• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀದಿ ಸಂಭಾಷಣೆ, ಚಿತ್ರಗೀತೆ, ಕನ್ನಡಪ್ರೇಮ...

By Staff
|

Chidambar Kakathkar‘ನಮಸ್ಕಾರ ಚಿದಂಬರ ಕಾಕತ್ಕರ್‌ ಅವರೇ.’

‘ನಮಸ್ಕಾರ.’

‘ನೀವು ಎಷ್ಟು ಸಮಯದಿಂದ ಟೆಲಿಕಾಂನಲ್ಲಿ ಕೆಲಸ ಮಾಡುತ್ತಿದ್ದೀರಿ?’

‘ನಾನು ಸುಮಾರು 25 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ.’

‘ನಿಮ್ಮ ಹವ್ಯಾಸಗಳೆನು?’

‘ನನ್ನ ಮುಖ್ಯ ಹವ್ಯಾಸ ಸಂಗೀತ. ನಾನೊಬ್ಬ ಕೊಳಲು ವಾದಕ.’

‘ಇದನ್ನು ನೀವೇ ಕಲಿತದ್ದೊ....?’

‘ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವ. ಹಾಗಾಗಿ ಆರಂಭದಲ್ಲಿ ಗುರು ಅಂತ ಇಲ್ಲದೇನೇ ನಾನೇ ಕಲಿತದ್ದು. ಆ ಮೇಲೆ ಮಂಗಳೂರಲ್ಲಿ ಕೆಲಸಕ್ಕೆ ಸೇರಿದ ಮೇಲೆ ಕಲಾನಿಕೇತನದ ಗೋಪಾಲಕೃಷ್ಣ ಐಯರ್‌ ಅವರಿಂದ ತರಬೇತಿ ಪಡೆದಿದ್ದೇನೆ.’

‘ನಿಮಗೆ ಮಂಗಳೂರು ಕೇಂದ್ರದ ಕಾರ್ಯಕ್ರಮಗಳು ಹೇಗನ್ನಿಸುತ್ತವೆ?’

‘ಇತ್ತೀಚೆಗೆ ಒಂದು ವರ್ಷದಿಂದೀಚೆಗೆ ಚೆನ್ನಾಗಿ ಬರುತ್ತಿವೆ.’ (ದಾಕ್ಷಿಣ್ಯಕ್ಕೆ ಹೇಳಿದ್ದು )

‘ನೀವು ನಮ್ಮ ನಿಲಯದ ಓರ್ವ ಹಳೇ ಶ್ರೋತೃ...’

‘ನಾನು 1962 ರಿಂದಲೇ ಆಕಾಶವಾಣಿಯ ಕಾಯಂ ಶ್ರೋತೃ. ಮಂಗಳೂರು ನಿಲಯದ ನಿಯಮಿತ ಪ್ರಸಾರ 1976ರಲ್ಲಿ ಆರಂಭವಾದ ಮೊದಲ ದಿನದ ಯುವವಾಣಿಯಲ್ಲಿ ನನ್ನ ಕೊಳಲು ವಾದನ ಪ್ರಸಾರವಾಗಿತ್ತು.’

‘ಓ, ನಮಗೇ ಮರೆತು ಹೋದ ವಿಚಾರವೊಂದನ್ನು ತಿಳಿಸಿದ್ದೀರಿ. ನೀವು ಚಿತ್ರಗೀತೆಗಳನ್ನು ಕೇಳುತ್ತಿರುತ್ತೀರಿ. ನಿಮಗೆ ಇತ್ತೀಚಿನ ಗೀತೆಗಳು ಇಷ್ಟವಾಗುತ್ತವೋ ಅಥವಾ ಹಳೆಯವೋ?’

‘ಚಿತ್ರಗೀತೆಗಳ ವಿಚಾರದಲ್ಲಿ ಹೇಳುವುದಾದರೆ ಸುಮಾರು 1955 ರಿಂದ 1970 ರ ವರೆಗೆ ಬಂದಂತಹ ಕನ್ನಡ, ಹಿಂದೀ, ತಮಿಳು ಅಥವಾ ತೆಲುಗು ಗೀತೆಗಳಿಗೆ ಸ್ಪಂದಿಸಿದಷ್ಟು ಆ ಮೇಲೆ ಬಂದ ಗೀತೆಗಳಿಗೆ ಸ್ಪಂದಿಸಲು ನನಗೆ ಸಾಧ್ಯವಾಗುತ್ತಾ ಇಲ್ಲ.’

