ಹೀಗಿಟ್ಟರೆ ಒಂದು ತಿಂಗಳವರೆಗೂ ಕೊತ್ತಂಬರಿ ಸೊಪ್ಪು ಫ್ರೆಶ್ ಆಗಿಯೇ ಇರುವುದು!ಒಮ್ಮೆ ಟ್ರೈ ಮಾಡಿ
ನಾವು ಮಾಡುವ ಅಡುಗೆಗೆ ವಿಶೇಷ ಘಮವನ್ನು ನೀಡುತ್ತದೆ ಕೊತ್ತಂಬರಿ ಸೊಪ್ಪು. ಚಟ್ನಿ, ಸೂಪ್, ಪಲ್ಯ, ಸಾಂಬಾರ್, ರಸಂ, ದಾಲ್ ಹೀಗೆ ಏನೇ ಅಡುಗೆ ಮಾಡಿದರೂ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಕಟ್ ಮಾಡಿ ಹಾಕಿದಾಗ ಮಾತ್ರ ಅದು ಪರಿಪೂರ್ಣ. ಬಹುತೇಕ ಎಲ್ಲಾ ಖಾದ್ಯಗಳಿಗೂ ಕೊತ್ತಂಬರಿ ಸೊಪ್ಪು ಸೇರಿಸುತ್ತೇವೆ. ಆದರೆ ಈ ಕೊತ್ತಂಬರಿ ಸೊಪ್ಪನ್ನು ಬಹಳ ದಿನಗಳವರೆಗೆ ಫ್ರೆಶ್ ಆಗಿ ಇಡುವುದೇ ದೊಡ್ಡ ತಲೆನೋವು. ಮಾರುಕಟ್ಟೆಯಿಂದ ತಂದ ತಾಜಾ ಕೊತ್ತಂಬರಿ ಸೊಪ್ಪು ಎರಡು ಮೂರು ದಿನಗಳಲ್ಲಿ ಒಣಗಿ ಹೋಗುತ್ತವೆ. ಹೀಗೆ ಒಣಗಿದ ಸೊಪ್ಪನ್ನು ಬಳಸಲು ಅಷ್ಟಾಗಿ ಮನಸ್ಸು ಬರುವುದಿಲ್ಲ. ಯಾಕೆಂದರೆ ಇದು ಹಸಿರಿನಿಂದ ಕಪ್ಪು ಬಣ್ಣಕ್ಕೆ ಬಹಳ ಬೇಗನೇ ತಿರುಗುತ್ತದೆ. ಹೀಗಾದಾಗ ಅದರಿಂದ ಕೆಟ್ಟ ವಾಸನೆ ಬರುತ್ತದೆ. ಫ್ರಿಡ್ಜ್‌ನಲ್ಲಿ ಇಟ್ಟರೂ ಇದೇ ಸಮಸ್ಯೆ ಉಂಟಾಗುತ್ತದೆ. ಹೀಗಾದಾಗ ಪದೇ ಪದೇ ಕೊತ್ತಂಬರಿ ಸೊಪ್ಪನ್ನು ಖರೀದಿಸಿ ತರುವ ಅನಿವಾರ್ಯತೆ ಎದುರಾಗುತ್ತದೆ.
ಕೊತ್ತಂಬರಿ ಸೊಪ್ಪನ್ನು ಹೆಚ್ಚು ಸಮಯದವರೆಗೆ ಫ್ರೆಶ್ ಆಗಿಡಲು ಹೀಗೆ ಮಾಡಿ:
ಕೊತ್ತಂಬರಿ ಸೊಪ್ಪಿನ ಆಯ್ಕೆ:
ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಅನುಸರಿಬೇಕಾದ ಮೊದಲ ಹೆಜ್ಜೆಯೆಂದರೆ ಸರಿಯಾದ ಕೊತ್ತಂಬರಿ ಸೊಪ್ಪನ್ನು ಆರಿಸುವುದು. ಖರೀದಿಸುವಾಗ, ಕಡು ಹಸಿರು ಬಣ್ಣ ಮತ್ತು ಪರಿಮಳಯುಕ್ತ ಕೊತ್ತಂಬರಿ ಸೊಪ್ಪನ್ನು ಆರಿಸಿ ತನ್ನಿ. ಹಳದಿ ಬಣ್ಣಕ್ಕೆ ತಿರುಗಿದ ಅಥವಾ ಕೊಳೆತಂತೆ ಕಾಣುವ ಎಲೆಗಳನ್ನು ಖರೀದಿಸದೇ ಇದ್ದರೆ ಓಳ್ಳೆಯದು. ತಾಜಾ ಕೊತ್ತಂಬರಿ ಸೊಪ್ಪು ದೃಢವಾದ ಕಾಂಡಗಳು ಮತ್ತು ಮೃದುವಾದ ಎಲೆಗಳನ್ನು ಹೊಂದಿರುತ್ತದೆ. ಉತ್ತಮ ಗುಣಮಟ್ಟದ ಕೊತ್ತಂಬರಿ ಸೊಪ್ಪನ್ನು ಆರಿಸಿ ತಂದರೆ ಅದು ಹೆಚ್ಚು ಕಾಲ ತಾಜಾವಾಗಿಯೇ ಉಳಿಯುವುದು.

