ಆಕಳಿಸುವವರನ್ನು ನೋಡಿದ ಕೂಡಲೇ ನಾವೂ ಆಕಳಿಸುವುದೇಕೆ? ಇದರ ಹಿಂದಿನ ಕಾರಣವೇನು?

ಯಾರಾದರೂ ನಮ್ಮ ಮುಂದೆ ಕೂತು ಆಕಳಿಸಿದ ತಕ್ಷಣ ನಾವು ಕೂಡಾ ಆಕಳಿಸುತ್ತೇವೆ. ಕೆಲವೊಮ್ಮೆ, ಆಕಳಿಸುವ ವ್ಯಕ್ತಿಯನ್ನು ನೋಡಿದಾಗ ಮಾತ್ರವಲ್ಲ, ಟಿವಿ, ಮೊಬೈಲ್‌ನಲ್ಲಿ ವೀಡಿಯೊ ನೋಡುವಾಗ ಅಥವಾ ಆಕಳಿಸುತ್ತಿರುವ ಫೋಟೋವನ್ನು ನೋಡಿದಾಗಲೂ ನಮಗೆ ಆಕಳಿಕೆ ಬರುತ್ತದೆ. ಅನೇಕರು ಇದನ್ನು ಸಾಮಾನ್ಯ ವಿಷಯವೆಂದೇ ಪರಿಗಣಿಸುತ್ತಾರೆ. ವಿಜ್ಞಾನಿಗಳ ಪ್ರಕಾರ ಇದು ನಮ್ಮ ಮೆದುಳಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಆಸಕ್ತಿದಾಯಕ ಪ್ರತಿಕ್ರಿಯೆ. ಇದನ್ನು ವೈಜ್ಞಾನಿಕವಾಗಿ "ಸಾಂಕ್ರಾಮಿಕ ಆಕಳಿಕೆ" ಎಂದು ಕರೆಯಲಾಗುತ್ತದೆ.

ಮೆದುಳಿನ ಅನುಕರಣೆ

ನಾವು ಸಾಮಾನ್ಯವಾಗಿ ದಣಿದಿರುವಾಗ, ನಿದ್ದೆ ಬಂದಾಗ ಅಥವಾ ಆಲಸ್ಯದಿಂದ ಇರುವಾಗ ಆಕಳಿಕೆ ಬರುತ್ತದೆ. ಅಂದರೆ ಬೇರೆಯವರು ಆಕಳಿಸಿದಾಗ ನಮಗೂ ಆಕಳಿಕೆ ಬರುವುದು ಕೇವಲ ನಿದ್ದೆಯಿಂದಲ್ಲ. ಇದು ನಮ್ಮ ಮೆದುಳು ಇತರರ ನಡವಳಿಕೆಯನ್ನು ಹೇಗೆ ಗಮನಿಸುತ್ತದೆ ಮತ್ತು ಅನುಕರಿಸುತ್ತದೆ ಎಂಬುದನ್ನು ತೋರಿಸುವ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ ಎನುವುದು ವಿಜ್ಞಾನಿಗಳ ಅಭಿಪ್ರಾಯ.

yawn

ಕನ್ನಡಿ ನರಕೋಶ

ವಿವಿಧ ಸಂಶೋಧನೆಗಳ ಪ್ರಕಾರ, ನಮ್ಮ ಮೆದುಳಿನಲ್ಲಿರುವ ಕನ್ನಡಿ ನರಕೋಶ (mirror neurons) ವ್ಯವಸ್ಥೆಯು ಇದರಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಈ ನರಕೋಶಗಳು ಇತರರ ಕ್ರಿಯೆಗಳನ್ನು ಗಮನಿಸಿ ನಮ್ಮ ಮೆದುಳಿನಲ್ಲಿ ಅವುಗಳನ್ನು ಪ್ರತಿಬಿಂಬಿಸುತ್ತವೆ. ಇದೇ ಕಾರನದಿಂದ ಬೇರೆಯವರು ನಗುವಾಗ ನಾವು ನಗುತ್ತೇವೆ, ಇನ್ನೊಬ್ಬರು ಅಳುತ್ತಿದ್ದರೆ ನಮ್ಮ ಮನಸ್ಸಿಗೂ ನೋವಾಗುತ್ತದೆ, ಹಾಗೆಯೇ ಎದುರಿಗಿರುವವರು ಆಕಳಿಸಿದಾಗ ನಾವೂ ಆಕಳಿಸುತ್ತೇವೆ.