‘ಅಂದರೆ ನೀವು ಮಾಧುರ್ಯಕ್ಕೆ ಹೆಚ್ಚು ಒತ್ತು ಕೊಡುತ್ತೀರಿ ಎಂದಾಯಿತು. ಇತ್ತೀಚಿನ ಚಿತ್ರಗೀತೆಗಳು ಹೆಚ್ಚು ಸಂಕೀರ್ಣವಾಗಿರುತ್ತವೆ. ಇವುಗಳನ್ನು ಸುಲಭವಾಗಿ ಗ್ರಹಿಸಿ ಮನಸ್ಸಿನಲ್ಲಿ ರೆಕಾರ್ಡ್‌ ಮಾಡಲು ಕಷ್ಟವಾಗುತ್ತದೆ. ಏಕೆಂದರೆ ಮನುಷ್ಯ ಟ್ಯೂನ್‌ ಮಾಡುವ ಕಾಲ ಹೋಗಿ ಕಂಪ್ಯೂಟರ್‌ ಟ್ಯೂನ್‌ ಮಾಡುವ ಕಾಲ ಬಂದದ್ದರಿಂದ ಹೀಗಾಗಿದೆ ಎಂದು ನಿಮಗನ್ನಿಸುತ್ತಿದೆಯೇ?’

‘ಇದೂ ಒಂದು ಕಾರಣವಿರಬಹುದು. ಈಚಿನ ಚಿತ್ರಗೀತೆಗಳನ್ನು ಅವುಗಳ ಮೂಲ ಸಂಗೀತದೊಡನೆ ಮಾತ್ರ ಹಾಡಲು ಸಾಧ್ಯ. ಆದರೆ ಹಳೆಯ ಗೀತೆಗಳನ್ನು ಯಾವ ಬಂಧನವೂ ಇಲ್ಲದೇ ನಮ್ಮಷ್ಟಕ್ಕೇ ಗುಣುಗುಣಿಸುತ್ತಾ ಆಸ್ವಾದಿಸಬಹುದಿತ್ತು. ಒಂದು ಹಾರ್ಮೋನಿಯಂ ಮತ್ತು ತಬಲಾ ಇಟ್ಟುಕೂಂಡು ಹಳೆಯ ಗೀತೆಗಳ ಕಾರ್ಯಕ್ರಮ ಕೊಡಬಹುದು.’

‘ನಿಮಗೆ ಯಾವ ಸಂಗೀತ ನಿರ್ದೇಶಕರು ಹೆಚ್ಚು ಇಷ್ಟ?’

‘ಕನ್ನಡದ ಮಟ್ಟಿಗೆ ಹೇಳುವುದಾದರೆ ಎಂ. ವೆಂಕಟರಾಜು ಅವರು. ಈಚಿನ ಯುವ ಪೀಳಿಗೆಯವರು ಅವರ ಹೆಸರನ್ನಾದರೂ ಕೇಳಿದ್ದಾರೋ ಇಲ್ಲವೋ?. ’

‘ಭಕ್ತ ಕನಕದಾಸ...?’ (ಹಿನ್ನೆಲೆಯಲ್ಲಿ ‘ಶೃಂಗಾರ ಶೀಲಾ ಸಂಗೀತ ಲೋಲಾ...’ ಹಾಡು ಬರುವುದು)

‘ಹೌದು. ಭಕ್ತ ಕನಕದಾಸ, ಸ್ವರ್ಣಗೌರಿ, ನಂದಾದೀಪ, ಜೀವನ ತರಂಗ ಇಂತಹ ಬೆರಳೆಣಿಕೆಯ ಚಿತ್ರಗಳು ಅವರವು. ಆದರೆ ಅಂತಹ ಆರ್ಕೆಷ್ಟ್ರೇಶನ್‌ ಆಗಲೀ, ಅಂತಹ ಸಂಯೋಜನೆ ಆಗಲೀ ಇದುವರೆಗೆ ಯಾವುದೇ ಸಂಗೀತ ನಿರ್ದೇಶಕರಿಗೂ ಮಾಡಲು ಸಾಧ್ಯವಾಗಿಲ್ಲ.’

‘ಅಂತೂ ನಿಮಗೆ ಅವರು ಹೆಚ್ಚು ಇಷ್ಟವಾಗಿದ್ದಾರೆ. ನಿಮ್ಮ ಮೆಚ್ಚಿನ ಗಾಯಕ ಅಥವಾ ಗಾಯಕಿ ಯಾರು?’

‘ಕನ್ನಡದಲ್ಲಿ ನಿಸ್ಸಂಶಯವಾಗಿ ಪಿ.ಬಿ.ಶ್ರೀನಿವಾಸ್‌. ಹಿಂದಿಯಲ್ಲಿ ರಫಿ.’

‘ಇಲ್ಲಿಗೆ ನೀವು ಮಾಧುರ್ಯಕ್ಕೆ ಪ್ರಾಧಾನ್ಯ ಕೊಡುವವರು ಎಂದು ಖಾತ್ರಿಯಾಯಿತು. ಇದು ನವಂಬರ್‌ ಅಂದರೆ ಕನ್ನಡದ ಬಗ್ಗೆ ಮಾತಾಡುವ ತಿಂಗಳು. ನಮ್ಮ ರಾಜ್ಯದಲ್ಲಿ ಈಗ ಕನ್ನಡದ ಸ್ಥಿತಿ ಗತಿ ಹೇಗೆ?’

