ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ ಎಳ ನೀರು ಸೇವಿಸಿದರೆ ಮಾತ್ರ ಆರೋಗ್ಯ ಲಾಭ!ಇಲ್ಲವಾದರೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು!
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು, ನಮ್ಮಲ್ಲಿ ಹೆಚ್ಚಿನವರು ಎಳ ನೀರನ್ನು ಕುಡಿಯುತ್ತಾರೆ. ಎಳ ನೀರಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ದೇಹವನ್ನು ಹೈಡ್ರೀಕರಿಸುವುದಲ್ಲದೆ, ದೈಹಿಕ ಆಯಾಸ ಮತ್ತು ದೌರ್ಬಲ್ಯವನ್ನು ನಿವಾರಿಸುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ಅನೇಕರು ಎಳ ನೀರನ್ನು ಕುಡಿಯುತ್ತಾರೆ. ಹಾಗಂತ ಬೇಸಿಗೆಯಲ್ಲಿ ಎಳನೀರು ಕುಡಿಯುವುದರಿಂದ ಲಾಭವೇ ಆಗುವುದಿಲ್ಲ. ಯಾವ್ಯಾವುದೋ ಸಮಯದಲ್ಲಿ ನಮಗಿಷ್ಟದಂತೆ ಎಳನೀರು ಸೇವಿಸಿದರೆ ಪ್ರಯೋಜನವಾಗುವುದಿಲ್ಲ. ಆ ರೀತಿ ಎಳ ನೀರು ಕುಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಎಳ ನೀರನ್ನು ತಪ್ಪಾದ ಸಮಯದಲ್ಲಿ ಅಥವಾ ತಪ್ಪಾದ ರೀತಿಯಲ್ಲಿ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು, ರಕ್ತದಲ್ಲಿನ ಸಕ್ಕರೆಯ ಏರಿಳಿತಗಳು ಮತ್ತು ಎಲೆಕ್ಟ್ರೋಲೈಟ್ ಅಸಮತೋಲನ ಉಂಟಾಗುತ್ತದೆ. ಹಾಗಾದರೆ ಎಳನೀರು ಕುಡಿಯಲು ಸರಿಯಾದ ಸಮಯ ಯಾವುದು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
ಬೇಸಿಗೆಯಲ್ಲಿ ಎಳ ನೀರು ಕುಡಿಯುವಾಗ ಯಾವ ತಪ್ಪುಗಳನ್ನು ಮಾಡಬಾರದು?:
ಖಾಲಿ ಹೊಟ್ಟೆಯಲ್ಲಿ ಎಳ ನೀರು ಕುಡಿಯುವುದು: ಆಹಾರ ತಜ್ಞರು ಹೇಳುವಂತೆ ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಎಳ ನೀರನ್ನು ಕುಡಿಯುತ್ತಾರೆ. ಬೆಳಗ್ಗೆ ಎಳ ನೀರು ಕುಡಿಯುವುದು ಎಲ್ಲರ ಆರೋಗ್ಯಕ್ಕೆ ಒಳ್ಳೆಯದಲ್ಲ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಳ ನೀರು ಕುಡಿಯುವುದರಿಂದ ರಕ್ತದೊತ್ತಡದಲ್ಲಿ ಹಠಾತ್ ಇಳಿಕೆಯಾಗುವ ಸಾಧ್ಯತೆ ಇದೆ. ಇದು ಹೊಟ್ಟೆ ಉಬ್ಬರ ಮತ್ತು ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು.

ರಾತ್ರಿ ಎಳ ನೀರು ಕುಡಿಯುವುದು: ಕೆಲವರು ರಾತ್ರಿ ಎಳ ನೀರು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನಗಳಾಗುತ್ತವೆ ಅಂದುಕೊಳ್ಳುತ್ತಾರೆ. ಆದರೆ, ಈ ಅಭ್ಯಾಸ ಕೆಲವರಿಗೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ರಾತ್ರಿ ಹೊತ್ತು ಎಳ ನೀರು ಕುಡಿಯುವುದನ್ನು ತಪ್ಪಿಸಬೇಕು. ರಾತ್ರಿ ಎಳನೀರು ಕುಡಿಯುವುದರಿಂದ ಪದೇ ಪದೇ ಮೂತ್ರ ವಿಸರ್ಜನೆಯಾಗುವುದು. ಹೀಗೆ ಆಗಾಗ ಮೂತ್ರ ವಿಸರ್ಜನೆಗಾಗಿ ಏಳುವುದರಿಂದ ನಿದ್ರೆಯ ತೊಂದರೆ ಎದುರಾಗುವುದು.
ವ್ಯಾಯಾಮದ ನಂತರ ಎಳ ನೀರು: ವ್ಯಾಯಾಮದ ನಂತರ ಎಳ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ವ್ಯಾಯಾಮದ ನಂತರ ಹೆಚ್ಚು ಎಳ ನೀರು ಕುಡಿಯುವುದರಿಂದ ಎಲೆಕ್ಟ್ರೋಲೈಟ್ ಅಸಮತೋಲನ ಉಂಟಾಗುತ್ತದೆ. ವ್ಯಾಯಾಮದ ನಂತರ ಕೇವಲ ಒಂದು ಲೋಟ ಎಳ ನೀರನ್ನು ಮಾತ್ರ ಸೇವಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಎಳ ನೀರು ಕುಡಿಯುವುದರಿಂದ ಹೊಟ್ಟೆ ಉಬ್ಬರ, ದೌರ್ಬಲ್ಯ ಮತ್ತು ಸೋಡಿಯಂ ಮಟ್ಟದಲ್ಲಿ ಇಳಿಕೆಯ ಸಮಸ್ಯೆಯಾಗುವುದು. ಆದ್ದರಿಂದ, ವ್ಯಾಯಾಮದ ನಂತರ ಎಳ ನೀರನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಊಟದ ನಂತರ ಎಳ ನೀರು ಕುಡಿಯುವುದು: ಕೆಲವರಿಗೆ ಊಟದ ನಂತರ ಎಳ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ಊಟದ ನಂತರ ಎಳ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಊಟದ ನಂತರ ಈ ಎಲೆಕ್ಟ್ರೋಲೈಟ್-ಭರಿತ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆ ನೋವು, ಗ್ಯಾಸ್, ಮಲಬದ್ಧತೆ ಮತ್ತು ವಾಂತಿ ಉಂಟಾಗುತ್ತದೆ. ಊಟದ ನಂತರ ಎಳ ನೀರು ಕುಡಿಯುವುದಾದರೆ ಕನಿಷ್ಠ 30 ರಿಂದ 40 ನಿಮಿಷಗಳ ನಂತರ ಕುಡಿದರೆ ಒಳ್ಳೆಯದು.
ಪ್ಯಾಕ್ ಮಾಡಿದ ಎಳ ನೀರು: ಬೇಸಿಗೆಯಲ್ಲಿ, ಕೆಲವರು ತಾಜಾ ಎಳ ನೀರನ್ನು ಕುಡಿಯುವ ಬದಲು ಪ್ಯಾಕ್ ಮಾಡಿದ ಎಳ ನೀರನ್ನು ಕುಡಿಯುತ್ತಾರೆ. ಪ್ಯಾಕ್ ಮಾಡಿದ ಎಳನೀರಿನಲ್ಲಿ ಸಕ್ಕರೆ ಮತ್ತು ಸಂರಕ್ಷಕಗಳನ್ನು ಹಾಕಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಯಾವಾಗಲೂ ತಾಜಾ ಎಳ ನೀರನ್ನೇ ಕುಡಿಯಬೇಕು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications