ಪಾನ್ ಬೀಡಾದ ಕತೆ: ರಾಜ-ಮಹಾರಾಜರ ಸಂಸ್ಕೃತಿ, ಪ್ರತಿಷ್ಠೆ ಬೀದಿ ಬದಿಯ ಚಟ ಆಗಿದ್ದು ಹೇಗೆ?
ಒಂದೊಳ್ಳೆ ಊಟದ ಬಳಿಕ ಸ್ವೀಟ್ ಬೀಡಾ ತಿನ್ನೋಣ ಅನಿಸ್ತದಲ್ಲಾ? ಇದು ಬರೀ ನಮ್ಮನಿಮ್ಮಂಥ ಸಾಮಾನ್ಯರ ರೂಢಿ ಅಂದುಕೋಬೇಡಿ. ರಾಜ ಮಹಾರಾಜರ ಅಂತಃಪುರಗಳಲ್ಲಿ ಈ ಪಾನ್‌ಗೆ ಒಳ್ಳೇ ಮಜಾಶೀರ್ ಮರ್ಯಾದೆ ಇತ್ತು. ಅದು ಈ ಸಾಮ್ರಾಟರ ʼವೀರ್ಯವೃದ್ಧಿʼಗೆ ಬಳಕೆಯಾಗುತ್ತಿತ್ತು! ಬನ್ನಿ ಇದರ ಕತೆ ಸ್ವಲ್ಪ ನೋಡೋಣ.
ಭಾರತೀಯ ಸಂಸ್ಕೃತಿಯಲ್ಲಿ 'ಪಾನ್' ಅಥವಾ 'ತಾಂಬೂಲ' ಅಗ್ರಸ್ಥಾನದಲ್ಲಿದೆ. ಆದರೆ, ಬ್ರಿಟಿಷರ ಆಡಳಿತಾವಧಿಯಲ್ಲಿ ಪಾನ್ ತನಗಿದ್ದ ಗೌರವದ ಸ್ಥಾನವನ್ನು ಕಳೆದುಕೊಂಡು ಕೇವಲ ಒಂದು 'ಅಸಹ್ಯ ದೇಶೀಯ ಹವ್ಯಾಸ'ವಾಗಿ ಹೇಗೆ ಬದಲಾಯಿತು ಎಂಬುದು ಅತ್ಯಂತ ರೋಚಕ ಇತಿಹಾಸ.

ರಾಜಮನೆತನದ ವೈಭೋಗದ ಸಂಕೇತವಾಗಿ ಪಾನ್‌ನ 18 ಮತ್ತು 19ನೇ ಶತಮಾನದ ಆರಂಭದ ಚಿತ್ರಕಲೆಗಳನ್ನು ಗಮನಿಸಿದರೆ, ಪಾನ್ ಕೇವಲ ತಿನ್ನುವ ವಸ್ತುವಾಗಿರದೇ, ಉನ್ನತ ಸಾಮಾಜಿಕ ಗೌರವ ಮತ್ತು ರಾಜಮನೆತನದ ಸಂಸ್ಕೃತಿಯ ಭಾಗವಾಗಿತ್ತು. ಬ್ರಿಟಿಷ್ ಅಧಿಕಾರಿಗಳಾಗಿದ್ದ ವಿಲಿಯಂ ಫುಲ್ಲರ್ಟನ್ ಮತ್ತು ಡೇವಿಡ್ ಆಕ್ಟರ್‌ಲೊನಿ ಅವರ ಐತಿಹಾಸಿಕ ಚಿತ್ರಗಳಲ್ಲಿ, ಅವರು ಹುಕ್ಕಾ ಸೇದುತ್ತಾ ಕುಳಿತಿರುವಾಗ ಅವರ ಮುಂದೆ ಅತ್ಯಂತ ಕಲಾತ್ಮಕವಾದ 'ಪಾನ್‌ದಾನ್' (ವೀಳ್ಯದೆಲೆಯ ಪೆಟ್ಟಿಗೆ) ಮತ್ತು 'ಪಿಕ್‌ದಾನ್' (ಉಗುಳುವ ಪಾತ್ರೆ) ಇಟ್ಟಿರುವುದನ್ನು ಕಾಣಬಹುದು. ಇದು ಗಣ್ಯರ ಸಭ್ಯತೆಯ ಸಂಕೇತವೇ ಆಗಿತ್ತು.
ಆಗಿನ ಕಾಲದಲ್ಲಿ ಅತಿಥಿಗಳಿಗೆ ಪಾನ್ ನೀಡುವುದು ಆತಿಥ್ಯದ ಅತ್ಯುನ್ನತ ರೂಪವಾಗಿತ್ತು. ಮೊಘಲ್ ಚಕ್ರವರ್ತಿ ಜಹಾಂಗೀರ್ ತನ್ನದೇ ಆದ ವೈಯಕ್ತಿಕ ಪೆಟ್ಟಿಗೆಯಿಂದ ಬ್ರಿಟಿಷ್ ರಾಯಭಾರಿ ಥಾಮಸ್ ರೋಗೆ ಪಾನ್ ನೀಡಿದ್ದು ಅತ್ಯಂತ ದೊಡ್ಡ ಗೌರವದ ಸಂಕೇತವಾಗಿ ದಾಖಲಾಗಿದೆ.
