Masala Kaju Recipe: ಕ್ಷಣಾರ್ಧದಲ್ಲಿ ತಯಾರಿಸಿ ಹೋಟೆಲ್ ಶೈಲಿಯ ಖಾಜು ಮಸಾಲೆ
ಗೋಡಂಬಿ ತಿನ್ನಲು ಯಾರಿಗೆ ತಾನೇ ಇಷ್ಟ ಇಷ್ಟ ಇಲ್ಲ ಹೇಳಿ. ತುಂಬಾ ರುಚಿಕರ, ಆರೋಗ್ಯಕ್ಕೂ ಒಳ್ಳೆಯದು ಹಲವಾರು ಪೋಷಕಾಂಶಗಳನ್ನು ಹೊಂದಿರುವಂತಹ ಗೋಡಂಬಿಯನ್ನು ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಸಾಮಾನ್ಯವಾಗಿ ಗೋಡಂಬಿಯನ್ನು ಬೇರೆ ಖಾದ್ಯ, ಸಿಹಿ ತಿಂಡಿ ಇತ್ಯಾದಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಬದಲಿಗೆ ದಿನಕ್ಕೆ ಸ್ವಲ್ಪವಾದರೂ ಗೋಡಂಬಿ ಸೇವಿಸುವುದು ಉತ್ತಮ.
ಗೋಡಂಬಿಯಲ್ಲಿ ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿದೆ. ಗೋಡಂಬಿ ತಿನ್ನುವುದರಿಂದ ಹೃದಯದ ಕೆಲವು ಸಮಸ್ಯೆಗಳು ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳಿಂದ ದೂರ ಇರಬಹುದು. ಗೋಡಂಬಿ ಕೊಲೆಸ್ಟ್ರಾಲ್‌ಅನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡ, ಉರಿಯೂತ ಮತ್ತು ನಾಳೀಯ ಪ್ರತಿಕ್ರಿಯಾತ್ಮಕತೆ ಮೇಲೆ ಪರಿಣಾಮ ಬೀರುತ್ತದೆ. ಗೋಡಂಬಿ ಸೇವನೆಯಿಂದ ರಕ್ತದ ಕಾಯಿಲೆಗಳನ್ನು ಸಹ ತಡೆಯಬಹುದು. ಒಟ್ಟಾರೆ ಗೋಡಂಬಿ ಸೇವನೆ ಆರೋಗ್ಯಕ್ಕೆ ಹಿತ.

ಇಂತಹ ಗೋಡಂಬಿಯನ್ನು ಪ್ರತಿ ನಿತ್ಯ ತನ್ನುವುದರಿಂದ ಕೆಲವರಿಗೆ ರುಚಿ ಎನಿಸದೇ ಇರಬಹುದು. ಮಕ್ಕಳು ತಿನ್ನಲು ನಿರಾಕರಿಸಬಹುದು. ಹೀಗಾಗಿ ಗೋಡಂಬಿಯಲ್ಲೇ ರುಚಿಕರವಾದ ಖಾದ್ಯವೊಂದನ್ನು ತಯಾರಿಸಿ ಕೊಡಿ. ಕೆಲವೇ ಕ್ಷಣದಲ್ಲಿ ಮಾಡಬಹುದಾದ ರುಚಿಯಾದ ರೋಸ್ಟೆಡ್ ಖಾಜು ಮಸಾಲೆ ಮಾಡುವ ವಿಧಾನ ಇಲ್ಲಿದೆ.
ರೋಸ್ಟೆಡ್ ಖಾಜು ಮಸಾಲೆ ಮಾಡಲು ಬೇಕಾಗುವ ಸಾಮಾಗ್ರಿಗಳು
ಗೋಡಂಬಿ-1 ಕಪ್
ಕೆಂಪು ಮೆಣಸಿನ ಪುಡಿ-1/2 ಚಮಚ
ಕರಿಮೆಣಸು ಪುಡಿ-1/4 ಚಮಚ
ಜೀರಿಗೆ ಪುಡಿ-1/4 ಚಮಚ
ಗರಂ ಮಸಾಲಾ-1/4 ಚಮಚ
ಇಂಗು-ಒಂದು ಚಿಟಿಕೆ
ತುಪ್ಪ-2 ಚಮಚ
ಉಪ್ಪು-ನಿಮ್ಮ ರುಚಿಗೆ ತಕ್ಕಷ್ಟು

ರೋಸ್ಟೆಡ್ ಖಾಜು ಮಸಾಲೆ ಮಾಡುವ ವಿಧಾನ
ಮೊದಲು ಕರಿಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಇಂಗು ಮತ್ತು ಉಪ್ಪು ಮುಂತಾದ ಎಲ್ಲಾ ಮಸಾಲೆಗಳನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಬಾಣಲಿ ಬಿಸಿ ಮಾಡಿ ತುಪ್ಪವನ್ನು ಹಾಕಿ ಗೋಡಂಬಿ ಸೇರಿಸಿ, ಗೋಡಂಬಿಯನ್ನು ಕಡಿಮೆ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವರೆಗೂ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ. ನಂತರ ಕೆಂಪು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಹುರಿಯಿರಿ. ತಕ್ಷಣ ಮಸಾಲೆಗಳನ್ನು ಸೇರಿಸಿ ಮಿಶ್ರಣ ಮಾಡಿ, ಸ್ಟವ್ ಆಫ್ ಮಾಡಿ. ಸ್ವಲ್ಪ ಆರಿಸಿ ಮಸಾಲೆ ಗೋಡಂಬಿಯನ್ನು ಸವಿಯಿರಿ.












Click it and Unblock the Notifications