Heart Health : ರಾತ್ರಿ ಮಲಗುವ ಮುನ್ನ ಈ 4 ತಪ್ಪುಗಳನ್ನು ಮಾಡುತ್ತಿದ್ದೀರಾ? ಹೃದಯದ ಆರೋಗ್ಯಕ್ಕೆ ಅಪಾಯ!
Heart Health : ಇತ್ತೀಚೆಗೆ ಸಡನ್ ಹೃದಯ ಸಮಸ್ಯೆಗಳು, ಸ್ತಂಭನಗಳು, ಅಟ್ಯಾಕ್‌ಗಳು ಜಾಸ್ತಿ ಆಗಿವೆ. ಹೃದಯದ ಆರೋಗ್ಯದ ಬಗ್ಗೆ ಕಳಕಳಿ ಹೆಚ್ಚುತ್ತಿದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಆಹಾರದಲ್ಲಿ ಎಚ್ಚರಿಕೆ, ನಿಯಮಿತ ವ್ಯಾಯಾಮ ಮತ್ತು ದೇಹದ ತೂಕದ ಮೇಲೆ ನಿಗಾ ವಹಿಸುವುದು ಮುಖ್ಯ ಎಂಬುದು ಬಹುತೇಕರಿಗೆ ತಿಳಿದಿದೆ. ಆದರೆ ರಾತ್ರಿ ಮಲಗುವ ಮುನ್ನ ನಾವು ಅನುಸರಿಸುವ ಅಭ್ಯಾಸಗಳೂ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದು ನಿಮಗೆ ಗೊತ್ತೇ?
ಹೌದು. ಈ ಕೆಲವು ಅಭ್ಯಾಸಗಳು ನಿದ್ರೆಯ ಗುಣಮಟ್ಟವನ್ನು ಹಾಳುಮಾಡಬಹುದು. ದೀರ್ಘಕಾಲ ಇಂತಹ ಅಭ್ಯಾಸಗಳು ಮುಂದುವರಿದರೆ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದ ಅಪಾಯ ಹೆಚ್ಚುವ ಸಾಧ್ಯತೆಯಿದೆ. ಇವೆಲ್ಲವೂ ಹೃದಯದ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ. ಅಮೆರಿಕದ ನ್ಯೂಜೆರ್ಸಿಯ ಹ್ಯಾಕೆನ್‌ಸ್ಯಾಕ್ ಮೆರಿಡಿಯನ್ ಜರ್ಸಿ ಶೋರ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಹೃದಯ ವೈಫಲ್ಯ ಚಿಕಿತ್ಸಾ ತಜ್ಞೆ ಡಾ. ಸಿಂಥಿಯಾ ಕೋಸ್ ಅವರು ನಿದ್ರೆ ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವನ್ನು ವಿವರಿಸಿದ್ದಾರೆ. ಅವರ ಸಲಹೆಗಳ ಆಧಾರದಲ್ಲಿ ರಾತ್ರಿ ಮಲಗುವ ಮುನ್ನ ತಪ್ಪಿಸಬೇಕಾದ ನಾಲ್ಕು ಅಭ್ಯಾಸಗಳು ಇಲ್ಲಿವೆ.

1. ಪ್ರತಿದಿನ ಬೇರೆ ಬೇರೆ ಸಮಯಕ್ಕೆ ಮಲಗುವುದು
ಕೆಲವು ದಿನ ರಾತ್ರಿ 10 ಗಂಟೆಗೆ ಮಲಗುವುದು, ಮತ್ತೆ ಕೆಲವು ದಿನ ಮಧ್ಯರಾತ್ರಿ ಅಥವಾ ಅದಕ್ಕಿಂತ ತಡವಾಗಿ ಮಲಗುವುದು ನಿಮ್ಮ ಅಭ್ಯಾಸವೇ? ಹಾಗಿದ್ದರೆ ನಿಮ್ಮ ನಿದ್ರೆಯ ಸಮಯವನ್ನು ನಿಯಮಿತಗೊಳಿಸುವ ಬಗ್ಗೆ ಗಮನ ಹರಿಸುವುದು ಒಳ್ಳೆಯದು.
