Government Employee; ಸರ್ಕಾರಿ ಕಛೇರಿಗಳಲ್ಲಿ ಒತ್ತಡ ನಿರ್ವಹಣೆ ಹೇಗೆ
ಕೆಲಸದ ಸ್ಥಳದಲ್ಲಿನ ಒತ್ತಡ ಮತ್ತು ಆತಂಕ ಕೆಲಸದ ಮೇಲೆ ಮಾತ್ರವಲ್ಲ ನೌಕರರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಖಾಸಗಿ ಕಂಪನಿಗಳಲ್ಲಿ ಮಾತ್ರವಲ್ಲ ಸರ್ಕಾರಿ ಕಛೇರಿಗಳಲ್ಲಿ ಸಹ ಒತ್ತಡವಿರುತ್ತದೆ. ಇದನ್ನು ಸರಿದೂಗಿಸಿಕೊಂಡು ಕಾರ್ಯ ನಿರ್ವಹಣೆ ಮಾಡುವುದು ಅನಿವಾರ್ಯ ಸಹ ಹೌದು.
ಬಿ. ಆರ್. ಮಧು. ಲೆಕ್ಕಅಧೀಕ್ಷಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು. ಸರ್ಕಾರಿ ಕಛೇರಿಗಳಲ್ಲಿನ ಕೆಲಸದ ಒತ್ತಡ ಮತ್ತು ಅದನ್ನು ನಿವಾರಿಸಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರು ಬರೆದ ಲೇಖನ ಇಲ್ಲಿದೆ.

ಇತ್ತೀಚೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಗ್ರೂಪ್ 'ಬಿ' ವೃಂದದ ಕಚೇರಿ ವ್ಯವಸ್ಥಾಪಕರು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿರುವುದು ತೀವ್ರ ಬೇಸರದ ಸಂಗತಿಯಾಗಿದೆ. ಸುಮಾರು ವರ್ಷಗಳಿಗೂ ಹೆಚ್ಚಿನ ಅವಧಿಯ ಸೇವಾ ಅನುಭವ ಇರುವ, ಪ್ರತಿ ಮಾಹೆ ಸುಮಾರು 1 ಲಕ್ಷದವರೆಗೆ ವೇತನ ಪಡೆಯುವ ಗ್ರೂಪ್ 'ಬಿ' ವೃಂದದ ಒಬ್ಬ ಅಧಿಕಾರಿ, ಕಚೇರಿಯ ದೈನಂದಿನ ಕೆಲಸಗಳ ಒತ್ತಡವನ್ನು ನಿರ್ವಹಿಸಲಾಗದ ಪರಿಣಾಮ, ತಮ್ಮ ಜೀವವನ್ನೇ ಕಳೆದುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದ್ದು, ವಿಷಾದನೀಯ. ಸರ್ಕಾರಿ ನೌಕರರು ಕಛೇರಿ ಕೆಲಸವನ್ನು ನಿರ್ವಹಿಸುವ ಸಂದರ್ಭದಲ್ಲಿ ಒತ್ತಡವನ್ನು ಯಾವ ರೀತಿ ನಿರ್ವಹಿಸಬೇಕು? ಎಂಬ ಬಗ್ಗೆ ಯೋಚಿಸಲು ಈ ಘಟನೆ ಪ್ರೇರೇಪಿಸುತ್ತಿದೆ.
ಸರ್ಕಾರಿ ನೌಕರಿ ನೌಕರಿ ಸುಲಭವಲ್ಲ; ಒಂದು ಕಾಲದಲ್ಲಿ ಸರ್ಕಾರಿ ಕೆಲಸ ಸಿಕ್ಕಿದೆ ಎಂದ ತಕ್ಷಣ, ಜೀವನವೇ ಸೆಟ್ ಆಗೋಗಿದೆ. ಕೆಲಸ ಮಾಡಿದ್ರೂ, ಮಾಡಿಲ್ಲ ಅಂದ್ರೂ ಸಂಬಳ ಬರುತ್ತೆ, ಸರ್ಕಾರಿ ನೌಕರರಿಗೆ ಯಾವುದೇ ಸಮಸ್ಯೆಗಳು ಬರೋದಿಲ್ಲ. ಆರಾಮ ಜೀವನ ಅನ್ನೋ ಮನಸ್ಥಿತಿ ನಮ್ಮ ಸಮಾಜದಲ್ಲಿ ಇತ್ತು. ಇದೆಲ್ಲವೂ ಸಹ ನಮಗೆ ಗೊತ್ತಿರುವ ವಿಷಯವಾಗಿದೆ.
