Veg Momos Recipe: ಹೀಗೆ ವೆಜ್ ಮೋಮೋಸ್ ಮನೆಯಲ್ಲಿ ಮಾಡಿದರೆ ಮಮ್ಮಿಗೆ ಮೆಚ್ಚುಗೆ ಪಕ್ಕಾ
ನೋಡಲು ಆಕರ್ಷವಾದ ಈ ತಿಂಡಿ ಇತ್ತೀಚೆಗೆ ನೆಚ್ಚಿನ ಖಾದ್ಯವಾಗತೊಡಗಿದೆ. ಹಾಗಂತ ಇದನ್ನು ರಸ್ತೆ ಬದಿ ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಸೂಕ್ತವಲ್ಲ. ಹೀಗಾಗಿ ಮನೆಯಲ್ಲೇ ಮೋಮೋಸ್ ತಯಾರಿಸಿ ತಿನ್ನುವುದು ಹೆಚ್ಚು ಸೂಕ್ತ ಅಂತ ನಿಮಗೆ ಅನಿಸಿರಬಹುದು. ಆದರೆ ಇದನ್ನು ತಯಾರಿಸುವ ವಿಧಾನ ತಿಳಿಯದೇ ಕೆಲವರು ರಸ್ತೆ ಬದಿ ತಿನ್ನುವ ಆಸೆ ಇಲ್ಲದೇ ಇದ್ದರೂ ಸೇವಿಸುತ್ತಾರೆ.
ಹಾಗಾದರೆ ಮೋಮೋಸ್ ಮನೆಯಲ್ಲಿ ತಯಾರಿಸುವ ವಿಧಾನ ನಾವು ನಿಮಗೆ ಹೇಳಿ ಕೊಡುತ್ತೇವೆ. ನೀವು ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅಂದಹಾಗೆ ಮೋಮೋಸ್ ಅಲ್ಲಿ ನಾನಾ ವಿಧಗಳಳಿವೆ. ನಾನ್ ವೆಜ್ ಪ್ರೀಯರಿಗೆ ಹಾಗೂ ವೆಜ್ ಪ್ರೀಯರಿಗೆ ಅನುಗುಣವಾಗಿ ಮೋಮೋಸ್ ತಯಾರಿಸಲಾಗುತ್ತದೆ. ಹಾಗಾದರೆ ಇಂದು ನಾವು ವೆಜ್ ಮೋಮೋಸ್ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ವೆಜ್ ಮೋಮೋಸ್ ತಯಾರಿಸಲು ಬೇಕಾಗುವ ಪದಾರ್ಥಗಳು:
*ಕ್ಯಾರೆಟ್ ತುರಿ - 1 ಕಪ್
*ಮೈದಾಹಿಟ್ಟು - 1 ಕಪ್
*ಈರುಳ್ಳಿ - 1
*ಕ್ಯಾಬೇಜ್ (ಎಲೆಕೋಸು) - 1 ಕಪ್
*ತುರಿದ ಶುಂಠಿ - ಅರ್ಧ ಟೀ ಸ್ಪೂನ್
*ಕ್ಯಾಪ್ಸಿಕಂ - 1 ಕಪ್
*ಕೊತ್ತಂಬರಿಸೊಪ್ಪು - ಸ್ವಲ್ಪ
*ಕರಿಮೆಣಸಿನಪುಡಿ - ಅರ್ಧ ಟೀ ಸ್ಪೂನ್
*ಹಸಿಮೆಣಸಿನಕಾಯಿ - 5
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಅಗತ್ಯವಿರುವಷ್ಟು
ವೆಜ್ ಮೋಮೋಸ್ ತಯಾರಿಸುವ ವಿಧಾನ:
* ಮೊದಲು ಒಂದು ಪಾತ್ರೆಯಲ್ಲಿ ಮೈದಾಹಿಟ್ಟು ಹಾಕಿಕೊಂಡು ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಮೆದುವಾಗಿ ನೀರು ಹಾಕಿ ಕಲಸಿಕೊಳ್ಳಿ.
*ಮತ್ತೊಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ತುರಿದ ಕ್ಯಾರೆಟ್, ಸಣ್ಣದಾಗಿ ಹೆಚ್ಚಿದ ಕ್ಯಾಬೇಜ್, ಈರುಳ್ಳಿ, ಕ್ಯಾಪ್ಸಿಕಂ, ಮೆಣಸಿನ ಪುಡಿ, ಸಿಕ್ಕದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

*ನಂತರ ಮೈದಾಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ಚಿಕ್ಕ ಉಂಡೆಗಳನ್ನಾಗಿ ಮಾಡಿ. ಪೂರಿ ಆಕಾರದಲ್ಲಿ ಲಟ್ಟಸಿಕೊಳ್ಳಿ. ಲಟ್ಟಿಸಿದ ಎಲೆಯಲ್ಲಿ ಮಿಕ್ಸ್ ಮಾಡಿದ ಮಿಶ್ರಣವನ್ನು ಇಟ್ಟು ಹಿಟ್ಟಿನ ಅಂಚಿಗೆ ಎಣ್ಣೆ ಸವರಿಕೊಳ್ಳಬೇಕು. ನಂತರ ಅದನ್ನು ಮೋಮೋಸ್ ಆಕಾರದಲ್ಲಿ ಫೋಲ್ಡ್ ಮಾಡಿಕೊಳ್ಳಿ.
*ನಂತರ ಒಲೆಯ ಮೇಲೆ ಇಡ್ಲಿ ಪಾತ್ರೆಯನ್ನು ಇಟ್ಟು ಎಣ್ಣೆ ಸವರಿ ಮೋಮೋಸ್‌ಗಳನ್ನು ಹಬೆಯಲ್ಲಿ ಬೇಯಲು ಇಡಬೇಕು. ಸಣ್ಣ ಉರಿಯಲ್ಲಿ ಮೋಮೋಸ್‌ಗಳನ್ನು ಬೇಯಿಸಿಕೊಳ್ಳಬೇಕು. ಬಳಿಕ ಗ್ಯಾಸ್ ಆಫ್ ಮಾಡಿ ಸರ್ವ ಮಾಡಿದರೆ ರುಚಿಕರವಾದ ಮೋಮೋಸ್ ಸವಿಯಲು ಸಿದ್ದ.












Click it and Unblock the Notifications