ಮೆದುಳಿನ ಸಾಮಾಜಿಕ ಪ್ರತಿಕ್ರಿಯೆ

ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಇತರರು ಆಕಳಿಸಿದಾಗ ನಾವು ಆಕಳಿಸುತ್ತೇವೆ ಎಂಬುದು ಮೆದುಳಿನ ಸಾಮಾಜಿಕ ಪ್ರತಿಕ್ರಿಯೆಯಾಗಿರಬಹುದು. ಅದೇ ರೀತಿ, PLOS ONE ಎಂಬ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಪ್ರಕಾರ, ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಿರುವ ಜನರಲ್ಲಿ ಈ ಪ್ರತಿಕ್ರಿಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಡ್ಯೂಕ್ ವಿಶ್ವವಿದ್ಯಾಲಯ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ಹೊರ ಬಂದಿರುವ ಫಲಿತಾಂಶ ಈ ರೀತಿಯಾಗಿಲ್ಲ. ಅದು ಮೇಲಿನ ಎರಡೂ ವಾದಗಳನ್ನು ಒಪ್ಪುವುದಿಲ್ಲ. ಆದ್ದರಿಂದ, ಒಬ್ಬರು ಆಕಳಿಸುವುದನ್ನು ನೋಡಿ ಉಳಿದ ಎಲ್ಲರೂ ಯಾಕೆ ಆಕಳಿಸುತ್ತಾರೆ ಎನ್ನುವ ಬಗ್ಗೆ ವಿಜ್ಞಾನಿಗಳು ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ.

ಸಾಮಾಜಿಕ ಸಂಪರ್ಕ

ಹಾಗೆ ನೋಡಿದರೆ ಈ ವಿಷಯದ ಬಗ್ಗೆ ಎಲ್ಲಾ ಸಂಶೋಧನೆಗಳು ಒಂದೇ ತೀರ್ಮಾನಕ್ಕೆ ಬಂದಿಲ್ಲ. ಕೆಲವು ವಿಶ್ವವಿದ್ಯಾಲಯ ಅಧ್ಯಯನಗಳು ಸಹಾನುಭೂತಿ ಮತ್ತು ಸಾಮಾಜಿಕ ಸಂಪರ್ಕವೇ ಕಾರಣ ಈ ಸಾಮಾಜಿಕ ಆಕಳಿಗೆ ಕಾರಣ ಎಂದು ಸೂಚಿಸಿವೆ. ಇನ್ನು ಕೆಲವು ಇದನ್ನು ಸಂಪೂರ್ಣವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ. ಆದ್ದರಿಂದ, ಈ ಪ್ರತಿಕ್ರಿಯೆಯ ಹಿಂದೆ ಮೆದುಳಿನ ಕಾರ್ಯ, ಆನುವಂಶಿಕ ಅಂಶಗಳು ಮತ್ತು ವೈಯಕ್ತಿಕ ಗುಣಲಕ್ಷಣಗಳಂತಹ ಹಲವು ಕಾರಣಗಳಿರಬಹುದು ಎಂದು ಹೇಳಲಾಗುತ್ತದೆ.

ಇನ್ನೂ ಕುತೂಹಲಕಾರಿ ಅಂಶವೆಂದರೆ, ಈ ಪ್ರತಿಕ್ರಿಯೆ ಎಲ್ಲರಲ್ಲಿಯೂ ಒಂದೇ ರೀತಿ ಆಗಿರುವುದಿಲ್ಲ. ನಾಲ್ಕು ಅಥವಾ ಐದು ವರ್ಷದೊಳಗಿನ ಚಿಕ್ಕ ಮಕ್ಕಳಲ್ಲಿ, ಸಾಂಕ್ರಾಮಿಕ ಆಕಳಿಕೆ ಬಹಳ ಅಪರೂಪ. ಅದೇ ರೀತಿ, ಕೆಲವು ವಯಸ್ಕರು ಕೂಡಾ ಬೇರೆಯವರ ಆಕಳಿಕೆಯಿಂದ ಪ್ರಭಾವಿತರಾಗುವುದಿಲ್ಲ. ಇದರರ್ಥ ಈ ಪ್ರತಿಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಪ್ರಾಣಿಗಳಲ್ಲಿಯೂ ಕಂಡುಬರುತ್ತದೆ ಈ ನಡವಳಿಕೆ

ಈ ನಡವಳಿಕೆಯನ್ನು ಮಾನವರ ಜೊತೆಗೆ ಚಿಂಪಾಂಜಿಗಳು, ನಾಯಿಗಳು ಮತ್ತು ತೋಳಗಳಂತಹ ಕೆಲವು ಸಾಮಾಜಿಕ ಪ್ರಾಣಿಗಳಲ್ಲಿಯೂ ಗಮನಿಸಲಾಗಿದೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಸಾಮಾಜಿಕ ಜೀವಿಗಳ ನಡುವಿನ ಸಾಮಾಜಿಕ ಸಂವಹನಗಳ ಲಕ್ಷಣವಾಗಿರಬಹುದು ಎಂದು ಸೂಚಿಸುತ್ತದೆ. ಆದರೆ, ಇತರರು ಆಕಳಿಸಿದಾಗ ನೀವೂ ಆಕಳಿಸುತ್ತೀರಿ ಎಂದಾದರೆ ನಿಮಗೆ ನಿದ್ರೆ ಬರುತ್ತಿದೆ ಅಥವಾ ಆರೋಗ್ಯ ಸಮಸ್ಯೆಯಿದೆ ಎಂದರ್ಥವಲ್ಲ. ನೀವು ಸಾಮಾನ್ಯವಾಗಿರುವಾಗಲೂ ಈ ಪ್ರತಿಕ್ರಿಯೆ ಕಂಡುಬರಬಹುದು.

(ಬರಹ : ರಂಜಿತಾ ಆರ್.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+