ಆಲೂಗಡ್ಡೆ ಜೊತೆಗೆ ಇದೊಂದು ಹಣ್ಣು ಇರಿಸಿದರೆ ವಾರಗಟ್ಟಲೆ ಮೊಳಕೆ ಬರುವುದೇ ಇಲ್ಲ! ಟ್ರೈ ಮಾಡಿ ನೋಡಿ
ಆಲೂಗಡ್ಡೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಉಪಯೋಗಿಸುವ ತರಕಾರಿ. ಆಲೂಗಡ್ಡೆಯನ್ನು ಯಾವ ತರಕಾರಿ ಜೊತೆ ಹಾಕಿದರೂ ರುಚಿಯೇ. ಇನ್ನು ಸೈಡ್ಸ್‌ಗೆ ಏನಾದರೂ ಬೇಕು ಎಂದಾದರೂ ಆಲೂಗಡ್ಡೆ ಫ್ರೈ ಮಾಡಿದರೆ ಸಾಕು. ಆಲೂಗಡ್ಡೆ ದುಬಾರಿಯೂ ಅಲ್ಲ. ಮಕ್ಕಳಿಗಂತೂ ಆಲೂಗಡ್ಡೆ ಫ್ರೈ, ಚಿಪ್ಸ್ ಮಾಡಿಕೊಟ್ಟರೆ ಅವರ ಖುಷಿಯೇ ಬೇರೆ. ಆಲೂಗಡ್ಡೆಯನ್ನು ಯಾವಾಗಲೂ ಕೆಜಿಗಳ ಲೆಕ್ಕದಲ್ಲಿ ತಂದು ಮನೆಯಲ್ಲಿಡುವುದೇ ಹೆಚ್ಚು. ಆದ್ರೆ, ಇಲ್ಲಿರುವ ಸಮಸ್ಯೆ ಎಂದರೆ ಅದು ಬಹಳ ಬೇಗನೆ ಮೊಳಕೆ ಬರುತ್ತದೆ.
ಆಲೂಗಡ್ಡೆ ಬೆಳಕು, ಶಾಖ ಮತ್ತು ಗಾಳಿಗೆ ಒಡ್ಡಿಕೊಳ್ಳುವುದರಿಂದ ಸ್ವಲ್ಪ ಸಮಯವಾಗುತ್ತಿದ್ದ ಹಾಗೆಯೇ ಮೊಳಕೆ ಮೂಡಲು ಶುರುವಾಗುತ್ತದೆ. ಆದರೆ, ಆಲೂಗಡ್ಡೆ ಹೆಚ್ಚು ಕಾಲ ಮೊಳಕೆ ಬಾರದಂತೆ ತಡೆಯಲು ಒಂದು ಟ್ರಿಕ್ ಇದೆ. ಆಲುಗಡ್ಡೆಯ ಜೊತೆ ಒಂದು ಹಣ್ಣನ್ನು ಇಟ್ಟರೆ ಬೇಗನೆ ಮೊಳಕೆ ಬರುವುದಿಲ್ಲ.

ಆರೋಗ್ಯಕ್ಕೆ ಒಳ್ಳೆಯದಲ್ಲ
ಆಲೂಗಡ್ಡೆಯಲ್ಲಿ ಮೊಳಕೆ ಬರುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಅಡುಗೆ ಮಾಡುವವರಿಗೆ ಇದು ಕಿರಿ ಕಿರಿ ಉಂಟು ಮಾಡಬಹುದು. ಹೆಚ್ಚು ಮುಖ್ಯವಾಗಿ, ಇದು ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಆಲೂಗಡ್ಡೆಯಲ್ಲಿ ಸೋಲನೈನ್ ನೈಸರ್ಗಿಕವಾಗಿ ಕಂಡು ಬರುತ್ತದೆ. ಇದು ಕೀಟಗಳಿಂದ ರಕ್ಷಿಸುವ ಸಂಯುಕ್ತವಾಗಿದೆ. ಆಲೂಗಡ್ಡೆ ಮೊಳಕೆಯೊಡೆದಾಗ ಅಥವಾ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಹಸಿರು ಬಣ್ಣಕ್ಕೆ ತಿರುಗುತ್ತದೆ. ಆಗ ಅದರ ಸೋಲನೈನ್ ಮಟ್ಟಗಳು ಹೆಚ್ಚಾಗುತ್ತವೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಜೊತೆಗೆ ಇದು ರುಚಿಯನ್ನು ಕೂಡಾ ಕೆಡಿಸಬಹುದು.
