ಬೇಸಿಗೆಯಲ್ಲಿ ನಾಯಿ, ಬೆಕ್ಕುಗಳ ಆರೈಕೆ ಹೀಗಿರಲಿ: ಅವುಗಳಿಗೂ ಬೇಕು ಬಿಸಿಲ ಬೇಗೆಯಿಂದ ಮುಕ್ತಿ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅದರಲ್ಲಿಯೂ ಮಧ್ಯಾಹ್ನದ ಬಿಸಿಲಿನ ತಾಪ ತೀವ್ರ ಹಾನಿಯನ್ನುಂಟು ಮಾಡುತ್ತಿದೆ. ಮಿತಿ ಮೀರುತ್ತಿರುವ ಬಿಸಿಲು ಯಾರೂ ಮನೆಯಿಂದ ಹೊರಕ್ಕೆ ಕಾಲಿಡದಂತೆ ತಡೆಯುತ್ತಿದೆ. ಬಿಸಿಲಿನ ಬೇಗೆಗೆ ಮನುಷ್ಯರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಕೂಡಾ ಬಳಲುತ್ತಿವೆ. ಬೇಸಿಗೆಯಲ್ಲಿ ಕೆಲವೊಮ್ಮೆ ಬಿಸಿಲಿನ ತಾಪವು ಪ್ರಾಣಿಗಳ ಸಾವಿಗೆ ಕಾರಣವಾಗುತ್ತದೆ. ಆದ್ದರಿಂದ, ಹಸು, ಎಮ್ಮೆ ಮತ್ತು ನಾಯಿ ಮತ್ತು ಬೆಕ್ಕುಗಳಂಥಹ ಸಾಕುಪ್ರಾಣಿಗಳ ಆರೋಗ್ಯ ಮತ್ತು ಆರೈಕೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿರುತ್ತದೆ.

ಬಹುತೇಕ ಮಂದಿ ತಮ್ಮ ಮನೆಯಲ್ಲಿ ನಾಯಿ ಇಲ್ಲವೇ ಬೆಕ್ಕು ಸಾಕುತ್ತಾರೆ. ನಾಯಿ ಮತ್ತು ಬೆಕ್ಕಿನ ಮಾಲೀಕರು ಬೇಸಿಗೆಯಲ್ಲಿ ಅವುಗಳ ಆರೈಕೆಯನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಂಡಿರುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ವೈದ್ಯರ ಸಲಹೆಯನ್ನು ಅನುಸರಿಸಿದರೆ, ನಿಮ್ಮ ಸಾಕುಪ್ರಾಣಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೇಸಿಗೆಯಲ್ಲಿಯೂ ಅವುಗಳು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಬಹುದು.

Summer Pet Care Tips

ಸಾಕು ಪ್ರಾಣಿಗಳ ಜೀವನ ಶೈಲಿಯಲ್ಲಿ ಬದಲಾವಣೆ:

ಪ್ರಾಣಿಗಳಿಗೆ ಶಾಖವು ತುಂಬಾ ತೊಂದರೆ ನೀಡುತ್ತದೆ.ಬೇಸಿಗೆಯಲ್ಲಿ ಸಾಕು ಪ್ರಾಣಿಗಳು ಆರೋಗ್ಯವಾಗಿರಬೇಕಾದರೆ ಈ ಋತುವಿನಲ್ಲಿ ಅವುಗಳ ಜೀವನಶೈಲಿಯನ್ನು ಬದಲಾಯಿಸುವುದು ಮುಖ್ಯ. ಬೇಸಿಗೆ ಕಾಲದಲ್ಲಿ ಸಾಕು ಪ್ರಾಣಿಗಳ ಹೊರಾಂಗಣ ಚಟುವಟಿಕೆಗಳನ್ನು ಮಿತಿಗೊಳಿಸುವುದು ಉತ್ತಮ. ತಾಪಮಾನವು ಕಡಿಮೆ ಇರುವಾಗ ಅಂದರೆ ಮುಂಜಾನೆ ಅಥವಾ ಸಂಜೆಯ ವೇಳೆ ಮಾತ್ರ ಅವುಗಳನ್ನು ವಾಕ್‌ಗೆ ಕರೆದುಕೊಂಡು ಹೋಗುವುದು ಸೂಕ್ತ. ಅಲ್ಲದೆ, ವಾಕ್‌ಗೆ ಕರೆದುಕೊಂಡು ಹೋಗುವಾಗ ಡಾಂಬರು ಮತ್ತು ಕಾಂಕ್ರೀಟ್ ರಸ್ತೆಯನ್ನು ತಪ್ಪಿಸಿ. ಬದಲಿಗೆ ಸಾಧ್ಯವಾದಾಗಲೆಲ್ಲಾ ಹುಲ್ಲು ಇರುವ ಪ್ರದೇಶಗಳನ್ನೇ ಆರಿಸಿಕೊಳ್ಳಿ. ವಾಕ್‌ಗೆ ಕರೆದುಕೊಂಡು ಹೋದ ನಂತರ ನಿಯಮಿತವಾಗಿ ಒದ್ದೆ ಬಟ್ಟೆಯಿಂದ ನಾಯಿಯ ಮೈಯನ್ನು ಒರೆಸಿಕೊಳ್ಳಿ.

ನಾಯಿಗಳನ್ನು ಮನೆಯಿಂದ ಹೊರಗೆ ಕಟ್ಟಿ ಹಾಕುತ್ತೀರಿ ಎಂದಾದರೆ ಹಿತ್ತಲಿನಲ್ಲಿ ತಾತ್ಕಾಲಿಕ ಛಾವಣಿಯನ್ನು ನಿರ್ಮಿಸಿ. ಇದು ಸಾಧ್ಯವಿಲ್ಲ ಎಂದಾದರೆ ಮರಗಳು ಅಥವಾ ಟರ್ಪಲ್‌ಗಳ ಸಹಾಯದಿಂದ ನೆರಳು ಸಿಗುವಂತೆ ನೋಡಿಕೊಳ್ಳಿ. ಬೇಸಿಗೆಯಲ್ಲಿ ಜಿಗಣೆ, ಉಣ್ಣಿ ಮತ್ತು ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಪಶುವೈದ್ಯರು ಶಿಫಾರಸು ಮಾಡಿದ ಔಷಧಿಗಳನ್ನು ಬಳಸಿ. ಸೊಳ್ಳೆ ನಿವಾರಕಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.

Summer Pet Care Tips

ಆಹಾರ ಕ್ರಮದಲ್ಲಿ ಬದಲಾವಣೆ:

ಬೇಸಿಗೆಯಲ್ಲಿ ಸಾಕು ಪ್ರಾಣಿಗಳ ಆಹಾರಕ್ರಮವನ್ನು ಬದಲಾಯಿಸಬೇಕಾಗುತ್ತದೆ. ಸೆಖೆ ಕಾಲದಲ್ಲಿ ಸಾಕು ಪ್ರಾಣಿಗಳಿಗೆ ಎಂದಿನಂತೆ ಆಹಾರ ನೀಡಿದರೆ ಅವುಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ. ಹಾಗಾಗಿ ಸಾಕುಪ್ರಾಣಿಯ ಆರೋಗ್ಯವನ್ನು ಕಾಪಾಡುವಲ್ಲಿ ಅವುಗಳ ಆಹಾರ ಬಹಳ ಮುಖ್ಯವಾಗಿರುತ್ತದೆ. ಈ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯ. ಈ ಬಗ್ಗೆ ಪಶುವೈದ್ಯೆಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ನಾಯಿಗಳು ಮತ್ತು ಬೆಕ್ಕುಗಳಲ್ಲಿ ಹಲವು ಶೀತ ಪ್ರದೇಶಗಳಿಂದ ಬರುತ್ತವೆ. ಆದ್ದರಿಂದ, ಅವುಗಳಿಗೆ ಪ್ರತಿ ಋತುವಿನಲ್ಲಿ ಚಳಿಗಾಲದ ಹವಾಮಾನದ ಅಗತ್ಯವಿರುತ್ತದೆ. ಬಿಸಿ ಪ್ರದೇಶಗಳ ತೀವ್ರ ಶಾಖವು ಪ್ರಾಣಿಗಳು ಅನಾರೋಗ್ಯಕ್ಕೆ ಒಳಗಾಗಲು ಕಾರಣವಾಗಬಹುದು. ಆದ್ದರಿಂದ, ಅವುಗಳ ಆಹಾರವನ್ನು ಬದಲಾಯಿಸುವುದು ಮುಖ್ಯ. ಅವುಗಳಿಗೆ ಬೇಸಿಗೆಯಲ್ಲಿ ತಣ್ಣೀರು, ಮಜ್ಜಿಗೆ, ಎಲೆಕ್ಟ್ರೋಲೈಟ್ ಪುಡಿ ಮತ್ತು ಮೊಸರು ಮುಂತಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಪೂರೈಕೆ ಮಾಡಬೇಕು.

