ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲ ಕೋಟೆ ಮುಳುಗಲಿದೆ ಅಂತಅಲ್ಲಿ ಬದುಕುವ ಜನ ಹೆದರುತ್ತಿದ್ದಾರೆ

By Super
|
Google Oneindia Kannada News

ಬಾಗಲ ಕೋಟೆ ಮುಳುಗಲಿದೆ ಅಂತ ಅಲ್ಲಿ ಬದುಕುವ ಜನ ಹೆದರುತ್ತಿದ್ದಾರೆ, ಜಿಲ್ಲೆಯ ಪುರಾತನ ಸ್ಮಾರಕಗಳು ಹಿನ್ನೀರಿನಲ್ಲಿ ಮುಳುಗಡೆಯಾಗಲಿವೆ ಎಂದು ನಾಡಿನ ಸ್ಮಾರಕ, ಪರಂಪರೆಗಳ ಬಗ್ಗೆ ಭಾಷಣ ಮಾಡುವ ಮಂದಿ ಹೇಳುತ್ತಿದ್ದಾರೆ. ಆದರೆ ದೇಶಕ್ಕಾಗಿ ಹೋರಾಡಿದ, ಜೀವ ತೆತ್ತ ಹಿರಿಯ ಚೇತನಗಳ ನೆಲವೂ ಇದು ಎನ್ನುವುದನ್ನು ಮರೆಯಲಿಕ್ಕಾಗದು. ದೇಶದ ಸ್ವಾತಂತ್ರ್ಯವನ್ನೇ ಜೀವನ ಧ್ಯೇಯವನ್ನಾಗಿಟ್ಟು ಕೊಂಡು ಬಾಳಿದವರು, ದೇಶದ ಏಕೀಕರಣಕ್ಕೆ ಜೀವನವನ್ನು ಪಣವಾಗಿಟ್ಟವರು ಈಗ ಕೊರಗುತ್ತಿರುವ ಬಾಗಲಕೋಟೆಯಲ್ಲಿ ಆಗಿ ಹೋಗಿದ್ದಾರೆ.

ಸ್ವಾತಂತ್ರ ಹೋರಾಟದ ನೂರು ವರ್ಷಗಳ ಅವಧಿಯಲ್ಲಿ ಬಾಗಲಕೋಟೆಯ ಹೊಲ ಗದ್ದೆಗಳನ್ನು ರೈತರಿಂದ ಬ್ರಿಟಿಷರು ಕಿತ್ತು ಕೊಂಡರು. ಮನೆಗಳು ಜಫ್ತಿಯಾದವು. ಮನೆಯ ಯಜಮಾನರು ಬಂಧನಕ್ಕೊಳಗಾದರು. ಶಸ್ತ್ರಾಸ್ತ್ರಗಳ ಮುಟ್ಟುಗೋಲು, ಪೊಲೀಸ್‌ ಕಾವಲು ಹೀಗೆ ....ಬಾಗಲಕೋಟೆಯ ಗಾಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಹೊಗೆ, ಬೆಂಕಿ ಸೇರಿಕೊಂಡಿತ್ತು.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ನಡೆದಾಗ ಹಳೆ ಬಿಜಾಪುರ ಜಿಲ್ಲೆಯಲ್ಲೂ ಗದ್ದಲ ,ಬಂಡಾಯ ಆರಂಭವಾಗಿತ್ತು. ಚಾಂದಕವಟೆಯ ಬಸವ ಲಿಂಗಪ್ಪ ಮತ್ತು ಬಿಜಾಪುರದ ಸಿರಿಶೆಟ್ಟಿ ಸ್ವಾತಂತ್ರ್ಯ ಯುದ್ಧ ಕಹಳೆ ಊದಿದರೆ, ಸುರಪುರದ ವೆಂಕಟಪ್ಪ ನಾಯಕರ ಬೆಂಬಲವೂ ಸೇರಿ ಬಸವ ಲಿಂಗಪ್ಪನವರ ನೇತೃತ್ವದಲ್ಲಿ ಸೈನ್ಯವೊಂದರ ತಯಾರಿ ಆಗಿತ್ತು. ಇದೇ ಸೈನ್ಯದ ಹೋರಾಟಕ್ಕೆ ತಾನೂ ಸಹಕಾರ ಮಾಡುತ್ತೇನೆಂದು ಸೊಲ್ಲಾಪುರದಿಂದ ನಾನಾ ಸಾಹೇಬ ಪೇಶ್ವೆ ತಿಳಿಸಿದ್ದರು. ಅಷ್ಟು ಹೊತ್ತಿಗೆಲ್ಲಾ ಕೆಂಪು ಜನರ ಮೂಗಿಗೆ ಹೋರಾಟದ ವಾಸನೆ ಬಡಿಯಿತು. ಯುದ್ಧದ ರೂವಾರಿಯಾಗಿದ್ದ ಬಸವಲಿಂಗಪ್ಪ ಜೈಲು ಸೇರಬೇಕಾಯಿತು.

ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಪತ್ರಿಕೆಗಳ ಕೆಲಸ ದೊಡ್ಡದು. ಬಾಗಲಕೋಟೆಯಲ್ಲಿ ಹೊಸ ಪತ್ರಿಕೆಗಳು ಹುಟ್ಟಿಕೊಂಡವು. ನಾಡಿನಲ್ಲಿ ನಡೆಯುತ್ತಿದ್ದ ಹೋರಾಟದ ವಿವರ- ಯೋಜನೆಗಳನ್ನು ಈ ಪತ್ರಿಕೆಗಳು ಬಾಗಲಕೋಟೆ ಹಳ್ಳಿಯ ಹೊಲ ಗದ್ದೆಗಳಲ್ಲಿ , ಕೆರೆ ಕಟ್ಟೆಯ ಏರಿಗಳಲ್ಲಿ , ಗೌಡರ ಮನೆಯ ಹಿತ್ತಿಲ ಮರದಡಿಯಲ್ಲಿ ನಡೆಯುತ್ತಿದ್ದ ಗುಪ್ತ ಸಭೆಗಳಿಗೆ ರವಾನಿಸುತ್ತಿದ್ದವು. ಮುಂದಿನ ಚಳವಳಿಯ ಯೋಜನೆಗಳನ್ನು ರೂಪಿಸುತ್ತಿದ್ದವು. ಕೆರೂರು ವಾಸುದೇವರಾಯರ ಶುಭೋದಯ ವಾರಪತ್ರಿಕೆಯಿಂದ ಹಿಡಿದು ಮಂಗಳವೇಡೆ ಶ್ರೀನಿವಾಸರಾಯರ ಕನ್ನಡಜೀವನ ಪತ್ರಿಕೆಯವರೆಗೆ ಲೇಖನಗಳು, ಹಿರಿಯ ಹೋರಾಟಗಾರರ ಅನುಭವ, ಸಂದೇಶಗಳನ್ನು ಬಾಗಲಕೋಟೆಯ ಮಂದಿಗೆ ಬಿತ್ತರಿಸುತ್ತಿದ್ದವು. ಗಾಂಧೀಜಿಯ ಗುಜರಾತಿ ಪತ್ರಿಕೆ ನವಜೀವನ ಮತ್ತು ಇಂಗ್ಲಿಷ್‌ ಪತ್ರಿಕೆ ಯಂಗ್‌ ಇಂಡಿಯಾದಲ್ಲಿ ಪ್ರಕಟವಾಗುತ್ತಿದ್ದ ಗಾಂಧೀಜಿಯ ಚಿಂತನೆಗಳನ್ನು ಕನ್ನಡದ ನವಜೀವನ ಪತ್ರಿಕೆ ಪ್ರಕಟಿಸುತ್ತಿತ್ತು.

