Ragi Moong Dal Dosa Recipe: ಸಿಂಪಲ್ ಆಗಿ ಪಟಾಪಟ್ ರೆಡಿಯಾಗುತ್ತೆ ಗರಿಗರಿಯಾದ ರಾಗಿ ಹೆಸರು ಬೇಳೆ ದೋಸೆ
ದಕ್ಷಿಣ ಭಾರತದ ಪ್ರಸಿದ್ಧ ಆಹಾರಗಳಲ್ಲಿ ದೋಸೆಗೆ ವಿಶಿಷ್ಟ ಸ್ಥಾನವಿದೆ. ಕರ್ನಾಟಕದ ಮಸಾಲೆ ದೋಸೆಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಬರೀ ಅಕ್ಕಿ ಹಿಟ್ಟಿನಿಂದ ಮಾಡುವ ದೋಸೆಯಷ್ಟೇಯಲ್ಲ. ಹಲವು ವಿಧಗಳಲ್ಲಿ ದೋಸೆ ತಯಾರಾಗುತ್ತದೆ. ಹಲವು ಪ್ರಕಾರಗಳ ದೋಸೆಗಳಿವೆ. ಅಕ್ಕಿ, ರಾಗಿ, ಗೋಧಿ, ಬೇಳೆ ಕಾಳುಗಳು ಸೇರಿದಂತೆ ಹಲವು ಪದಾರ್ಥಗಳಿಂದ ದೋಸೆ ತಯಾರಿಸಲಾಗುತ್ತದೆ.
ಜನ ಇಷ್ಟಪಟ್ಟು ತಿನ್ನುವ ದೋಸೆಗೆ ಆರೋಗ್ಯಕರ ಧಾನ್ಯಗಳು, ಸೋಪ್ಪುಗಳನ್ನು ಹಾಕಿ ಇನ್ನು ರುಚಿ ಮತ್ತು ಸಿಫಲ್ ಆಗಿ ಮಾಡುವುದು ಎಲ್ಲಾ ತಾಯಂದಿರಿಗೆ ಇಷ್ಟ. ಈ ದೋಸೆಯನ್ನು ರಾಗಿ ಹಿಟ್ಟಿನಿಂದ ಮಾಡಿದರೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಜೊತೆಗೆ ಮತ್ತಷ್ಟು ರುಚಿಯನ್ನು ಸೇರಿಸಲು ಬೇಳೆಯನ್ನು ಸೇರಿಸಬಹುದು. ಹೀಗಾಗಿಯೇ ನಾವು ಇಂದು ರಾಗಿ ಜೊತೆಗೆ ಹೆಸರು ಬೇಳೆ ಸೇರಿಸಿ ಮಾಡುವ ದೋಸೆಯ ಸಿಂಪಲ್ ರೆಸಿಪಿ ತಂದಿದ್ದೇವೆ.