ಸಂಪೂರ್ಣವಾಗಿ ಒಣಗಿಸಿ:
ಅನೇಕ ಜನರು ಮಾಡುವ ಒಂದು ಸಾಮಾನ್ಯ ತಪ್ಪು ಎಂದರೆ ಕೊತ್ತಂಬರಿ ಸೊಪ್ಪನ್ನು ಮನೆಗೆ ತಂದ ತಕ್ಷಣ ತೊಳೆದು ಫ್ರಿಡ್ಜ್‌ನಲ್ಲಿ ಇಡುವುದು. ಆದರೆ ತಜ್ಞರು ಸೂಚಿಸುವಂತೆ ಒದ್ದೆಯಾದ ಕೊತ್ತಂಬರಿ ಸೊಪ್ಪು ಹೆಚ್ಚಿನ ತೇವಾಂಶದಿಂದಾಗಿ ಬೇಗನೆ ಹಾಳಾಗುತ್ತದೆ.ಕೊತ್ತಂಬರಿ ಸೊಪ್ಪನ್ನು ತೊಳೆಯಬೇಕು ನಿಜ, ಆದರೆ ತೊಳೆದ ಮೇಲೆ ಹಾಗೆಯೇ ಫ್ರಿಜ್‌ನಲ್ಲಿ ಇಡುವ ಬದಲು ಅದನ್ನು ಸರಿಯಾಗಿ ಒಣಗಿಸಬೇಕು. ಸ್ವಚ್ಛವಾದ ಬಟ್ಟೆ ಅಥವಾ ಕಾಗದದ ಟವಲ್ ಮೇಲೆ ಹರಡಿ ಸೊಪ್ಪಿನ ಮೇಲಿನ ನೀರಿನ ಅಂಶ ಸಂಪೂರ್ಣವಾಗಿ ಹೋದ ನಂತರವೇ ಫ್ರಿಜ್‌ನಲ್ಲಿಡಿ. ಈ ಸಣ್ಣ ಕೆಲಸ ಕೊತ್ತಂಬರಿ ಸೊಪ್ಪು ಹೆಚ್ಚು ಕಾಲ ಫ್ರೆಶ್ ಆಗಿರುವಂತೆ ಮಾಡುತ್ತದೆ.
ಟಿಶ್ಯೂ ಪೇಪರ್ ಅಥವಾ ಪೇಪರ್ ಟವೆಲ್ ಬಳಕೆ:
ಕೊತ್ತಂಬರಿ ಸೊಪ್ಪನ್ನು ಶೇಖರಿಸಿಡುವಾಗಲೂ ಎಚ್ಚರಿಕೆ ಅಗತ್ಯ. ಕೊತ್ತಂಬರಿ ಸೊಪ್ಪನ್ನು ಗಾಳಿಯಾಡದ ಪಾತ್ರೆಯಲ್ಲಿ ಇಡುವ ಮೊದಲು ಅದರ ಕೆಳಭಾಗ ಮತ್ತು ಮೇಲ್ಭಾಗವನ್ನು ಟಿಶ್ಯೂ ಪೇಪರ್ ಅಥವಾ ಪೇಪರ್ ಟವೆಲ್‌ಗಳಿಂದ ಮುಚ್ಚಿಡುವುದು ಉತ್ತಮ. ಇವು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತವೆ. ಇದರಿಂದ ಎಲೆಗಳು ಕಪ್ಪಾಗುವುದನ್ನು ಅಥವಾ ಕೊಳೆಯುವುದನ್ನು ತಡೆಯಬಹುದು. ಸಂಪೂರ್ಣವಾಗಿ ಒಣಗಿದ ಕೊತ್ತಂಬರಿ ಸೊಪ್ಪನ್ನು ಗಾಳಿಯಾಡದ ಡಬ್ಬದಲ್ಲಿ ಇಟ್ಟು ಮುಚ್ಚಳವನ್ನು ಮುಚ್ಚಿ, ರೆಫ್ರಿಜರೇಟರ್‌ನಲ್ಲಿಟ್ಟರೆ ಅದು ಹಲವು ದಿನಗಳವರೆಗೆ ತಾಜಾ ಮತ್ತು ಪರಿಮಳಯುಕ್ತವಾಗಿರುತ್ತದೆ.
