ಸದ್ಯಕ್ಕೆ ಮಗು ಬೇಡವೆನ್ನುವ ಮಹಿಳೆಯರಿಗೆ ತಜ್ಞರ ಸಲಹೆ ಏನು?
ಈಗೀಗ ಮದುವೆ ಮತ್ತು ಮಕ್ಕಳ ವಿಚಾರದಲ್ಲಿ ಹೆಣ್ಣು ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ಮಾಡುತ್ತಾರೆ. ಮದುವೆಯಾಗಿ ವರ್ಷದೊಳಗೆ ಮಕ್ಕಳಾಗಬೇಕೆಂದು ಬಯಸುವುದು ಹಳೆಯ ಕಾಲವಾಯಿತು. ಇದೀಗ ಮದುವೆಯಾದ ಬಳಿಗೆ ಒಂದಷ್ಟು ಕಡೆ ಸುತ್ತಾಡಿ, ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್ ಮಾಡಿಕೊಂಡು ಆ ನಂತರ ಮಗುವಿನ ಬಗ್ಗೆ ಯೋಚಿಸಿದರಾಯಿತು ಎಂದು ಆಲೋಚಿಸುವರ ಸಂಖ್ಯೆ ಜಾಸ್ತಿಯಿದೆ. ಇದಕ್ಕೆ ಕಾರಣಗಳು ಅನೇಕ ಇವೆ.
ಮಧ್ಯಮ ವರ್ಗದವರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವುದೇ ಸವಾಲ್. ಅದರಲ್ಲೂ ಓದಿ ಒಂದು ಉದ್ಯೋಗವನ್ನು ಪಡೆದು ಅದರಲ್ಲಿ ತಮ್ಮ ಬೇಕು ಬೇಡವನ್ನು ಸರಿದೂಗಿಸಿಕೊಳ್ಳುವ ಹೊತ್ತಿಗೆ ವಯಸ್ಸು ಕೂಡ ಮುಂದೆ ಓಡಿರುತ್ತದೆ. ಇನ್ನೂ ಸೆಟ್ಲ್ ಆಗಿಲ್ಲ ಆಮೇಲೆ ಮದುವೆ ಮಾಡಿಕೊಳ್ಳೋಣ ಎನ್ನುತ್ತಾ ಒಂದಷ್ಟು ವರ್ಷಗಳನ್ನು ಮುಂದೂಡುತ್ತಾ ಬಂದು ಎಲ್ಲ ಸರಿಯಾಗಿದೆ ಎನ್ನುವ ಹೊತ್ತಿಗೆ ವಯಸ್ಸು ಮೀರಿ ಬಿಡುತ್ತದೆ.

ಅಷ್ಟೊತ್ತಿಗೆ ಮದುವೆಯಾದರೂ ಕೆಲಸದ ನಡುವೆ ಮನೆ, ಬದುಕು ಅಂಥ ಅರ್ಥ ಮಾಡಿಕೊಂಡು ಸಂಸಾರ ಒಂದು ವ್ಯವಸ್ಥೆಗೆ ಬರುವ ಹೊತ್ತಿಗೆ ಇನ್ನೊಂದಷ್ಟು ವರ್ಷಗಳು ಕಳೆದು ಹೋಗುತ್ತವೆ. ಅಷ್ಟು ಹೊತ್ತಿಗೆ ಹೆತ್ತವರು, ಸುತ್ತಮುತ್ತಲಿನವರು ಗುಡ್ ನ್ಯೂಸ್ ಇದೆಯಾ ಅಂಥ ಕೇಳುವಾಗ ಕಿರಿಕಿರಿಯಾಗುತ್ತದೆ.
ಇದೆಲ್ಲವೂ ಜೀವನದಲ್ಲಿ ಇದ್ದದ್ದೇ ಆದರೆ ಮಧ್ಯಮವರ್ಗದವರಿಗೊಂದು ಕನಸಂತೂ ಇದ್ದೇ ಇರುತ್ತದೆ. ಮದುವೆಯಾಗಿ ಒಂದೆರಡು ವರ್ಷ ದುಡಿದು ಆಮೇಲೆ ಮಗುವಿನ ಬಗ್ಗೆ ಯೋಚಿಸಿದರಾಯಿತು ಎನ್ನುವುದು. ಇವತ್ತಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕಿನ ಬಗ್ಗೆ ತುಂಬಾ ಆಲೋಚಿಸುತ್ತಾರೆ. ಜತೆಗೆ ಹುಟ್ಟಲಿರುವ ಮಗುವಿನ ಭವಿಷ್ಯದ ಬಗ್ಗೆಯೂ ಚಿಂತೆ ಮಾಡುತ್ತಾರೆ. ಹೀಗೆ ಯೋಚಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಯೋಚಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ವೈದ್ಯರು ನೀಡುವ ಸಲಹೆ ಏನು?
ಇದೆಲ್ಲದರ ನಡುವೆ ಮದುವೆಯಾದ ಮೇಲೆ ಇಬ್ಬರೂ ಕೈತುಂಬಾ ದುಡಿಯಬೇಕು ಐಷಾರಾಮಿ ಜೀವನ ನಡೆಸಬೇಕು, ಬದುಕಿನಲ್ಲಿ ಯಾವುದೇ ರೀತಿಯ ಆರ್ಥಿಕ ತೊಂದರೆಗಳು ಬರಬಾರದು ಎಂದು ಯೋಚಿಸುವವರು ಇಲ್ಲದಿಲ್ಲ. ಹೀಗಾಗಿ ಅದಕ್ಕೊಸ್ಕರ ಆರ್ಥಿಕ ಸ್ಥಿತಿಯನ್ನು ಸದೃಢ ಮಾಡಿಕೊಳ್ಳುವ ಭರದಲ್ಲಿ ತಮ್ಮ ವಯಸ್ಸು ಮೀರುತ್ತಿದೆ ಎಂಬುವುದೇ ಅರಿವಿಗೆ ಬರುವುದಿಲ್ಲ. ಏಕೆಂದರೆ ಮಹಿಳೆಯರಲ್ಲಿ 25ವರ್ಷ ವಯಸ್ಸಿನ ನಂತರ ಉತ್ಪತ್ತಿಯಾಗುವ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತ ಬರುತ್ತದೆ. ಗರ್ಭದಲ್ಲಿನ ಭ್ರೂಣದ ಮೊದಲ ಹಂತವು ಋತುಚಕ್ರದಲ್ಲಿ ನಷ್ಟವಾಗುವ ಪ್ರಮಾಣ ಹೆಚ್ಚುತ್ತದೆ ಎಂಬುದು ಗಮನಕ್ಕೆ ಬರುವುದಿಲ್ಲ.

