Masala chai: ಮಸಾಲಾ ಚಾಯ್ ಇಷ್ಟಾನಾ? ಎಲ್ಲರ ನೆಚ್ಚಿನ ಮಸಾಲಾ ಟೀ ಮಾಡುವ ಸುಲಭ ವಿಧಾನ ಇಲ್ಲಿದೆ
ಭಾರತೀಯರು ಬೆಳಗ್ಗೆ ಎದ್ದ ಕೂಡಲೆ ಕೇಳುವುದು ಟೀ ಕಾಫಿ. ಅದರಲ್ಲೂ ಬಹುತೇಕರ ದಿನ ಆರಂಭವಾಗುವುದು ಸುವಾಸನೆ ಭರಿತ ಆರೋಗ್ಯಕರ ಮಸಾಲಾ ಟೀ ಜೊತೆಗೆಯೇ. ಆಫೀಸ್‌ಗಳಲ್ಲಿ... ಹೊರಗಡೆ ಹೋದಾಗ... ನೆಂಟರ ಮನೆಗೆ ಹೋದಾಗ ಮೊದಲು ಕೇಳುವುದು ಟೀ ತಗೋತೀರಾ ಎಂದು. ಹೀಗಾಗಿಯೇ ಮಸಾಲಾ ಟೀ ವಿಶ್ವದ 2ನೇ ಅತ್ಯುತ್ತಮ ನಾನ್ -ಆಲ್ಕೊಹಾಲಿಕ್ ಡ್ರಿಂಕ್ ಆಗಿ ಪ್ರಸಿದ್ಧವಾಗಿದೆ. ದಿನಕ್ಕೆ ಸಾಮಾನ್ಯವಾಗಿ ಎರಡರಿಂದ ಮೂರು ಕಪ್ ಚಹಾ ಸೇವಿಸುವವರಿದ್ದಾರೆ. ಇನ್ನು ಚಹಾ ಪ್ರಿಯರಂತೂ ದಿನಕ್ಕೆ ಆರರಿಂದ ಏಳು ಬಾರಿ ಚಹಾ ಸೇವಿಸುತ್ತಾರೆ.
ಮಸಾಲಾ ಟೀ (Masala chai) ಎಂದರೇನು?
ಮಸಾಲಾ ಚಾಯ್ ಎಂದರೆ ಮನಸ್ಸು ಮತ್ತು ದೇಹಕ್ಕೆ ನಿರಾಳತೆ ನೀಡುವ, ತಲೆ ನೋವು ಹೋಗಿಸುವ ಪಾನೀಯ ಎಂದೇ ಖ್ಯಾತಿ ಪಡೆದಿದೆ. ಇದೊಂದು ಜನಪ್ರಿಯ ಮತ್ತು ಸಾಂಪ್ರದಾಯಿಕ ಭಾರತೀಯ ಮಸಾಲೆಯುಕ್ತ ಚಹಾವಾಗಿದೆ. "ಚಾಯ್" ಎಂದರೆ ಹಿಂದಿಯಲ್ಲಿ ಚಹಾ ಎಂದರ್ಥ. ಕನ್ನಡದಲ್ಲಿ ಟೀ. ಇದರ ಜೊತೆಗೆ ಮಸಾಲೆ ಬೆರೆಸಿ ಮಾಡುವ ಪಾನೀಯವೇ ಮಸಾಲಾ ಚಾಯ್.

ಈ ಸುವಾಸನೆಯ ಟೀಯನ್ನು ಸುವಾಸನೆಯುಕ್ತ ಮಸಾಲೆಗಳು ಮತ್ತು ಗಿಡಮೂಲಿಕೆಗಳ ಮಿಶ್ರಣದೊಂದಿಗೆ ಬ್ಲ್ಯಾಕ್ ಕಾಫಿ ಮಾಡುವ ಮೂಲಕ ತಯಾರಿಸಲಾಗುತ್ತದೆ. ವೈಯಕ್ತಿಕ ಆದ್ಯತೆಗಳು ಮತ್ತು ಪ್ರಾದೇಶಿಕ ವ್ಯತ್ಯಾಸಗಳ ಆಧಾರದ ಮೇಲೆ ಕೆಲವು ಪದಾರ್ಥಗಳು ಬದಲಾಗಬಹುದು ಅಷ್ಟೇ.
ಮಸಾಲಾ ಟೀ ಮಾಡಲು ಬೇಕಾಗುವ ಸಾಮಾಗ್ರಿಗಳು:
* 2 ಕಪ್ ನೀರು
*1 ಕಪ್ ಹಾಲು
* 2 ರಿಂದ 3 ಟೀ ಚಮಚ ಚಹಾ ಎಲೆಗಳು
* 2 ರಿಂದ 3 ಟೀ ಚಮಚ ಸಕ್ಕರೆ ಅಥವಾ ಬೆಲ್ಲ
* 1 ರಿಂದ 2 ಇಂಚು ತಾಜಾ ಶುಂಠಿ
* 2 ರಿಂದ 3 ಏಲಕ್ಕಿ ಬೀಜ
* 2 ರಿಂದ 3 ಲವಂಗ
* 1 ಅಥವಾ 2 ದಾಲ್ಚಿನ್ನಿ ತುಂಡುಗಳು
* 2 ಅಥವಾ 3 ಕರಿಮೆಣಸು ಕಾಳುಗಳು

ಮಸಾಲಾ ಟೀ ತ್ವರಿತ ಮತ್ತು ಸುಲಭವಾಗಿ ತಯಾರಿಸುವುದು ಹೇಗೆ?
ಒಂದು ಲೋಹದ ಪಾತ್ರೆಯಲ್ಲಿ ನೀರನ್ನು ಕುದಿಸಿ. ಅದಕ್ಕೆ ಏಲಕ್ಕಿ ಬೀಜ , ಲವಂಗ ಮತ್ತು ಕರಿಮೆಣಸುಗಳನ್ನು ಪುಡಿ ಮಾಡಿ ಹಾಕಿ, ಇದಕ್ಕೆನೇ ಶುಂಠಿ ಮತ್ತು ದಾಲ್ಚಿನ್ನಿ ತುಂಡುಗಳನ್ನು ಸೇರಿಸಿ. ಮಸಾಲೆಗಳೊಂದಿಗೆ ಐದು ನಿಮಿಷಗಳ ಕಾಲ ಕುದಿಸೋಣ. ಒಂದು ಕುದಿ ಬಂದ ನಂತರ ಈ ನೀರಿಗೆ ಚಹಾ ಪುಡಿ ಬೆರೆಸಿ. ನೀವು ಚಹಾ ಪ್ಯಾಕೆಟ್ ಹಾಕುವುದಾದರೆ ಅದನ್ನು ಬಳಸಬಹುದು.
ಸ್ಟ್ರಾಂಗ್ ಬೇಕಾದವರು ಸ್ವಲ್ಪ ಜಾಸ್ತಿ ಟೀ ಪುಡಿ ಹಾಕಬೇಕು. ಇದಾದ ನಂತರ ಮತ್ತೆ ಐದಾರು ನಿಮಿಷ ಟೀ ಕುದಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ ಹಾಲನ್ನು ಸೇರಿಸಿ. ಹಾಲು ಸೇರಿಸಿ ಕುದಿಸುತ್ತಿರಿ. ಬಳಿಕ ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕುದಿಯಲು ಬಿಡಿ. ನಂತರ ಒಂದು ಲೋಟಕ್ಕೆ ಸೋಸಿಕೊಳ್ಳಿ. ನಿಮಗೆ ಚಹಾದಲ್ಲಿ ಸುವಾಸನೆ ಬೇಕಾದರೇ ಅದಕ್ಕೆ ಕೆಲವು ಕೇಸರಿಯ ದಳಗಳು ಅಥವಾ ಸೋಂಪನ್ನು ಬಳಸಬಹುದು. ಇಷ್ಟಾದರೇ ನಿಮ್ಮ ಇಷ್ಟದ ಮಸಾಲಾ ಟೀ ಸವಿಯಲು ಸಿದ್ಧ.












Click it and Unblock the Notifications