ಆದರೆ, ಜಾಗತಿಕ ಪ್ರಪಂಚದಲ್ಲಿ, ತಂತ್ರಜ್ಞಾನದ ಅಭಿವೃದ್ಧಿ ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ದಿನಗಳಲ್ಲಿ, ಹೊಸ ತಂತ್ರಜ್ಞಾನಕ್ಕೆ ಮತ್ತು ಸರ್ಕಾರಗಳು ರೂಪಿಸುವ ಕಾನೂನಿಗೆ ಅನುಗುಣವಾಗಿ, ನಿಯಮಗಳನ್ವಯ, ನಿಗದಿತ ಅವಧಿಯೊಳಗೆ ಸರ್ಕಾರಿ ಕೆಲಸಗಳನ್ನು ನಿರ್ವಹಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿದೆ. ಶೇ 50ಕ್ಕಿಂತ ಹೆಚ್ಚಿನ ಸರ್ಕಾರಿ ನೌಕರರು, ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿನ ವಿವಿಧ ರೀತಿಯ ಒತ್ತಡಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೇ, ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಮತ್ತು ಅಕಾಲಿಕವಾಗಿ ಮರಣ ಹೊಂದುತ್ತಿರುವುದನ್ನು ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ.
ಇಂದು, ಆಡಳಿತ ಯಂತ್ರದ ಚುಕ್ಕಾಣಿ ಹಿಡಿದ ಪ್ರಥಮ ಪ್ರಜೆಯಿಂದ ಪ್ರಾರಂಭವಾಗಿ, ಗ್ರೂಪ್ 'ಡಿ' ದರ್ಜೆಯ ನೌಕರನವರೆಗೆ, ಶಾಸಕಾಂಗ ಮತ್ತು ಕಾರ್ಯಾಂಗದ, ವಿವಿಧ ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುವವರೆ.
ಅದೇ ರೀತಿ, ವೈಯುಕ್ತಿಕ ಜೀವನದಲ್ಲಿ ನೋಡಿದಾಗ, ಬೆಳಗ್ಗೆ ಮನೆ ಮುಂದೆ ಬಂದು ಕಸವನ್ನು ಸ್ವೀಕರಿಸುವ ಪೌರಕಾರ್ಮಿಕನಿಂದ ಪ್ರಾರಂಭವಾಗಿ, ಪ್ರತಿದಿನ ನೂರಾರು ಕೋಟಿ ವ್ಯವಹಾರ ನಡೆಸುವ ಸಿರಿವಂತ ವ್ಯಕ್ತಿ ಸಹ ಒತ್ತಡದಿಂದಲೇ ಜೀವನ ಸಾಗಿಸುತ್ತಿರುತ್ತಾನೆ. ಅವರು ಹೊಂದಿರುವ ಸ್ಥಾನಮಾನ ಮತ್ತು ಜವಾಬ್ದಾರಿಗೆ ಅನುಸಾರವಾಗಿ ಒತ್ತಡದ ಪ್ರಮಾಣವನ್ನು ನಿರ್ಧರಿಸಬಹುದು.
ಇದು ತಂತ್ರಜ್ಞಾನದ ಯುಗ, ಸರ್ಕಾರಿ ವ್ಯವಸ್ಥೆಯಲ್ಲಿಯೂ ಸಹ ಹಂತಹಂತವಾಗಿ ಇ-ಆಡಳಿತವನ್ನು ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನದ ಜೊತೆಗೆ ಹೊಂದಿಕೊಂಡು, ಹೊಸ ವಿಷಯಗಳನ್ನು ಸಾಧ್ಯವಾದಷ್ಟು ಬೇಗನೆ ಮನನ ಮಾಡಿಕೊಂಡು, ಕೆಲಸ ನಿರ್ವಹಿಸುವುದು ಸವಾಲಿನ ಕೆಲಸ. ಈ ಅಂಶವೂ ನೌಕರರ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿರುವುದು ಸುಳ್ಳಲ್ಲ.