ಆಲೂಗಡ್ಡೆ ಬುಟ್ಟಿಯಲ್ಲಿ ಈ ಹಣ್ಣು ಇಡಿ
ಆಹಾರ ಸ್ಟೋರೇಜ್ ವಿಷಯಕ್ಕೆ ಬಂದಾಗ , ಹಳೆಯ ಕಾಲದ ಸಲಹೆಗಳು ಸಾಮಾನ್ಯವಾಗಿ ವೈಜ್ಞಾನಿಕ ಕಾರಣದ ಅಂಶವನ್ನು ಒಳಗೊಂಡಿರುತ್ತದೆ. ಈ ಪೈಕಿ ಬಹಳ ಉತ್ತಮವಾಗಿರುವ ಸಲಹೆ ಎಂದರೆ ಆಲೂಗಡ್ಡೆಯ ಬುಟ್ಟಿಯಲ್ಲಿ ಒಂದು ಸೇಬನ್ನು ಇಡುವುದು. ಸೇಬು ಎಥಿಲೀನ್ ಗ್ಯಾಸ್ ಅನ್ನು ಬಿಡುಗಡೆ ಮಾಡುತ್ತವೆ . ಎಥಿಲೀನ್ ಹಣ್ಣುಗಳನ್ನು ಬೇಗನೆ ಹಣ್ಣಾಗಿಸಲು ಬಳಸುವ ಅಂಶವಾಗಿದೆ. ಆದರೆ, ಆಲೂಗಡ್ಡೆಯ ಮೊಳಕೆ ಬಾರದಂತೆ ಇದು ತಡೆಯುತ್ತದೆ. ಆಲೂಗಡ್ಡೆಯ ಬುಟ್ಟಿಯಲ್ಲಿ ಸೇಬು ಇಟ್ಟರೆ ಹಲವು ವಾರಗಳಾದರೂ ಅದು ಮೊಳಕೆಯೊಡೆಯುವುದಿಲ್ಲ.ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಬುಟ್ಟಿಯಲ್ಲಿ ಇಟ್ಟಿರುವ ಸೇಬನ್ನು ಆಗಾಗ ನೋಡುತ್ತಿರಬೇಕು. ಒಂದು ವೇಳೆ ಸೇಬು ಕೊಳೆತರೆ ಅದು ಅಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಬುಟ್ಟಿಯಲ್ಲಿರುವ ಎಲ್ಲಾ ಆಲೂಗಡ್ಡೆ ಕೊಳೆತು ಹೋಗಬಹುದು.
ಈರುಳ್ಳಿ ಬಗ್ಗೆಯೂ ಇರಲಿ ಎಚ್ಚರ
ಸಾಮಾನ್ಯವಾಗಿ ಆಲೂಗಡ್ಡೆ, ಈರುಳ್ಳಿ, ಬೆಳ್ಳುಳ್ಳಿಯನ್ನು ಒಟ್ಟಿಗೆ ಒಡುವ ಅಭ್ಯಾಸ ಅನೇಕ ಮನೆಯಲ್ಲಿರುತ್ತದೆ. ಹೀಗಾದಾಗ ಈರುಳ್ಳಿ ಜೊತೆ ಸೇಬನ್ನು ಯಾವತ್ತೂ ಇಡಬಾರದು. ಸೇಬು ಆಲೂಗಡ್ಡೆಯ ಸ್ನೇಹಿತನಾಗಿರಬಹುದು. ಆದರೆ ಈರುಳ್ಳಿಗೆ ಶತ್ರು . ಈರುಳ್ಳಿ ಹೆಚ್ಚಿನ ಮಟ್ಟದ ಎಥಿಲೀನ್ ಮತ್ತು ತೇವಾಂಶವನ್ನು ಹೊರಸೂಸುತ್ತದೆ. ಇದು ನಿಮ್ಮ ಆಲೂಗಡ್ಡೆ ಮೊಳಕೆಯೊಡೆಯುವುದಕ್ಕೆ ಮತ್ತು ಕೊಳೆಯುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಯಾವಾಗಲೂ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಜೊತೆಯಲ್ಲಿ ಇಡಬಾರದು.