ನಮ್ಮ ದೇಹದಲ್ಲಿ ನಿದ್ರೆ ಮತ್ತು ಎಚ್ಚರದ ಸಮಯವನ್ನು ನಿಯಂತ್ರಿಸುವ ಆಂತರಿಕ ಜೈವಿಕ ಗಡಿಯಾರವಿದೆ. ಇದನ್ನು ಸಿರ್ಕಾಡಿಯನ್ ರಿದಮ್ ಎಂದು ಕರೆಯಲಾಗುತ್ತದೆ. ಪ್ರತಿದಿನ ಮಲಗುವ ಮತ್ತು ಏಳುವ ಸಮಯ ಬದಲಾಗುತ್ತಿದ್ದರೆ ಈ ಗಡಿಯಾರದ ಸಹಜ ಲಯಕ್ಕೆ ಅಡ್ಡಿಯಾಗಬಹುದು.
ನಿದ್ರೆಯ ಸಮಯದಲ್ಲಿ ದೇಹ ವಿಶ್ರಾಂತಿ ಪಡೆಯುತ್ತದೆ. ಹೃದಯ ಬಡಿತ ಮತ್ತು ರಕ್ತದೊತ್ತಡ ಸಾಮಾನ್ಯವಾಗಿ ಕಡಿಮೆಯಾಗುತ್ತವೆ. ಇದರಿಂದ ಹೃದಯದ ಮೇಲಿನ ಕೆಲಸದ ಒತ್ತಡ ತಗ್ಗುತ್ತದೆ. ಆದರೆ ನಿದ್ರೆಯ ಸಮಯ ಪದೇಪದೆ ಬದಲಾಗುವುದರಿಂದ ಈ ಸಹಜ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಕೆಲವು ಜನರಲ್ಲಿ ರಾತ್ರಿ ರಕ್ತದೊತ್ತಡ ಸಹಜವಾಗಿ ಕಡಿಮೆಯಾಗುವ ಪ್ರಕ್ರಿಯೆಯೂ ವ್ಯತ್ಯಯಗೊಳ್ಳಬಹುದು.
2025ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ನಿದ್ರೆಯ ಸಮಯದಲ್ಲಿ ಹೆಚ್ಚಿನ ಅನಿಯಮಿತತೆ ಹೊಂದಿದ್ದವರಲ್ಲಿ ದೇಹದ ತೂಕ ಹೆಚ್ಚಿರುವುದು ಮತ್ತು ಹೃದಯಕ್ಕೆ ಪ್ರಯೋಜನಕಾರಿ ಎಚ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿರುವುದು ಕಂಡುಬಂದಿತ್ತು ಎಂದು ವರದಿ ಉಲ್ಲೇಖಿಸುತ್ತದೆ.
ಏನು ಮಾಡಬೇಕು? : ಪ್ರತಿದಿನ ಸಾಧ್ಯವಾದಷ್ಟು ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು, ಪುಸ್ತಕ ಓದುವುದು ಅಥವಾ ಮೃದುವಾದ ಸಂಗೀತ ಕೇಳುವುದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡಬಹುದು.
2. ಮಲಗುವ ಮುನ್ನ ತಡರಾತ್ರಿಯಲ್ಲಿ ತಿಂಡಿ ತಿನ್ನುವುದು
ರಾತ್ರಿ ಊಟ ಮಾಡಿದ ಬಳಿಕ ಮತ್ತೆ ಹಸಿವಾಗುತ್ತದೆಯೇ? ಟಿವಿ ನೋಡುವಾಗ ತಿಂಡಿ ತಿನ್ನುವುದು ಅಥವಾ ಮಲಗುವ ಸ್ವಲ್ಪ ಸಮಯದ ಮೊದಲು ಭಾರೀ ಊಟ ಮಾಡುವುದು ನಿಮ್ಮ ಅಭ್ಯಾಸವೇ? ಇಂತಹ ಆಹಾರ ಸೇವನೆಯ ಸಮಯದ ಬಗ್ಗೆಯೂ ಎಚ್ಚರಿಕೆ ಅಗತ್ಯ.
2023ರಲ್ಲಿ 'ನೇಚರ್ ಕಮ್ಯುನಿಕೇಷನ್ಸ್' ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರ ಆಹಾರ ಸೇವನೆಯ ಮಾಹಿತಿಯನ್ನು ಪರಿಶೀಲಿಸಲಾಗಿತ್ತು. ರಾತ್ರಿ 9 ಗಂಟೆಯ ನಂತರ ಕೊನೆಯ ಊಟ ಮಾಡಿದವರಲ್ಲಿ ರಾತ್ರಿ 8 ಗಂಟೆಯೊಳಗೆ ಊಟ ಮುಗಿಸಿದವರಿಗೆ ಹೋಲಿಸಿದರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿರುವ ಸಂಬಂಧ ಕಂಡುಬಂದಿತ್ತು ಎಂದು ವರದಿ ತಿಳಿಸಿದೆ.
ಅದೇ ಅಧ್ಯಯನದಲ್ಲಿ ಕೊನೆಯ ಊಟದ ಸಮಯ ತಡವಾದಂತೆ ಮೆದುಳಿಗೆ ರಕ್ತ ಪೂರೈಕೆಯ ಮೇಲೆ ಪರಿಣಾಮ ಬೀರುವ ಕಾಯಿಲೆಗಳ ಅಪಾಯವೂ ಹೆಚ್ಚಿರುವ ಸಂಬಂಧ ಕಂಡುಬಂದಿತ್ತು. ಆದರೆ ಇವು ಅಧ್ಯಯನದಲ್ಲಿ ಕಂಡುಬಂದ ಸಂಬಂಧಗಳಾಗಿದ್ದು, ತಡವಾಗಿ ಊಟ ಮಾಡುವುದೇ ನೇರವಾಗಿ ಕಾಯಿಲೆಗೆ ಕಾರಣವಾಗುತ್ತದೆ ಎಂದು ಇದರಿಂದ ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ರಾತ್ರಿ ತಡವಾಗಿ ಹೆಚ್ಚು ಆಹಾರ ಸೇವಿಸುವುದರಿಂದ ಕೆಲವರಿಗೆ ಅಜೀರ್ಣ, ಎದೆಯುರಿ ಮತ್ತು ನಿದ್ರೆಯ ತೊಂದರೆ ಉಂಟಾಗಬಹುದು. ದೀರ್ಘಕಾಲದವರೆಗೆ ಅನಾರೋಗ್ಯಕರ ಆಹಾರ ಪದ್ಧತಿ ಮುಂದುವರಿದರೆ ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣದ ಮೇಲೂ ಪರಿಣಾಮ ಬೀರಬಹುದು.
ಹೃದಯ ತಜ್ಞೆ ಡಾ. ಸಿಂಥಿಯಾ ಕೋಸ್ ಅವರು ಮಲಗುವ ಮುನ್ನದ ಮೂರು ಗಂಟೆಗಳಲ್ಲಿ ಮದ್ಯ, ಕೆಫೀನ್ ಇರುವ ಪಾನೀಯಗಳು, ಸಕ್ಕರೆ ( sugar) ಹೆಚ್ಚಿರುವ ಪಾನೀಯಗಳು ಮತ್ತು ಖಾರವಾದ ಆಹಾರವನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ. ಕೆಫೀನ್ ನಿದ್ರೆಗೆ ಅಡ್ಡಿಯಾಗಬಹುದು. ಮದ್ಯಪಾನದಿಂದ ಆರಂಭದಲ್ಲಿ ನಿದ್ರೆ ಬಂದಂತೆ ಅನಿಸಿದರೂ ನಿದ್ರೆಯ ಗುಣಮಟ್ಟ ಹದಗೆಡಬಹುದು. ಖಾರವಾದ ಆಹಾರವು ಕೆಲವರಲ್ಲಿ ಎದೆಯುರಿ ಉಂಟುಮಾಡಬಹುದು.
ಏನು ಮಾಡಬೇಕು?: ರಾತ್ರಿ ಊಟವನ್ನು ಮಲಗುವ ಸಮಯಕ್ಕೆ ಬಹಳ ಹತ್ತಿರದಲ್ಲಿ ಮಾಡಬೇಡಿ. ಸಾಧ್ಯವಾದರೆ ಮಲಗುವುದಕ್ಕೆ ಎರಡು ಅಥವಾ ಮೂರು ಗಂಟೆಗಳ ಮುನ್ನ ಊಟ ಮುಗಿಸಿ. ರಾತ್ರಿ ಹಸಿವಾದರೆ ನಿಮ್ಮ ಆರೋಗ್ಯಕ್ಕೆ ಹೊಂದುವ ಹಗುರವಾದ ಆಹಾರವನ್ನು ಮಿತವಾಗಿ ಸೇವಿಸಿ. ಹಸಿವನ್ನು ಬಲವಂತವಾಗಿ ಸಹಿಸಿಕೊಳ್ಳುವುದಕ್ಕಿಂತ ಆಹಾರದ ಪ್ರಮಾಣ ಮತ್ತು ಸಮಯದ ಬಗ್ಗೆ ಗಮನ ಹರಿಸುವುದು ಮುಖ್ಯ.
