ಮನೆಯಲ್ಲೇ ರುಚಿರುಚಿಯಾದ ಪನ್ನೀರ್ ತವಾ ಫ್ರೈ ತಯಾರಿಸುವುದು ಹೇಗೆ..?
ಪ್ರತಿನಿತ್ಯ ಸಂಜೆ ವೇಳೆ ಏನಾದರು ತಿಂಡಿ ತಿನ್ನುವುದು ಹಲವರಿಗೆ ಅಭ್ಯಾಸವಾಗಿರುತ್ತದೆ. ನೀವೇ ಸ್ನ್ಯಾಕ್ಸ್ ತಿನ್ನುವುದನ್ನು ಮರೆತರೂ ಹೊಟ್ಟೆ ಮಾತ್ರ ಸಮಯಕ್ಕೆ ಸರಿಯಾಗಿ ಚುರುಗುಡಲು ಪ್ರಾರಂಭಿಸುತ್ತದೆ. ನಾಲಿಗೆ ರುಚಿ ರುಚಿಯಾದ ತಿಂಡಿಯನ್ನು ಸವಿಯಲು ಸಿದ್ಧವಾಗಿರುತ್ತದೆ.
ಹೀಗಾಗಿ ನಿಮ್ಮ ಆ ಕ್ಷಣದ ಸ್ನ್ಯಾಕ್ಸ್ ಬಯಕೆ ಈಡೇರಿಸಿಕೊಳ್ಳಲು ಸಂಜೆಯ ವೇಳೆ ತಿಂಡಿಗಳನ್ನು ಮನೆಯಲ್ಲೇ ತಯಾರಿಸಿ ತಿನ್ನಿ. ಮನೆಯಲ್ಲೇ ಮಾಡಬಹುದಾದ ರುಚಿಕರವಾದ ಪನ್ನೀರ್ ತವಾ ಫ್ರೈ ವಿವರ ಇಲ್ಲಿದೆ.

ಪನ್ನೀರ್ ತವಾ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು
ಪನ್ನೀರ್-200 ಗ್ರಾಂ
ಕಡ್ಲೆ ಹಿಟ್ಟು-2 ಚಮಚ
ಎಣ್ಣೆ-1 ಚಮಚ
ಕೆಂಪು ಮೆಣಸಿನ ಪುಡಿ-1.5 ಚಮಚ
ಕೊತ್ತಂಬರಿ ಪುಡಿ-1 ಚಮಚ
ಜೀರಿಗೆ ಪುಡಿ-1/2 ಚಮಚ
ಗರಂ ಮಸಾಲಾ-1/2 ಚಮಚ
ಚಾಟ್ ಮಸಾಲಾ-1/4 ಚಮಚ
ಅರಿಶಿನ ಪುಡಿ-ದೊಡ್ಡ ಚಿಟಿಕೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ
ದಪ್ಪ ಮೊಸರು-2 ಚಮಚ
ಕಸೂರಿ ಮೇಥಿ-1 ಚಮಚ
ನಿಮ್ಮ ರುಚಿಗೆ ತಕ್ಕಂತೆ ಉಪ್ಪು

ಹಸಿರು ಚಟ್ನಿಗೆ ಬೇಕಾಗುವ ಸಾಮಾಗ್ರಿಗಳು
ಪುದೀನ ಎಲೆಗಳು
ಕೊತ್ತಂಬರಿ ಸೊಪ್ಪು
ಹಸಿರು ಮೆಣಸಿನಕಾಯಿಗಳು-1-2
ಶುಂಠಿ
ದಪ್ಪ ಮೊಸರು-2 ಚಮಚ
ಜೀರಿಗೆ ಪುಡಿ-1/4 ಚಮಚ
ಚಾಟ್ ಮಸಾಲಾ ಪುಡಿ-1/4 ಚಮಚ
ರುಚಿಗೆ ತಕ್ಕಂತೆ ಉಪ್ಪು
ರುಚಿಗೆ ತಕ್ಕಂತೆ ಸಕ್ಕರೆ

ಪನ್ನೀರ್ ತವಾ ಫ್ರೈ ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ಕಡ್ಲೆ ಹಿಟ್ಟು ತೆಗೆದುಕೊಳ್ಳಿ ಬಿಸಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಮತ್ತು ಚಾಟ್ ಮಸಾಲಾ ಮುಂತಾದ ಮಸಾಲೆಗಳನ್ನು ಸೇರಿಸಿ. ಬಳಿಕ ಅರಿಶಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೊಸರು ಮತ್ತು ಕಸೂರಿ ಮೇಥಿ ಸೇರಿಸಿ. ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪನ್ನೀರ್ ಪೀಸ್‌ಗಳನ್ನು ಸೇರಿಸಿ ಚೆನ್ನಾಗಿ ಕಲಿಸಿ ಅರ್ಧ ಗಂಟೆಗಳ ಕಾಲ ಬಿಡಿ. ಮೂವತ್ತು ನಿಮಿಷ ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಪನ್ನೀರ್ ತುಂಡುಗಳನ್ನು ಹಾಕಿ ಎರಡೂ ಕಡೆಗಳಲ್ಲಿ ಚೆನ್ನಾಗಿ ಬೇಯಿಸಿಕೊಂಡರೆ ಪನ್ನೀರ್ ತವಾ ಫ್ರೈ ಸಿದ್ಧವಾಗುತ್ತದೆ.
ಹಸಿರು ಚಟ್ನಿ ಮಾಡುವ ವಿಧಾನ
ಚಟ್ನಿಗಾಗಿ ಮೊದಲು ಮಿಕ್ಸಿ ಜಾರ್‌ನಲ್ಲಿ ಪುದೀನ ಎಲೆಗಳು, ಕೊತ್ತಂಬರಿ ಸೊಪ್ಪು, ಮೊಸರು, ಹಸಿರು ಮೆಣಸಿನಕಾಯಿ ಮತ್ತು ಶುಂಠಿಯನ್ನು ತೆಗೆದುಕೊಳ್ಳಿ. ಬಳಿಕ ಜೀರಿಗೆ ಪುಡಿ, ಚಾಟ್ ಮಸಾಲಾ, ಉಪ್ಪು ಮತ್ತು ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಂಡರೆ ಚಟ್ನಿ ಸಿದ್ಧವಾಗುತ್ತದೆ. ಈ ಹಸಿರು ಚಟ್ನಿ ಜೊತೆಗೆ ಪನ್ನೀರ್ ತವಾ ಫ್ರೈ ಸವಿದರೆ ವಾವ್ ಎನಿಸುತ್ತದೆ.












Click it and Unblock the Notifications