ಮನೆಯಲ್ಲಿಯೂ ಇರಬೇಕು ಈ ಬದಲಾವಣೆ:

ಪಶು ವೈದ್ಯರ ಪ್ರಕಾರ ಮನೆ ಮಣ್ಣಿನದ್ದಾಗಿದ್ದರೆ ನಾಯಿ ಅಥವಾ ಬೆಕ್ಕಿಗೆ ಫ್ಯಾನ್ ಅಳವಡಿಸಬೇಕಾಗುತ್ತದೆ. ಮನೆಯ ನೆಲಕ್ಕೆ ಟೈಲ್ಸ್‌ ಅಳವಡಿಸಿದ್ದು, ಕಾಂಕ್ರೀಟ್ ಮನೆಯಾಗಿದ್ದರೆ ಏರ್ ಕಂಡಿಷನರ್ ಅಥವಾ ಕೂಲರ್ ಅನ್ನು ಅಳವಡಿಸುವುದು ಅಗತ್ಯವಾಗಿರುತ್ತದೆ. ನಾಯಿಗಳಲ್ಲಿ ಶಾಖ ನಿವಾರಕ ಗ್ರಂಥಿಗಳು ಇರುವುದಿಲ್ಲ. ಹಾಗಾಗಿ ಅವುಗಳಿಗೆ ಬೆವರುವುದಿಲ್ಲ. ಇದರಿಂದಾಗಿ ನಾಯಿಗಳು ತುಂಬಾ ಬಿಸಿಯಾಗುತ್ತವೆ. ಅದಕ್ಕಾಗಿಯೇ ನಾಯಿಗಳು ಮತ್ತು ಇತರ ಪ್ರಾಣಿಗಳು ತಮ್ಮ ನಾಲಿಗೆಯ ಮೂಲಕ ದೇಹದ ಶಾಖವನ್ನು ಹೊರ ಹಾಕುತ್ತವೆ.

ಸನ್‌ ಸ್ಟ್ರೋಕ್‌ ಬಗ್ಗೆ ಇರಲಿ ಗಮನ:

ಇನ್ನು ಬೇಸಿಗೆಯಲ್ಲಿ ಸಾಕುಪ್ರಾಣಿಗಳು ಉಸಿರುಗಟ್ಟುವುದು, ಜೊಲ್ಲು ಸುರಿಸುವುದು, ಆಲಸ್ಯ, ವಾಂತಿ ಮತ್ತು ಮುಂತಾದ ಸಮಸ್ಯೆಗಳಿಂದ ಬಳಲುತ್ತವೆ. ಸನ್‌ ಸ್ಟ್ರೋಕ್‌ನಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ನಿಮ್ಮ ನಾಯಿ ಅಥವಾ ಬೆಕ್ಕಿಗೆ ಸನ್‌ ಸ್ಟ್ರೋಕ್‌ ಆಗಿದೆ ಎನ್ನುವ ಅನುಮಾನ ಬಂದರೆ ತಕ್ಷಣ ಅವುಗಳನ್ನು ತಂಪಾದ ಸ್ಥಳಕ್ಕೆ ತರೆದುಕೊಂಡು ಹೋಗಿ, ನೀರು ನೀಡಿ. ಅವುಗಳ ತುಪ್ಪಳವನ್ನು ತಂಪಾದ ನೀರಿನಿಂದ ಒದ್ದೆ ಮಾಡಿ . ಇದರಿಂದ ಪ್ರಾಣಿಗಳ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಪಶು ವೈದ್ಯರು ನೀಡಿರುವ ಈ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ನಿಮ್ಮ ಪ್ರೀತಿಯ ನಾಯಿ, ಬೆಕ್ಕು ಅಥವಾ ಸಾಕುಪ್ರಾಣಿಗಳನ್ನು ಶಾಖದ ಹೊಡೆತದಿಂದ ರಕ್ಷಿಸಲು ಸಹಾಯವಾಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+