆ- ಈ ನಾಟಕಗಳು ಮನಸ್ಸಿನೊಂದಿಗೆ ದೇಹವನ್ನೂ ಬೆಚ್ಚಗಿಟ್ಟಾವು. ಹೊಸ ಚೈತನ್ಯವೊಂದು ನಿಮ್ಮದಾದೀತು. ಮನೆಯಲ್ಲಿ ಮಕ್ಕಳು ಚಂಡಿ ಹಿಡಿದಿದ್ದಾರಾ? ಅವರನ್ನು ಮುಕುಲ ಬಾಲ ನೃತ್ಯೋತ್ಸವಕ್ಕೆ ಕಳಿಸಿ. ಕಳೆದ 15 ವರ್ಷಗಳಿಂದ ಬಾಲ ಪ್ರತಿಭೆಗಳಿಗೆ ನೀರೆರೆಯ್ತುತಿರುವ ಸಾಧನ ಸಂಗಮದ ಕಾರ್ಯಕ್ರಮವಿದು. ನ. 13, 14 ರಂದು ಎಡಿಎ ರಂಗಮಂದಿರದಲ್ಲಿ ನಡೆಯುವ ಈ ಉತ್ಸವದಲ್ಲಿ ರಾಜ್ಯದ ಮಕ್ಕಳಲ್ಲದೆ ಕೇರಳ, ಆಂಧ್ರಪ್ರದೇಶಗಳ ಮಕ್ಕಳೂ ಕುಣಿಯಲಿದ್ದಾರೆ. ಆ ಹುಮ್ಮಸ್ಸು , ಮಕ್ಕಳ ಮನಸ್ಸು ಎಲ್ಲರದಾಗಲಿ.

ಕನ್ನಡಕ್ಕೊಬ್ಬರೇ ಕೈಲಾಸಂ!

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X