ಮನಿ ಪ್ಲಾಂಟ್ ಚನ್ನಾಗಿ ಬೆಳೆಯುತ್ತಿಲ್ಲವೇ? ಈ 7 ಟಿಪ್ಸ್ ಪಾಲಿಸಿದರೆ ಬಳ್ಳಿ ದಟ್ಟವಾಗಿ ಹರಡುತ್ತದೆ!
ಮನಿ ಪ್ಲಾಂಟ್ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮತ್ತು ಅತ್ಯಂತ ಜನಪ್ರಿಯ ಅಲಂಕಾರಿಕ ಸಸ್ಯಗಳಲ್ಲಿ ಒಂದಾಗಿದೆ. ಹೃದಯಾಕಾರದ ಎಲೆಗಳು ಮತ್ತು ಉದ್ದವಾಗಿ ಹರಡುವ ಬಳ್ಳಿಗಳಿಂದ ಮನೆಗೆ ಆಕರ್ಷಕವಾದ ಹಸಿರು ಬಣ್ಣದಿಂದ ಕೂಡಿರುವ ಈ ಗಿಡವನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಕಡಿಮೆ ನಿರ್ವಹಣೆ ಇರುವ ಕಾರಣ ಮನೆಯಲ್ಲಿ ತೋಟಗಾರಿಕೆ ಪ್ರಾರಂಭಿಸುವವರಿಗೂ ಇದು ಉತ್ತಮ ಆಯ್ಕೆಯಾಗಿದೆ. ಆದರೂ ಕೆಲವರ ಮನೆಯಲ್ಲಿ ಮನಿ ಪ್ಲಾಂಟ್ ನಿರೀಕ್ಷಿಸಿದಷ್ಟು ವೇಗವಾಗಿ ಬೆಳೆಯುವುದಿಲ್ಲ.
ತಜ್ಞರ ಪ್ರಕಾರ, ಮನಿ ಪ್ಲಾಂಟ್ ದೊಡ್ಡ ಎಲೆಗಳು ಮತ್ತು ದಟ್ಟವಾದ ಬಳ್ಳಿಗಳನ್ನು ಬೆಳೆಸುವ ಸಾಮರ್ಥ್ಯ ಹೊಂದಿದ್ದರೂ ಅದಕ್ಕೆ ಸೂಕ್ತ ಪರಿಸರ ಸಿಗುವುದು ಮುಖ್ಯ. ಬೆಳಕು, ನೀರು, ಮಣ್ಣು ಮತ್ತು ಬೇರುಗಳ ಆರೋಗ್ಯ ಗಿಡದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸಾಕಷ್ಟು ಬೆಳಕು ಸಿಗಲಿ
ಮನಿ ಪ್ಲಾಂಟ್‌ಗೆ ಸೂರ್ಯನ ಬೆಳಕು ಅಗತ್ಯ ಮತ್ತು ಕಡಿಮೆ ಬೆಳಕಿನಲ್ಲೂ ಇದು ಬೆಳೆಯಬಲ್ಲದು ಎಂಬ ಕಾರಣಕ್ಕೆ ಅನೇಕರು ಅದನ್ನು ಕತ್ತಲೆಯಲ್ಲಿ ಅಥವಾ ಮನೆಯ ಮೂಲೆಯಲ್ಲಿ ಇಟ್ಟಿರುತ್ತಾರೆ. ಆದ್ದರಿಂದ ಎಲೆಗಳ ಬೆಳವಣಿಗೆ ಕುಂಠಿತವಾಗಬಹುದು. ಪೂರ್ವ ದಿಕ್ಕಿನ ಕಿಟಕಿಯ ಬಳಿ ಇಟ್ಟರೆ ಉತ್ತಮ ಬೆಳಕು ಸಿಗುತ್ತದೆ ಮತ್ತು ಸಸ್ಯದ ಬೆಳವಣಿಗೆಗೆ ತುಂಬಾ ಸಹಾಯವಾಗುತ್ತದೆ.
ನೀರು ಹಾಕುವಾಗ ಜಾಗ್ರತೆ
ಗಿಡಕ್ಕೆ ನೀರು ಹಾಕುವುದು ಮುಖ್ಯವಾದರೂ ಅತಿಯಾಗಿ ನೀರು ಹಾಕಬಾರದು. ಮಣ್ಣಿನ ಮೇಲ್ಭಾಗ ಒಣಗಿದ ನಂತರವೇ ಮತ್ತೆ ನೀರು ಹಾಕುವುದು ಒಳ್ಳೆಯದು. ನಿರಂತರ ಒದ್ದೆಯಾದ ಮಣ್ಣು ಬೇರುಗಳಿಗೆ ಹಾನಿ ಉಂಟುಮಾಡಬಹುದು. ಆರೋಗ್ಯಕರ ಬೇರುಗಳಿದ್ದರೆ ಗಿಡವೂ ವೇಗವಾಗಿ ಬೆಳೆಯುತ್ತದೆ.
ಗೊಬ್ಬರ ಬಳಸಿ
ಮನಿ ಪ್ಲಾಂಟ್‌ಗೆ ಹೆಚ್ಚುವರಿ ಪೋಷಕಾಂಶ ದೊರೆತರೆ ಬೆಳವಣಿಗೆ ಉತ್ತಮವಾಗುತ್ತದೆ. ಪ್ರತಿ 4 ರಿಂದ 6 ವಾರಗಳಿಗೊಮ್ಮೆ ದ್ರವರೂಪದ ಗೊಬ್ಬರ ಬಳಸಬಹುದು. ಆದರೆ ಅತಿಯಾಗಿ ಗೊಬ್ಬರ ಮತ್ತು ನೀರು ಹಾಕಿದರೆ ಬೇರು ಕೊಳೆಯುವ ಸಾಧ್ಯತೆ ಹೆಚ್ಚು ಇರುತ್ತದೆ.
ಕುಂಡಲಿಯನ್ನು ಬದಲಾಯಿಸಬಹುದು
ಕೆಲವೊಮ್ಮೆ ಗಿಡದ ಬೆಳವಣಿಗೆ ನಿಧಾನವಾಗಲು ಕುಂಡಲಿಯೊಳಗಿನ ಜಾಗದ ಕೊರತೆಯೂ ಕಾರಣವಾಗಿರಬಹುದು. ಬೇರುಗಳು ಬೆಳೆಯಲು ಸ್ಥಳ ಕಡಿಮೆಯಾದರೆ ಸ್ವಲ್ಪ ದೊಡ್ಡ ಕುಂಡಲಿಗೆ ಗಿಡವನ್ನು ಸ್ಥಳಾಂತರ ಮಾಡುವುದು ಉತ್ತಮ. ಹೊಸ ಕುಂಡಲಿಯಲ್ಲಿ ನೀರು ಸರಿಯಾಗಿ ಹೊರಹೋಗುವ ವ್ಯವಸ್ಥೆ ಇರಬೇಕು.
ಬಳ್ಳಿಗಳಿಗೆ ಆಸರೆ ನೀಡಿ
ಮನಿ ಪ್ಲಾಂಟ್ ಸ್ವಭಾವತಃ ಏರುವ ಗಿಡವಾಗಿದೆ. ಆದ್ದರಿಂದ ಕಂಬವನ್ನು, ಕೊಯರ್ ಪೋಲ್ ಅಥವಾ ಬೇರೆ ಯಾವುದೇ ಬೆಂಬಲ ನೀಡಿದರೆ ಬಳ್ಳಿ ಮೇಲಕ್ಕೆ ಬೆಳೆಯುತ್ತದೆ. ಇದರಿಂದ ಎಲೆಗಳು ದೊಡ್ಡದಾಗಿ ಹಾಗೂ ಗಿಡ ಹೆಚ್ಚು ಆರೋಗ್ಯಕರವಾಗಿ ಕಾಣಿಸುತ್ತದೆ.
ಸರಿಯಾದ ತಾಪಮಾನ ಕಾಪಾಡಿ
ಮನಿ ಪ್ಲಾಂಟ್ ಸಾಧಾರಣ ಕೋಣೆಯ ತಾಪಮಾನದಲ್ಲಿ ಬೆಳೆಯುತ್ತದಾದರೂ ಉಷ್ಣ ವಾತಾವರಣ ಮತ್ತು ಮಧ್ಯಮ ಆರ್ದ್ರತೆಯಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತದೆ. ಎಸಿ, ಹೀಟರ್ ಅಥವಾ ಹೆಚ್ಚು ಗಾಳಿ ಬೀಸುವ ಕಿಟಕಿಗಳ ಹತ್ತಿರ ಇಡುವುದನ್ನು ತಪ್ಪಿಸಬೇಕು.
ನಿಯಮಿತವಾಗಿ ಕತ್ತರಿಸಿ
ಗಿಡದ ಕೊಂಬೆಗಳನ್ನು ನಿಯಮಿತವಾಗಿ ಕತ್ತರಿಸುವುದು ಹೊಸ ಚಿಗುರುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕತ್ತರಿಸಿದ ಭಾಗಗಳನ್ನು ಅದೇ ಕುಂಡಯಲ್ಲಿ ಮರು ನೆಟ್ಟರೆ ಗಿಡ ಇನ್ನಷ್ಟು ದಟ್ಟವಾಗಿ ಬೆಳೆಯುತ್ತದೆ. ಬೆಳವಣಿಗೆಯ ಅವಧಿಯಲ್ಲಿ ಕತ್ತರಿಸುವುದು ಉತ್ತಮ.
ಈ ಸರಳ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಮನಿ ಪ್ಲಾಂಟ್ ಆರೋಗ್ಯಕರವಾಗಿ ಬೆಳೆಯುವುದಷ್ಟೇ ಅಲ್ಲ, ಉದ್ದವಾದ ಹಾಗೂ ದಟ್ಟವಾದ ಬಳ್ಳಿಗಳೊಂದಿಗೆ ಮನೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.














Click it and Unblock the Notifications