ಶೃಂಗಾರದ ಸಂಕೇತ
ವಾತ್ಸ್ಯಾಯನ ಕಾಮಸೂತ್ರ ಮತ್ತು ಹಳೆಯ ಮೊಘಲ್ ಚಿತ್ರಗಳಲ್ಲಿ ಪಾನ್ ಪ್ರೇಮ, ಆಕರ್ಷಣೆ ಮತ್ತು ಶೃಂಗಾರದ ಸಿದ್ಧತೆಯ ಸಂಕೇತವಾಗಿ ಬಳಕೆಯಾಗಿದೆ. ಶೃಂಗಾರದ ಗಳಿಗೆಗಳಿಗೆ ಮುನ್ನ ವೀಳ್ಯದ ವಿನಿಮಯ ಕಡ್ಡಾಯವಾಗಿತ್ತು. ಸವಿದ ತಾಂಬೂಲವನ್ನು ತುಟಿಯಲ್ಲೇ ಗಂಡು ಹೆಣ್ಣು ವಿನಿಮಯಿಸಿಕೊಳ್ಳುತ್ತಿದ್ದರು. ಅದು ಶೃಂಗಾರವನ್ನು ವರ್ಧಿಸುತ್ತಿತ್ತು.
ಆತಿಥ್ಯ ಮತ್ತು ವಿದಾಯದ ಸಂಕೇತ
ಬ್ರಿಟಿಷ್ ಬರಹಗಾರ ಜೇಮ್ಸ್ ಫೋರ್ಬ್ಸ್ ತನ್ನ ಬರಹಗಳಲ್ಲಿ ಭಾರತೀಯರ ಪಾನ್ ಹವ್ಯಾಸವನ್ನು ವಿವರವಾಗಿ ದಾಖಲಿಸಿದ್ದಾರೆ. ಯುರೋಪಿಯನ್ನರು ತಂಬಾಕು ಇಟ್ಟುಕೊಳ್ಳುವಂತೆ ಭಾರತೀಯರು ಸಣ್ಣ ಪೆಟ್ಟಿಗೆಗಳಲ್ಲಿ ಪಾನ್ ಇಟ್ಟುಕೊಳ್ಳುತ್ತಿದ್ದರು. ವಿಶೇಷವೆಂದರೆ, ಅತಿಥಿಗಳಿಗೆ ಭೇಟಿಯ ಕೊನೆಯಲ್ಲಿ ಪಾನ್ ನೀಡುವುದು "ಇನ್ನು ಹೊರಡಲು ಸಮಯವಾಯಿತು" ಎಂಬುದನ್ನು ಗೌರವಯುತವಾಗಿ ತಿಳಿಸುವ ಸಂಕೇತವಾಗಿತ್ತು.
ಬದಲಾದ ಇತಿಹಾಸ
ಬ್ರಿಟಿಷರು ಭಾರತದಲ್ಲಿ ಕೇವಲ ವ್ಯಾಪಾರಿಗಳಾಗಿರದೆ ಆಡಳಿತಗಾರರಾಗುತ್ತಿದ್ದಂತೆ, ಭಾರತೀಯ ಸಂಸ್ಕೃತಿಯನ್ನು ನೋಡುವ ಅವರ ದೃಷ್ಟಿಕೋನ ಬದಲಾಯಿತು. ಪಾನ್ ಸಂಸ್ಕೃತಿಯನ್ನು ಕೇವಲ ಒಂದು ಪ್ರಾದೇಶಿಕ ಹವ್ಯಾಸವಾಗಿ ಬ್ರಿಟಿಷರು ದಾಖಲಿಸಲು ಆರಂಭಿಸಿದರು. ಚಿತ್ರಕಲೆಗಳಲ್ಲಿ ಪಾನ್ ಹಂಚಿಕೊಳ್ಳುವ ಸಾಮಾಜಿಕ ಸೌಂದರ್ಯ ಮಾಯವಾಗಿ, ಒಬ್ಬ ವ್ಯಕ್ತಿ ಒಂಟಿಯಾಗಿ ಪಾನ್ ತಿನ್ನುವ ಅಥವಾ ಪಾನ್ ಮಾರುವ ವ್ಯಾಪಾರಿಯ ಚಿತ್ರಗಳು ಬರಲಾರಂಭಿಸಿದವು.
