Shavige Kesari Bath Recipe: ಫುಟ್‌ಬಾತ್ ಶಾವಿಗೆ ಕೇಸರಿ ಬಾತ್ ರೆಸಿಪಿ- ಕ್ರಿಸ್ಮಸ್‌ಗೆ ತಯಾರಿಸಿ
ಕ್ರಿಸ್ಮಸ್ ಹಾಗೂ ಹೊಸ ವರ್ಷದ ತಯಾರಿಯಲ್ಲಿ ಇರುವ ಗೃಹಿಣಿಯರಿಗೆ ಇಲ್ಲಿದೆ ಟೇಸ್ಟಿ ಶಾವಿಗೆ ಕೇಸರಿ ಬಾತ್ ತಯಾರಿಸುವ ರೆಸಿಪಿ. ಇದನ್ನು ಮನೆಯಲ್ಲಿ ತಯಾರಿಸುವ ಮೂಲಕ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಬಹುದು. ಜೊತೆಗೆ ನೀವು ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರನ್ನು ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರೆ ಅವರಿಗೆ ಈ ಸ್ವೀಟ್ ಅನ್ನು ನೀಡಿ ಅವರಿಂದ ಮೆಚ್ಚುಗೆ ಪಡೆಯಬಹುದು. ಹಾಗಾದರೆ ಈ ಸ್ವೀಟ್ ತಯಾರಿಸುವುದು ಹೇಗೆ ಎನ್ನುವುದನ್ನು ಈಗ ತಿಳಿಯೋಣ.
ಸಾಮಾನ್ಯವಾಗಿ ಗೃಹಿಣಿಯರು ಶಾವಿಗೆ ಕೇಸರಿ ಬಾತ್ ಅನ್ನು ಮನೆಯಲ್ಲಿ ತಯಾರಿಸುತ್ತಾರೆ. ಆದರೆ ಅದು ಆಚೆ ಸಿಗುವಂತೆ ಉದುರುದುರಾಗಿ ಇರುವುದಿಲ್ಲ. ಇದರಿಂದ ನಿಮಗಿದನ್ನು ಸೇವಿಸಲು ಇಷ್ಟವಾಗದೇ ಇರಬಹುದು. ಹಾಗಾದರೆ ಶಾವಿಗೆ ಕೇಸರಿ ಬಾತ್ ತಯಾರಿಸುವಾಗ ಶಾವಿಗೆ ಉದುರುದುರಾಗಿ, ರುಚಿಯಾಗಿ ಮಾತ್ರವಲ್ಲದೆ ಕಲರ್‌ಫುಲ್ಲಾಗಿ ತಯಾರಿಸುವುದು ಹೇಗೆ ಅನ್ನೋದನ್ನ ನಾವು ನಿಮಗೆ ಹೇಳಿಕೊಡುತ್ತೇವೆ. ಇದನ್ನು ಅನುಸರಿಸಿ ಕಡಿಮೆ ಸಮಯದಲ್ಲಿ ಶಾವಿಗೆ ಕೇಸರಿ ಬಾತ್ ತಯಾರಿಸಿ. ಹಾಗಾದರೆ ತಡ ಮಾಡುವುದು ಬೇಡ ಶಾವಿಗೆ ಕೇಸರಿ ಬಾತ್ ತಯಾರಿಸುವ ವಿಧಾನ ಹಾಗೂ ಅದನ್ನು ತಯಾರಿಸಲು ಬೇಕಾಗುವ ಪದಾರ್ಥಗಳ ಬಗ್ಗೆ ಈಗ ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಶಾವಿಗೆ 2 ಕಪ್
* ಸಕ್ಕರೆ ಒಂದುವರೆ ಕಪ್
* ತುಪ್ಪ 10 ಟೇಬಲ್ ಸ್ಪೂನ್
* ಗೋಡಂಬಿ 10
* ಬಾದಮಿ 10
* ಕೇಸರಿ ಅರ್ಧ ಟೇಬಲ್ ಸ್ಪೂನ್
* ಏಲಕ್ಕಿ 1
* ಅಡುಗೆ ಎಣ್ಣೆ 2 ಟೇಬಲ್ ಸ್ಪೂನ್
* ಬೆಲ್ಲ 1 ಟೇಬಲ್ ಸ್ಪೂನ್
* ಬಾಳೆ ಎಲೆ
*ಒಣ ಕೊಬ್ಬರಿ ಪುಡಿ ಅರ್ಧ ಟೇಬಲ್ ಸ್ಪೂನ್
(ಗಮನಿಸಿ: ಯಾವುದೇ ಆಹಾರವನ್ನು ತಯಾರಿಸುವಾಗ ಗ್ಯಾಸ್ ಆನ್ ಮಾಡಿದಾಗ ಅದರ ಉರಿ ಎಷ್ಟು ಪ್ರಮಾಣದಲ್ಲಿ ಇಟ್ಟು ಅಡುಗೆ ತಯಾರಿಸಬೇಕು ಎನ್ನುವುದನ್ನು ತಿಳಿದಿರುವುದು ತುಂಬಾ ಮುಖ್ಯ. ಉರಿ ಹೆಚ್ಚು ಕಡಿಮೆ ಮಾಡುವಲ್ಲಿ ತಪ್ಪಿದರೆ ನೀವು ತಯಾರಿಸುವ ಅಡುಗೆ ರುಚಿ ಕಳೆದುಕೊಳ್ಳುತ್ತದೆ. ಹೀಗಾಗಿ ಯಾವ ಸಂದರ್ಭದಲ್ಲಿ ಉರಿ ಹೆಚ್ಚು-ಕಡಿಮೆ ಮಾಡಬೇಕು ಅನ್ನೋದನ್ನು ಸೂಕ್ಷ್ಮವಾಗಿ ಗಮನಿಸಿ ಅಡುಗೆ ತಯಾರಿಸಲು ಆರಂಭಿಸಿ)
ತಯಾರಿಸುವ ವಿಧಾನ:-
* ಮೊದಲಿಗೆ ಒಂದು ತವೆಯನ್ನು ಗ್ಯಾಸ್ ಮೇಲೆ ಇಟ್ಟು ಗ್ಯಾಸ್ ಆನ್ ಮಾಡಿ. ತಣ್ಣಗಿರುವ ತವೆ ಮಧ್ಯಮ ಪ್ರಮಾಣದಲ್ಲಿ ಬಿಸಿಯಾಗಬೇಕು. ಅಂದರೆ ನೀವು ಅದರ ಮೇಲೆ ಯಾವುದೇ ಪದಾರ್ಥ ಹಾಕಿದರೆ ತಕ್ಷಣ ಅದು ಸೀದಿ ಹೋಗುವಂತಿರಬಾರದು. ತವೆ ಬಿಸಿಯಾದ ಬಳಿಕ ಇದರ ಮೇಲೆ ಶಾವಿಗೆ ಹಾಕಿ ಹುರಿದುಕೊಳ್ಳಿ.