ಕೆಲಸದ ಸ್ಥಳಗಳಲ್ಲಿ ನಿಜಕ್ಕೂ ಹೆಚ್ಚಿನ ಒತ್ತಡವಿದೆಯೇ? ಅಥವಾ ಆ ಒತ್ತಡವನ್ನು ನಾವಾಗಿಯೇ ಸೃಷ್ಟಿಸಿಕೊಂಡು, ಕೆಲಸಗಳ ನಿರ್ವಹಣೆಯನ್ನು ಜಟಿಲ ಮಾಡಿಕೊಂಡು, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆಯೇ? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇದಕ್ಕೆ ಕಂಡುಕೊಂಡ ಉತ್ತರ ಎರಡನೇಯ ಕಾರಣ. ಅಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಕೆಲಸದ ಸ್ಥಳಗಳಲ್ಲಿ ಒತ್ತಡವನ್ನು ನಾವಾಗಿಯೇ ಸೃಷ್ಟಿ ಮಾಡಿಕೊಳ್ಳುತ್ತಿರುವುದು. ಅದಕ್ಕೆ. ಹಲವು ಕಾರಣಗಳಿರಬಹುದು. ನಾವು ಕೆಲಸ ಮಾಡುವ ಇಲಾಖೆ, ಇಲಾಖೆಯ ಕಚೇರಿಗಳಲ್ಲಿನ ಕಾರ್ಯವೈಖರಿ, ಸಹೋದ್ಯೋಗಿಗಳು, ಮೇಲಧಿಕಾರಿಗಳ ಕಾರ್ಯವೈಖರಿ, (ಅದು ನಮಗೆ ಪೂರಕವಾಗಿರಬಹುದು ಅಥವಾ ವ್ಯತಿರಿಕ್ತವಾಗಿರಬಹುದು) ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಸಂಘ ಸಂಸ್ಥೆಗಳ ಒತ್ತಡ ಸೇರಿದಂತೆ ಇತ್ಯಾದಿ ಕಾರಣಗಳು ನಮ್ಮ ದೈನಂದಿನ ಕಚೇರಿ ಕೆಲಸದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಎಲ್ಲಾ ಒತ್ತಡಗಳ ಮಧ್ಯೆ ನಾವು ನಮ್ಮ ಪ್ರತಿದಿನದ ಕರ್ತವ್ಯವನ್ನು ಯಾವುದೇ ಲೋಪವಿಲ್ಲದೆ, ನಿಗದಿತ ಅವಧಿಯೊಳಗೆ ನಿರ್ವಹಿಸುವ ಜವಾಬ್ದಾರಿ ನಮ್ಮ ಮೇಲಿದೆ.
ನಮ್ಮ ಸುತ್ತಮುತ್ತ ಪ್ರತಿದಿನ ಇರುವ ಈ ರೀತಿಯ ಒತ್ತಡಗಳನ್ನು ನಿವಾರಿಸಿಕೊಂಡು, ಕೆಲಸ ನಿರ್ವಹಿಸಲು ನಮಗೆ ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಪೂರ್ವ ನಿರ್ಧರಿತ ಆಲೋಚನೆಗಳನ್ನು ಬದಿಗಿರಿಸಿ (Don't be Preminded), ಕೆಲಸದ ಮೇಲೆ ಮತ್ತು ಸಹೋದ್ಯೋಗಿಗಳ ಮೇಲಿನ ನಮ್ಮ ಸಂಕುಚಿತ ಭಾವನೆಯನ್ನು ತೊಡೆದು ಕೆಲಸದ ವಾತಾವರಣವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ದೈನಂದಿನ ಕಚೇರಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ, ಒತ್ತಡ ಮುಕ್ತವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬಹುದಾಗಿದೆ.
ಎಲ್ಲೋ ಏಕೆ ? ನಮ್ಮ ನಮ್ಮ ಮನೆಗಳಲ್ಲಿಯೇ, ಮನೆಯ ಸದಸ್ಯರ ಮಧ್ಯೆ ಪ್ರತಿದಿನ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಮನಸ್ತಾಪಗಳು, ವಾದವಿವಾದಗಳು ಆಗುತ್ತಿರುತ್ತವೆ. ಆದರೂ ಸಹ ನಾವು ಅವುಗಳೊಂದಿಗೆ ಹೊಂದಿಕೊಂಡು, ನಮ್ಮ ಪ್ರತಿದಿನದ ಜೀವನವನ್ನು ಕಳೆಯುತ್ತಿದ್ದೇವೆ. ಅದೇ ರೀತಿಯ, ಹೊಂದಾಣಿಕೆ ಗುಣವನ್ನು ಕಚೇರಿಯಲ್ಲಿ ನಾವು ಬೆಳೆಸಿಕೊಳ್ಳುವುದು ಉತ್ತಮ ಬೆಳವಣಿಗೆ, ಮನೆ ಆಫೀಸಾಗಬಾರದು. ಆದರೆ, ಆಫೀಸು ಮನೆಯಾಗಬಹುದಲ್ಲವೇ?. ಒಂದು ಬಾರಿ, ಕಚೇರಿಯಲ್ಲಿ ಒಂದು ಮಾಹೆ ಈ ರೀತಿಯ ಸ್ನೇಹಮಯ ವಾತಾವರಣ ಮತ್ತು ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಲು ಪ್ರಯತ್ನಿಸಿ ನೋಡಿ. ಬದಲಾವಣೆಯ ಪರ್ವ ಖಂಡಿತ ಪ್ರಾರಂಭವಾಗುತ್ತದೆ. ಇಲ್ಲ, ತಾಳ್ಮೆ ಎನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಯತ್ನ ಹೆಚ್ಚಿರಲಿ, ನಿರೀಕ್ಷೆ ಕಡಿಮೆ ಇರಲಿ.











Click it and Unblock the Notifications