ಬೇಕೆಂದೇ ಬಚ್ಚಿಟ್ಟುಕೊಂಡಿದ್ದನೇ ನಿರಂಜನ ?
ನಿರಂಜನನ ನೆನಪಿನಲ್ಲಿ, ಅವನ ಆಗಮನದ ಭೀತಿಯಲ್ಲಿ ಆನಂದನ, ಮೋಹನನ, ನಿರಂಜನನ ಉಪ್ಪಿನಂಗಡಿ ಉದ್ವಿಗ್ನಗೊಂಡಿತು. ಇದರಿಂದೆಲ್ಲ ಹೇಗೆ ಪಾರಾಗುವುದು ಎಂದೇ ಗೊತ್ತಿಲ್ಲದವನಂತೆ ಆನಂದ ನೇತ್ರಾವತಿಯ ನಡುವಿನ ಬಂಡೆಗಲ್ಲಿನ ಮೇಲೆ ಏಕಾಂತವಾಸ ಮುಂದುವರಿಸಿದ. ಒಂದು ಸಲ ಅವನೂ ರಘುನಂದನನೂ ಈ ಬಗ್ಗೆ ಮಾತಾಡಿಕೊಂಡರು. ರಘುನಂದನನ ಹತ್ತಿರ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ರೋಚಕವಾದ ಕತೆಯಿತ್ತು.
'ನನಗೆ ಮೊದಲೇ ಗೊತ್ತಿತ್ತು ಆನಂದ. ನಿರಂಜನ ಕೊಲೆಯಾಗಲಿಕ್ಕೆ ಸಾಧ್ಯವೇ ಇಲ್ಲ ಅಂತ ನಾನೂ ಯೋಚಿಸಿದ್ದೆ. ಅವನು ಕೊಲೆಯಾಗಿದ್ದಾನೆ ಅಂತ ನಾವೆಲ್ಲ ರಗಳೆ ಶುರುಮಾಡಿದಾಗ ಮಂಗಳೂರಿನ ಎಸ್ಪಿ ನನ್ನನ್ನು ಕರೆಸಿ ಒಂದು ಮಾತು ಹೇಳಿದ್ದರು. ನಾನು ಅದನ್ನು ಬಹಿರಂಗಗೊಳಿಸೋದಕ್ಕೆ ಹೋಗಲಿಲ್ಲ. ಯಾಕೆಂದರೆ ಅದು ಅವರ ಅನುಮಾನ ಮಾತ್ರವಾಗಿತ್ತು. ಅವರು ಹೇಳಿದ್ದಿಷ್ಟೇ; ನಿಮ್ಮ ಗೆಳೆಯ ಸತ್ತಿಲ್ಲ. ಎಲ್ಲೋ ಬಚ್ಚಿಟ್ಟುಕೊಂಡಿದ್ದಾನೆ. ಇತ್ತೀಚೆಗೆ ಅವನು ಮಂಗಳೂರಲ್ಲಿ, ಉಡುಪಿಯಲ್ಲಿ, ಬೆಂಗಳೂರಲ್ಲಿ, ಪುತ್ತೂರಲ್ಲಿ ಒಂದು ಫೈನಾನ್ಸ್ ಕಂಪೆನಿ ತೆರೆಯಬೇಕು ಅಂತ ಓಡಾಡಿಕೊಂಡಿದ್ದ. ಅದಕ್ಕೋಸ್ಕರ ಸಾಕಷ್ಟು ದುಡ್ಡನ್ನೂ ಸಂಗ್ರಹಿಸಿದ್ದ. ಒಂದಷ್ಟು ಪ್ರಮೋಟರ್‌ಗಳ ಹತ್ತಿರ ಕಪ್ಪು ಹಣ ಸಂಗ್ರಹಿಸಿದ್ದ. ಅದೆಲ್ಲ ಸೇರಿದರೆ ಐವತ್ತು ಲಕ್ಷವಾದರೂ ಆಗಬಹುದು. ಅವರ್ಯಾರೂ ಕಂಪ್ಲೇಂಟು ಕೊಡೋ ಸ್ಥಿತಿಯಲ್ಲಿಲ್ಲ. ಆ ಧೈರ್ಯದಲ್ಲೇ ನಿರಂಜನ ಪರಾರಿಯಾಗಿದ್ದಾನೆ." ನಾನದನ್ನು ನಂಬಿರಲಿಲ್ಲ. ಪೊಲೀಸರ ಅಸಂಖ್ಯಾತ ಊಹಾಪೋಹಗಳಲ್ಲಿ ಇದೂ ಒಂದು ಅಂತ ಭಾವಿಸಿದ್ದೆ. ಈಗ ಅದು ನಿಜ ಅನ್ನಿಸುತ್ತಿದ್ದೆ."
ಅಷ್ಟೊಂದು ದುಡ್ಡಿನೊಂದಿಗೆ ಓಡಿಹೋಗಿದ್ದರೆ ಅವನು ಮತ್ತೆ ವಾಪಸ್ಸು ಬರುತ್ತಾನೆ ಅನ್ನುವುದೂ ಸುಳ್ಳು. ವಾಪಸ್ಸು ಬಂದ ತಕ್ಷಣ ಆತ ದುಡ್ಡು ಕೊಡಬೇಕಾಗಿ ಬರುತ್ತದಲ್ಲ. ದುಡ್ಡುಕೊಟ್ಟವರು ಅವನನ್ನು ಸುಮ್ಮನೆ ಬಿಡಲಾರರು ಅಂತೆಲ್ಲ ಆನಂದ ಯೋಚಿಸುತ್ತಿದ್ದ. ಅಷ್ಟಕ್ಕೂ ಅಷ್ಟೊಂದು ದುಡ್ಡು ಎತ್ತಿಕೊಂಡು ಓಡಿಹೋದವನು ತನ್ನ ಬಗ್ಗೆ ಊರಲ್ಲಿ ಏನೆಲ್ಲ ಮಾತುಕತೆ ನಡೀತಿದೆ ಅಂತ ಒಂದು ಕಣ್ಣಿಟ್ಟಿರುತ್ತಾನೆ. ಅವನಿಗೆ ಇಲ್ಲಿ ನಡೆದ ವಿದ್ಯಮಾನಗಳೆಲ್ಲ ಗೊತ್ತಿರುತ್ತದೆ. ಅವನು ದಾಖಲೆಗಳ ಪ್ರಕಾರ ಸತ್ತಿದ್ದಾನೆ ಅನ್ನೋದೂ ಗೊತ್ತಿರುತ್ತೆ. ಅದು ಅವನಿಗೆ ಅನುಕೂಲಕರವೇ ತಾನೆ ?
ರಘುನಂದನ ಇದನ್ನೆಲ್ಲ ನಿರಾಕರಿಸಿದ. ಮನುಷ್ಯನಿಗೆ ಒಂದು ಹಂಬಲವಿರುತ್ತೆ. ಅಜ್ಞಾತವಾಗಿ ಉಳಿಯುವುದು ಅವನ ಕೈಲಿ ಆಗದ ಕೆಲಸ. ತಾನು ತಾನಾಗಿಯೇ ಬೆಳೆದು ಪ್ರಕಟಗೊಳ್ಳಬೇಕು ಎಂಬ ಅದಮ್ಯಆಸೆ ಪ್ರತಿಯಾಬ್ಬರೊಳಗೂ ಇರುತ್ತದೆ. ಅಂಥ ಆಸೆಯೇ ನಿರಂಜನನನ್ನೂ ಉಪ್ಪಿನಂಗಡಿಗೆ ಬರುವಂತೆ ಪ್ರೇರೇಪಿಸಿರಬಹುದು. ಇಲ್ಲಿ ಬಂದು ಆತ ಶ್ರೀಮಂತರಂತೆ ಮೆರೆಯೋದಕ್ಕೆ ಆರಂಭಿಸಬಹುದು. ಒಂದು ನಿರ್ಧಾರಕ್ಕೆ ಬರಲಾರದೆ ಅವರಿಬ್ಬರೂ ಸುಮ್ಮನಾದರು. ನೇತ್ರಾವತಿ ಹರಿಯುತ್ತಿದ್ದಳು.
ಪ್ರಕೃತಿಗೆ ಮನುಷ್ಯನಂತೆ ಪ್ರಕಟಗೊಳ್ಳುವ ಆಸೆ ಇರುವುದಿಲ್ಲ. ಅದು ಅಜ್ಞಾತವಾಗಿಯೇ ಉಳಿದುಬಿಡುತ್ತದೆ. ಆದರೆ ಮನುಷ್ಯನಿಗೆ ಪ್ರಕೃತಿಯ ನಿಗೂಢಗಳನ್ನು ಬಗೆಯುವ ಆಸೆ. ಅಜ್ಞಾತ ಎಂಬ ಸಂಗತಿಯೇ ಮನುಷ್ಯನಿಗೆ ಅಷ್ಟು ಇಷ್ಟವಾಗದ್ದು.
ಅದು ಆನಂದನಿಗೆ ಖಾತ್ರಿಯಾದದ್ದು ಪರಿಸರ ಅಭಿಯಾನ ಆರಂಭಿಸಿದ ಮಂದಿ ಒಂದು ಹೊಸ ಸಂಶೋಧನೆ ಎಂಬಂತೆ ಎಲ್ಲರಿಗೂ ಗೊತ್ತಿರುವ ಸಂಗತಿಯನ್ನೇ ದೊಡ್ಡದು ಮಾಡಿ ಹೇಳಿದಾಗ.












Click it and Unblock the Notifications