* ಶಾವಿಗೆ ಸ್ವಲ್ಪ ಕೆಂಪು ಬಣ್ಣಕ್ಕೆ ಬಂದ ಬಳಿಕ ಇದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಕೈ ಆಡಿಸಿ ಗ್ಯಾಸ್ ಆಫ್ ಮಾಡಿ. ತವೆಯನ್ನು ತೆಗೆದಿಡಿ.

* ನಂತರ ಒಂದು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಮಧ್ಯಮ ಪ್ರಮಾಣದಲ್ಲಿ ಉರಿ ಇಟ್ಟು ತುಪ್ಪವನ್ನು ಹಾಕಿ. ಇದಕ್ಕೆ ತುಂಡಾಗಿಸಿದ ಗೋಡಂಬಿ, ಬಾದಾಮಿ ಹಾಕಿ ಗರಿಗರಿಯಾಗುವವರೆಗೂ ಕೈ ಆಡಿಸುತ್ತಲೇ ಇರಿ. ಆದರೆ ಇದು ಸೀದಿ ಹೋಗದಂತೆ ನೋಡಿಕೊಳ್ಳಬೇಕು. ಹುರಿದ ಬಳಿಕ ಇದನ್ನು ಗ್ಯಾಸ್ ಆಫ್ ಮಾಡಿ ತೆಗೆದಿಡಿ.
* ಬಳಿಕ ಗ್ಯಾಸ್ ಮೇಲೆ ಒಂದು ಪ್ರತ್ಯೇಕ ಪಾತ್ರೆಯನ್ನು ಇಡಿ. ಇದಕ್ಕೆ ಮೂರು ಕಪ್ (ಶಾವಿಗೆ ಅಳತೆ ಮಾಡಿದ ಕಪ್) ನೀರು ಹಾಕಿ ಕುದಿ ಬರುವವರೆಗೂ ಬಿಡಿ. ನಂತರ ಪುಡಿ ಮಾಡಿದ ಒಂದು ಏಲಕ್ಕಿ, ಸಕ್ಕರೆ ಹಾಗೂ ಬೆಲ್ಲವನ್ನು ಬೆರೆಸಿ ಕರಗುವವರೆಗೂ ಬಿಟ್ಟು ಚೆನ್ನಾಗಿ ಕುದಿಯಲು ಬಿಟ್ಟುಬಿಡಿ.
* ನೀರು ಕುದಿಯುವಾಗ ಶಾವಿಗೆಯನ್ನು ಹಾಕಿ ಉರಿಯನ್ನು ಕಡಿಮೆ ಮಾಡಬೇಡಿ. ಶಾಮಿಗೆ ಬೆಂದ ಬಳಿಕ ನೀರನ್ನು ಸೂಸಿಕೊಳ್ಳಿ. ಸ್ವಲ್ಪಹೊತ್ತು ಅದನ್ನು ಹರಡಿಕೊಂಡು ತಣ್ಣಗಾಗಲು ಬಿಡಿ.
* ಬಳಿಕ ಒಂದು ಪ್ರತ್ಯೇಕ ಪಾತ್ರೆ ಒಲೆಯ ಮೇಲೆ ಇಟ್ಟು ತುಪ್ಪ ಹಾಕಿ ಕರಗಿದ ಬಳಿಕ ಇದಕ್ಕೆ ಬೇಯಿಸಿದ ಶಾಮಿಗೆ ಹಾಗೂ ಹುರಿದ ಗೋಡಂಬಿ, ಬಾದಾಮಿ, ಚಿಟಿಕೆ ಅರಿಶಿಣ, ಕೇಸರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದರ ಮೇಲೆ ಒಣ ಕೊಬ್ಬರಿ ಪುಡಿ ಉದುರಿಸಿ. ಗ್ಯಾಸ್ ಆಫ್ ಮಾಡಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ ಬಿಟ್ಟುಬಿಡಿ. ಐದು ನಿಮಿಷದ ಬಳಿಕ ರುಚಿಕರವಾದ ಶಾವಿಗೆ ಕೇಸರಿ ಬಾತ್ ಸವಿಯಬಹುದು.












Click it and Unblock the Notifications