3. ಮಲಗುವ ಕೋಣೆಯಲ್ಲಿ ಶಬ್ದ, ಬೆಳಕು, ಗೊಂದಲ
ಒಳ್ಳೆಯ ನಿದ್ರೆಗೆ ಹಾಸಿಗೆ ಮತ್ತು ದಿಂಬಿನ ಆರಾಮ ಮಾತ್ರವಲ್ಲ, ಸುತ್ತಮುತ್ತಲಿನ ವಾತಾವರಣವೂ ಮುಖ್ಯ. ಅತಿಯಾದ ಬಿಸಿ, ಕಿರಿಕಿರಿಯುಂಟುಮಾಡುವ ಶಬ್ದ, ಹೆಚ್ಚು ಬೆಳಕು ಅಥವಾ ಆರಾಮದಾಯಕವಲ್ಲದ ಹಾಸಿಗೆ ನಿದ್ರೆಯನ್ನು ಪದೇಪದೆ ಅಡ್ಡಿಪಡಿಸಬಹುದು. ಇದರಿಂದ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ದೊರೆಯದೇ ಇರಬಹುದು.
ನಿದ್ರೆಯ ವೇಳೆ ಪದೇಪದೆ ಎಚ್ಚರವಾಗುವುದು ಅಥವಾ ಗಾಢ ನಿದ್ರೆ ಕಡಿಮೆಯಾಗುವುದು ದೇಹದ ಒತ್ತಡದ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಹೃದಯ ಬಡಿತ ಮತ್ತು ರಕ್ತದೊತ್ತಡದ (blood pressure) ನಿಯಂತ್ರಣಕ್ಕೂ ಅಡ್ಡಿಯಾಗುವ ಸಾಧ್ಯತೆಯಿದೆ.
ವಿಶೇಷವಾಗಿ ವಯಸ್ಸಾದವರಲ್ಲಿ ರಾತ್ರಿ ಅತಿಯಾದ ಬಿಸಿಯ ವಾತಾವರಣ ಮತ್ತು ನಿದ್ರೆಯ ಅಡಚಣೆಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೃದಯದ ಕಾಯಿಲೆ ಇರುವವರು ನಿದ್ರೆಯ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
ಏನು ಮಾಡಬೇಕು?: - ಮಲಗುವ ಕೋಣೆಯನ್ನು ಸಾಧ್ಯವಾದಷ್ಟು ತಂಪಾಗಿ, ಕತ್ತಲಾಗಿ ಮತ್ತು ಶಾಂತವಾಗಿಡಿ. ದೇಹಕ್ಕೆ ಆರಾಮ ನೀಡುವ ಹಾಸಿಗೆ ಮತ್ತು ದಿಂಬು ಬಳಸಿ. ಮಲಗುವ ಕೋಣೆಯಲ್ಲಿ ಅನಗತ್ಯ ಶಬ್ದವನ್ನು ಕಡಿಮೆ ಮಾಡಿ. ರಾತ್ರಿ ಪದೇಪದೆ ಎಚ್ಚರವಾಗುತ್ತಿದ್ದರೆ ಅದರ ಕಾರಣವನ್ನು ಗುರುತಿಸಲು ಪ್ರಯತ್ನಿಸಿ. ಗೊರಕೆ, ಉಸಿರಾಟ ನಿಲ್ಲುವಂತೆ ಆಗುವುದು ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಿರಿ.
4. ಮಲಗುವವರೆಗೂ ಮೊಬೈಲ್ ನೋಡುವುದು, ಟಿವಿ ವೀಕ್ಷಿಸುವುದು
ಇಂದಿನ ದಿನಗಳಲ್ಲಿ ಹಲವರು ಮಲಗಲು ಹಾಸಿಗೆಗೆ ಹೋದ ಮೇಲೂ ಮೊಬೈಲ್ ಬಳಸುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ನೋಡುವುದು, ಸುದ್ದಿಗಳನ್ನು ಓದುವುದು, ವೀಡಿಯೊಗಳನ್ನು ವೀಕ್ಷಿಸುವುದು ಅಥವಾ ಒತ್ತಡ ಉಂಟುಮಾಡುವ ಕಾರ್ಯಕ್ರಮಗಳನ್ನು ನೋಡುವುದು ಸಾಮಾನ್ಯವಾಗಿದೆ. ಆದರೆ ಈ ಅಭ್ಯಾಸ ನಿದ್ರೆಯ ಸಮಯವನ್ನು ಮುಂದೂಡುವುದರ ಜೊತೆಗೆ ಮನಸ್ಸನ್ನು ಹೆಚ್ಚು ಚುರುಕಾಗಿರಿಸಬಹುದು.
