Get Updates
Get notified of breaking news, exclusive insights, and must-see stories!

ಸ್ವಾದಿಷ್ಟವಾದ ಕಾಡು ಹಣ್ಣು ಕರ್ಮಂಜಿ ನಿಮಗೆಷ್ಟು ಬಗ್ಗೆ ಗೊತ್ತು? ಆರೋಗ್ಯಕ್ಕೆ ಇದರ ಉಪಯೋಗವೇನು?

ಮಡಿಕೇರಿ, ಜುಲೈ 04: ಮುಂಗಾರು ಪ್ರವೇಶವಾಗಿ ಮಳೆ ಧೋ ಎಂದು ಸುರಿಯುತ್ತಿದ್ದರೆ ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟವಾಗಿ ಪರಿಣಮಿಸುತ್ತಿದ್ದ ಕಾಲವಿತ್ತು. ಆದರೆ ಅದನ್ನೆಲ್ಲ ಲೆಕ್ಕಿಸದೆ ಮಕ್ಕಳು ಮನೆಯಿಂದ ಹೊರ ಬೀಳುತ್ತಿದ್ದರು. ಕೈನಲ್ಲಿ ಕತ್ತಿ ಹಿಡಿದು ಮಳೆಗಾಲದಲ್ಲಷ್ಟೆ ಸಿಗುತ್ತಿದ್ದ ಹಣ್ಣುಗಳಿಗಾಗಿ ತಲಾಸೆ ನಡೆಸುತ್ತಿದ್ದರು. ಅವುಗಳನ್ನು ಕಾಡಿನಲ್ಲೆಲ್ಲ ಅಲೆದಾಡಿ ಹುಡುಕಿ ತರುತ್ತಿದ್ದರು. ಮಳೆಗಾಲ ಆರಂಭದಲ್ಲಿ ನಾಡಿನಲ್ಲಿ ಮತ್ತು ಕಾಡಿನಲ್ಲಿ ಹಲವು ಬಗೆಯ ಹಣ್ಣುಗಳು ಸಿಗುತ್ತಿದ್ದವಾದರೂ ನಡು ಮಳೆಗಾಲದಲ್ಲಿ ಯಾವುದೇ ಹಣ್ಣುಗಳು ಸಿಗುತ್ತಿರಲಿಲ್ಲ. ಆಗ ಸಿಗುತ್ತಿದ್ದ ಒಂದೇ ಹಣ್ಣು ಅದು ಕರ್ಮಂಜಿ ಆಗಿರುತ್ತಿತ್ತು.

ಈ ಹಣ್ಣು ವಿಭಿನ್ನ ಸ್ವಾದಿಷ್ಟವನ್ನು ಹೊಂದಿದ್ದು, ರುಚಿ, ಸುವಾಸನೆ ಎಲ್ಲವೂ ವಿಶಿಷ್ಟವಾಗಿರುತ್ತಿತ್ತು. ಕಾಡುಗಳು ಹೇರಳವಾಗಿದ್ದ ಕಾಲದಲ್ಲಿ ಇದು ಎಲ್ಲೆಂದರಲ್ಲಿ ಕಂಡು ಬರುತ್ತಿತ್ತು. ಹಣ್ಣುಗಳನ್ನು ನೇರವಾಗಿ ಕಿತ್ತು ತಿಂದರೆ ಅದರ ಮಜಾವೇ ಬೇರೆಯಾಗಿರುತ್ತಿತ್ತು. ಇದರ ಜತೆಗೆ ಕಾಯಿಗಳನ್ನು ಕಿತ್ತು ತಂದು ಚೆನ್ನಾಗಿ ಒರೆಸಿ ಬಳಿಕ ಅದನ್ನು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಉಪ್ಪಿನಕಾಯಿ ಹಾಕುತ್ತಿದ್ದರು. ಅವತ್ತಿನ ಮಟ್ಟಿಗೆ ಕಾಡಿನಲ್ಲಿ ಸಿಗುವ ಹಣ್ಣು, ಕಾಯಿಗಳೆಲ್ಲವೂ ಒಂದಲ್ಲ ಒಂದು ರೀತಿಯ ತಿನಿಸಾಗಿ ಇಲ್ಲಿ ಬಳಕೆಯಾಗುತ್ತಿತ್ತು.