ರೆಫ್ರಿಜರೇಟರ್ ಬಳಸುವುದನ್ನು ಬಿಟ್ಟುಬಿಡಿ
ಹಸಿ ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಇಡಲೇಬಾರದು. ತಂಪಾದ ತಾಪಮಾನವು ಆಲೂಗಡ್ಡೆಯ ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಇದು ರುಚಿಯನ್ನು ಬದಲಾಯಿಸುವುದಲ್ಲದೆ ಅತಿಯಾಗಿ ಕಪ್ಪಾಗುವಂತೆ ಮಾಡುತ್ತದೆ. ಅಲ್ಲದೆ ಈ ಆಲೂಗಡ್ಡೆಯನ್ನು ಹುರಿಯುವಾಗ ಮತ್ತು ಕರಿಯುವಾಗ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ.
ಆಲೂಗಡ್ಡೆಯನ್ನು ಸ್ಟೋರ್ ಮಾಡುವ ಮುನ್ನ ತೊಳೆಯಬೇಡಿ. ತೇವಾಂಶವು ಫಂಗಸ್ ಮೂಡಲು ಕಾರಣವಾಗಬಹುದು. ಅಲ್ಲದೆ ತರಕಾರಿ ಕೊಳೆಯುವ ಸಾಧ್ಯತೆಯೂ ಇದೆ. ಹಾಗಾಗಿ ಅಡುಗೆ ಮಾಡುವ ಮೊದಲು ಮಾತ್ರ ಆಲೂಗಡ್ಡೆಯನ್ನು ತೊಳೆದರೆ ಸಾಕು.
ಯಾವಾಗ ಎಸೆಯಬೇಕು?
ಆಲೂಗಡ್ಡೆಯಲ್ಲಿ ಸಣ್ಣ ಸಣ್ಣ ಮೊಳಕೆ ಕಂಡ ಕೂಡಲೇ ಅದನ್ನು ಎಸೆಯಬೇಕು ಎಂದೇನಿಲ್ಲ. ಮುಟ್ಟಿ ನೋಡುವಾಗ ಆಲೂಗಡ್ಡೆ ಗಟ್ಟಿಯಾಗಿದ್ದರೆ , ಮೊಳಕೆ ಮತ್ತು ಸುತ್ತಮುತ್ತಲಿನ ಸ್ವಲ್ಪ ಭಾಗವನ್ನು ಕತ್ತರಿಸಿ, ಎಂದಿನಂತೆ ಬೇಯಿಸಿ. ಆದರೆ ಆಲೂಗಡ್ಡೆ ಮೃದುವಾಗಿದ್ದರೆ, ಸುಕ್ಕುಗಟ್ಟಿದಿದ್ದರೆ ಅಥವಾ ಹಚ್ಚು ಹಸಿರಾಗಿದ್ದರೆ , ಸೋಲನೈನ್ ಮಟ್ಟಗಳು ತುಂಬಾ ಹೆಚ್ಚಿರುತ್ತವೆ ಎಂದರ್ಥ. ಆ ಸಂದರ್ಭದಲ್ಲಿ, ಅವುಗಳನ್ನು ಗೊಬ್ಬರವಾಗಿ ಬಳಸುವುದು ಸುರಕ್ಷಿತವಾಗಿದೆ.


Click it and Unblock the Notifications