‘ಇಡೀ ರಾಜ್ಯದ ಬಗ್ಗೆ ಹೇಳುವುದಕ್ಕಿಂತ ನಮ್ಮ ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಗ್ಗೆ ಹೇಳುವುದಾದರೆ ಇಲ್ಲಿ ಕನ್ನಡಕ್ಕೆ ಅಂತಹ ತೊಂದರೆ ಏನೂ ಆಗಿಲ್ಲ ಎಂದೇ ನನ್ನ ಭಾವನೆ. ಇಲ್ಲಿ ಎಷ್ಟೋ ಇಂಗ್ಲಿಷ್‌ ಓದುವ ಮಕ್ಕಳಿರಬಹುದು, ಎಷ್ಟೋ ಇಂಗ್ಲಿಷ್‌ ಮೀಡಿಯಂ ಶಾಲೆಗಳಿರಬಹುದು, ಆದರೂ ಆಂತರಿಕವಾಗಿ ಇಲ್ಲಿಯ ಜನರ ಮನಸ್ಸಿನಲ್ಲಿ ಕನ್ನಡವೇ ಇನ್ನೂ ಮೂಲ ಭಾಷೆಯಾಗಿ ಉಳಿದಿದೆ. ಇದಕ್ಕೆ ನಾನು ಗ್ರಹಿಸುವ ಕಾರಣವೆಂದರೆ, ಇಲ್ಲಿಯ ಜನರಲ್ಲಿ ಸುಮಾರು ಶೇಕಡಾ 70 ರಿಂದ 75 ಜನರಿಗೆ ಕನ್ನಡ ಮಾತೃ ಭಾಷೆ ಅಲ್ಲ. ಅದು ತುಳು ಇರಬಹುದು, ಕೊಂಕಣಿ ಇರಬಹುದು ಅಥವಾ ನನ್ನ ಹಾಗೆ ಚಿತ್ಪಾವನೀ ಇರಬಹುದು. ಆದರೂ ನಾವೆಲ್ಲ ಒಂದನೆಯ ಕ್ಲಾಸಿನಿಂದ ಕನ್ನಡವನ್ನೇ ಓದಿದ್ದು, ಕನ್ನಡದಲ್ಲೇ ವ್ಯವಹರಿಸಿದ್ದು. ಹಾಗಾಗಿ ಇಲ್ಲಿಯ ಜನರಿಗೆ ಕನ್ನಡದ ಬಗ್ಗೆ ವಿಶೇಷ ಅಭಿಮಾನ. ನಾನು ಈಗ ಇಂಗ್ಲಿಷ್‌ ನಲ್ಲ್ಲಿ ಮಾತಾಡುವುದಾದರೆ ಇಂಗ್ಲಿಷ್‌ನಲ್ಲಿ ಆಲೋಚಿಸಿ ಮಾತಾಡುವುದಿಲ್ಲ. ಕನ್ನಡದಲ್ಲಿ ಆಲೋಚಿಸಿ ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಮಾತಾಡುತ್ತೇನೆ. ನನ್ನ ಹಾಗೇ ಹೆಚ್ಚಿನವರು.’

‘ಹಾಗಾದರೆ ನಾವು ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ಮಾತಾಡುವುದು ಬೇಡ....’

‘ನಮ್ಮ ಜಿಲ್ಲೆಯ ಮಟ್ಟಿಗಂತೂ ಖಂಡಿತ ಬೇಡ.’

‘ನಿಮ್ಮ ಮೆಚ್ಚಿನ ಯಾವುದಾದರೊಂದು ಚಿತ್ರಗೀತೆ ಹೇಳುತ್ತೀರಾ?’

‘ನಾನು ಒಂದು ಕನ್ನಡ ಹಾಡನ್ನೇ ಆಯ್ಕೆ ಮಾಡೋಣವೆಂದುಕೊಂಡಿದ್ದೇನೆ. ಅದು ವಿಜಯ ನಗರದ ವೀರಪುತ್ರ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್‌ ಹಾಡಿರೋದು. ನಿಮ್ಮಲ್ಲಿ ಆ ಧ್ವನಿಮುದ್ರಿಕೆ ಇದೆ, ನಾನು ಅನೇಕ ಸಾರಿ ಕೇಳಿದ್ದೇನೆ. ‘ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೇ ತೇಲುತಿದೇ ಮೋಡ, ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ ಹಸಿ ಹಸಿರು ವನರಾಶಿ ನೋಡ...’

‘ಓ... ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..’

‘ಸರಿಯಾಗಿ ಹೇಳಿದಿರಿ’

(ಹಾಡು ಮೂಡಿ ಬರುವುದು.)

ಪೂರಕ ಓದಿಗೆ-

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X