ಒತ್ತಡ ಉಂಟುಮಾಡುವ ವಿಷಯಗಳನ್ನು ನೋಡುವಾಗ ದೇಹದಲ್ಲಿ ಒತ್ತಡದ ಪ್ರತಿಕ್ರಿಯೆ ಹೆಚ್ಚಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ತಾತ್ಕಾಲಿಕ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಒತ್ತಡವನ್ನು ನಿಯಂತ್ರಿಸುವುದು ಮುಖ್ಯ.
ಇದರ ಜೊತೆಗೆ ಮೊಬೈಲ್ (mobile) ಮತ್ತು ಇತರ ಪರದೆಗಳಿಂದ ಹೊರಹೊಮ್ಮುವ ನೀಲಿ ಬೆಳಕು ಮೆಲಟೋನಿನ್ ಎಂಬ ನಿದ್ರೆಗೆ ನೆರವಾಗುವ ಹಾರ್ಮೋನ್ ಬಿಡುಗಡೆಯನ್ನು ತಡೆಯಬಹುದು. ಇದರಿಂದ ನಿದ್ರೆ ಬರಲು ಹೆಚ್ಚು ಸಮಯ ಹಿಡಿಯಬಹುದು.
ಏನು ಮಾಡಬೇಕು? ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಮತ್ತು ಟಿವಿಯಿಂದ ದೂರವಿರಿ. ಆ ಸಮಯದಲ್ಲಿ ಪುಸ್ತಕ ಓದುವುದು, ಮೃದುವಾದ ಸಂಗೀತ ಕೇಳುವುದು ಅಥವಾ ಸ್ವಲ್ಪ ಹೊತ್ತು ಧ್ಯಾನ ಮಾಡುವುದು ಒಳ್ಳೆಯದು. ಮಲಗುವ ಸಮಯದಲ್ಲಿ ಮೊಬೈಲ್ ಅನ್ನು ಹಾಸಿಗೆಯಿಂದ ದೂರದಲ್ಲಿ ಇಡುವುದರಿಂದ ಪದೇಪದೆ ಫೋನ್ ನೋಡುವ ಅಭ್ಯಾಸವನ್ನೂ ಕಡಿಮೆ ಮಾಡಬಹುದು.
Heart Health ಗೆ ನಿದ್ರೆ ಏಕೆ ಮುಖ್ಯ?
ನಿದ್ರೆ ಎಂದರೆ ದೇಹ ನಿಷ್ಕ್ರಿಯವಾಗಿರುವ ಸಮಯವಲ್ಲ. ಈ ಅವಧಿಯಲ್ಲಿ ದೇಹದ ಹಲವು ವ್ಯವಸ್ಥೆಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಚೇತರಿಕೆಯ ಪ್ರಕ್ರಿಯೆಗಳು ನಡೆಯುತ್ತವೆ. ಹೃದಯ ಬಡಿತ, ರಕ್ತದೊತ್ತಡ, ಹಸಿವು ಮತ್ತು ಚಯಾಪಚಯ ಕ್ರಿಯೆಗಳ ನಿಯಂತ್ರಣದಲ್ಲಿಯೂ ನಿದ್ರೆ ಪಾತ್ರ ವಹಿಸುತ್ತದೆ.
ದೀರ್ಘಕಾಲ ನಿದ್ರೆಯ ಕೊರತೆ ಅಥವಾ ಅನಿಯಮಿತ ನಿದ್ರೆ ಮುಂದುವರಿದರೆ ಬೊಜ್ಜು, ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯ ಹೆಚ್ಚಬಹುದು. ಇವು ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳ ಪ್ರಮುಖ ಮೂಲಗಳು.
ಆದರೆ ಇವುಗಳ ಜೊತೆಗೆ ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ಧೂಮಪಾನದಿಂದ ದೂರವಿರುವುದು, ಮದ್ಯಪಾನವನ್ನು ತಪ್ಪಿಸುವುದು ಅಥವಾ ಮಿತಿಗೊಳಿಸುವುದು ಮತ್ತು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದೂ ಅಷ್ಟೇ ಮುಖ್ಯ.


Click it and Unblock the Notifications
