ಬೇಸಿಗೆಯ ಸ್ಪೆಷಲ್ ಮಾವಿನಕಾಯಿ ಉಪ್ಪಿನಕಾಯಿ: ಸರಿಯಾದ ಅಳತೆಯಲ್ಲಿ ಮಾಡಿದರೆ ರುಚಿ ಡಬಲ್
ಬೇಸಿಗೆಕಾಲ ಬಂದರೆ ಸಾಕು ಮನೆಮನೆಗಳಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಮಾಡಲು ತಯಾರಿ ಶುರುವಾಗುತ್ತದೆ. ಖಾರದ ರುಚಿ ಮತ್ತು ದೀರ್ಘಕಾಲ ಉಳಿಯುವ ಗುಣದಿಂದ ಮಾವಿನಕಾಯಿ ಉಪ್ಪಿನಕಾಯಿ ಎಲ್ಲರಿಗೂ ಇಷ್ಟವಾಗುತ್ತದೆ. ಸರಿಯಾದ ಅಳತೆ ಮತ್ತು ಕೆಲವು ಸುಲಭ ಉಪಾಯಗಳನ್ನು ಪಾಲಿಸಿದರೆ ಮನೆಯಲ್ಲೇ ರುಚಿಕರವಾದ ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಬಹುದು.
1 ಕೆಜಿ ಕತ್ತರಿಸಿದ ಮಾವಿನಕಾಯಿ ಹೋಳುಗಳಿಗೆ ಬೇಕಾಗುವ ಪದಾರ್ಥಗಳು:
ಸಾಸಿವೆ ಪುಡಿ - 1 ಕಪ್ ಅಂದರೆ (100-120 ಗ್ರಾಂ)
ಖಾರದ ಪುಡಿ - 1 ಕಪ್ (100-120 ಗ್ರಾಂ)
ಉಪ್ಪು (ಪುಡಿ ಮಾಡಿದ ಕಲ್ಲು ಉಪ್ಪು) - 1 ಕಪ್
ಕಡಲೆ ಎಣ್ಣೆ / ಎಳ್ಳೆಣ್ಣೆ - 2 ಕಪ್ (300-400 ಮಿ.ಲೀ.)
ಬೆಳ್ಳುಳ್ಳಿ - ಅರ್ಧ ಕಪ್
ಮೆಂತ್ಯೆ ಕಾಳು - 1 ಟೀ ಸ್ಪೂನ್ (ಐಚ್ಛಿಕ)

ತಯಾರಿಸುವ ವಿಧಾನ:
ಮೊದಲು ಮಾವಿನಕಾಯಿಗಳನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ಒಣಗಿಸಬೇಕು. ನೀರಿನ ಅಂಶ ಇರಬಾರದು. ನಂತರ ಸಣ್ಣ ಹೋಳುಗಳನ್ನಾಗಿ ಕತ್ತರಿಸಿ ಒಳಗಿನ ಬಿಳಿ ಭಾಗವನ್ನು ತೆಗೆದುಹಾಕಬೇಕು. ಸಾಸಿವೆಯನ್ನು ಸ್ವಲ್ಪ ಹುರಿದು ತಣ್ಣಗಾದ ಬಳಿಕ ಪುಡಿ ಮಾಡಬೇಕು. ಬೇಕಿದ್ದರೆ ಮೆಂತ್ಯೆಯನ್ನೂ ಹುರಿದು ಸೇರಿಸಬಹುದು.
ಉಪ್ಪಿನಕಾಯಿ ಮಿಶ್ರಣ ಮಾಡುವ ವಿಧಾನ:
ಒಂದು ದೊಡ್ಡ ಪಾತ್ರೆಯಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ ಮೊದಲು ಸ್ವಲ್ಪ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಬೇಕು. ಇದರಿಂದ ಹೋಳುಗಳು ಗಟ್ಟಿಯಾಗಿರುತ್ತವೆ. ನಂತರ ಸಾಸಿವೆ ಪುಡಿ, ಖಾರದ ಪುಡಿ, ಉಪ್ಪು ಮತ್ತು ಬೆಳ್ಳುಳ್ಳಿ ಸೇರಿಸಿ ಸಮವಾಗಿ ಮಿಶ್ರಣ ಮಾಡಬೇಕು.
ಕೊನೆಯಲ್ಲಿ ಉಳಿದ ಎಣ್ಣೆಯನ್ನು ಹಾಕಿ ಎಲ್ಲಾ ಹೋಳುಗಳನ್ನು ಎಣ್ಣೆಯಲ್ಲಿ ಮುಳುಗುವಂತೆ ಮಾಡಬೇಕು.
ಮಾವಿನಕಾಯಿ ಉಪ್ಪಿನಕಾಯಿ ಇನ್ನಷ್ಟು ರುಚಿಯಾಗಲು ಹೀಗೆ ಮಾಡಿ:
ಮಿಶ್ರಣವು ಪೂರ್ತಿ ಆದ ನಂತರ ಗಾಜಿನ ಬಾಟಲಿಯಲ್ಲಿ ಹಾಕಿ ಮುಚ್ಚಳ ಬಿಗಿಯಾಗಿ ಹಾಕಬೇಕು. ಮೂರು ದಿನ ಕೋಣೆಯ ತಾಪಮಾನದಲ್ಲೇ ಇಟ್ಟರೆ ಮಾವಿನ ಹೋಳುಗಳು ಚೆನ್ನಾಗಿ ಮಸಾಲೆ ಹೀರಿಕೊಳ್ಳುತ್ತವೆ. ಬಳಿಕ ಎಣ್ಣೆ ಮೇಲ್ಮೈಗೆ ಬರುತ್ತದೆ.
ಅಗತ್ಯವಿದ್ದರೆ ಮಾತ್ರ ಹೆಚ್ಚು ಎಣ್ಣೆ ಕಾಯಿಸಿ ತಣ್ಣಗಾದ ನಂತರ ಸೇರಿಸಬಹುದು. ಸರಿಯಾದ ಅಳತೆಯಲ್ಲಿ ಮಾಡಿದರೆ ಈ ಉಪ್ಪಿನಕಾಯಿ ದೀರ್ಘಕಾಲ ಹಾಳಾಗದೆ ಬರುತ್ತದೆ.
ಗಮನಿಸಬೇಕಾದ ಮುಖ್ಯ ಸಲಹೆಗಳು:
ಮಾವಿನಕಾಯಿ ಹೋಳುಗಳಲ್ಲಿ ನೀರಿನ ಅಂಶ ಇರದಂತೆ ನೋಡಿಕೊಳ್ಳಬೇಕಾಗುತ್ತದೆ.
ಉಪ್ಪಿನಕಾಯಿಗೆ ಒದ್ದೆಯಾದ ಮತ್ತು ಇನ್ನಿತರ ವಸ್ತುಗಳಿಗೆ ಬಳಿಸಿದ ಚಮಚ ಬಳಸಬಾರದು.
ಉತ್ತಮ ಗುಣಮಟ್ಟದ ಖಾರದ ಪುಡಿ ಮತ್ತು ಉಪ್ಪು ಬಳಸಬೇಕು ಯಾಕೆಂದರೆ ಈ ಪದಾರ್ಥಗಳು ಉಪ್ಪಿನಕಾಯಿ ರುಚಿಯನ್ನು ಹೆಚ್ಚಿಸುವುದಲ್ಲದೆ ಅದರೆ ದಿರ್ಘಾಯುಷ್ಯಕ್ಕೂ ಸಹಕಾರಿಯಾಗಿರುತ್ತದೆ.
ಶೇಂಗಾ ಎಣ್ಣೆ ಬಳಸಿದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ
ಆರಂಭದಲ್ಲೇ ಎಣ್ಣೆಯನ್ನು ಮಾವಿನಕಾಯಿ ಹೋಳುಗಳಿಗೆ ಲೇಪಿಸುವುದರಿಂದ ಅವು ಮೃದುವಾಗುವುದನ್ನು ತಡೆಯುತ್ತದೆ.














Click it and Unblock the Notifications