Maddur Vada Recipe: ಮನೆಯಲ್ಲೇ ಮಾಡಿ ಮದ್ದೂರು ವಡೆ, ರೆಸಿಪಿ ಇಲ್ಲಿದೆ...
ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ನೆನಪಾದರೆ ಮದ್ದೂರು ವಡೆ ಕಣ್ಣುಮುಂದೆ ಬರುತ್ತದೆ. ಮದ್ದೂರು ವಡೆ ದಕ್ಷಿಣ ಭಾರತದ ಒಂದು ಖಾರದ ತಿಂಡಿ. ಇದಕ್ಕೆ ಬೆಂಗಳೂರು- ಮೈಸೂರು ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ. ಈ ಮದ್ದೂರು ವಡೆಯು ಹೆಚ್ಚು ರುಚಿಕರ ಮತ್ತು ಮೃದುವಾಗಿರುತ್ತದೆ.
ಬೆಂಗಳೂರು, ಕೆಂಗೇರಿ, ಬಿಡದಿ,ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಪಾಂಡವಪುರ,ಶ್ರೀರಂಗಪಟ್ಟಣ, ಮೈಸೂರು ಎಲ್ಲಾ ಕಡೆಯೂ ದೊರೆಯುತ್ತದೆ. ಹೆಚ್ಚಾಗಿ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಇದನ್ನು ಹೆಚ್ಚು ಮಾರಾಟ ಮಾಡಲಾಗುತ್ತದೆ. ಆದರೆ ಇದನ್ನು ನೀವು ಮನೆಯಲ್ಲೇ ತಯಾರಿಸಬಹುದು. ಹಾಗಾದರೆ ಮದ್ದೂರು ವಡೆ ಮಾಡುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
*ಅರಿಶಿನದ ಪುಡಿ- ಅರ್ಧ ಚಮಚ
*ಅಚ್ಚ ಖಾರದ ಪುಡಿ - 1 ಚಮಚ
*ಹಸಿ ಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು, 2-3
*ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1/2 ಬಟ್ಟಲು
*ಕರಿಬೇವು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
*ಬಿಳಿ ಎಳ್ಳು- 1 ಚಮಚ
*ಇಂಗು- ಚಿಟಿಕೆಯಷ್ಟು
*ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
*ಉಪ್ಪು- ರುಚಿಗೆ ತಕ್ಕಷ್ಟು
*ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
*ಅಕ್ಕಿ ಹಿಟ್ಟು- 1 ಬಟ್ಟಲು
*ಮೈದಾ ಹಿಟ್ಟು- 1/2 ಬಟ್ಟಲು
*ರವೆ- 1/4 ಬಟ್ಟಲು
*ಕಡಲೆ ಹಿಟ್ಟು- 2 ಚಮಚ
ತಯಾರಿಸುವ ವಿಧಾನ...
ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ರವೆ, ಕಡಲೆ ಹಿಟ್ಟು, ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಈರುಳ್ಳಿ, ಕರಿಬೇವು, ಬಿಳಿ ಎಳ್ಳು, ಇಂಗು, ಕೊತ್ತಂಬರಿ ಸೊಪ್ಪು, ಉಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ 5-6 ಚಮಚ ಎಣ್ಣೆಯನ್ನು ಕಾಯಿಸಿಕೊಂಡು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ, ಹಿಟ್ಟು ಸಿದ್ಧಪಡಿಸಿಕೊಳ್ಳಬೇಕು.
ಈ ಹಿಟ್ಟು 15 ನಿಮಿಷಗಳ ಕಾಲ ನೆನೆಯಲು ಬಿಡಬೇಕು. ಒಲೆಯ ಮೇಲೆ ಬಾಣಲೆಯಿಟ್ಟು, ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ತಟ್ಟಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ, ರುಚಿಕರವಾದ ಮದ್ದೂರು ವಡೆ ಸವಿಯಲು ಸಿದ್ಧ.
ಮದ್ದೂರು ವಡೆ ಮಾಡುವುದು ಹೇಗೆ ಅಂತ ನೀವೆಲ್ಲಾ ಕಲಿತುಕೊಂಡಿದ್ದೀರಿ. ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ. ನಿಮಗಿದು ಇಷ್ಟ ಆಗಿದ್ದರೆ ಕಾಮೆಂಟ್ ಬಾಕ್ಸ್‌ನಲ್ಲಿ ಕಾಮೆಂಟ್ ಮಾಡಿ. ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.












Click it and Unblock the Notifications