ಬ್ರಿಟಿಷರ ಸ್ವಚ್ಛತೆ ಹಾಗೂ ನೈರ್ಮಲ್ಯದ ಕಲ್ಪನೆಗಳು ಬೇರೆಯಾಗಿದ್ದವು. ಕಚೇರಿಗಳಲ್ಲಿ ಪಾನ್ ತಿಂದು ಉಗುಳುವುದನ್ನು ಅವರು ನಿಷೇಧಿಸಿದರು. ರಾಜಮನೆತನಗಳ ಪತನದ ನಂತರ ಪಾನ್‌ದಾನ್‌ಗಳಿಗೆ ಸಿಗುತ್ತಿದ್ದ ರಾಜಾಶ್ರಯವೂ ತಪ್ಪಿತು. ಹೀಗಾಗಿ, ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಿಂದ ಪಿಕ್‌ದಾನ್‌ಗಳು ಮಾಯವಾದವು. ಪಾನ್ ತಿನ್ನುವುದು ಕೇವಲ ಶಿಸ್ತಿಲ್ಲದ ಹಳ್ಳಿಗರ ಹವ್ಯಾಸ ಎಂಬಂತೆ ಬಿಂಬಿತವಾಯಿತು.
ಭಾಷೆ ಮತ್ತು ವಿಭಿನ್ನ ನಂಬಿಕೆಗಳು
ಪಾನ್ ಪದಕ್ಕೆ ಸುದೀರ್ಘ ಇತಿಹಾಸವಿದೆ. 'ಪಾನ್' ಎಂಬ ಪದವು ಸಂಸ್ಕೃತದ 'ಪರ್ಣ' (ಎಲೆ) ಎಂಬ ಪದದಿಂದ ಬಂದಿದೆ. ಸಂಸ್ಕೃತದ 'ತಾಂಬೂಲ' ಎಂಬುದು ಪರ್ಸಿಯನ್‌ನಲ್ಲಿ 'ತಂಬುಲ್' ಆಯಿತು. ಸುಪಾರಿ ಎಂಬ ಪದವು ಸಂಸ್ಕೃತದ 'ಸುಪ್ರಿಯ' (ಪ್ರೀತಿಪಾತ್ರವಾದದ್ದು) ಎಂಬ ಪದದಿಂದ ಬಂದಿದೆ. ದಕ್ಷಿಣ ಏಷ್ಯಾದಲ್ಲಿ ಇದನ್ನು ಅತ್ಯಂತ ಪವಿತ್ರವಾಗಿ ಬೆಳೆಯಲಾಗುತ್ತಿತ್ತು. ಬಂಗಾಳದಲ್ಲಿ ವೀಳ್ಯದೆಲೆ ತೋಟಕ್ಕೆ ಹೋಗುವ ಮುನ್ನ ಸ್ನಾನ ಮಾಡಬೇಕಿತ್ತು.
ಮಲೇಶಿಯಾದಲ್ಲಿ 'ಸಿರಿಹ್' (ಪಾನ್) ನೀಡುವುದು ಕ್ಷಮೆಯಾಚನೆಯ ಸಂಕೇತವಾಗಿದ್ದರೆ, ಶ್ರೀಲಂಕಾ ಮತ್ತು ಭಾರತದ ಆಯುರ್ವೇದದಲ್ಲಿ ಇದನ್ನು ಜೀರ್ಣಕ್ರಿಯೆಗೆ ಮತ್ತು ತಲೆನೋವಿನ ನಿವಾರಣೆಗೆ ಔಷಧಿಯಾಗಿ ಬಳಸಲಾಗುತ್ತಿತ್ತು.
1923ರಲ್ಲಿ ಇಂಗ್ಲಿಷ್ ಲೇಖಕ ಇ.ಎಮ್. ಫೋರ್ಸ್ಟರ್ ಅವರು ಬ್ರಿಟಿಷರ ಈ ನಡವಳಿಕೆಯನ್ನು ಟೀಕಿಸುತ್ತಾ, ಭಾರತೀಯರು ಪಾನ್ ತಯಾರಿಸುವ ಮತ್ತು ನೀಡುವ ಶೈಲಿ ಬ್ರಿಟಿಷರ ಚಹಾ ಕೂಟದ (English Tea) ಆಚರಣೆಗಿಂತಲೂ ಹೆಚ್ಚು ಕಲಾತ್ಮಕ ಮತ್ತು ಶ್ರೇಷ್ಠವಾಗಿತ್ತು ಎಂದು ಬರೆದಿದ್ದಾರೆ. ಕಾಲ ಬದಲಾದಂತೆ ಬ್ರಿಟಿಷರ ಕಟ್ಟುಪಾಡುಗಳಿಂದಾಗಿ ಪಾನ್ ತನ್ನ ರಾಜಮನೆತನದ ವೈಭೋಗವನ್ನು ಕಳೆದುಕೊಂಡರೂ, ಅದು ಭಾರತೀಯರ ದೈನಂದಿನ ಜೀವನ, ಆತಿಥ್ಯ ಮತ್ತು ಸಾಂಸ್ಕೃತಿಕ ಸೌಂದರ್ಯದ ಅವಿಭಾಜ್ಯ ಅಂಗವಾಗಿ ಇಂದಿಗೂ ಉಳಿದುಕೊಂಡಿದೆ.














Click it and Unblock the Notifications