Jackfruit Panaka: ನಾಲಿಗೆಗೆ ರುಚಿ-ದೇಹಕ್ಕೆ ತಂಪು ಈ ಹಲಸಿನ ಪಾನಕ: ಇಲ್ಲಿದೆ ಮಾಡುವ ವಿಧಾನ
ಬೇಸಿಗೆಗಾಲದಲ್ಲಿ ಸಿಗುವ ಹಲಸಿನ ಹಣ್ಣಿನ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಖನಿಜಾಂಶಗಳು, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು ಹಲಸಿನ ಹಣ್ಣಿನಲ್ಲಿ ಹೆಚ್ಚಾಗಿರುತ್ತದೆ. ಹಾಗೂ ಹಲಸಿನ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
ಹಲಸಿನ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವ ಕಾರಣ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಹೆಚ್ಚಾಗಿದ್ದು, ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ರಕ್ತದಲ್ಲಿನ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇಷ್ಟೆಲ್ಲಾ ಉಪಯೋಗ ಇರುವ ಹಲಸಿನ ಹಣ್ಣನ್ನು ಲಭ್ಯವಿರುವ ಸಮಯಲ್ಲಿ ನಿಯಮಿತವಾಗಿ ಸೇವಿಸುವುದು ಒಳ್ಳೆಯದು.

ರುಚಿ ಹಾಗೂ ಆರೋಗ್ಯಕ್ಕೂ ಒಳ್ಳೆಯದಾದ ಹಲಸಿನ ಹಣ್ಣಿನಿಂದ ಮಾಡಬಹುದಾದ ಸುಲಭವಾದ ಖಾದ್ಯವೊಂದರ ವಿವರ ಇಲ್ಲಿದೆ.
ಹಲಸಿನ ಪಾನಕಕ್ಕೆ ಬೇಕಾಗುವ ಸಾಮಾಗ್ರಿಗಳು
ಕತ್ತರಿಸಿದ ಹಲಸಿನ ಹಣ್ಣು-1/2 ಕಪ್
ಬೆಲ್ಲ- ರುಚಿಗೆ ತಕ್ಕಷ್ಟು
ಉಪ್ಪು- ರುಚಿಗೆ ತಕ್ಕಷ್ಟು
ಮೆಣಸು-1/4 ಚಮಚ
ಏಲಕ್ಕಿ-1

ಹಲಸಿನ ಪಾನಕ ಮಾಡುವ ವಿಧಾನ
ಹಲಸಿನ ಹಣ್ಣನ್ನು ಕತ್ತರಿಸಿ ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಒಂದು ಕಪ್ ನೀರು ಸೇರಿಸಿ. ಬಳಿಕ ಉಪ್ಪು ಸೇರಿಸಿ. ಬೆಲ್ಲ ಸೇರಿಸಿ. ಬಳಿಕ ಮಿಶ್ರಣವನ್ನು ಒಲೆ ಮೇಲಿಟ್ಟು ಕುದಿಸಲು ಪ್ರಾರಂಭಿಸಿ. ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ, ಬಳಿಕ ಹಲಸಿನ ಹಣ್ಣು ಬೆಂದಿದೆಯೇ ಗಮನಿಸಿ. ಹಣ್ಣು ಮೆತ್ತಗಾಗುವರೆಗೂ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಪುಡಿಮಾಡಿದ ಮೆಣಸು ಮತ್ತು ಏಲಕ್ಕಿ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಬೇಕಿದ್ದರೆ ಸೇರಿಸಿ ಇನ್ನು ಒಂದು ನಿಮಿಷ ಕುದಿಸಿ. ನಂತರ ಸ್ಟೌವ್ ಆಫ್ ಮಾಡಿ ಉಗುರು ಬೆಚ್ಚಗಾಗುವರೆಗೂ ಕಾಯಿರಿ. ಬಳಿಕ ಒಂದು ಬೌಲ್‌ಗೆ ಸಿದ್ಧವಾಗಿರುವ ಹಲಸಿನ ಪಾನಕ ಬಡಿಸಿಕೊಂಡು ಸವಿಯಿರಿ.












Click it and Unblock the Notifications