What Are The Benefits Of Kodagu District s Wild Fruits

ಇನ್ನು ಮಕ್ಕಳು ಕೂಡ ಸಮಯ ಸಿಕ್ಕಾಗಲೆಲ್ಲ ದನಗಳನ್ನು ಮೇಯಿಸಲೆಂದು ಕಾಡು, ಮೇಡು ಅಲೆಯುತ್ತಿದ್ದರಿಂದ ಯಾವ ಹಣ್ಣು ಯಾವ ಕಾಡಿನಲ್ಲಿದೆ? ಎಂಬುದರ ಮಾಹಿತಿ ಚೆನ್ನಾಗಿ ಅರಿವಿರುತ್ತಿತ್ತು. ಹೀಗಾಗಿ ಮಳೆ, ಗಾಳಿಯನ್ನು, ರಕ್ತ ಹೀರುವ ಜಿಗಣೆಗಳನ್ನು ಲೆಕ್ಕಿಸದೆ ಕಾಡಿನಲ್ಲಿ ಅಲೆಯುತ್ತಿದ್ದರು. ಮರ, ಬಳ್ಳಿಗಳಲ್ಲಿ ಬಿಡುತ್ತಿದ್ದ ಹಣ್ಣುಗಳನ್ನು ಹುಡುಕುತ್ತಿದ್ದರು. ಅದು ಎಷ್ಟೇ ದೊಡ್ಡ ಮರವಾಗಿರಲಿ ಅದಕ್ಕೆ ಹೇಗಾದರೂ ಮಾಡಿ ಹತ್ತಿ ಹಣ್ಣುಗಳನ್ನು ಕಿತ್ತುಕೊಂಡು ಬರುತ್ತಿದ್ದರು. ಆದರೆ ಕರ್ಮಂಜಿ ಹಣ್ಣನ್ನು ಕೀಳಲು ಹೆಚ್ಚು ಶ್ರಮ ಪಡಬೇಕಾಗಿರಲಿಲ್ಲ. ಆದರೆ ಜಾಗ್ರತೆಯಿಂದ ಕೀಳಬೇಕಾಗಿತ್ತು.

ಕೊಡಗಿನ ಕಾಡಿನಲ್ಲಿರುವ ಕರ್ಮಂಜಿ ಹಣ್ಣು

ಕರ್ಮಂಜಿ ಹಣ್ಣಿನ ಪೂರ್ವಾಪರವನ್ನು ನೋಡಿದ್ದೇ ಆದರೆ ಇದು ಬಳ್ಳಿಯಾಗಿ ಬೆಳೆಯುವ ಸಸ್ಯ. ಈ ಬಳ್ಳಿಯು ಗಿಡ ಅಥವಾ ಮರದ ಆಸರೆ ಪಡೆದು ಬೆಳೆಯುತ್ತದೆ. ಬಳ್ಳಿಯು ಗಟ್ಟಿಯಾದ ಕಾಂಡದಂತೆ ಇದ್ದು, ಇದರಲ್ಲಿ ಉದ್ದವಾದ ಮುಳ್ಳುಗಳಿರುತ್ತವೆ. ಇವು ಸುಮಾರು ಎರಡ್ಮೂರು ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಗೋಲಿಯಾಕಾರದ ಹಣ್ಣುಗಳನ್ನು ಬಿಡುತ್ತದೆ.

ಕಡು ಹಸಿರಿನ ಕಾಯಿ ಬೆಳೆದು ಹಣ್ಣಾಗುತ್ತಿದ್ದಂತೆಯೇ ನೇರಳೆ ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಾಯಿ ಹುಳಿಯಾಗಿದ್ದರೆ, ಹಣ್ಣಾಗುತ್ತಿದ್ದಂತೆಯೇ ಸ್ವಲ್ಪ ಹುಳಿ ಮಿಶ್ರಿತ ಸಿಹಿ ರುಚಿ ಬರುತ್ತದೆ. ಇದರಲ್ಲಿನ ರಸವನ್ನು ಹೊಂದಿದ ಕೆಂಪು ಬಣ್ಣದ ತಿರುಳು ರುಚಿಯಾಗಿರುತ್ತದೆ. ಹಣ್ಣಿನೊಳಗೆ ಮೆತ್ತಗಿನ ಬೀಜಗಳಿದ್ದು ಅವುಗಳನ್ನು ಅಗೆದು ತಿನ್ನಬಹುದು ಅಥವಾ ಉಗಿಯಬಹುದು.

What Are The Benefits Of Kodagu District s Wild Fruits

ಹಣ್ಣುಗಳು ಬಳ್ಳಿಯಲ್ಲಿ ಗೊಂಚಲು, ಗೊಂಚಲಾಗಿರುತ್ತವೆ. ಇವು ಮಳೆಗಾಲದಲ್ಲಿ ಅಂದರೆ ಜುಲೈ ಅಥವಾ ಆಗಸ್ಟ್ ನಲ್ಲಿ ಹಣ್ಣಾಗುತ್ತವೆ. ಆದರೆ ಹೂವನ್ನು ಮಾತ್ರ ಫೆಬ್ರವರಿ, ಮಾರ್ಚ್ ನಲ್ಲಿಯೇ ಬಿಡುತ್ತವೆ. ಬಿಳಿ ಬಣ್ಣದ ಇದರ ಹೂ ಮೇಲ್ನೋಟಕ್ಕೆ ಮಲ್ಲಿಗೆಯನ್ನು ಹೋಲುತ್ತದೆ. ಹೂ ಬಿಟ್ಟ ನಂತರ ಮಿಡಿಗಚ್ಚಿ ಬೆಳೆಯಲು ಆರಂಭಿಸಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಾಯಿ ಬಲಿತು ಹಣ್ಣಾಗುತ್ತದೆ. ಹಣ್ಣು, ಕಾಯಿ, ಬಳ್ಳಿ, ಎಲೆ ಹೀಗೆ ಎಲ್ಲದರಲ್ಲೂ ಹಲಸಿನ ಕಾಯಿಯಲ್ಲಿ ಇರುವಂತೆ ಬಿಳಿ ಬಣ್ಣದ ಮೇಣವಿರುವುದು ವಿಶೇಷವಾಗಿದೆ.

ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವ ಹಣ್ಣು

ಈ ಹಣ್ಣಿನಲ್ಲಿ ಆರೋಗ್ಯಕ್ಕೆ ಪೋಷಕ ಶಕ್ತಿಯನ್ನು ನೀಡಬಹುದಾದ ಕಬ್ಬಿಣ ಮತ್ತು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ರಕ್ತ ಹೀನತೆಗೆ ರಾಮಬಾಣವಾಗಿದ್ದು, ವಸಡಿನ ಸಮಸ್ಯೆಗೂ ಪರಿಹಾರ ನೀಡುತ್ತದೆಯಂತೆ. ಇದರ ಕಾಯಿಯನ್ನು ಉಪ್ಪಿನಕಾಯಿಗೆ ಬಳಸ ಬಹುದಲ್ಲದೆ, ಹಣ್ಣಿನಿಂದ ಕೆಲವೊಂದು ತಿನಿಸನ್ನು ಮಾಡಬಹುದಾಗಿದೆ. ಕೊಡಗಿನ ಕಾಡಿನಲ್ಲಿ ಬೆಳೆದು ರುಚಿ, ರುಚಿಯಾದ ಹಣ್ಣನ್ನು ನೀಡುತ್ತಾ ಬಂದಿರುವ ಇದನ್ನು ಇಲ್ಲಿನವರು ಕರ್ಮಂಜಿ ಹಣ್ಣು ಎಂದು ಕರೆದರೂ ಇದರ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ಮಾಹಿತಿ ದೊರೆಯುತ್ತದೆ.

ಕರ್ಮಂಜಿ ಹಣ್ಣಿನ ಗಿಡವು ಅಪೋಸೈನೇಸಿಯೇ ಕುಟುಂಬಕ್ಕೆ ಸೇರಿದ್ದು, ಇದರ ಸಸ್ಯಶಾಸ್ತ್ರೀಯ ಹೆಸರು ಕಾರಿಸ್ಸಾ ಕರಂಡಸ್. ಇದರಲ್ಲಿ ಸುಧಾರಿತ ತಳಿಗಳನ್ನು ಈಗಾಗಲೇ ಕಂಡು ಹಿಡಿಯಲಾಗಿದ್ದು, ಅವುಗಳನ್ನು ಬೇರೆಡೆಗಳನ್ನು ನೆಟ್ಟು ಬೆಳೆಸಿ ಹಣ್ಣುಗಳನ್ನು ಪಡೆಯಲಾಗುತ್ತಿದೆ. ಹೀಗಿರುವಾಗ ನಮ್ಮ ಹಿತ್ತಲಲ್ಲೇ ತನ್ನ ಪಾಡಿಗೆ ಬೆಳೆದು ಹಣ್ಣುಗಳನ್ನು ನೀಡುವ ತಲತಲಾಂತರ ಸಸ್ಯವಾಗಿರುವ ಕರ್ಮಂಜಿಗೆ ನಾವು ನಮ್ಮ ತೋಟದ ಬದಿಯಲ್ಲಿ, ಮನೆಯ ಹಿತ್ತಲಲ್ಲಿ ಒಂದಿಷ್ಟು ಜಾಗ ನೀಡಿ ಬೆಳೆಯಲು ಅವಕಾಶ ಮಾಡಿಕೊಡಬೇಕಾಗಿದೆ.

What Are The Benefits Of Kodagu District s Wild Fruits

ಕರ್ಮಂಜಿ ಹಣ್ಣಿನ ಉಳಿವಿಗೆ ಶ್ರಮಿಸಬೇಕಿದೆ..

ಏಕೆಂದರೆ ಈಗಾಗಲೇ ಕರ್ಮಂಜಿ ಹಣ್ಣು ಸೇರಿದಂತೆ ಬಹುತೇಕ ಹಣ್ಣುಗಳ ಬಗ್ಗೆ ಹೇಳಿದರೆ ಬಯಲುಸೀಮೆಯ ಜನರು ಮಾತ್ರವಲ್ಲದೆ, ಮಲೆನಾಡಿನ ಜನರೇ ಅಚ್ಚರಿಯಿಂದ ನೋಡುವಂತಾಗಿದೆ. ಕಾರಣ ಕಾಡುಗಳು ನಾಶವಾಗಿ ತೋಟ, ವಸತಿ ಪ್ರದೇಶಗಳು ನಿರ್ಮಾಣವಾಗುತ್ತಿದ್ದಂತೆಯೇ ಕಾಡಿನಲ್ಲಿದ್ದ ಹಣ್ಣುಗಳು ಕೂಡ ನಿಧಾನವಾಗಿ ಅಳಿವಿನಂಚಿಗೆ ಸಾಗಿವೆ. ಇವುಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡದ ಕಾರಣದಿಂದಾಗಿ ಅವು ನಶಿಸಿ ಹೋಗಿವೆ. ಈಗ ಕಾಡು, ತೋಟ, ಬೆಟ್ಟಗುಡ್ಡ ಹೀಗೆ ಅಡ್ಡಾಡಿದರೂ ಬಹುತೇಕ ಹಣ್ಣುಗಳ ಕಣ್ಣಿಗೆ ಕಾಣಿಸದಂತಾಗಿದೆ.

ಬಹುತೇಕ ಮಂದಿ ಕಾಡು ಹಣ್ಣುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಆಧುನಿಕ ಲಿಚಿ, ರಾಂಬೂಟ್, ಅವಕಾಡೋ ಹೀಗೆ ಬೇರೆ, ಬೇರೆ ಹಣ್ಣುಗಳತ್ತ ಆಸಕ್ತಿ ವಹಿಸಿ ಅದನ್ನು ಬೆಳೆಯುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಪೇಟೆ, ಪಟ್ಟಣದ ಪರಿವೇ ಇಲ್ಲದೆ, ಆಧುನಿಕ ಹಣ್ಣುಗಳನ್ನು ಕೊಂಡು ಕೊಳ್ಳಲು ಸಾಧ್ಯವಿಲ್ಲದ ಜನರ ಹಣ್ಣು ತಿನ್ನುವ ಬಯಕೆಯನ್ನು ಈಡೇರಿಸುತ್ತಾ, ಆರೋಗ್ಯಕ್ಕೂ ಪೋಷಕ ಶಕ್ತಿಯನ್ನು ಒದಗಿಸಿದ್ದ ಕಾಡು ಹಣ್ಣುಗಳು ನೇಪಥ್ಯಕ್ಕೆ ಸರಿದಿವೆ. ಅಳಿದುಳಿದ ಸ್ಥಳಗಳಲ್ಲಿ ಕೆಲವು ಹಣ್ಣುಗಳಿದ್ದು, ಅವುಗಳಿಗೊಂದಿಷ್ಟು ಜಾಗ ನೀಡಿ, ಪೋಷಣೆ ಮಾಡಿದ್ದೇ ಆದರೆ ಮುಂದಿನ ತಲೆಮಾರಿಗೆ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದೇನೋ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+