ಒಣ ವೃತ್ತಪತ್ರಿಕೆ ಅಥವಾ ಅಡುಗೆ ಟವಲ್ ಬಳಕೆ:
ಒಂದು ವೇಳೆ ನಿಮ್ಮ ಬಳಿ ಗಾಳಿಯಾಡದ ಪಾತ್ರೆ ಇಲ್ಲದಿದ್ದರೆ, ಪರವಾಗಿಲ್ಲ. ಕೊತ್ತಂಬರಿ ಸೊಪ್ಪನ್ನು ಒಣ ವೃತ್ತಪತ್ರಿಕೆ ಅಥವಾ ಅಡುಗೆ ಟವಲ್‌ನಲ್ಲಿ ಸಡಿಲವಾಗಿ ಸುತ್ತಿಟ್ಟರೂ ಅದರ ತಾಜಾತನ ಉಳಿಯುತ್ತದೆ. ಈ ವಿಧಾನವು ತೇವಾಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಎಲೆಗಳು ಬೇಗನೆ ಒಣಗುವುದನ್ನು ತಡೆಯುತ್ತದೆ.
ಲೋಟದ ನೀರಿನಲ್ಲಿಯೂ ಫೆಶ್ ಆಗಿರುವುದು:
ಇನ್ನು ಒಂದು ಲೋಟದಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಆ ಲೋಟದ ನೀರು ಕೊತ್ತಂಬರಿ ಸೊಪ್ಪಿನ ಕಾಂಡಕ್ಕೆ ಸ್ವಲ್ಪ ತಾಕುವಂತೆ ಇಟ್ಟರೆ ಕೂಡಾ ಸೊಪ್ಪು ಫ್ರೆಶ್ ಆಗಿ ಇರುವುದು. ಅನೇಕ ಮಹಿಳೆಯರು ಈ ರೀತಿ ಕೊತ್ತಂಬರಿ ಸೊಪ್ಪನ್ನು ಇಡುವುದನ್ನು ನಾವು ಗಮನಿಸಬಹುದು.
ಐಸ್ ಟ್ರೇಯನ್ನು ಹೀಗೆ ಬಳಸಿ:
ನಿಮ್ಮಲ್ಲಿ ಹೆಚ್ಚಿನ ಪ್ರಮಾಣದ ಕೊತ್ತಂಬರಿ ಸೊಪ್ಪು ಇದ್ದರೆ, ಅದನ್ನು ನುಣ್ಣಗೆ ಕತ್ತರಿಸಿ ಐಸ್ ಟ್ರೇನಲ್ಲಿ ಹಾಕಿ ನೀರಿನೊಂದಿಗೆ ಫ್ರೀಜ್ ಮಾಡಬಹುದು. ಈ ರೀತಿ ಮಾಡಿಟ್ಟ ಕ್ಯೂಬ್‌ಗಳನ್ನು ಅಗತ್ಯವಿದ್ದಾಗ ನೇರವಾಗಿ ಗ್ರೇವಿಗಳು, ಸೂಪ್‌ಗಳು ಮತ್ತು ಕರಿಗಳಲ್ಲಿ ಬಳಸಬಹುದು. ಈ ರೀತಿ ಮಾಡಿದರೆ ಕೊತ್ತಂಬರಿ ಸೊಪ್ಪು ತನ್ನ ತಾಜಾತನ ಮತ್ತು ಪರಿಮಳವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಈ ಸರಳ ಟಿಪ್ಸ್‌ಗಳನ್ನು ಅನುಸರಿಸುವುದರಿಂದ ಕೊತ್ತಂಬರಿ ಸೊಪ್ಪು ಬೇಗನೆ ಹಾಳಾಗುವುದನ್ನು ತಡೆಯಬಹುದು. ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ. ಈ ರೀತಿಯಾಗಿ ಅಡುಗೆಮನೆಯಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ದೊಡ್ಡ ಪ್ರಯೋಜನಗಳನ್ನು ತರಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications