Migraine: ಮೈಗ್ರೇನ್ ಮಹಿಳೆಯರನ್ನೇ ಹೆಚ್ಚು ಕಾಡುವುದೇಕೆ? ವೈದ್ಯರು ಹೇಳುವುದೇನು?
ಮೈಗ್ರೇನ್ ಈಗ ಬಹುತೇಕರನ್ನು ಕಾಡುತ್ತಿರುವ ತಲೆನೋವಾಗಿದ್ದು, ಸ್ತ್ರೀಯರೇ ಹೆಚ್ಚು ನೋವನ್ನು ಅನುಭವಿಸುತ್ತಿದ್ದಾರೆ. ಇದು ಏಕೆ ಎಂದು ನೋಡುತ್ತಾ ಹೋದರೆ ಒಂದಷ್ಟು ಮಾಹಿತಿ ಹೊರಬರುತ್ತದೆ. ಮೈಗ್ರೇನ್ ಬಂದರೆ ಏನೂ ಮಾಡಲಾಗುವುದಿಲ್ಲ ಮೊದಲಾದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಆದರೆ ವೈದ್ಯರು ಈ ಕುರಿತಂತೆ ಕೆಲವು ವಾಸ್ತವ ವಿಚಾರಗಳನ್ನು ತೆರೆದಿಡುತ್ತಾರೆ. ಅವರು ಹೇಳುವುದೇನೆಂದರೆ ಮೈಗ್ರೇನ್ ವಾಕರಿಕೆ ಅಥವಾ ವಾಂತಿಯಂತಹ ಇತರೆ ಲಕ್ಷಣಗಳೊಂದಿಗೆ ತಲೆಯ ಒಂದು ಭಾಗದಲ್ಲಿ ತೀವ್ರವಾಗಿ ಮಿಡಿಯುವ ನೋವನ್ನು ಹೊಂದಿರುವ ನರಸಂಬಂಧಿತ ಕಾಯಿಲೆಯಾಗಿದೆ. ತಲೆನೋವು ಮೈಗ್ರೇನ್ ಇತರೆ ಲಕ್ಷಣಗಳ ಪೈಕಿ ಒಂದಾಗಿದೆ.

ಇನ್ನು ಸ್ತ್ರೀಯರಲ್ಲಿ ಹಾರ್ಮೋನ್ನಲ್ಲಿ ಬದಲಾವಣೆಗಳು ಆಗುವುದರಿಂದ ಹೆಚ್ಚು ಪರಿಣಾಮ ಬೀರುತ್ತಿದ್ದು ಆದ್ದರಿಂದ ಮೈಗ್ರೇನ್ ಪುರುಷರಿಗಿಂತ ಹೆಚ್ಚು ಸ್ತ್ರೀಯಲ್ಲಿ ಕಾಣಿಸಿಕೊಳ್ಳುತ್ತಿದೆಯಂತೆ. ಮೈಗ್ರೇನ್ನನ್ನು ವೈದ್ಯರು ಶಿಫಾರಸ್ಸು ಮಾಡುವ ಸೂಕ್ತ ಚಿಕಿತ್ಸೆಯೊಂದಿಗೆ ಪರಿಸ್ಥಿತಿ ಮತ್ತು ಪ್ರಚೋದಕಗಳ ಉತ್ತಮ ತಿಳುವಳಿಕೆಯಿಂದ ನಿರ್ವಹಿಸಲು ಸಾಧ್ಯವಿದೆ.
ಮೈಗ್ರೇನ್ ಕುರಿತಂತೆ ವೈದ್ಯರು ಒಂದಷ್ಟು ವಾಸ್ತವಿಕ ವಿಚಾರಗಳನ್ನು ತೆರೆದಿಡುತ್ತಾರೆ. ಅವರ ಪ್ರಕಾರ ಇದಕ್ಕೆ ಕಾರಣ ಇನ್ನೂ ಸರಿಯಾಗಿ ತಿಳಿದು ಬಂದಿಲ್ಲವಂತೆ. ಮೊದಲು ಬೆಳಕಿನ ಹೊಳೆಯುವಿಕೆ, ಮುಸುಕು ದೃಷ್ಠಿಯಂತಹ ಅನೇಕ ಇಂದ್ರಿಯ ಸಂಬಂಧಿತ ತೊಂದರೆಗಳು ಉಂಟಾಗಬಹುದಾಗಿದ್ದು ಆ ಬಳಿಕ ಒಂದು ಭಾಗದಲ್ಲಿ ತೀವ್ರನೋವು ಕಾಣಿಸುವ ಸಾಧ್ಯತೆಯಿರುತ್ತದೆ.
ಇನ್ನು ಶೇ. 50ರಷ್ಟು ರೋಗಿಗಳಲ್ಲಿ ಮೈಗ್ರೇನ್ ಪತ್ತೆಹಚ್ಚಲ್ಪಡುವುದಿಲ್ಲವಂತೆ ಅಷ್ಟೇ ಅಲ್ಲ ಅದಕ್ಕೆ ಸೂಕ್ತ ಚಿಕಿತ್ಸೆಯನ್ನೂ ಮಾಡಿರುವುದಿಲ್ಲವಂತೆ. ಮತ್ತೊಂದು ವಿಚಾರವೇನೆಂದರೆ ಕೆಲವೊಮ್ಮೆ ಶೇ.50ಕ್ಕಿಂತ ಕಡಿಮೆ ಮೈಗ್ರೇನ್ ರೋಗಿಗಳು ವೈದ್ಯರ ಸಲಹೆ ಪಡೆದಿರುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮೈಗ್ರೇನ್ನ ನೋವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲೂ ಸಾಧ್ಯವಿದೆ. ಕೆಲವರಿಗೆ ಕೆಲ ಗಂಟೆಗಳ ಕಾಲ ನೋವು ಕಾಣಿಸಿಕೊಂಡು ಶಮನವಾಗಬಹುದು. ಮತ್ತೆ ಕೆಲವರಿಗೆ ದಿನಪೂರ್ತಿ ಇದ್ದರೂ ಇರಬಹುದು. ಆದರೆ ಈ ತಲೆನೋವಿನ ಕುರಿತಂತೆ ಕೆಲವೊಂದು ತಪ್ಪು ಕಲ್ಪನೆಗಳಿದ್ದು, ಅವುಗಳನ್ನು ನಮ್ಮ ತಲೆಯಿಂದ ತೆಗೆದು ಹಾಕುವ ತನಕ ತಲೆನೋವು ತಪ್ಪಿದಲ್ಲ.

ಮೈಗ್ರೇನ್‌ನ ಗುಣ ಲಕ್ಷಣಗಳು ಏನೇನು?
ಕಾಡುವ ತಲೆನೋವು ಮೈಗ್ರೇನ್ ಎಂದು ಅರಿತು ಕೊಳ್ಳುವುದು ಹೇಗೆಂದು ನೋಡುವುದಾದರೆ ತಲೆನೋವು ಬಂದಾಗ ಆಗುವ ಕೆಲವೊಂದು ಅನುಭವಗಳನ್ನು ಪತ್ತೆ ಹಚ್ಚಬೇಕು. ಅದೇನೆಂದರೆ ತಲೆನೋವು ಕಾಣಿಸಿಕೊಂಡಾಗ ವಾಕರಿಕೆ ಬರುವುದು, ಹೊಟ್ಟೆಯಲ್ಲಿ ಅಸ್ವಸ್ಥತೆ, ತಲೆನೋವಿದ್ದಾಗ ಬೆಳಕನ್ನೇ ನೋಡಲಾರದ ಸ್ಥಿತಿ, ತಲೆನೋವು ಕನಿಷ್ಠ ಒಂದು ದಿನದ ನಮ್ಮ ಕೆಲಸ ಅಥವಾ ಅಧ್ಯಯನವನ್ನು ಮಾಡದಂತೆ ನಮ್ಮ ಸಾಮರ್ಥ್ಯ ಕುಗ್ಗಿಸಿದ್ದರೆ ಅದು ಮೈಗ್ರೇನ್ನ ಲಕ್ಷಣಗಳಾಗಿರಲು ಸಾಧ್ಯವಿರುತ್ತದೆ. ಮೈಗ್ರೇನ್ ಎಂಬುದು ತಿಳಿದ ಬಳಿಕ ನಾವು ಒಂದಷ್ಟು ಜಾಗ್ರತೆ ವಹಿಸುವುದು ಅಗತ್ಯ.
ಮೈಗ್ರೇನ್‌ಗೆ ಪ್ರಚೋದನೆ ನೀಡುವ ಬೆಳಕಿನಂತಹ ಸಂವೇದನೆಯ ಉದ್ದೀಪಕ, ಆಹಾರ ಮತ್ತು ಆಹಾರದ ಎಡಿಟಿವ್ಗಳು, ಪೇಯ, ಮಾನಸಿಕ ಒತ್ತಡ, ಸ್ತ್ರೀಯರಲ್ಲಿ ಹಾರ್ಮೋನ್ ಬದಲಾವಣೆಗಳು, ಏಳುವ-ಮಲಗುವ ವಿಧಾನಗಳಲ್ಲಿನ ಬದಲಾವಣೆಗಳು, ಶಾರೀರಿಕ ಅಂಶಗಳು, ಪರಿಸರದಲ್ಲಿನ ಬದಲಾವಣೆಗಳು, ಔಷಧಗಳು ಹೀಗೆ ಹಲವು ಅಂಶಗಳನ್ನು ವೈದ್ಯರು ಗುರುತಿಸಿದ್ದು, ಇವು ಮೈಗ್ರೇನ್ ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ. ಇವು ಬಾಹ್ಯವಾಗಿ ಅಥವಾ ಶಾರೀರಿಕವಾಗಿ ಮೈಗ್ರೇನ್ ಕಾಣಿಸಿಕೊಳ್ಳಲು ಸಹಕರಿಸುವ ಸಾಧ್ಯತೆಯಿರುವುದರಿಂದ ಎಚ್ಚರವಾಗಿರಬೇಕು.
ಮೈಗ್ರೇನ್ ಶಮನ ಮಾಡುವುದು ಹೇಗೆ?
ಇನ್ನು ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆಮಾಡುವುದು, ನಿಯಮಿತ ಆಹಾರ ಸೇವನೆ ಮಾಡುವುದು, ಪ್ರಕಾಶಮಾನ ಬೆಳಕು ಹಾಗೂ ದಟ್ಟವಾದ ಸುವಾಸನೆಯಿಂದ ದೂರವಿರುವುದು, ಧೂಮಪಾನ ತ್ಯಜಿಸುವುದು, ಆದಷ್ಟು ಮಾನಸಿಕ ಒತ್ತಡವಾಗದಂತೆ ಎಚ್ಚರವಹಿಸುವುದು, ಮೈಗ್ರೇನ್ ಪ್ರಚೋದಿಸುವಂತಹ ಆಹಾರ ಪದಾರ್ಥಗಳನ್ನು ದೂರವಿಡುವುದು. ವೈದ್ಯರು ನೀಡುವ ಔಷಧಿಗಳನ್ನು ಉಪಯೋಗಿಸುವುದು ಅಗತ್ಯವಾಗಿದೆ.ತೀವ್ರ ತಲೆನೋವು ಕಾಣಿಸಿಕೊಂಡಾಗ ಕೋಲ್ಡ್ ಪ್ಯಾಕ್ ಅಥವಾ ಐಸ್ ಚೀಲವನ್ನು ಸುತ್ತಿ ಅದನ್ನು ಹತ್ತು ನಿಮಿಷಗಳ ಕಾಲ ನೋವು ಇರುವ ಜಾಗದ ಮೇಲೆ ಅಥವಾ ಕತ್ತಿನ ಹಿಂಭಾಗ ಇರಿಸಬೇಕು.
ಕಣ್ಣನ್ನು ನೇರ ಬೆಳಕಿಗೆ ಒಡ್ಡದೆ, ಕತ್ತಲೆ ಕೋಣೆ, ಶಾಂತವಾದ ಸ್ಥಳದಲ್ಲಿ ಮಲಗಬೇಕು. ದ್ರವ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ವಾಕರಿಕೆ ತಡೆಗೆ ಫ್ಲಾಟ್ ಸೋಡಾವನ್ನು ಸೇವಿಸಬೇಕು. ತೋರು ಬೆರಳು ಮತ್ತು ಹೆಬ್ಬೆರಳಿನಿಂದ ನೋವಿರುವ ಜಾಗಕ್ಕೆ ವೃತ್ತಾಕಾರದಲ್ಲಿ ಒತ್ತಡ ಹಾಕಬೇಕು. ಹೀಗೆ ಒತ್ತಡವನ್ನು ಸುಮಾರು ೭ರಿಂದ೧೫ ಸೆಕೆಂಡುಗಳ ಕಾಲ ಹಾಕಿ ಮತ್ತೆ ಬಿಡಬೇಕು. ಇದೇ ರೀತಿ ಮತ್ತೆ, ಮತ್ತೆ ಮಾಡಬೇಕು. ಇದರೊಂದಿಗೆ ತಲೆ ಚಿಪ್ಪನ್ನು ಮೃದುವಾದ ಹೇರ್ಬ್ರೆಷ್ನಿಂದ ಬ್ರೆಷ್ ಮಾಡುವುದರಿಂದಲೂ ನೋವು ಶಮನ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ವೈದ್ಯರು ಸಲಹೆ ಮತ್ತು ಔಷಧಿಗಳನ್ನು ಸೇವಿಸುವುದು ಅಗತ್ಯವಾಗಿದೆ.












Click it and Unblock the Notifications