ಗಾಂಧೀಜಿ ಬಂದಿದ್ದರು ಬಾಗಲಕೋಟೆಗೆ : ಇಷ್ಟೆಲ್ಲ ಹೋರಾಟದ ಕೆಲಸ ನಡೆಯುತ್ತಿದ್ದ ಬಾಗಲಕೋಟೆಗೆ ಒಂದು ದಿನ ಗಾಂಧೀಜಿಯವರೇ ಬಂದಿದ್ದರು. 1921ರಲ್ಲಿ ಬಿಜಾಪುರದಾದ್ಯಂತ ಗಾಂಧೀಜಿಯ ಭಾಷಣಗಳು, ಮಾತುಕತೆಗಳು, ಪ್ರೋತ್ಸಾಹಗಳು ಪ್ರತಿಧ್ವನಿಸಿದ್ದವು. ನಯಾ ಪೈಸೆಗೆಲ್ಲಾ ಅಕ್ಕಿ ಸಿಗುತ್ತಿದ್ದ ಆ ಕಾಲದಲ್ಲಿ ಎಂದೂ ಸಮೃದ್ಧ ಪ್ರದೇಶ ಎನ್ನಿಸಿಕೊಳ್ಳದ ಬಾಗಲಕೋಟೆ, ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಸಾವಿರ ರೂಪಾಯಿ ವಂತಿಗೆಯನ್ನು ಗಾಂಧೀಜಿಯ ಕೈಯಲ್ಲಿಟ್ಟಿತ್ತು. ಆ ಸಾವಿರ ರುಪಾಯಿಗಳ ಹಿಂದೆ ಇದ್ದದ್ದು ಬಾಗಲಕೋಟೆ ಜಿಲ್ಲೆಯ ಜನತೆಯ ಸ್ವಾಭಿಮಾನ, ಸ್ವಾತಂತ್ರ್ಯ ಪ್ರಿಯತೆ. ಗಾಂಧೀಜಿ ನೀಡಿದ ಯಾವುದೇ ಚಳುವಳಿಯ ಕರೆಗಳಿಗೆ ಬಾಗಲಕೋಟೆಯ ಮಂದಿ ಹಿಂದೇಟು ಹಾಕಲಿಲ್ಲ. ಕುಂಪನಿ ಸರಕಾರದ ವಿರುದ್ಧ ಭಾಷಣ, ಧರಣಿ, ಸತ್ಯಾಗ್ರಹಗಳು ನಡೆಯುತ್ತಲೇ ಬಂದಿದ್ದವು. ನಮ್ಮ ನೆಲ, ನಮ್ಮ ಜನ ಎನ್ನುವ ಒಗ್ಗಟ್ಟು , ಸ್ವಾಭಿಮಾನವನ್ನು ಮೆರೆದ ಊರು ಈಗ ಇತಿಹಾಸವಾಗುವ ದುಗುಡವನ್ನು ಎದೆಯಲ್ಲಿ ತುಂಬಿಕೊಂಡು ರಾಜ್ಯದ ಕನ್ನಡಿಗರನ್ನು ಸ್ವಾಗತಿಸುತ್ತಿದೆ. ಅಷ್ಟೇ ಅಲ್ಲ , ಪ್ರತ್ಯೇಕ ಒಲೆ ಹೂಡುವ ಬಗ್ಗೆಯೂ ಆ ಕಡೆಯವರ ಬೇಡಿಕೆ ಚಳವಳಿಗಳು ಪ್ರತಿದಿನ ಸುದ್ದಿಯಲ್ಲಿವೆ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಾಗಲಕೋಟೆಯವರು ಇಂದು ಕನ್ನಡಿಗರನ್ನು ಆಹ್ವಾನಿಸಿ, ಸತ್ಕರಿಸಿ ಬೇರೆಯಾಗುವ ಮಾತನಾಡಲಿಕ್ಕಿಲ್ಲ ಅಲ್ಲವೇ ? ಹಾಗೆಂದೇ ನಿರೀಕ್ಷಿಸೋಣ.

English summary
Kannada Sahitya Sammelana - Bagalkot
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X