ವೈದ್ಯರು ಹೇಳುವ ಪ್ರಕಾರ ಗರ್ಭದ ಅಂಶಗಳೂ ಕೂಡ ವಯಸ್ಸಾದ ಮಹಿಳೆಯರಲ್ಲಿನ ಬಂಜೆತನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ 40 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಲ್ಲಿ ಶೇಕಡಾ 10ರಷ್ಟು ಗರ್ಭ ಕಟ್ಟುವವಿಕೆ ಯಶಸ್ವಿಯಾದರೆ, 35ಕ್ಕಿಂತ ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಇದರ ಯಶಸ್ಸಿನ ಪ್ರಮಾಣ ಶೇಕಡಾ 23ರಷ್ಟು ಇರುತ್ತದೆ.. ಮಹಿಳೆ ಮೊದಲ ಬಾರಿ ಗರ್ಭ ಧರಿಸುವಾಗ 30ವರ್ಷಕ್ಕಿಂತ ಹೆಚ್ಚು ವಯಸ್ಸಾಗದಿದ್ದರೆ ಹೆಚ್ಚಿನ ಸಮಸ್ಯೆಗಳು ಇರುವುದಿಲ್ಲ.
ಫಲವತ್ತತೆ ಕಾಪಾಡುವತ್ತ ಎಚ್ಚರವಿರಲಿ
ಇದೆಲ್ಲದರ ನಡುವೆ ಒಂದು ವೇಳ ತಡವಾಗಿ ಮಗುವನ್ನು ಪಡೆಯುತ್ತೇವೆ ಎನ್ನುವ ಮಹಿಳೆಯರು ತಜ್ಞ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು ಹಾಗೆಯೇ ತಮ್ಮ ದೇಹಾರೋಗ್ಯವನ್ನು (ಫಲವತ್ತತೆಯನ್ನು) ಸರಿಯಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಬೊಜ್ಜು ಬೆಳೆಸಿಕೊಳ್ಳಬಾರದು. ಏಕೆಂದರೆ ಬೊಜ್ಜು ಫಲವತ್ತತೆಯ ವೈರಿ. ಬೊಜ್ಜು ಇರುವ ಮಹಿಳೆಯರಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿ ಅದು ತಡವಾಗಿ ಗರ್ಭಧಾರಣೆ ಮಾಡಲು ಇಚ್ಛಿಸುವವರಿಗೆ ಅಡ್ಡಿ ಉಂಟುಮಾಡಬಲ್ಲದು.
ಇನ್ನು ಮಹಿಳೆಯರು ಧೂಮಪಾನ, ಮದ್ಯಪಾನದಿಂದ ದೂರ ಇರಬೇಕಾಗುತ್ತದೆ. ಅತಿಯಾದ ಮದ್ಯ ಸೇವನೆಯೂ ಋತುಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅತಿಯಾದ ಕಾಫಿ ಸೇವನೆಯೂ ಮಹಿಳೆಯರ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೇ ಪದೇ ಪದೇ ಗರ್ಭಪಾತ ಆದರೆ ಅಥವಾ ಮಾಡಿಸಿಕೊಂಡರೂ ಮುಂದೆ ಹುಟ್ಟುವ ಮಗುವಿಗೆ ತೊಂದರೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ 35 ವರ್ಷಕ್ಕಿಂತ ತಡವಾಗಿ ಮದುವೆಯಾಗುವ ಮಹಿಳೆಯರು ಕುಟುಂಬ ಯೋಜನೆಯ ಯಾವುದೇ ಕ್ರಮವನ್ನು ಅನುಸರಿಸದೇ ಇರುವುದು ಒಳ್ಳೆಯದು ಎಂಬ ಸಲಹೆಯನ್ನು ವೈದ್ಯರು ನೀಡುತ್ತಾರೆ.












Click it and Unblock the Notifications