ಧಿಡೀರ್ ಆಗಿ ತುಂಬಾ ಟೆಸ್ಟಿ ಮತ್ತು ಗರಿಗರಿಯಾದ ಆರೋಗ್ಯಕರ ರಾಗಿ ಹೆಸರು ಬೇಳೆ ದೋಸೆಯನ್ನು ಮಾಡಿ ಸವಿಯಿರಿ. ಹೆಸರು ಬೇಳೆ, ರಾಗಿ ಹಿಟ್ಟು, ಹಸಿರು ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಉಪ್ಪು ಸೇರಿ, ಕೆಲವೇ ಸಾಮಗ್ರಿಗಳನ್ನು ಬಳಸಿ ಪಟಾಪಟ್ ಎಂದು ಮಾಡಬಹುದಾದ ಈ ರಾಗಿ ಹೆಸರುಬೇಳೆ ದೋಸೆಯನ್ನು ಮಾಡುವುದು ಹೇಗೆಂದು ತಿಳಿಯೋಣ.
ರಾಗಿ ಹೆಸರು ಬೇಳೆ ದೋಸೆ ಮಾಡಲು ಬೇಕಾದ ಸಾಮಾಗ್ರಿಗಳು
* 1/2 ಕಪ್ ಹೆಸರು ಬೇಳೆ
* 1/2 ಕಪ್ ರಾಗಿ ಹಿಟ್ಟು
* ಸಣ್ಣ ಶುಂಠಿ ತುಂಡು
* 2 ಹಸಿರು ಮೆಣಸಿನಕಾಯಿಗಳು
* ಕೊಂಚ ಕೊತ್ತಂಬರಿ ಸೊಪ್ಪು
* 1/2 ಟೀಸ್ಪೂನ್ ಜೀರಿಗೆ
* ರುಚಿಗೆ ತಕ್ಕಷ್ಟು ಉಪ್ಪು
ರಾಗಿ ಹೆಸರು ಬೇಳೆ ದೋಸೆ ಮಾಡುವ ವಿಧಾನ
ಹೆಸರುಬೇಳೆಯನ್ನು 30 ನಿಮಿಷಗಳ ಕಾಲ ನೆನೆಸಿಡಿ. ನೆನೆಸಿದ ಹೆಸರುಬೇಳೆಯನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿಕೊಳ್ಳಿ. ಇದಕ್ಕೆ ನೆನೆಸಿದ ರಾಗಿ ಅಥವಾ ರಾಗಿ ಹಿಟ್ಟು ಸೇರಿಸಿ. ಜೊತೆಗೆ ಶುಂಠಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಸೇರಿಸಿ. ಅಗತ್ಯವಿರುವ ನೀರನ್ನು ಸೇರಿಸಿ ಮತ್ತು ನಯವಾಗಿ ರುಬ್ಬಿಕೊಳ್ಳಿ.

ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಅಗತ್ಯವಿರುವ ನೀರನ್ನು ಸೇರಿಸಿ ಮತ್ತು ದೋಸೆ ಮಾಡುವ ಹಂತಕ್ಕೆ ತನ್ನಿ. ಇದಕ್ಕೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಅದನ್ನು ಬೇಗ ಮಿಶ್ರಣ ಮಾಡಿ. ಕೆಲವು ನಿಮಿಷ ಇಟ್ಟು, ಬಳಿಕ ಪ್ಯಾನ್ ಅನ್ನು ಬಿಸಿ ಮಾಡಿ, ದೋಸೆ ಹಿಟ್ಟು ಹಾಕಿರಿ ಮತ್ತು ತೆಳುವಾದ ದೋಸೆಗಳನ್ನು ಮಾಡಿ. ಮುಚ್ಚಳವನ್ನು ಮುಚ್ಚಿ ಮತ್ತು ಮೀಡಿಯಮ್ ಉರಿಯಲ್ಲಿ ಬೇಯಿಸಿ. ಬೆಂದ ಬಳಿಕ ಅದರ ಮೇಲೆ ತುಪ್ಪ ಸವರಿ ಬಿಸಿ ಬಿಸಿಯಾಗಿ ತೆಂಗಿನಕಾಯಿ ಚಟ್ನಿಯ ಜೊತೆಗೆ ಸವಿಯಿರಿ.
ಈ ದೋಸೆಯನ್ನು ತಯಾರಿಸಲು ಹೆಸರು ಬೇಳೆ ಅಥವಾ ಹೆಸರು ಕಾಳು ಬಳಸಬಹುದು. ಹೆಸರು ಬೇಳೆಯನ್ನು ಅಡುಗೆ ಮಾಡುವ ಅರ್ಧಗಂಟೆ ಮೊದಲು ನೆನಸಿದರೆ ಸಾಕು. ಹೆಸರು ಕಾಳು ಹಾಕುವವರು ರಾತ್ರಿಯೇ ನೆನಸಬೇಕು. ಇನ್ನು, ರಾಗಿ ಅಥವಾ ರಾಗಿ ಹಿಟ್ಟನ್ನು ಬಳಸಬಹುದು. ರಾಗಿಯನ್ನು ಬಳಸಲು ರಾತ್ರಿಯೇ ನೆನೆಸಿಡಬೇಕು. ಹಿಟ್ಟು ಡೈರೆಕ್ಟ್ ಆಗಿ ಮಿಕ್ಸಿಗೆ ಹಾಕಿಕೊಳ್ಳಬಹುದು.












Click it and Unblock the Notifications